15.06.24 - "ಹೌದಾದರೆ ಹೌದೆನ್ನಿ, ಅಲ್ಲವಾದರೆ ಅಲ್ಲವೆನ್ನಿ; ಇದಕ್ಕಿಂತ ಮಿಗಿಲಾದುದು ಪಿಶಾಚಿಯಿಂದ ಪ್ರೇರಿತವಾದುದು”

ಮೊದಲನೇ ವಾಚನ: 1 ಅರಸುಗಳು 19:19-21


ಎಲೀಯನು ಅಲ್ಲಿಂದ ಹೊರಟುಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವುದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆಯ ಜೋಡಿಯಿಂದ ತಾನಾಗಿ ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. ಕೂಡಲೆ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ, “ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವುದಕ್ಕೆ ಅಪ್ಪಣೆಯಾಗಲಿ; ಅನಂತರ ನಿನ್ನನ್ನು ಹಿಂಬಾಲಿಸುವೆನು,” ಎಂದನು. ಅದಕ್ಕೆ ಎಲೀಯನು, “ಹೋಗಿ ಬಾ; ನಾನು ನಿನಗೆ ಮಾಡಬೇಕಾದದ್ದನ್ನು ಮಾಡಿದ್ದೇನೆ,” ಎಂದು ಉತ್ತರಕೊಟ್ಟನು. ಎಲೀಷನು ಹಿಂದಿರುಗಿಹೋಗಿ ತಾನು ಉಳುತ್ತಿದ್ದ ಜೋಡಿ ಎತ್ತುಗಳನ್ನು ತೆಗೆದುಕೊಂಡು ವಧಿಸಿ ಮಾಂಸವನ್ನು ನೊಗದ ಕಟ್ಟಿಗೆಯಿಂದ ಬೇಯಿಸಿ, ಜನರಿಗೆ ಔತಣಮಾಡಿಸಿದನು. ಅನಂತರ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಶಿಷ್ಯನಾದನು.

ಕೀರ್ತನೆ: 16:1-2, 5, 7-8, 9-10

ಶ್ಲೋಕ: ಪ್ರಭೂ, ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ

ಶುಭಸಂದೇಶ: ಮತ್ತಾಯ 5:33-37

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: " ’ಸುಳ್ಳಾಣೆಯಿಡಬೇಡ; ದೇವರಿಗೆ ಆಣೆಯಿಟ್ಟು ವಾಗ್ದಾನ ಮಾಡಿದಂತೆ ನಡೆದುಕೊಳ್ಳಲೇ ಬೇಕು’ ಎಂದು ಪೂರ್ವಿಕರಿಗೆ ಹೇಳಿದ್ದು ನಿಮಗೆ ತಿಳಿದೇ ಇದೆ. ಈಗ ನಾನು ಹೇಳುವುದನ್ನು ಕೇಳಿ: ನೀವು ಆಣೆಯಿಡಲೇ ಬೇಡಿ. ಆಕಾಶದ ಮೇಲೆ ಆಣೆಯಿಡಬೇಡಿ, ಅದು ದೇವರ ಸಿಂಹಾಸನ; ಭೂಮಿಯ ಮೇಲೆ ಆಣೆಯಿಡಬೇಡಿ, ಅದು ದೇವರ ಪಾದಪೀಠ; ಜೆರುಸಲೇಮಿನ ಮೇಲೆ ಆಣೆಯಿಡಬೇಡಿ, ಅದು ರಾಜಾಧಿರಾಜನ ಪಟ್ಟಣ; ನಿಮ್ಮ ತಲೆಯ ಮೇಲೂ ಆಣೆಯಿಡಬೇಡಿ; ಹಾಗೆ ಆಣೆಯನ್ನಿಟ್ಟು ಅದರ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು. ಹೌದಾದರೆ ಹೌದೆನ್ನಿ, ಅಲ್ಲವಾದರೆ ಅಲ್ಲವೆನ್ನಿ; ಇದಕ್ಕಿಂತ ಮಿಗಿಲಾದುದು ಪಿಶಾಚಿಯಿಂದ ಪ್ರೇರಿತವಾದುದು.”

No comments:

Post a Comment

25.02.2026 - ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು

  ಮೊದಲನೇ ವಾಚನ: ಯೋನ 3: 1-10 ಯೋನನಿಗೆ ಆ ಸ್ವಾಮಿಯ ವಾಣಿ ಪುನಃ ಕೇಳಿಸಿತು: “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿ...