ಮಂಗಳವಾರ್ತೆಯ ಮಹೋತ್ಸವ
ಮೊದಲನೇ ವಾಚನ: ಯೆಶಾಯ 7:10-14; 8:10

ಕೀರ್ತನೆ: 40:7, 8-9, 10, 11
ಶ್ಲೋಕ: ನಾನೋಗೊಡುತ ಇಂತೆಂದೆ: ’ಇಗೋ ನಾನೇ ಬರುತ್ತಿರುವೆ’
ಬೇಡವಾದವು ನಿನಗೆ ಯಜ್ಞಾರ್ಪಣೆ, ಬಲಿಕಾಣಿಕೆ I
ಬಯಸಿಲ್ಲ ನೀ ಹೋಮವನೆ, ಪರಿಹಾರಕ ಬಲಿಯನೆ I
ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ II
ನಾನೋಗೊಡುತ ಇಂತೆಂದೆ : “ಇಗೋ ನಾನೇ ಬರುತ್ತಿರುವೆ I
ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? II
ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ I
ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ” II
ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ I
ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ II
ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು I
ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು I
ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು II
ಎರಡನೇ ವಾಚನ: ಹಿಬ್ರಿಯರಿಗೆ 10:4-10

ಶುಭಸಂದೇಶ: ಲೂಕ 1:26-38
ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು. ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು. ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.
ಮನಸ್ಸಿಗೊಂದಿಷ್ಟು : ದೂತನು ಮಾತೆ ಮರಿಯ ಬಳಿಗೆ ಬಂದು ಶುಭವಾರ್ತೆಯನ್ನು ತಿಳಿಸಿದಾಗ, ಮೊದಲಿಗೆ ಮರಿಯ ತಬ್ಬಿಬ್ಬಾಗುತ್ತಾರೆ, ಆಶ್ಚರ್ಯಪಡುತ್ತಾರೆ ನಂತರ ಸಂಪೂರ್ಣವಾಗಿ ಒಪ್ಪಿಸಿಕೊಂಡು ದೈವಚಿತ್ತಕ್ಕೆ ತಲೆ ಬಾಗುತ್ತಾರೆ. ದೇವರಿಗೆ ಎಲ್ಲವು ಸಾಧ್ಯ ಎಂಬ ಮರಿಯಳ ವಿಶ್ವಾಸ ಲೋಕ ರಕ್ಷಣಾ ಕಾರ್ಯಕ್ಕೆ ಮುನ್ನುಡಿಯಾಯಿತು. ಬಾಳಿನ ಕಷ್ಟದ ಸಮಯದಲ್ಲಿ ನಾವು ತಬ್ಬಿಬ್ಬಾಗುತ್ತೇವೆ, ಗೊಂದಲಗೊಳ್ಳುತ್ತೇವೆ, ಭಯಪಡುತ್ತೇವೆ. ಆದರೆ ದೇವರಿಗೆ ನಮ್ಮ ಬಾಳನ್ನು ಸಮರ್ಪಿಸಿದಾಗ ದೇವರ ಕಾರ್ಯಗಳು ನಮ್ಮಲ್ಲಿ ಕೈಗೂಡುವುದನ್ನು ಕಾಣುತ್ತೇವೆ, ಅನುಭವಿಸುತ್ತೇವೆ.
ಪ್ರಶ್ನೆ : ಮಾತೆ ಮರಿಯಳ ವಿನಯ ವಿಧೇಯತೆ ನಮ್ಮ ಬಾಳಿಗೆಷ್ಟು ಪ್ರಸ್ತುತ?
No comments:
Post a Comment