ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

15.04.24 - “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ದೇವರು ಮೆಚ್ಚುವ ಕಾರ್ಯ”

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:8:15


ಸ್ತೇಫನನ ಬಂಧನ ಸ್ತೇಫನನು ದೈವಾನುಗ್ರಹದಿಂದಲೂ ಶಕ್ತಿಯಿಂದಲೂ ತುಂಬಿದ್ದನು. ಜನರ ಮಧ್ಯೆ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದನು. ಆದರೆ ಕೆಲವರು ಸ್ತೇಫನನ ವಿರೋಧಿಗಳಾಗಿದ್ದರು. ಇವರು ‘ಬಿಡುಗಡೆ ಹೊಂದಿದವರು’ ಎಂಬವರ ಪ್ರಾರ್ಥನಾ ಮಂದಿರಕ್ಕೆ ಸೇರಿದವರು. ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರೂ ಇದರ ಸದಸ್ಯರಾಗಿದ್ದರು. ಇವರೊಡನೆ ಸಿಲಿಸಿಯ ಹಾಗೂ ಏಷ್ಯಾದ ಯೆಹೂದ್ಯರೂ ಸೇರಿ ಸ್ತೇಫನನೊಂದಿಗೆ ತರ್ಕ ಮಾಡತೊಡಗಿದರು. ಆದರೆ ಸ್ತೇಫನನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲು ಅವರಿಂದಾಗಲಿಲ್ಲ. ಆದುದರಿಂದ ಕೆಲವರಿಗೆ ಲಂಚಕೊಟ್ಟು ‘ಸ್ತೇಫನನು ಮೋಶೆಯನ್ನೂ ದೇವರನ್ನೂ ದೂಷಿಸುತ್ತಾನೆ; ಇದನ್ನು ನಾವು ಕೇಳಿದ್ದೇವೆ’ ಎಂದು ಹೇಳಿಸಿದರು. ಹೀಗೆ ಜನರನ್ನೂ ಪ್ರಮುಖರನ್ನೂ ನ್ಯಾಯಶಾಸ್ತ್ರಜ್ಞರನ್ನೂ ಪ್ರಚೋದಿಸಿದರು. ಸ್ತೇಫನನನ್ನು ಬಂಧಿಸಿ ನ್ಯಾಯಸಭೆಯ ಮುಂದೆ ಎಳೆದು ತರುವಂತೆ ಮಾಡಿದರು. ಕೆಲವು ಸುಳ್ಳುಸಾಕ್ಷಿಗಳನ್ನು ನೇಮಿಸಿಕೊಂಡು ಅವರಿಂದ, ‘ಇವನು ಯಾವಾಗಲೂ ನಮ್ಮ ಪವಿತ್ರ ದೇವಾಲಯದ ವಿರುದ್ಧ ಹಾಗೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧ ಮಾತನಾಡುತ್ತಾನೆ. ನಜರೇತಿನ ಆ ಯೇಸು ಈ ಮಹಾದೇವಾಲಯವನ್ನು ನಾಶಗೊಳಿಸುವನೆಂದೂ ಮೋಶೆ ನಮಗೆ ವಿಧಿಸಿದ ಸಂಪ್ರದಾಯಗಳನ್ನು ಬದಲಿಸುವನೆಂದೂ ಇವನು ಹೇಳಿರುತ್ತಾನೆ. ಇದನ್ನು ನಾವು ಕೇಳಿದ್ದೇವೆ,’ ಎಂದು ಹೇಳಿಸಿದರು. ನ್ಯಾಯಸಭೆಯಲ್ಲಿ ಕುಳಿತಿದ್ದವರೆಲ್ಲರೂ ಅವನ ಮುಖವನ್ನೇ ದಿಟ್ಟಿಸಿ ನೋಡಿದರು. ಅದು ದೇವದೂತನ ಮುಖದಂತೆ ಕಂಗೊಳಿಸಿತು.

ಕೀರ್ತನೆ: 119:23, 24, 26, 27, 29, 30

ಶ್ಲೋಕ: ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು.

