ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

12.04.24 - “ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ಟಿಗಳೂ ಎರಡು ವಿೂನುಗಳೂ ಇವೆ"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:34-42


ಆಗ ಆ ಸಭಾಸದಸ್ಯರಲ್ಲಿ ಒಬ್ಬನಾದ ಗಮಲಿಯೇಲ್ ಎಂಬ ಫರಿಸಾಯನು ಅಲ್ಲಿದ್ದನು. ಅವನೊಬ್ಬ ಗೌರವಾನ್ವಿತ ಮತ್ತು ಧರ್ಮಪಂಡಿತ. ಅವನು ಎದ್ದು ನಿಂತು ಪ್ರೇಷಿತರನ್ನು ಸ್ವಲ್ಪ ಹೊತ್ತು ಸಭೆಯಿಂದ ಹೊರಗೆ ಕಳುಹಿಸುವಂತೆ ಹೇಳಿ ಸಭೆಯನ್ನುದ್ದೇಶಿಸಿ, “ಇಸ್ರಯೇಲ್ ಸಬಾಸದಸ್ಯರೇ, ಇವರ ವಿರುದ್ಧ ನೀವು ಕೈಗೊಳ್ಳಬೇಕೆಂದಿರುವ ಕ್ರಮದ ಬಗ್ಗೆ ಎಚ್ಚರಿಕೆಯಿಂದಿರಿ. ಸ್ವಲ್ಪ ಕಾಲಕ್ಕೆ ಹಿಂದೆ ತೈದ ಎಂಬವನಿದ್ದ. ತಾನೊಬ್ಬ ಮಹಾಪುರುಷನು ಎಂದು ಹೇಳಿಕೊಳ್ಳುತ್ತಿದ್ದ. ಸುಮಾರು ನಾನೂರು ಮಂದಿ ಅವನ ಅನುಯಾಯಿಗಳಾದರು. ಅವನ ಕೊಲೆಯಾದದ್ದೇ, ಅವನನ್ನು ಹಿಂಬಾಲಿಸಿದವರೆಲ್ಲರೂ ಚದರಿಹೋದರು. ಅವನ ಪಕ್ಷ ನಿರ್ನಾಮವಾಯಿತು. ಅನಂತರ ಜನಗಣತಿಯ ಕಾಲದಲ್ಲಿ ಗಲಿಲೇಯದ ಯೂದ ಎಂಬವನು ಪ್ರಸಿದ್ಧಿಗೆ ಬಂದ. ತನ್ನೆಡೆಗೆ ಹಲವರನ್ನು ಆಕರ್ಷಿಸಿಕೊಂಡ. ಅವನೂ ಹತನಾದ. ಹಿಂಬಾಲಕರೆಲ್ಲರೂ ಚದುರಿಹೋದರು. ಆದುದರಿಂದ ನಾನು ನಿಮಗೆ ಹೇಳುವುದೇನೆಂದರೆ: ಈ ವ್ಯಕ್ತಿಗಳ ಗೊಡವೆಗೆ ಹೋಗಬೇಡಿ; ಇವರನ್ನು ಸುಮ್ಮನೆ ಬಿಟ್ಟುಬಿಡಿ. ಇವರ ಯೋಜನೆ ಅಥವಾ ಕಾರ್ಯ ಮಾನವಕಲ್ಪಿತವಾಗಿದ್ದರೆ ಅದರಷ್ಟಕ್ಕೆ ಅದೇ ನಾಶವಾಗುವುದು. ಇದು ದೈವಸಂಕಲ್ಪವಾಗಿದ್ದರೆ ಅವರನ್ನು ನಾಶಮಾಡಲು ನಿಮ್ಮಿಂದಾಗದು. ನೀವು ದೇವರಿಗೆ ವಿರುದ್ಧ ಹೋರಾಡಿದಂತೆ ಆದೀತು,” ಎಂದು ಹೇಳಿದನು. ಸಭಾಸದಸ್ಯರು ಗಮಲಿಯೇಲನ ಸಲಹೆಯನ್ನು ಅಂಗೀಕರಿಸಿದರು. ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು. ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು. ಯೇಸುವೇ ಲೋಕೋದ್ದಾರಕನೆಂದು ಪ್ರತಿದಿನ ದೇವಾಲಯದಲ್ಲೂ ಮನೆಮನೆಗಳಲ್ಲೂ ಉಪದೇಶಿಸುವುದರಲ್ಲಿ ಹಾಗೂ ಸಾರುವುದರಲ್ಲಿ ನಿರತರಾದರು.

