ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.04.24

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪ 7:51-8:1

ಸ್ತೇಫನನು ಮುಂದುವರೆದು, "ಎಷ್ಟು ಹಟಮಾರಿಗಳು ನೀವು; ಎಂಥಾ ಕಠಿಣ ಹೃದಯಿಗಳು ನೀವು; ದೇವರ ಸಂದೇಶಕ್ಕೆ ಎಷ್ಟು ಕಿವುಡರು ನೀವು ! ನಿಮ್ಮ ಪೂರ್ವಜರಂತೆ ನೀವು ಸಹ ಪವಿತ್ರಾತ್ಮ ಅವರನ್ನು ಯಾವಾಗಲೂ ಪ್ರತಿಭಟಿಸುತ್ತೀರಿ. ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಆ ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ. ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದ ನೀವೇ ಅದಕ್ಕೆ ಅವಿಧೇಯರಾಗಿ ನಡೆದಿರಿ, "ಎಂದನು. ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು. ಆದರೆ ಸ್ತೇಫನನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾರ್ಶ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು, "ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾರ್ಶ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ, "ಎಂದನು. ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು. ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು. ಅವರು ತನ್ನ ಮೇಲೆ ಕಲ್ಲುಬೀರುತ್ತಿದ್ದಾಗ ಸ್ತೇಫನನು, "ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ" ಎಂದು ಪ್ರಾರ್ಥಿಸಿದನು. ಅನಂತರ ಮೊಣಕಾಲೂರಿ, "ಪ್ರಭೂ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ, "ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು. ಸೌಲನು ಸ್ತೇಫನನ ಕೊಲೆಗೆ ಸಮ್ಮತಿಸಿದ್ದನು. ಆ ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರಹಿಂಸೆ ಪ್ರಾರಂಭವಾಯಿತು.

ಕೀರ್ತನೆ: 31:2-3,5,6,7,16,20
ಶ್ಲೋಕ: ನನಗಾಧಾರ ನೀನಲ್ಲವೇ? ನನ್ನಾತ್ಮವನ್ನು ನಿನಗೊಪ್ಪಿಸಿರುವೆ |


ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು ಬೇಗನೆ|
ನನ್ನಾಶ್ರಯಗಿರಿ, ದುರ್ಗಸ್ಥಾನವಾಗಿರು ನೀನೇ||
ಕೈಹಿಡಿದು ನಡೆಸೆನ್ನನು ನಿನ್ನ ನಾಮ ನಿಮಿತ್ತ|
ನೀನೆನಗೆ ಪೊರೆಬಂಡೆ, ಸ್ಥಿರ ಕೋಟೆಕೊತ್ತಲ||

ನನಗಾಧಾರ ನೀನಲ್ಲವೇ? ನನ್ನಾತ್ಮವನು ನಿನಗೊಪ್ಪಿಸಿರುವೆ|
ನಂಬಿಗಸ್ತನಾದ ದೇವನೇ, ನೀಯೆನ್ನ ಮುಕ್ತಗೊಳಿಸಿರುವೆ||
ನಾನಾದರೋ ಪ್ರಭೂ, ಭರವಸೆಯಿಟ್ಟಿರುವುದು ನಿನ್ನಲ್ಲೇ|
ಹರ್ಷಾನಂದಗೊಳ್ಳುವೆ ನೆನೆದು ನಿನ್ನ ಅನಂತ ಪ್ರೀತಿಯನು||

ಬೆಳಗಿಸಲಿ ದಾಸನನು ನಿನ್ನ ಮುಖತೇಜವು|
ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು||
ಪಾರುಮಾಡುವುದವರನು ನಿನ್ನ ಸಾನ್ನಿಧ್ಯ ಸೆರಗು ಜನರೊಳಸಂಚಿನಿಂದ|
ದೂರವಿಡುವುದವರನು ನಿನ್ನಾಸರೆಯು ವ್ಯಾಜ್ಯಮಾಡುವ ಜಿಹ್ವೆಯಿಂದ||

ಘೋಷಣೆ ಯೊವಾನ್ನ 10:14,15

ಯೇಸು ಹೀಗೆಂದರು: "ನಾನಾದರೋ ಉತ್ತಮ ಕುರಿಗಾಹಿ ; ನಾನು ನನ್ನ ಕುರಿಗಳನ್ನು ಬಲ್ಲೆನು; ಅವು ನನ್ನನ್ನು ಬಲ್ಲವು."

ಅಲ್ಲೆಲೂಯ!

ಶುಭಸಂದೇಶ: ಯೊವಾನ್ನ 6:30-35

ಆ ಕಾಲದಲ್ಲಿ ಜನರು ಯೇಸುವಿಗೆ, "ನಾವು ನೋಡಿ ನಿಮ್ಮಲ್ಲಿ ವಿಶ್ವಾಸವಿಡುವಂತೆ ನೀವು ಏನು ಮಾಡುವಿರಿ? ಯಾವ ಸೂಚಕಕಾರ್ಯವನ್ನು ತೋರಿಸುವಿರಿ? ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲು 'ಮನ್ನಾ' ಸಿಕ್ಕಿತು. ತಿನ್ನಲು ಅವರಿಗೆ ಸ್ವರ್ಗದಿಂದ ರೊಟ್ಟಿ ದೊರಕಿತು, ಎಂದು ಪವಿತ್ರಗ್ರಂಥವೇ ಹೇಳುತ್ತದೆಯಲ್ಲವೇ? "ಎಂದರು. ಯೇಸು ಅವರಿಗೆ, "ನಿಮಗೆ ಸತ್ಯವಾಗಿ ಹೇಳುತ್ತೇನೆ ; ಸ್ವರ್ಗದಿಂದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ ; ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುವವರು ನನ್ನ ಪಿತನೇ. ಏಕೆಂದರೆ, ಸ್ವರ್ಗದಿಂದ ಇಳಿದು ಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ, " ಎಂದು ಹೇಳಿದರು. ಅದಕ್ಕೆ ಆ ಜನರು, "ಅಂಥಾ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡಿ, "ಎಂದು ಕೇಳಿದರು. ಆಗ ಯೇಸು, "ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು " ಎಂದರು.

No comments:

Post a Comment