ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

26.05.24 - "ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ"

ಮೊದಲನೇ ವಾಚನ: ಧರ್ಮೋಪದೇಶಕಾಂಡ 4: 32-34, 39-40

“ದೇವರು ಮಾನವರನ್ನು ಸೃಷ್ಟಿಸಿ ಭೂಮಿಯ ಮೇಲಿರಿಸಿದ ದಿನ ಮೊದಲ್ಗೊಂಡು ಇಂದಿನವರೆಗೆ, ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೆ, ಅಂಥ ಅದ್ಭುತಕಾರ್ಯ ನಡೆದದ್ದುಂಟೇ? ಅಂಥ ಸುದ್ದಿಯನ್ನಾದರೂ ಕೇಳಿದ್ದುಂಟೇ? ನೀವೇ ವಿಚಾರಿಸಿಕೊಳ್ಳಿ. ದೇವರು ಅಗ್ನಿಜ್ವಾಲೆಯೊಳಗಿಂದ ಮಾತಾಡಿದ ಸ್ವರ ಕೇಳಿಸಿತಲ್ಲವೆ? ಬೇರೆ ಯಾವ ಜನರಾದರು ದೇವರ ಸ್ವರ ಕೇಳಿ ಬದುಕಿದ್ದುಂಟೇ? ಬೇರೆ ಯಾವ ದೇವರು ತಾನೆ ಪರಿಶೋಧನೆ, ಪವಾಡ, ಮಹತ್ಕಾರ್ಯ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಭಯಂಕರಕಾರ್ಯ ಇವುಗಳನ್ನು ಪ್ರಯೋಗಿಸಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯಿಂದ ತಪ್ಪಿಸಲು ಪ್ರಯತ್ನಿಸಿದ್ದಾರೆ? ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯಾದರೊ ಈಜಿಪ್ಟಿನಲ್ಲಿ ನಿಮ್ಮ ಪರವಾಗಿ, ಇದನ್ನೆಲ್ಲ ನಿಮ್ಮ ಕಣ್ಮುಂದೆಯೇ, ನಡೆಸಿದರಲ್ಲವೆ? ನೀವು ಇದನ್ನೆಲ್ಲಾ ಆಲೋಚಿಸಿ, ಮೇಲೆ ಆಕಾಶದಲ್ಲಾಗಲಿ, ಕೆಳಗೆ ಭೂಮಿಯಲ್ಲಾಗಲಿ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು, ಬೇರೆಯಾದ ದೇವರೂ ಇಲ್ಲವೆಂಬುದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿ ಇಡಬೇಕು. ನಾನು ಇಂದು ನಿಮಗೆ ತಿಳಿಸಿದ ಅವರ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಿರಿ. ಆಗ ನಿಮಗೂ ನಿಮ್ಮ ಸಂತತಿಗೂ ಶುಭವುಂಟಾಗುವುದು; ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಶಾಶ್ವತವಾಗಿ ಕೊಡುವ ನಾಡಿನಲ್ಲಿ ನೀವು ದೀರ್ಘಕಾಲ ಬಾಳುವಿರಿ.”

ಕೀರ್ತನೆ: 33:4-6, 9, 18-20, 21-22
ಶ್ಲೋಕ: ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ. 

ಸತ್ಯವಾದುದು ಆತನ ಪವಿತ್ರ ವಾಕ್ಯ, 
ಸ್ತುತ್ಯವಾದುದು ಆತನ ಪುನೀತ ಕಾರ್ಯ
ಸತ್ಯಸಂಧನು, ನ್ಯಾಯಪ್ರಿಯನು ಆತನು
ಅಚಲ ಪ್ರೀತಿಯಿಂದ ಜಗವನು ತುಂಬಿಹನು//  ಶ್ಲೋಕ

ಸೃಷ್ಟಿಯಾಯಿತು ಗಗನಮಂಡಲ ಆತನ ನುಡಿಯೊಂದಕೆ 
ರೂಪುಗೊಂಡಿತು ತಾರಾಮಂಡಲ ಅವನುಸಿರು ಮಾತ್ರಕೆ
ಸೃಷ್ಟಿಯಾಯಿತು ಆತನ ನುಡಿ ಮಾತ್ರಕೆ
ಸ್ಥಾಪನೆಯಾಯಿತು ಅವನ ಆಣತಿಯೊಂದಕೆ//  ಶ್ಲೋಕ

ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆವವರನು 
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು 
ತಪ್ಪಿಸುವನವರ ಪ್ರಾಣವನು ಮರಣದಿಂದ 
ಉಳಿಸುವನು ಜೀವವನು ಕ್ಷಾಮಡಾಮರದಿಂದ//  ಶ್ಲೋಕ

ನೆಮ್ಮದಿಯಿಂದಿದೆ ಎನ್ನ ಮನ ಆತನಲಿ, 
ನಂಬಿರುವೆವು ಅತನ ಶ್ರೀ ನಾಮದಲಿ
 ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ
 ಕಾದಿಹೆವು ಇದೋ ನಿನ್ನ ನಂಬಿ ಭರವಸಡಿ//  ಶ್ಲೋಕ

ಎರಡನೇ ವಾಚನ: ರೋಮನರಿಗೆ 8: 14-17

ಯಾರು ಯಾರು ದೇವರ ಆತ್ಮನಿಗೆ ಮಣಿದು ನಡೆಯುತ್ತಾರೋ ಅವರು ದೇವರ ಮಕ್ಕಳು. ದೇವರು ನಿಮಗೆ ದಯಪಾಲಿಸಿರುವ ಆತ್ಮ ನಿಮ್ಮನ್ನು ಮತ್ತೊಮ್ಮೆ ಗುಲಾಮರನ್ನಾಗಿಯೂ ಭಯಭೀತರನ್ನಾಗಿಯೂ ಮಾಡುವುದಿಲ್ಲ. ಬದಲಿಗೆ, ನಿಮ್ಮನ್ನು ದೇವರ ಮಕ್ಕಳನ್ನಾಗಿಸುತ್ತದೆ. ಆ ಆತ್ಮದ ಮೂಲಕವೇ ನಾವು ದೇವರನ್ನು, “ಅಪ್ಪಾ, ತಂದೆಯೇ” ಎಂದು ಕರೆಯುತ್ತೇವೆ. ನಾವು ದೇವರ ಮಕ್ಕಳೆಂಬುದಕ್ಕೆ ದೇವರ ಆತ್ಮ ನಮ್ಮ ಅಂತರಾತ್ಮದೊಂದಿಗೆ ಸಾಕ್ಷಿ ನುಡಿಯುತ್ತಾರೆ. ನಾವು ಮಕ್ಕಳಾಗಿದ್ದರೆ, ಹಕ್ಕುಬಾಧ್ಯತೆ ಉಳ್ಳವರು. ಹೌದು, ದೇವರ ಸೌಭಾಗ್ಯಕ್ಕೆ ಬಾಧ್ಯಸ್ಥರು; ಕ್ರಿಸ್ತಯೇಸುವಿನೊಡನೆ ಸಹಬಾಧ್ಯಸ್ಥರು. ಕ್ರಿಸ್ತಯೇಸುವಿನ ಯಾತನೆಯಲ್ಲೂ ನಾವು ಪಾಲುಗಾರರಾಗಬೇಕು. ಆಗ ಅವರ ಮಹಿಮೆಯಲ್ಲೂ ಪಾಲುಗಾರರಾಗುತ್ತೇವೆ.

ಶುಭಸಂದೇಶ: ಮತ್ತಾಯ 28: 16-20


ಹನ್ನೊಂದು ಮಂದಿ ಶಿಷ್ಯರು ಗಲಿಲೇಯಕ್ಕೆ ಹೋದರು. ಯೇಸು ಸೂಚಿಸಿದ್ದ ಬೆಟ್ಟಕ್ಕೆ ಬಂದರು. ಅಲ್ಲಿ ಯೇಸುಸ್ವಾಮಿಯನ್ನು ಕಂಡು ಅವರನ್ನು ಪೂಜಿಸಿದರು. ಆದರೆ ಕೆಲವರು ಸಂದೇಹಪಟ್ಟರು. ಆಗ ಯೇಸು ಹತ್ತಿರಕ್ಕೆ ಬಂದು ಮಾತಾಡಿದರು: “ಭೂಮಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ. ಆದ್ದರಿಂದ ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ, ಮತ್ತು ಪವಿತ್ರಾತ್ಮ ನಾಮದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ. ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನೂ ಅನುಸರಿಸುವಂತೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ,” ಎಂದರು.

No comments:

Post a Comment