ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 28:16-20, 30-31

ನಾವು ರೋಮ್ ನಗರಕ್ಕೆ ಆಗಮಿಸಿದ ಮೇಲೆ, ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪ್ರತ್ಯೇಕವಾಗಿರಲು ಪೌಲನಿಗೆ ಅಪ್ಪಣೆ ಕೊಡಲಾಯಿತು. ಮೂರು ದಿನಗಳ ನಂತರ ಪೌಲನು ಸ್ಥಳೀಯ ಯೆಹೂದ್ಯ ಮುಖಂಡರು ತನ್ನ ಬಳಿಗೆ ಬರುವಂತೆ ಹೇಳಿಕಳುಹಿಸಿದನು. ಅವರು ಬಂದಾಗ, “ನನ್ನ ಸೋದರ ಇಸ್ರಯೇಲರೇ, ನಾನು ನಮ್ಮ ಜನರಿಗೆ ವಿರೋಧವಾಗಿಯಾಗಲಿ, ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯಗಳಿಗೆ ವಿರೋಧವಾಗಿಯಾಗಲಿ, ಏನನ್ನೂ ಮಾಡಿಲ್ಲ; ಆದರೂ ಜೆರುಸಲೇಮಿನಲ್ಲಿ ನನ್ನನ್ನು ಕೈದಿಯನ್ನಾಗಿಸಿ ರೋಮನರ ಕೈಗೆ ಒಪ್ಪಿಸಲಾಯಿತು. ಇವರು ನನ್ನನ್ನು ವಿಚಾರಣೆಗೆ ಒಳಪಡಿಸಿದರು. ಮರಣದಂಡನೆಗೆ ಗುರಿಮಾಡುವಂಥ ಅಪರಾಧ ಏನನ್ನೂ ನನ್ನಲ್ಲಿ ಕಾಣಲಿಲ್ಲ. ಈ ಕಾರಣ ನನ್ನನ್ನು ಬಿಡುಗಡೆ ಮಾಡಬೇಕೆಂದಿದ್ದರು. ಆದರೆ ಯೆಹೂದ್ಯರು ಇದನ್ನು ಪ್ರತಿಭಟಿಸಿದರು. ಆಗ ನಾನು ಚಕ್ರವರ್ತಿಗೇ ಅಪೀಲುಮಾಡಬೇಕಾಯಿತು. ನನ್ನ ಸ್ವದೇಶೀಯರ ಮೇಲೆ ದೋಷಾರೋಪಣೆ ಮಾಡಬೇಕೆಂದು ನಾನು ಹಾಗೆ ಮಾಡಲಿಲ್ಲ. ಈ ಕಾರಣದಿಂದಲೇ ನಿಮ್ಮನ್ನು ನೋಡಿ ಮಾತನಾಡಲು ಬಯಸಿದೆ. ಇಸ್ರಯೇಲ್ ಜನತೆ ಯಾರ ನಿರೀಕ್ಷೆಯಲ್ಲಿ ಇದೆಯೋ, ಅವರ ನಿಮಿತ್ತವೇ ನಾನು ಹೀಗೆ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು. ಪೌಲನು ತಾನು ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ನೋಡಲು ಬಂದವರನ್ನೆಲ್ಲಾ ಆದರದಿಂದ ಬರಮಾಡಿಕೊಳ್ಳುತ್ತಿದ್ದನು. ಭಯಭೀತಿಯಿಲ್ಲದೆ ಹಾಗೂ ಅಡ್ಡಿಆತಂಕವಿಲ್ಲದೆ ದೇವರ ಸಾಮ್ರಾಜ್ಯವನ್ನು ಕುರಿತು ಪ್ರಬೋಧಿಸುತ್ತಿದ್ದನು; ಸ್ವಾಮಿ ಯೇಸುಕ್ರಿಸ್ತರ ವಿಷಯವಾಗಿ ಉಪದೇಶಿಸುತ್ತಿದ್ದನು.
ಕೀರ್ತನೆ: 11:4, 5, 7
ಶ್ಲೋಕ: ಪ್ರಭೂ, ಸತ್ಪುರುಷನು ಸೇರುವನು ನಿಮ್ಮ ಸನ್ನಿಧಿಯನು
ಶುಭಸಂದೇಶ: ಯೊವಾನ್ನ 21:20-25
ಪೇತ್ರನು ಹಿಂದಿರುಗಿ ನೋಡಿದಾಗ, ಯೇಸುವಿನ ಆಪ್ತನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. (ಭೋಜನದ ಸಮಯದಲ್ಲಿ ಯೇಸುವಿನ ಪಕ್ಕದಲ್ಲೇ ಒರಗಿ, “ಪ್ರಭುವೇ, ನಿಮ್ಮನ್ನು ಹಿಡಿದುಕೊಡುವಂಥ ಸ್ವಾಮಿ ದ್ರೋಹಿ ಯಾರು?” ಎಂದು ಕೇಳಿದವನೇ ಅವನು.) ಇವನನ್ನು ಕಂಡು ಪೇತ್ರನು, “ಪ್ರಭೂ, ಇವನ ವಿಷಯವೇನು?” ಎಂದು ಯೇಸುವನ್ನು ಕೇಳಿದನು. ಅದಕ್ಕೆ ಯೇಸು, “ನಾನು ಬರುವ ತನಕ ಅವನು ಹಾಗೆಯೇ ಇರಬೇಕೆಂಬುದು ನನ್ನ ಬಯಕೆ; ಆದರೆ ಅದರಿಂದ ನಿನಗೇನಾಗಬೇಕು? ನೀನು ಅಂತೂ ನನ್ನನ್ನು ಹಿಂಬಾಲಿಸಿ ಬಾ,” ಎಂದರು. ಇದರಿಂದಾಗಿ ಆ ಶಿಷ್ಯನಿಗೆ ಸಾವಿಲ್ಲವೆಂಬ ವದಂತಿ ಸೋದರರಲ್ಲಿ ಹಬ್ಬಿತು. ಯೇಸು, ‘ನಾನು ಬರುವ ತನಕ ಅವನು ಹಾಗೆಯೇ ಇರಬೇಕೆಂಬುದು ನನ್ನ ಬಯಕೆಯಾದರೆ ಅದರಿಂದ ನಿನಗೇನಾಗಬೇಕು?’ ಎಂದು ಹೇಳಿದರೇ ಹೊರತು ಅವನಿಗೆ ಸಾವಿಲ್ಲವೆಂದು ಹೇಳಲಿಲ್ಲ. ಇವುಗಳಿಗೆ ಆ ಶಿಷ್ಯನೇ ಸಾಕ್ಷಿ. ಇದನ್ನೆಲ್ಲಾ ಬರೆದಿಟ್ಟವನೂ ಅವನೇ. ಅವನ ಸಾಕ್ಷಿ ಸತ್ಯವಾದುದೆಂದು ನಾವು ಬಲ್ಲೆವು. ಯೇಸು ಮಾಡಿದ ಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನೆಲ್ಲಾ ಒಂದೊಂದಾಗಿ ಬರೆಯಲು ಹೋದರೆ, ಬರೆಯಬೇಕಾದ ಗ್ರಂಥಗಳನ್ನು ಬಹುಶಃ ಲೋಕವೇ ಹಿಡಿಸಲಾರದೆಂದು ನೆನಸುತ್ತೇನೆ.
No comments:
Post a Comment