ಒಳಸಂಚು ಮಾಡುತ್ತಿದ್ದರು ಒಡೆಯರು ಎನಗೆದುರಾಗಿ I
ದಾಸ ನಾನಿರುವೆ ನಿನ್ನ ಆಜ್ಞೆಗಳಲೆ ಮಗ್ನನಾಗಿ II

ನಿನ್ನಾಜ್ಞೆಯು ಆನಂದದಾಯಕ I
ಅವೇ ನನಗೆ ಮಂತ್ರಾಲೋಚಕ II

ನನ್ನ ಗತನಡತೆಯನು ಕೇಳಿ ಸದುತ್ತರಿಸಿದೆಯಯ್ಯಾ I
ನಿನ್ನ ನಿಬಂಧನೆಗಳನೀಗ ನನಗೆ ಉಪದೇಶಿಸಯ್ಯಾ II

ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ I
ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ II

ಮಿಥ್ಯಮಾರ್ಗವನು ನನಗೆ ದೂರಮಾಡಯ್ಯಾ I
ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ II

ಆರಿಸಿಕೊಂಡಿರುವೆನು ನಾನು ಸತ್ಯಮಾರ್ಗವನು I
ಇರಿಸಿಕೊಂಡಿಹೆನು ಕಣ್ಮುಂದೆ ನಿನ್ನ ವಿಧಿಗಳನು

ಶುಭಸಂದೇಶ: ಯೊವಾನ್ನ 6:22-29


ನೆರೆದಿದ್ದ ಜನರು ಮಾರನೆಯ ದಿನವೂ ಸರೋವರದ ಆಚೆ ಕಡೆಯೇ ಉಳಿದಿದ್ದರು. ಹಿಂದಿನ ದಿನ ಅಲ್ಲಿ ಒಂದೇ ಒಂದು ದೋಣಿ ಇದ್ದುದನ್ನು ಅವರು ನೋಡಿದ್ದರು. ಯೇಸುಸ್ವಾಮಿ ಶಿಷ್ಯರೊಡನೆ ದೋಣಿಯನ್ನು ಹತ್ತಲಿಲ್ಲವಾದ್ದರಿಂದ ಶಿಷ್ಯರು ಮಾತ್ರ ಹೊರಟು ಹೋಗಿದ್ದಾರೆಂದು ಅವರಿಗೆ ತಿಳಿದಿತ್ತು. ತಿಬೇರಿಯದಿಂದ ಹೊರಟಿದ್ದ ದೋಣಿಗಳು ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು ಸೇರಿದವು. ಪ್ರಭುವು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಜನರಿಗೆ ರೊಟ್ಟಿ ಬಡಿಸಿದ್ದ ಸ್ಥಳ ಅಲ್ಲೇ ಪಕ್ಕದಲ್ಲಿತ್ತು. ಯೇಸು ಆಗಲಿ, ಅವರ ಶಿಷ್ಯರಾಗಲಿ ಇಲ್ಲದ್ದನ್ನು ನೋಡಿ ಜನರು ಆ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಫೆರ್ನವುಮಿಗೆ ಬಂದರು. ಜನರು ಯೇಸುಸ್ವಾಮಿಯನ್ನು ಸರೋವರದ ಆಚೆದಡದಲ್ಲಿ ಕಂಡೊಡನೆ, “ಗುರುದೇವಾ, ತಾವಿಲ್ಲಿಗೆ ಬಂದುದು ಯಾವಾಗ?” ಎಂದು ಕೇಳಿದರು. ಯೇಸು ಅವರಿಗೆ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನನ್ನನ್ನು ಹುಡುಕಿಕೊಂಡು ಬಂದದ್ದು ಸೂಚಕಕಾರ್ಯಗಳನ್ನು ನೋಡಿ ಗ್ರಹಿಸಿಕೊಂಡಿದ್ದರಿಂದ ಅಲ್ಲ, ಹೊಟ್ಟೆ ತುಂಬುವಷ್ಟು ರೊಟ್ಟಿ ಸಿಕ್ಕಿದ್ದರಿಂದ. ಅಳಿದುಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಆಹಾರಕ್ಕಾಗಿ ದುಡಿಯಿರಿ. ಇಂಥ ಆಹಾರವನ್ನು ನಿಮಗೆ ನೀಡುವವನು ನರಪುತ್ರನೇ. ಏಕೆಂದರೆ, ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ,” ಎಂದು ಉತ್ತರಕೊಟ್ಟರು. ಆಗ ಆ ಜನರು, “ದೇವರು ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ, ಏನು ಮಾಡಬೇಕು?” ಎಂದು ಕೇಳಿದರು. ಅದಕ್ಕೆ ಯೇಸು, “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ ಕಾರ್ಯ,” ಎಂದರು.

No comments:

Post a Comment