ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

10.04.24 - "ಸತ್ಯಸಂಧನಾದರೋ ಬೆಳಕಿನ ಬಳಿಗೆ ಬರುತ್ತಾನೆ. ತಾನು ಮಾಡುವುದು ದೇವರು ಮೆಚ್ಚುವುದನ್ನೇ ಎಂಬುದನ್ನು ತೋರ್ಪಡಿಸುತ್ತಾನೆ."

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:17-26


ಪ್ರಧಾನ ಯಾಜಕನೂ ಅವನ ಸಂಗಡವಿದ್ದ ಸ್ಥಳೀಯ ಸದ್ದುಕಾಯರೂ ಪ್ರೇಷಿತರ ಬಗ್ಗೆ ತೀವ್ರ ಅಸೂಯೆಪಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದರು. ಪ್ರೇಷಿತರನ್ನು ಬಂಧಿಸಿ ಊರ ಸೆರೆಯಲ್ಲಿಟ್ಟರು. ಆ ರಾತ್ರಿಯೇ ಪ್ರಭುವಿನ ದೂತನೊಬ್ಬನು ಸೆರೆಮನೆಯ ದ್ವಾರಗಳನ್ನು ತೆರೆದು ಪ್ರೇಷಿತರನ್ನು ಹೊರಕ್ಕೆ ತಂದನು. “ಹೋಗಿರಿ, ಮಹಾದೇವಾಲಯದಲ್ಲಿ ನಿಂತು ಈ ನವಜೀವದ ಬಗ್ಗೆ ಜನರಿಗೆ ಬೋಧಿಸಿರಿ,” ಎಂದನು. ಅದರಂತೆ ಪ್ರೇಷಿತರು ಮುಂಜಾವದಲ್ಲೇ ದೇವಾಲಯವನ್ನು ಪ್ರವೇಶಿಸಿ ಬೋಧಿಸಲಾರಂಭಿಸಿದರು. ಇತ್ತ ಪ್ರಧಾನ ಯಾಜಕನೂ ಅವನ ಸಂಗಡಿಗರೂ ಜೊತೆಗೂಡಿ ಯೆಹೂದ್ಯ ಪ್ರಮುಖರನ್ನೊಳಗೊಂಡ ಶ್ರೇಷ್ಠ ನ್ಯಾಯಸಭೆಯನ್ನು ಕರೆದರು. ಅನಂತರ ಪ್ರೇಷಿತರನ್ನು ಆ ಸಭೆಯ ಮುಂದೆ ಕರೆತರುವಂತೆ ಸೆರೆಮನೆಯ ಅಧಿಕಾರಿಗಳಿಗೆ ಆಜ್ಞೆಯಿತ್ತರು. ಈ ಅಧಿಕಾರಿಗಳು ಸೆರೆಮನೆಗೆ ಬಂದಾಗ ಅಲ್ಲಿ ಪ್ರೇಷಿತರನ್ನು ಕಾಣಲಿಲ್ಲ. ಹಿಂದಿರುಗಿ ಹೋಗಿ ನ್ಯಾಯಸಭೆಗೆ ಈ ವಿಷಯವನ್ನು ವರದಿಮಾಡಿದರು; “ನಾವು ಸೆರೆಮನೆಗೆ ಹೋದಾಗ ಅದಕ್ಕೆ ಹಾಕಿದ್ದ ಬೀಗಮುದ್ರೆಯೇನೋ ಭದ್ರವಾಗಿತ್ತು. ಪಹರೆಯವರು ದ್ವಾರದಲ್ಲಿ ಕಾವಲಿದ್ದರು. ಆದರೆ ದ್ವಾರವನ್ನು ತೆರೆದು ನೋಡಿದಾಗ ಒಳಗೆ ಯಾರನ್ನೂ ನಾವು ಕಾಣಲಿಲ್ಲ,” ಎಂದು ತಿಳಿಸಿದರು. ದೇವಾಲಯದ ದಳಪತಿ ಮತ್ತು ಮುಖ್ಯ ಯಾಜಕರು ಇದನ್ನು ಕೇಳಿ ಇದರಿಂದೇನಾಗುವುದೋ ಎಂದು ಕಳವಳಗೊಂಡರು. ಅಷ್ಟರಲ್ಲಿ ಒಬ್ಬನು ಅಲ್ಲಿಗೆ ಬಂದು, “ಇಗೋ, ನೀವು ಸೆರೆಮನೆಯಲ್ಲಿ ಇಟ್ಟವರು ದೇವಾಲಯದಲ್ಲಿ ನಿಂತು ಜನರಿಗೆ ಬೋಧಿಸುತ್ತಿದ್ದಾರೆ.” ಎಂದನು. ಆಗ ಆ ದಳಪತಿ ಅಧಿಕಾರಿಗಳೊಡನೆ ಹೋಗಿ ಪ್ರೇಷಿತರನ್ನು ಕರೆದುಕೊಂಡು ಬಂದನು. ಜನರು ತಮ್ಮ ಮೇಲೆ ಕಲ್ಲುತೂರಬಹುದೆಂಬ ಭಯದಿಂದ ಪ್ರೇಷಿತರ ಮೇಲೆ ಅವರು ಯಾವ ಬಲಪ್ರಯೋಗವನ್ನೂ ಮಾಡಲಿಲ್ಲ

