ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

28.04.24 - “ಹೌದು, ನಾನೇ ದ್ರಾಕ್ಷಾಬಳ್ಳಿ; ನೀವೇ ಅದರ ಕವಲುಬಳ್ಳಿಗಳು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 9: 26-31


ಸೌಲನು ಜೆರುಸಲೇಮಿಗೆ ಬಂದು ಭಕ್ತವಿಶ್ವಾಸಿಗಳನ್ನು ಸೇರಲು ಪ್ರಯತ್ನಿಸಿದನು. ಆದರೆ, ಅವರು ಅವನು ಸಹ ಒಬ್ಬ ಭಕ್ತನೆಂದು ನಂಬದೆ ಅವನಿಗೆ ಭಯಪಟ್ಟರು. ಆಗ ಬಾರ್ನಬನು ಅವನನ್ನು ಪ್ರೇಷಿತರ ಬಳಿಗೆ ಕರೆದುಕೊಂಡು ಹೋದನು. ಸೌಲನು ಪ್ರಭುವನ್ನು ಮಾರ್ಗದಲ್ಲಿ ದರ್ಶಿಸಿದ್ದನ್ನು ಅವರು ಅವನೊಂದಿಗೆ ಮಾತನಾಡಿದ್ದನ್ನೂ ತಿಳಿಸಿದನು. ಅಲ್ಲದೆ ದಮಸ್ಕಸಿನಲ್ಲಿ ಧೈರ್ಯದಿಂದ ಯೇಸುವಿನ ಹೆಸರಿನಲ್ಲಿ ಬೋಧಿಸಿದ್ದನ್ನೂ ಅವರಿಗೆ ವಿವರಿಸಿದನು. ಅಂದಿನಿಂದ ಸೌಲನು ಜೆರುಸಲೇಮಿನಲ್ಲಿ ಅವರೊಡನೆ ಕಲೆತು ಪ್ರಭುವಿನ ಹೆಸರಿನಲ್ಲಿ ನಿರ್ಭಯವಾಗಿ ಬೋಧಿಸುತ್ತಿದ್ದನು. ಗ್ರೀಕ್ ಮಾತನಾಡುತ್ತಿದ್ದ ಯೆಹೂದ್ಯರೊಡನೆ ಸಂಭಾಷಿಸುತ್ತಾ ಅವರ ವಿರುದ್ಧ ವಾದಿಸುತ್ತಿದ್ದನು. ಅವರಾದರೋ ಅವನನ್ನು ಕೊಲ್ಲಲು ಹವಣಿಸಿದರು. ಇದನ್ನು ಅರಿತುಕೊಂಡ ಭಕ್ತಾದಿಗಳು ಅವನನ್ನು ಸೆಜರೇಯಕ್ಕೆ ಕರೆತಂದು ಅಲ್ಲಿಂದ ತಾರ್ಸಕ್ಕೆ ಕಳುಹಿಸಿಬಿಟ್ಟರು. ಇಂತಿರಲು ಜುದೇಯ, ಗಲಿಲೇಯ ಮತ್ತು ಸಮಾರಿಯದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿಂದ ಪ್ರವರ್ಧಿಸುತ್ತಾ ಇತ್ತು.

ಕೀರ್ತನೆ: 22: 25-27, 29-31
ಶ್ಲೋಕ: ಪ್ರಭು, ನೀನೆ ಸ್ಫೂರ್ತಿ, ತುಂಬು ಸಭೆಯಲಿ ನಾ ಮಾಳ್ಪ ಸ್ತುತಿಗೆ. 

