ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

25.05.24

ಮೊದಲನೆಯ ವಾಚನ: ಯಕೋಬ 5:13-20

ನಿಮ್ಮಲ್ಲಿ ಯಾರಾದರೂ ಸಂಕಟದಲ್ಲಿದ್ದರೆ ಅಂಥವನು ದೇವರಲ್ಲಿ ಪ್ರಾರ್ಥಿಸಲಿ. ಸಂತೋಷದಲ್ಲಿದ್ದರೆ ದೇವರಿಗೆ ಸ್ತುತಿಗಾನ ಹಾಡಲಿ. ನಿಮ್ಮಲ್ಲಿ ಯಾರಾದರೂ ಅಸ್ವಸ್ಥರಾಗಿದ್ದರೆ, ಅವನು ಸಭಾಪಾಲಕರನ್ನು ಕರೆಸಲಿ. ಅವರು ಅವನಿಗಾಗಿ ದೇವರನ್ನು ಪ್ರಾರ್ಥಿಸಿ ಪ್ರಭುವಿನ ಹೆಸರಿನಲ್ಲಿ ಅವನನ್ನು ಅಭ್ಯಂಗಿಸಲಿ. ಆಗ ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ. ಹಾಸಿಗೆ ಹಿಡಿದ ರೋಗಿಯನ್ನು ಪ್ರಭು ಎಬ್ಬಿಸುತ್ತಾರೆ; ಅವನು ಪಾಪಮಾಡಿದವನಾಗಿದ್ದರೆ ಕ್ಷಮೆಯನ್ನು ಪಡೆಯುತ್ತಾನೆ. ಆದ್ದರಿಂದ ಒಬ್ಬರಿಗೊಬ್ಬರು ಪಾಪಗಳನ್ನು ಒಪ್ಪಿಸಿಕೊಳ್ಳಿರಿ. ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. ಆಗ ನೀವು ಸ್ವಸ್ಥರಾಗುತ್ತೀರಿ. ಸತ್ಪುರುಷನ ಪ್ರಾರ್ಥನೆ ಶಕ್ತಿಯುತವಾದುದು ಹಾಗೂ ಫಲದಾಯಕವಾದುದು. ಎಲೀಯನು ನಮ್ಮಂಥ ಸಾಧಾರಣ ಮನುಷ್ಯ. ಆದರೂ ಅವನು ಮಳೆಬಾರದಿರಲೆಂದು ಭಕ್ತಿಯಿಂದ ಪ್ರಾರ್ಥಿಸಿದ್ದರಿಂದ ಮೂರು ವರ್ಷ ಆರು ತಿಂಗಳವರೆಗೂ ಮಳೆ ಬೀಳಲಿಲ್ಲ. ಅನಂತರ, ಅವನು ಮತ್ತೆ ಮಳೆಗಾಗಿ ಪ್ರಾರ್ಥಿಸಿದಾಗ ಆಕಾಶದಿಂದ ಮಳೆ ಸುರಿಯಿತು. ಭೂಮಿ ಫಲಿಸಿತು. ಸಹೋದರರೇ, ನಿಮ್ಮಲ್ಲಿ ಒಬ್ಬನು ಸತ್ಯದ ಮಾರ್ಗವನ್ನು ಬಿಟ್ಟು ತಪ್ಪಿಹೋದಾಗ ಇನ್ನೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ, ಇದನ್ನು ನೆನಪಿಗೆ ತಂದುಕೊಳ್ಳಿರಿ : ಪಾಪಿಯನ್ನು ದುರ್ಮಾರ್ಗದಿಂದ ಮರಳಿ ಸನ್ಮಾರ್ಗಕ್ಕೆ ತಂದವನು ತನ್ನ ಆತ್ಮವನ್ನು ನಿತ್ಯ ಮರಣದಿಂದ ತಪ್ಪಿಸಿ ತನ್ನ ಲೆಕ್ಕವಿಲ್ಲದ ಪಾಪಗಳಿಗೆ ಕ್ಷಮೆಯನ್ನು ಪಡೆಯುತ್ತಾನೆ.

ಕೀರ್ತನೆ 141:1-2, 3, 8
ಶ್ಲೋಕ: ಸಮರ್ಪಕವಾಗಲಿ ನನ್ನ ಪ್ರಾರ್ಥನೆ ಧೂಪಾರತಿಯಂತೆ.

ಬೇಗನೆ ಬಾ ಪ್ರಭೂ, ಮೊರೆಯಿಡುವೆ ನಿನಗೆ|
ಮೊರೆಯಿಡುವಾಗಲೆಲ್ಲ ಕಿವಿಗೊಡು ನನಗೆ||
ಸಮರ್ಪಕವಾಗಲಿ ನನ್ನ ಪ್ರಾರ್ಥನೆ ಧೂಪಾರತಿಯಂತೆ|
ಕೈಮುಗಿದು ಮಾಡುವ ವಂದನೆ ಸಂಧ್ಯಾಬಲಿಯರ್ಪಣೆಯಂತೆ||

ಕಾವಲಿರಿಸು ಪ್ರಭೂ, ನನ್ನ ಬಾಯಿಗೆ|
ಪಹರೆಯಿರಲಿ ನನ್ನ ತುಟಿಕದಗಳಿಗೆ||
ಹೇ ಪ್ರಭುದೇವಾ, ದೇವಾ, ನನ್ನ ದೃಷ್ಟಿ ನಿನ್ನ ಮೇಲಿದೆ|
ವಿನಾಶಕೊಪ್ಪಿಸಬೇಡೆನ್ನ, ನಿನ್ನಾಶ್ರಯ ಕೋರಿರುವೆ||

ಶುಭಸಂದೇಶ: ಮಾರ್ಕ 10:13-16

ಆ ಕಾಲದಲ್ಲಿ ಕೆಲವರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಹರಸಲೆಂದು ಅವುಗಳನ್ನು ಯೇಸುವಿನ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಕದರಿಸಿದರು. ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ, " ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ ; ದೇವರ ಸಾಮ್ರಾಜ್ಯ ಇಂಥವರದೇ. ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ, " ಎಂದರು. ಅನಂತರ ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಗಳನಿರಿಸಿ ಹರಸಿದರು.

No comments:

Post a Comment