ಕೀರ್ತನೆ: 27:1, 4, 13-14
ಶ್ಲೋಕ: ನಾನೊಂದನು ಕೋರಿದೆ ಪ್ರಭುವಿನಿಂದ, ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ 


ನನಗೆ ಬೆಳಕುನನಗೆ ರಕ್ಷೆಪ್ರಭುವೆ I

ನಾನಾರಿಗೂ ಅಳುಕೆನು II
ನನ್ನ ಬಾಳಿಗಾಧಾರ ಪ್ರಭುವೆ I
ನಾನಾರಿಗೂ ಅಂಜೆನು II

ನಾನೊಂದನು ಕೋರಿದೆ ಪ್ರಭುವಿನಿಂದ I
ನಾನದನ್ನೇ ನಿರೀಕ್ಷಿಸಿದೆ ಆತನಿಂದ I
ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ I
ನಾ ತಲ್ಲೀನನಾಗಬೇಕು ಅಲ್ಲಾತನ ಪ್ರಸನ್ನತೆಯಲಿ II

ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು I
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು II
ಪ್ರಭುವನು ಎದುರುನೋಡುತ್ತಿರು ಮನವೇ I
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ II


ಶುಭಸಂದೇಶ: ಯೊವಾನ್ನ 6:1-15


ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ದಡಕ್ಕೆ ಹೋದರು. ಅದಕ್ಕೆ ತಿಬೇರಿಯ ಸರೋವರವೆಂದು ಹೆಸರು. ಜನರ ದೊಡ್ಡ ಗುಂಪೊಂದು ಅವರ ಹಿಂದೆ ಹೋಯಿತು. ಏಕೆಂದರೆ, ಯೇಸು ಸೂಚಕಕಾರ್ಯಗಳನ್ನು ಮಾಡುತ್ತಾ  ರೋಗಪೀಡಿತರನ್ನು ಗುಣಪಡಿಸುತ್ತಾ ಇದ್ದುದ್ದನ್ನು ಆ ಜನರು ನೋಡಿದ್ದರು. ಯೇಸು ಬೆಟ್ಟವನ್ನು ಹತ್ತಿ ತಮ್ಮ ಶಿಷ್ಯರ ಸಂಗಡ ಕುಳಿತುಕೊಂಡರು. ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿತ್ತು. ಯೇಸು ಕಣ್ಣು ಹಾಯಿಸಿ ನೋಡಿದಾಗ ಆ ದೊಡ್ಡ ಗುಂಪು ತಮ್ಮ ಕಡೆಗೆ ಬರುವುದನ್ನು ಕಂಡರು. “ಈ ಜನರ ಊಟಕ್ಕೆ ರೊಟ್ಟಿಯನ್ನು ನಾವು ಎಲ್ಲಿಂದ ಕೊಂಡುಕೊಳ್ಳುವುದು?” ಎಂದು ಯೇಸು ಫಿಲಿಪ್ಪನನ್ನು ಕೇಳಿದರು. ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ ಅವರು ಹಾಗೆ ಹೇಳಿದರು. ಏಕೆಂದರೆ, ತಾವು ಮಾಡಲಿರುವುದು ಅವರಿಗೆ ತಿಳಿದಿತ್ತು. ಅದಕ್ಕೆ ಫಿಲಿಪ್ಪನು, “ಇನ್ನೂರು ದಿನಾರಿ ನಾಣ್ಯಗಳನ್ನು ಕೊಟ್ಟು ರೊಟ್ಟಿಯನ್ನು ತಂದರೂ ಆಳಿಗೊಂದು ತುಂಡೂ ಬಾರದು,” ಎಂದನು. ಆಗ ಶಿಷ್ಯರಲ್ಲಿ ಒಬ್ಬನು, ಅಂದರೆ ಸಿಮೋನ್ ಪೇತ್ರನ ಸಹೋದರನಾದ ಅಂದ್ರೆಯನು, “ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ಟಿಗಳೂ ಎರಡು ವಿೂನುಗಳೂ ಇವೆ. ಆದರೆ ಈ ಜನಸಮೂಹಕ್ಕೆ ಇವೆಲ್ಲಿ ಸಾಕಾಗುತ್ತವೆ?” ಎಂದನು. ಯೇಸು, “ಜನರನ್ನು ಊಟಕ್ಕೆ ಕೂರಿಸಿರಿ,” ಎಂದರು. ಅಲ್ಲಿ ಹುಲುಸಾಗಿದ್ದ ಹುಲ್ಲಿನ ಮೇಲೆ ಜನರು ಕುಳಿತುಕೊಂಡರು. ಗಂಡಸರ ಸಂಖ್ಯೆಯೇ ಐದುಸಾವಿರದಷ್ಟಿತ್ತು. ಯೇಸು, ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಕುಳಿತಿದ್ದ ಜನರಿಗೆ ಅವುಗಳನ್ನು ಹಂಚಿದರು. ಹಾಗೆಯೇ ವಿೂನುಗಳನ್ನೂ ಹಂಚಿಕೊಟ್ಟರು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು. ಅವರೆಲ್ಲರೂ ತಿಂದು ತೃಪ್ತರಾದ ಮೇಲೆ ಯೇಸು, “ತಿಂದುಳಿದ ತುಂಡುಗಳನ್ನೆಲ್ಲಾ ಒಟ್ಟುಗೂಡಿಸಿರಿ; ಒಂದು ತುಂಡೂ ಹಾಳಾಗಬಾರದು,” ಎಂದು ತಮ್ಮ ಶಿಷ್ಯರಿಗೆ ಹೇಳಿದರು. ತಿಂದುಳಿದ ಆ ಐದು ರೊಟ್ಟಿಗಳ ತುಂಡುಗಳನ್ನು ಒಟ್ಟುಗೂಡಿಸಲು ಅವು ಹನ್ನೆರಡು ಬುಟ್ಟಿಗಳ ತುಂಬಾ ಆದವು. ಯೇಸು ಮಾಡಿದ ಈ ಸೂಚಕಕಾರ್ಯಗಳನ್ನು ಕಂಡ ಜನರು, “ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿ ನಿಜವಾಗಿಯೂ ಇವರೇ,” ಎಂದು ಹೇಳತೊಡಗಿದ್ದರು. ಅವರೆಲ್ಲರೂ ಬಂದು ತಮ್ಮನ್ನು ಹಿಡಿದು ಅರಸನನ್ನಾಗಿ ಮಾಡುವ ಯೋಚನೆಯಲ್ಲಿದ್ದಾರೆ ಎಂಬುದನ್ನು ಅರಿತ ಯೇಸು ತಾವೊಬ್ಬರೇ ಬೆಟ್ಟದ ಕಡೆಗೆ ಹೊರಟುಬಿಟ್ಟರು.

