ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

07.05.24 - "ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ, ಪೋಷಕ ನಿಮ್ಮಲ್ಲಿಗೆ ಬರುವುದಿಲ್ಲ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 16:22-34

ಜನರ ಗುಂಪು ಅವರೊಡನೆ ಸೇರಿ ದೊಂಬಿಮಾಡಿತು. ನ್ಯಾಯಾಧಿಪತಿಗಳು ಪೌಲ ಮತ್ತು ಸೀಲರ ವಸ್ತ್ರಗಳನ್ನು ಕಿತ್ತುಹಾಕಿಸಿ ಛಡಿ ಏಟುಗಳನ್ನು ಕೊಡುವಂತೆ ಆಜ್ಞೆಮಾಡಿದರು. ಅವರನ್ನು ಚೆನ್ನಾಗಿ ಥಳಿಸಿದ ಮೇಲೆ ಸೆರೆಮನೆಯಲ್ಲಿ ಹಾಕಿ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ಸೆರೆಮನೆಯ ಅಧಿಕಾರಿಗೆ ಅಪ್ಪಣೆ ವಿಧಿಸಲಾಯಿತು. ಅಂತೆಯೇ, ಆ ಅಧಿಕಾರಿ ಅವರನ್ನು ಸೆರೆಮನೆಯ ಒಳಕೋಣೆಗೆ ತಳ್ಳಿ ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಿಗಿಸಿದನು. ಸುಮಾರು ನಡುರಾತ್ರಿಯ ಸಮಯ. ಪೌಲ ಮತ್ತು ಸೀಲ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಇದ್ದರು. ಇತರ ಕೈದಿಗಳೆಲ್ಲರೂ ಆಲಿಸುತ್ತಿದ್ದರು. ಇದ್ದಕ್ಕಿದ್ದಂತೆ ಭೀಕರ ಭೂಕಂಪ ಉಂಟಾಯಿತು. ಸೆರೆಮನೆಯ ಅಸ್ತಿವಾರವೇ ಕದಲಿತು. ಆ ಕ್ಷಣವೇ ಕದಗಳೆಲ್ಲಾ ತೆರೆದುವು. ಕೈದಿಗಳೆಲ್ಲರ ಬಂಧನಗಳು ಕಳಚಿಬಿದ್ದವು. ಎಚ್ಚೆತ್ತ ಅಧಿಕಾರಿ ಸೆರೆಮನೆಯ ಬಾಗಿಲುಗಳೆಲ್ಲಾ ತೆರೆದಿರುವುದನ್ನು ಕಂಡನು. ಕೈದಿಗಳೆಲ್ಲರು ತಪ್ಪಿಸಿಕೊಂಡಿರುವರೆಂದು ಭಾವಿಸಿ ತನ್ನ ಖಡ್ಗವನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿದ್ದನು. ಆಗ ಪೌಲನು ಗಟ್ಟಿಯಾಗಿ ಕೂಗುತ್ತಾ, “ನೀನೇನೂ ಹಾನಿಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ,” ಎಂದನು. ಸೆರೆಮನೆಯ ಅಧಿಕಾರಿ ದೀಪವನ್ನು ತರಿಸಿ, ಒಳಗೆ ಧಾವಿಸಿ ಬಂದು, ಭಯದಿಂದ ನಡುಗುತ್ತಾ ಪೌಲ ಮತ್ತು ಸೀಲರ ಪಾದಕ್ಕೆ ಬಿದ್ದನು. ಅನಂತರ ಅವರನ್ನು ಹೊರಗೆ ಕರೆತಂದು, “ಸ್ವಾಮಿಗಳೇ, ಜೀವೋದ್ಧಾರ ಪಡೆಯಲು ನಾನು ಮಾಡಬೇಕಾದುದು ಏನು?” ಎಂದು ವಿಚಾರಿಸಿದನು. “ಪ್ರಭು ಯೇಸುವಿನಲ್ಲಿ ವಿಶ್ವಾಸವಿಡು, ನೀನೂ ನಿನ್ನ ಮನೆಯವರೆಲ್ಲರೂ ಜೀವೋದ್ಧಾರವನ್ನು ಹೊಂದುವಿರಿ,” ಎಂದು ಅವರು ಉತ್ತರಕೊಟ್ಟರು. ಅನಂತರ ಪ್ರಭುವಿನ ಸಂದೇಶವನ್ನು ಅವನಿಗೂ ಅವನ ಮನೆಯಲ್ಲಿದ್ದ ಎಲ್ಲರಿಗೂ ಬೋಧಿಸಿದರು. ರಾತ್ರಿಯ ವೇಳೆಯಲ್ಲೇ ಸೆರೆಮನೆಯ ಅಧಿಕಾರಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು. ಅನಂತರ ಅವನೂ ಅವನ ಕುಟುಂಬದವರೂ ದೀಕ್ಷಾಸ್ನಾನವನ್ನು ಪಡೆದರು. ಬಳಿಕ ಪೌಲ ಮತ್ತು ಸೀಲರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಬಡಿಸಿದನು. ದೇವರಲ್ಲಿ ವಿಶ್ವಾಸವಿಡುವ ಸದವಕಾಶ ದೊರಕಿದ್ದಕ್ಕಾಗಿ ಅವನೂ ಅವನ ಮನೆಯವರೆಲ್ಲರೂ ಉಲ್ಲಾಸಗೊಂಡರು.