ಎರಡನೇ ವಾಚನ: 1 ಯೊವಾನ್ನ 3: 18-24

ಪ್ರಿಯ ಮಕ್ಕಳೇ, ನಾವು ಬರಿಯ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರಬಾರದು. ನಮ್ಮ ಪ್ರೀತಿ ಸತ್ಯದಲ್ಲೂ ಕೃತ್ಯದಲ್ಲೂ ವ್ಯಕ್ತವಾಗಬೇಕು. ಹೀಗೆ ನಾವು ಸತ್ಯಕ್ಕೆ ಸೇರಿದವರು ಎಂಬುದು ಮನದಟ್ಟಾಗುವುದಲ್ಲದೆ ದೇವರ ಮುಂದೆ ನಮ್ಮ ಮನಸ್ಸು ನೆಮ್ಮದಿಯಿಂದಿರುತ್ತದೆ. ಯಾವ ವಿಷಯದಲ್ಲಾದರೂ ನಮ್ಮ ಮನಸ್ಸಾಕ್ಷಿ ನಮ್ಮನ್ನು ಖಂಡಿಸಿದ್ದೇ ಆದರೆ ಎಲ್ಲವನ್ನೂ ಬಲ್ಲ ದೇವರು ನಮ್ಮ ಮನಸ್ಸಾಕ್ಷಿಗಿಂತಲೂ ದೊಡ್ಡವರೆಂಬುದು ನಮಗೆ ತಿಳಿದೇ ಇರುತ್ತದೆ. ಪ್ರಿಯರೇ, ನಮ್ಮ ಮನಸ್ಸಾಕ್ಷಿ ನಮ್ಮನ್ನು ಖಂಡಿಸದಿದ್ದರೆ, ನಾವು ದೇವರ ಮುಂದೆ ಧೈರ್ಯದಿಂದಿರಲು ಸಾಧ್ಯವಾಗುತ್ತದೆ. ನಾವು ದೇವರ ಆಜ್ಞೆಗಳಿಗೆ ವಿಧೇಯರಾಗಿ ಅವರಿಗೆ ಮೆಚ್ಚುಗೆಯಾದವುಗಳನ್ನೇ ಮಾಡುವುದರಿಂದ ನಾವು ಕೋರುವುದೆಲ್ಲವನ್ನೂ ಅವರಿಂದ ಪಡೆಯುತ್ತೇವೆ. ನಾವು ದೇವರ ಪುತ್ರ ಯೇಸುಕ್ರಿಸ್ತರ ನಾಮದಲ್ಲಿ ವಿಶ್ವಾಸವಿಟ್ಟು ಅವರು ವಿಧಿಸಿದಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದೇ ಅವರ ಆಜ್ಞೆ. ದೇವರ ಆಜ್ಞೆಯನ್ನು ಪಾಲಿಸುವವನು ಅವರಲ್ಲಿ ನೆಲೆಸಿರುತ್ತಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. ದೇವರು ನಮ್ಮಲ್ಲಿ ನೆಲೆಸಿದ್ದಾರೆಂದು ಅವರು ದಯಪಾಲಿಸುವ ಪವಿತ್ರಾತ್ಮರಿಂದಲೇ ತಿಳಿದುಕೊಳ್ಳುತ್ತೇವೆ.

ಶುಭಸಂದೇಶ: ಯೊವಾನ್ನ 15:1-8

ಯೇಸು ಸ್ವಾಮಿ ತಮ್ಮ ಶಿಷ್ಯರಿಗೆ, “ನಾನೇ ನಿಜವಾದ ದ್ರಾಕ್ಷಾಬಳ್ಳಿ. ನನ್ನ ಪಿತನೇ ತೋಟಗಾರ. ನನ್ನಲ್ಲಿದ್ದೂ ಫಲಕೊಡದ ಕವಲುಬಳ್ಳಿಗಳನ್ನೆಲ್ಲಾ ಅವರು ಕತ್ತರಿಸಿಹಾಕುವರು. ಫಲಕೊಡುವ ಕವಲುಬಳ್ಳಿಗಳು ಮತ್ತಷ್ಟು ಫಲಕೊಡುವಂತೆ ಅವನ್ನು ಸವರಿ ಶುದ್ಧಗೊಳಿಸುವರು. ನೀವಾದರೋ, ನಾನು ನಿಮ್ಮೊಡನೆ ಆಡಿದ ಮಾತಿನಿಂದಾಗಿ ಸವರಿದ ಕವಲುಗಳಂತೆ ಶುದ್ಧರಾಗಿದ್ದೀರಿ. ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದು. ಹಾಗೆಯೇ ನೀವೂ ಕೂಡ ನನ್ನಲ್ಲಿ ಒಂದಾಗಿ ನೆಲಸದಿದ್ದರೆ ಫಲಕೊಡಲಾರಿರಿ. “ಹೌದು, ನಾನೇ ದ್ರಾಕ್ಷಾಬಳ್ಳಿ; ನೀವೇ ಅದರ ಕವಲುಬಳ್ಳಿಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅಂಥವನು ಸಮೃದ್ಧಿಯಾಗಿ ಫಲಕೊಡುವನು. ಏಕೆಂದರೆ, ನನ್ನಿಂದ ಬೇರ್ಪಟ್ಟು ನಿಮ್ಮಿಂದ ಏನೂ ಮಾಡಲಾಗದು. ನನ್ನಲ್ಲಿ ನೆಲಸದವನನ್ನು ಕವಲುಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದು; ಅವನು ಒಣಗಿಹೋಗುವನು. ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟು ಹಾಕಲಾಗುವುದು. “ನೀವು ನನ್ನಲ್ಲಿಯೂ ನನ್ನ ವಾಕ್ಯವು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನು ಬೇಕಾದರೂ ಕೇಳಬಹುದು. ನಿಮಗದು ಸಿಗುವುದು. ನೀವು ಸಮೃದ್ಧಿಯಾಗಿ ಫಲಕೊಟ್ಟು ನನ್ನ ಶಿಷ್ಯರಾಗಿ ಬೆಳಗುವುದರಿಂದಲೇ ನನ್ನ ಪಿತನ ಮಹಿಮೆ ಪ್ರಕಟವಾಗುವುದು.

No comments:

Post a Comment