ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:32-37
ಭಕ್ತವಿಶ್ವಾಸಿಗಳು ಒಗ್ಗಟ್ಟಿನಿಂದಲೂ ಒಮ್ಮನಸ್ಸಿನಿಂದಲೂ ಬಾಳುತ್ತಿದ್ದರು. ಯಾರೂ ತಮ್ಮ ಸೊತ್ತನ್ನು ತನ್ನದೇ ಎಂದು ಭಾವಿಸದೆ ಹದುವಾಗಿ ಹಂಚಿಕೊಳ್ಳುತ್ತಿದ್ದರು. ಪ್ರೇಷಿತರು ಪ್ರಭು ಯೇಸುವಿನ ಪುನರುತ್ದಾನಕ್ಕೆ ಬಹು ಸಾಮರ್ಥ್ಯದಿಂದ ಸಾಕ್ಷಿಕೊಡುತ್ತಿದ್ದರು. ಜನರು ಅವರೆಲ್ಲರನ್ನು ಗೌರವದಿಂದ ಕಾಣುತ್ತಿದ್ದರು. ಅವರಲ್ಲಿ ಕೊರತೆಯಿದ್ದವರು ಒಬ್ಬರೂ ಇರಲಿಲ್ಲ. ಕಾರಣ - ಹೊಲಗದ್ದೆ, ಮನೆಮಾರು ಇದ್ದವರೆಲ್ಲರೂ ಅವುಗಳನ್ನು ವಿಕ್ರಯಿಸಿ, ಬಂದ ಹಣವನ್ನು ತಂದು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸುತ್ತಿದ್ದರು. ಇವರು ಅದನ್ನು ಪ್ರತಿ ಒಬ್ಬರಿಗೂ ಅವರವರ ಅವಶ್ಯಕತೆಗೆ ತಕ್ಕಂತೆ ಹಂಚುತ್ತಿದ್ದರು. ಜೋಸೆಫ್ ಎಂಬ ಲೇವಿಯನು ಅವರ ಸಂಗಡ ಇದ್ದನು. ಇವನ ಹುಟ್ಟೂರು ಸೈಪ್ರಸ್. ಇವನಿಗೆ "ಬಾರ್ನಬ" (ಎಂದರೆ ಪ್ರೋತ್ಸಾಹಪುತ್ರ) ಎಂದು ಪ್ರೇಷಿತರು ಹೆಸರಿಟ್ಟಿದ್ದರು. ಇವನು ತನ್ನ ಜಮೀನನ್ನು ಮಾರಿ ಬಂದ ಹಣವನ್ನು ಪ್ರೇಷಿತರಿಗೆ ಪಾದ ಕಾಣಿಕೆಯಾಗಿ ಒಪ್ಪಿಸಿದನು.
ಕೀರ್ತನೆ: 93:1-2, 5
ಶ್ಲೋಕ: ವಹಿಸಿಹನು ಪ್ರಭು ರಾಜ್ಯಾಧಿಕಾರವನು ಧರಿಸಿಹನು ಘನತೆಯ ವಸ್ತ್ರಾಲಾಂಛನವನು
ಶುಭಸಂದೇಶ: ಯೊವಾನ್ನ 3:7-15
ನೀವು ಹೊಸ ಜನ್ಮ ಪಡೆಯಬೇಕೆಂದು ನಾನು ಹೇಳಿದ್ದನ್ನು ಕೇಳಿ ಬೆರಗಾಗಬೇಕಿಲ್ಲ. ಗಾಳಿ ತನಗೆ ತೋಚಿದ ಕಡೆ ಬೀಸುತ್ತದೆ, ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮನಿಂದ ಹುಟ್ಟದ ಪ್ರತಿಯೊಬ್ಬನೂ ಅದರಂತೆಯೇ," ಎಂದು ಹೇಳಿದರು. ಅದಕ್ಕೆ ನಿಕೊದೇಮನು, "ಇದೆಲ್ಲಾ ಹೇಗೆ ಸಾಧ್ಯ?" ಎಂದು ಕೇಳಿದನು ಆಗ ಯೇಸು, "ಇಸ್ರಯೇಲಿನ ಹೆಸರಾಂತ ಬೊಧಕನಾದ ನಿನಗೇ ಇದು ಅರ್ಥವಾಗಲಿಲ್ಲವೆ? ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ ಕೇಳು: ನಮಗೆ ತಿಳಿದಿದನ್ನೇ ಕುರಿತು ನಾವು ಮಾತನಾಡುತ್ತೇವೆ; ನಾವು ಕಂಡದ್ದನ್ನು ಕುರಿತು ಸಾಕ್ಷಿ ನೀಡುತ್ತೇವೆ. ಆದರೂ ನಮ್ಮ ಸಾಕ್ಷ್ಯವನ್ನು ನೀವು ಒಪ್ಪಿಕೊಳ್ಳಲು ಸಿದ್ದರಿಲ್ಲ. ಭೂಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಾಗಲೇ ನಿಮಗೆ ವಿಶ್ವಾಸವಿಲ್ಲವೆಂದ ಮೇಲೆ, ಸ್ವರ್ಗಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಲ್ಲಿ ನೀವು ವಿಶ್ವಾಸಿಸುವುದು ಉಂಟೆ? ಸ್ವರ್ಗಲೋಕದಿಂದಲೇ ಇಳಿದು ಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿ ಹೋದವರಿಲ್ಲ. "ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು."
ಮನಸಿಗೊಂದಿಷ್ಟು : ’ಏರಿಸಬೇಕು’ ಎಂಬುದು ಇಲ್ಲಿ ಮತ್ತೆ ಬಹಳ ಅರ್ಥಗರ್ಭಿತವಾಗಿ ಬಳಕೆಯಾಗಿದೆ. ಶಿಲುಬೆಗೆ ಏರುವುದು ಮಾತ್ರವಲ್ಲದೆ, ಮತ್ತೆ ಮಹಿಮಾಭರಿತವಾಗಿ ಎದ್ದು ಬರುವುದು ಎಂಬ ಅರ್ಥವನ್ನು ತರುತ್ತದೆ. ಯೇಸು ಶಿಲುಬೆಗೆ ಏರಿದ್ದೇ ಮತ್ತೆ ಸಾವನ್ನು ಜಯಸಿ ಏರಿ ಬಂದದ್ದಕ್ಕೆ ದಾರಿಯಾಯಿತು. ಶಿಲುಬೆಯಿಲ್ಲದೆ ಪುನರುತ್ಥಾನವಿಲ್ಲ ಎಂಬುದು ಕ್ರೈಸ್ತರಾದ ನಮಗೆ ನಿತ್ಯ ಸತ್ಯವಾಗಿದೆ.

No comments:
Post a Comment