ಮೊದಲನೆಯ ವಾಚನ: 1 ಪೇತ್ರ 1:10-16
ಈ ಜೀವೋದ್ಧಾರವನ್ನು ಕುರಿತೇ ಪ್ರವಾದಿಗಳು ಸೂಕ್ಷ್ಮವಾಗಿ ವಿಚಾರಿಸಿ ಸಂಶೋಧನೆ ನಡೆಸಿದರು. ದೇವರು ನಿಮಗೆ ಕೊಡಲಿದ್ದ ಈ ವರವನ್ನು ಕುರಿತೇ ಅವರು ಪ್ರವಾದಿಸಿದರು. ಕ್ರಿಸ್ತಯೇಸು ಅನುಭವಿಸಬೇಕಾಗಿದ್ದ ಮರಣವನ್ನು, ಯಾತನೆಯನ್ನು ಮತ್ತು ಅನಂತರದ ಪುನರುತ್ಥಾನದ ಮಹಿಮೆಯನ್ನು ಈ ಪ್ರವಾದಿಗಳು ಪ್ರವಾದಿಸುವಾಗ, ತಮ್ಮಲ್ಲಿದ್ದ ಕ್ರಿಸ್ತಾತ್ಮವು ಇದಕ್ಕೆ ಯಾವ ಸಮಯ ಸಂದರ್ಭವನ್ನು ಸೂಚಿಸುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಈ ಸೇವಾಕಾರ್ಯವನ್ನು ಅವರು ಸ್ವಾರ್ಥಸಾಧನೆಗಾಗಿ ಅಲ್ಲ, ನಿಮಗೋಸ್ಕರವಾಗಿಯೇ ಮಾಡುತ್ತಿರುವುದಾಗಿ ಅವರಿಗೆ ತಿಳಿಸಲಾಗಿತ್ತು. ಅವರು ಪ್ರವಾದಿಸಿದ ಘಟನೆಗಳು ಈಗ ಸಂಭವಿಸಿವೆ ಎಂಬುದನ್ನು ಸ್ವರ್ಗದಿಂದ ಕಳುಹಿಸಲಾದ ಪವಿತ್ರಾತ್ಮರ ಶಕ್ತಿಯಿಂದ, ಶುಭಸಂದೇಶವನ್ನು ಸಾರಿದವರ ಮುಖಾಂತರ ನಿಮಗೆ ಪ್ರಕಟಿಸಲಾಗಿದೆ. ದೇವದೂತರು ಸಹ ವೀಕ್ಷಿಸಲು ಅಪೇಕ್ಷಿಸುವಂಥ ಸಂಗತಿಗಳಿವು. ಆದ್ದರಿಂದ ನೀವು ಸ್ವಸ್ಥಚಿತ್ತರಾಗಿರಿ. ನಿಮ್ಮ ಮನಸ್ಸು ಕಾರ್ಯೋನ್ಮುಖವಾಗಿರಲಿ. ಯೇಸುಕ್ರಿಸ್ತರು ಪ್ರತ್ಯಕ್ಷರಾಗುವಾಗ ನಿಮಗೆ ಲಭಿಸಲಿರುವ ಸೌಭಾಗ್ಯದಲ್ಲಿ ಪೂರ್ಣ ನಿರೀಕ್ಷೆ ಉಳ್ಳವರಾಗಿರಿ. ವಿಧೇಯರಾದ ಮಕ್ಕಳಂತೆ ನಡೆದುಕೊಳ್ಳಿ. ನೀವು ಅಜ್ಞಾನಿಗಳಾಗಿದ್ದಾಗ ದುರಿಚ್ಛೆಗಳಿಗೆ ಈಡಾಗಿದ್ದಿರಿ; ಈಗ ಅವುಗಳಿಗೆ ಎಡೆಕೊಡಬೇಡಿ. ಅದಕ್ಕೆ ಬದಲು ನಿಮ್ಮನ್ನು ಕರೆದ ದೇವರು ಪವಿತ್ರರಾಗಿರುವಂತೆ ನೀವೂ ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿರಿ. ಏಕೆಂದರೆ, “ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಿ,” ಎಂದು ಲಿಖಿತವಾಗಿದೆ.
ಎಸಗಿಹನಾತನು ಪವಾಡಕಾರ್ಯಗಳನು|
ಗಳಿಸಿತಾತನ ಕೈ ಪೂತಭುಜ ಗೆಲುವನು||
ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು|
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ದಾರಕ ಶಕ್ತಿಯನು||
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು|
ಇಸ್ರಾಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||
ಕಂಡು ಬಂದಿತು ಜಗದ ಎಲ್ಲೆ ಎಲ್ಲೆಗೆ|
ನಮ್ಮ ದೇವಾ ಸಾಧಿಸಿದ ಜಯಗಳಿಕೆ||
ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ|
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||
ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ|
ಭಜಿಸಿರಿ ಆತನನು ವಾದ್ಯಮೇಳಗಳೊಂದಿಗೆ||
ಊದಿರಿ ಕೊಂಬನು, ತುತೂರಿಯನು|
ಉದ್ಘೋಷಿಸಿರಿ ಪ್ರಭು ರಾಜನನು||
ಘೋಷಣೆ ಕೀರ್ತನೆ 27:11
ಅಲ್ಲೆಲೂಯ, ಅಲ್ಲೆಲೂಯ!
ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು | ಶತ್ರುರಹಿತ ಹಾದಿಯಲಿ ನಡೆಸು ಎನ್ನನು ||
ಅಲ್ಲೆಲೂಯ!