ಕೀರ್ತನೆ: 138:1-2, 2-3, 7-8
ಶ್ಲೋಕ: ಇಕ್ಕಟಿನಲ್ಲಿ ನಡೆವಾಗಲೂ ನೀ ರಕ್ಷಿಸುವೆ ಪ್ರಭೂ ಪ್ರಾಣವನು.

ಹೃದಯಪೂರ್ವಕ ವಂದನೆ ಪ್ರಭು ನಿನಗೆ I
ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ II
ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ I
ನಿನ್ನ ಪ್ರೀತಿಸತ್ಯತೆಗಳನಾಮ ನುಡಿಗಳ ಮಹತ್ವದ ಪ್ರಯುಕ್ತ II

ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ I
ನಿನ್ನ ಪ್ರೀತಿಸತ್ಯತೆಗಳನಾಮ ನುಡಿಗಳ ಮಹತ್ವದ ಪ್ರಯುಕ್ತ II
ಮೊರೆಯಿಟ್ಟಾಗ ದಯಪಾಲಿಸಿದೆ ಸದುತ್ತರವನು I
ಅಧಿಕಮಾಡಿದೆ ನೀನು ನನ್ನಾತ್ಮ ಶಕ್ತಿಯನು II

ಇಕ್ಕಟ್ಟಿನಲಿ ನಡೆವಾಗಲೂ ನೀ ರಕ್ಷಿಸುವೆ ಪ್ರಭುಪ್ರಾಣವನು I
ಶತ್ರುಕೋಪಕೆ ವಿರುದ್ಧವಾಗಿ ತೋರುವೆ ನೀ ಮುಷ್ಟಿಯನು II
ಸಿದ್ಧಿಗೆ ತರುವೆ ನೀ ಪ್ರಭುನನ್ನ ಕಾರ್ಯವನು I
ಶಾಶ್ವತವಾಗಿಸು ನಿನ್ನ ಅಚಲ ಪ್ರಿತಿಯನು I
ಮರೆತುಬಿಡಬೇಡ ನಿನ್ನಯ ಕೈ ಕೃತಿಯನು II

ಯೊವಾನ್ನ 16:5-11


“ನಾನು ನಿಮ್ಮ ಸಂಗಡ ಇದ್ದುದರಿಂದ ಇದನ್ನೆಲ್ಲಾ ಮೊದಲೇ ನಿಮಗೆ ತಿಳಿಸಲಿಲ್ಲ. ಈಗಲಾದರೋ ನನ್ನನ್ನು ಕಳುಹಿಸಿದಾತನಲ್ಲಿಗೆ ನಾನು ತೆರಳುತ್ತೇನೆ. ನಾನು ಹೋಗುವುದು ಎಲ್ಲಿಗೆ ಎಂದು ನೀವು ಯಾರೂ ಕೇಳುತ್ತಿಲ್ಲವಾದರೂ ಇದನ್ನೆಲ್ಲಾ ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ. ವಾಸ್ತವವಾಗಿ ಹೇಳುವುದಾದರೆ, ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ, ಪೋಷಕ ನಿಮ್ಮಲ್ಲಿಗೆ ಬರುವುದಿಲ್ಲ. ನಾನು ಹೋದರೆ ಮಾತ್ರ ಅವರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡಬಲ್ಲೆ. ಆ ಪೋಷಕ ಬಂದು ಪಾಪ, ನ್ಯಾಯನೀತಿ, ಮತ್ತು ಅಂತಿಮತೀರ್ಪು ಇವುಗಳನ್ನು ಕುರಿತು ಲೋಕದ ಜನತೆ ತಾಳಿದ್ದ ತಪ್ಪುಭಾವನೆಗಳನ್ನು ಮನವರಿಕೆ ಮಾಡಿಕೊಡುವರು. ಪಾಪದ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು. ಏಕೆಂದರೆ, ಅವರು ನನ್ನಲ್ಲಿ ವಿಶ್ವಾಸ ಇಡಲಿಲ್ಲ. ನ್ಯಾಯನೀತಿಯ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು. ಏಕೆಂದರೆ, ನಾನು ಪಿತನ ಬಳಿಗೆಹೋಗುತ್ತೇನೆ ಮತ್ತು ನೀವು ನನ್ನನ್ನು ಕಾಣಲಾರಿರಿ. ಅಂತಿಮ ತೀರ್ಪಿನ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು. ಏಕೆಂದರೆ, ಇಹದ ಲೋಕಾಧಿಪತಿಗೆ ಈಗಾಗಲೇ ನ್ಯಾಯತೀರ್ಪನ್ನು ಕೊಡಲಾಗಿದೆ.

No comments:

Post a Comment