ಕೀರ್ತನೆ: 34:2-3, 4-5, 6-7, 8-9 
ಶ್ಲೋಕ: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು

ಪ್ರಭುವಿನಲ್ಲಿದೆ ನನ್ನ ಮನದಭಿಮಾನ 
ದೀನರಿದನು ಕೇಳಿಪಡೆಯಲಿ ಸುಮ್ಮಾನ 
ಬನ್ನಿಕೊಂಡಾಡುವ ಪ್ರಭು ದೇವನನು 
ಘನಪಡಿಸೋಣ ಅವನ ಶ್ರೀನಾಮವನು

ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು 
ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು 
ಆತನತ್ತ ತಿರುಗಿದ ಮುಖ ಅರಳುವುದು 
ಲಜ್ಜೆಯಿಂದೆಂದಿಗು ಕುಂದಿಹೋಗದು 

ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು
ಸರ್ವಾಪತ್ತಿನಿಂದವನು ಮುಕ್ತಗೊಂಡನು
ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು
ಕಾಯುವನು ಪ್ರಭುವಿನ ದೂತನೆ ಬಂದಿಳಿದು

ಸವಿದು ನೋಡು ಪ್ರಭುವಿನ ಮಾಧುರ್ಯವನು
ಆತನನು ಆಶ್ರಯಿಸಿಕೊಂಡವನು ಧನ್ಯನು 
ದೇವಜನರೆನಿಮಗಿರಲಿ ಪ್ರಭುವಿನ ಭಯಭಕುತಿ 
ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ 

ಶುಭಸಂದೇಶ: ಯೊವಾನ್ನ 3:16-21

ಯೇಸುಸ್ವಾಮಿ ನಿಕೊದೇಮನಿಗೆ ಹೀಗೆಂದರು: "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು. ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆಂದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ. ಈ ತೀರ್ಪು ಏನೆಂದರೆ: ಜ್ಯೋತಿ ಜಗತ್ತಿಗೆ ಬಂದಿತು; ಮಾನವರಾದರೋ ತಮ್ಮ ದುಷ್ಕತ್ಯಗಳಿಂದಾಗಿ ಆ ಜ್ಯೋತಿಗೆ ಬದಲು ಅಂಧಕಾರವನ್ನೇ ಅವಲಂಬಿಸಿದರು. ಕೇಡನ್ನು ಮಾಡುವವನಿಗೆ ಬೆಳಕೆಂದರೆ ಆಗದು. ತನ್ನ ದುಷ್ಕತ್ಯಗಳು ಬಯಲಾಗಬಾರದೆಂದು ಅವನು ಬೆಳಕಿನ ಬಳಿಗೆ ಸುಳಿಯುವುದೂ ಇಲ್ಲ, ಸತ್ಯಸಂಧನಾದರೋ ಬೆಳಕಿನ ಬಳಿಗೆ ಬರುತ್ತಾನೆ. ತಾನು ಮಾಡುವುದು ದೇವರು ಮೆಚ್ಚುವುದನ್ನೇ ಎಂಬುದನ್ನು ತೋರ್ಪಡಿಸುತ್ತಾನೆ."

No comments:

Post a Comment