ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

05.05.24- "ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 10:25-26, 34-35, 44-48

ಪೇತ್ರನು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಕೊರ್ನೇಲಿಯನು ಅವನನ್ನು ಎದುರುಗೊಂಡು, ಪಾದಕ್ಕೆರಗಿ, ಸಾಷ್ಟಾಂಗ ನಮಸ್ಕಾರ ಮಾಡಿದನು. ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದು ನಿಲ್ಲು, ನಾನೂ ಒಬ್ಬ ಸಾಮಾನ್ಯ ಮನುಷ್ಯನೇ,” ಎಂದನು. ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ. ಈ ವಿಷಯ ನನಗೆ ಈಗ ಮನದಟ್ಟಾಗಿದೆ. ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದವನೇ ಆಗಿರಲಿ, ಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಪೇತ್ರನು ಮಾತನಾಡುತ್ತಿದ್ದಂತೆ ಅವನ ಉಪದೇಶವನ್ನು ಕೇಳುತ್ತಿದ್ದ ಎಲ್ಲರ ಮೇಲೆ ಪವಿತ್ರಾತ್ಮ ಇಳಿದು ಬಂದರು. ಎಲ್ಲರು ವಿವಿಧ ಭಾಷೆಗಳನ್ನು ಮಾತನಾಡುತ್ತಾ ದೇವರ ಮಹತ್ವವನ್ನು ಸ್ತುತಿಸತೊಡಗಿದರು. ಜೊಪ್ಪದಿಂದ ಪೇತ್ರನೊಡನೆ ಬಂದಿದ್ದ ಯೆಹೂದ್ಯ ಭಕ್ತವಿಶ್ವಾಸಿಗಳು ಇದನ್ನು ಕಂಡು, ದೇವರು ಅನ್ಯಧರ್ಮದವರ ಮೇಲೂ ಪವಿತ್ರಾತ್ಮಧಾರೆ ಎರೆಯುತ್ತಿದ್ದಾರಲ್ಲಾ ಎಂದು ವಿಸ್ಮಿತರಾದರು. ಆಗ ಪೇತ್ರನು, “ನಮ್ಮಂತೆಯೇ ಪವಿತ್ರಾತ್ಮ ಅವರನ್ನು ಪಡೆದಿರುವ ಈ ಜನರಿಗೆ ದೀಕ್ಷಾಸ್ನಾನ ಕೊಡಲು ಅಭ್ಯಂತರವಿದೆಯೇ?” ಎಂದನು. ಅನಂತರ ಅವರಿಗೆ ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನ ಪಡೆಯುವಂತೆ ಆಜ್ಞಾಪಿಸಿದನು. ಅದಾದ ಬಳಿಕ ತಮ್ಮೊಡನೆ ಕೆಲವು ದಿನ ಇರಬೇಕೆಂದು ಪೇತ್ರನನ್ನು ಆ ಜನರು ಕೇಳಿಕೊಂಡರು.

ಕೀರ್ತನೆ: 98:1-4

ಶ್ಲೋಕ: ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ದಾರಾಕ ಶಕ್ತಿಯನು.  

ಎರಡನೇ ವಾಚನ: 1 ಯೊವಾನ್ನ 4: 7-10

ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿ ದೇವರಿಂದ ಉಗಮವಾದುದು. ಪ್ರೀತಿಸುವವನು ದೇವರ ಮಗನು. ಅವನು ದೇವರನ್ನು ಬಲ್ಲವನು. ಪ್ರೀತಿಸದವನು ದೇವರನ್ನು ಬಲ್ಲವನಲ್ಲ. ಏಕೆಂದರೆ, ದೇವರು ಪ್ರೀತಿಸ್ವರೂಪಿ. ತಮ್ಮ ಏಕೈಕ ಪುತ್ರನ ಮುಖಾಂತರ ನಾವು ಸಜ್ಜೀವವನ್ನು ಪಡೆಯುವಂತೆ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ನಮ್ಮ ಮೇಲೆ ದೇವರಿಗಿರುವ ಪ್ರೀತಿ ಹೀಗೆ ವ್ಯಕ್ತವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಅವರು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತಮ್ಮ ಪುತ್ರನನ್ನು ಕಳುಹಿಸಿದ್ದರಲ್ಲಿಯೇ ಪ್ರೀತಿಯ ನಿಜ ಗುಣ ತೋರಿಬರುತ್ತದೆ.


ಶುಭಸಂದೇಶ: ಯೊವಾನ್ನ 15: 9-17


ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ. ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. “ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ. ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು. ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ. ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ.

No comments:

Post a Comment