ಮನಸಿಗೊಂದಿಷ್ಟು 

ಇಂದಿನ ಶುಭ ಸಂದೇಶವು ಹಳೆಯ ಒಡಂಬಡಿಕೆಯ ಪ್ರವಾದಿ ಎಲೀಷನ ಇದೇ ರೀತಿಯ  ಘಟನೆಯನ್ನು (2 ಅರಸರು 4:42:44) ನೆನಪಿಸುತ್ತದೆ. ಈ ಶುಭ ಸಂದೇಶದ ಭಾಗದಲ್ಲಿ ನಾವು ಅನೇಕ ಪಾತ್ರಗಳನ್ನು ಕಾಣಬಹುದು. ಈ ಪಾತ್ರಗಳಲ್ಲಿ ನಾವು ಯಾವ ಪಾತ್ರಕ್ಕೆ ಹತ್ತಿರವಾಗಿದ್ದೇವೆ ಎಂಬುದಾಗಿ ಪ್ರಶ್ನಿಸಿಕೊಳ್ಳಲು ಸಹಾಯ ಮಾಡುತ್ತದೆ.

ಯೇಸುವನ್ನು ನೋಡಲು, ಅವರ ಮಾತುಗಳನ್ನು ಕೇಳಲು ಗುಣವಾಗಲು ಬಂದವರ ಜೊತೆ ಪಾಸ್ಕ ಹಬ್ಬಕ್ಕೆ ಹೊರಟಿದ್ದ ಪ್ರವಾಸಿಗರು ಎಲ್ಲರೂ ಅಲ್ಲಿ ಬಂದು ಸೇರಿದ್ದರು. ಯೇಸು ಜನರನ್ನು ನೋಡಿ ಮರುಕ ಗೊಳ್ಳುತ್ತಾರೆ ಅವರಿಗೆ ತಿನ್ನಲು ಏನಾದರೂ ನೀಡಬೇಕು ಎಂದುಕೊಳ್ಳುತ್ತಾರೆ. ಆದರೆ ಪರೀಕ್ಷಿಸಲೋ ಎಂಬಂತೆ ಫಿಲೀಪನನ್ನು ಕೇಳುತ್ತಾರೆ.

ಫೀಲಿಪ್ಪನದು ನಮ್ಮಂತೆಯೇ ಮನೋಭಾವ. ಅಲ್ಲಿ ಸೇರಿದ ದೊಡ್ಡ ಜನಸಮೂಹಇರುವ ೨೦೦ ದಿನಾರಿಯಷ್ಟು ಸಣ್ಣ ಹಣ ಅವನನ್ನು ನಿರುತ್ಸಾಹಗೊಳಿಸುತ್ತದೆ. ಯೇಸುವೇ ತನ್ನ ಜೊತೆ ಇದ್ದಾರೆ ಎನ್ನುವುದನ್ನು ಆತ ಮರೆಯುತ್ತಾನೆ. ಅಂದ್ರೆಯ ಎಂದಿನಂತೆ ಉತ್ಸಾಹ ತೋರುತ್ತಾನೆ. 5 ರೊಟ್ಟಿ 2 ಮೀನು ಇಟ್ಟಿದ್ದ ಹುಡುಗನನ್ನು ಹುಡುಕಿ ಯೇಸುವಿನ ಬಳಿ ಕರೆ ತರುತ್ತಾನೆ. ಹುಡುಗ ತನ್ನ ಬಳಿಯಿದ್ದ ಆಹಾರವನ್ನು ಹಂಚಿಕೊಳ್ಳಲು ಒಪ್ಪುತ್ತಾನೆ. ಮುಂದಿನದು ಇತಿಹಾಸ. 5000ಕ್ಕಿಂತ ಹೆಚ್ಚಿನ ಜನರ ಹಸಿವು ನೀಗುತ್ತದೆ.

ಈ ಶುಭ ಸಂದೇಶದಲ್ಲಿ ಬರುವ ವಿವಿಧ ರೀತಿಯ ಜನರಲ್ಲಿ ನಾವು ಯಾವ ರೀತಿಯ ವ್ಯಕ್ತಿತ್ವದವರು ಎಂಬುದನ್ನು ಪ್ರಶ್ನಿಸಿಕೊಳ್ಳಬಹುದು. ಯೇಸುವಿನ ಮಾತನ್ನು ಕೇಳಲು ಮಾತ್ರ ಬಂದವರೇ, ಅವರ ಕಾರ್ಯಗಳನ್ನು ನೋಡಲು ಬಂದವರೇ? ನಿಜ ಪ್ರೀತಿಯಿಂದ ಹಾತೊರೆದು ಬಂದವರೇ? ಕೇವಲ ಕುತೂಹಲದಿಂದ ನೊಡಲು ಬಂದ ಪಯಣಿಗರೇಅವರ ಅಗಾಧ ಮಹಿಮೆಯನ್ನು ಕಾಣದ ಫಿಲಿಪ್ ನಂಥವರೇ? ಅದ್ಭುತಕ್ಕೆ ಮುನ್ನುಡಿಯಾದ ಅಂದ್ರೆಯನಂಥವರೇ ಹಂಚಿಕೊಳ್ಳಲು ಸಿದ್ಧನಾಗಿ ಅದ್ಭುತಕ್ಕೆ ಕಾರಣನಾದ ಆ ಹುಡುಗನಂತೆಯೇ?

ಕೊನೆಗೆ ತಮ್ಮ ಅದ್ಭುತ ಕಾರ್ಯದಿಂದ ಸೃಷ್ಟಿಯಾದ ಆಹಾರವು ಸ್ವಲ್ಪವೂ ಹಾಳಾಗದಂತೆ ಎಲ್ಲವನ್ನು ಯೇಸು ಒಟ್ಟುಗೂಡಿಸುತ್ತಾರೆ.  ಅವರ ಅದ್ಭುತ ಹಸ್ತದಲ್ಲಿ ಬಾಳುತ್ತಿರುವ ನಮ್ಮ ಜೀವನ ಹಾಳಾಗದಂತೆ ಅವರಲ್ಲಿ ಒಟ್ಟುಗೂಡೋಣ


No comments:

Post a Comment