ಮೊದಲನೇ ವಾಚನ: ಸಿರಾಖನು 5:1-8

ಕೀರ್ತನೆ: 1:1-2, 3, 4, 6
ಶ್ಲೋಕ: ಪ್ರಭುವಿನ ಧರ್ಮಶಾಸ್ತ್ರದಲ್ಲಿ ಹರ್ಷಗೊಳ್ಳುವವನಾರೋ- ಅವನೇ ಧನ್ಯನು.
ಶುಭಸಂದೇಶ: ಮಾರ್ಕ 9:41-50
ಯೇಸು ತಮ್ಮ ಶಿಷ್ಯರಿಗೆ "ನೀವು ಕ್ರಿಸ್ತ ಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು. ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು. ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, "ನನ್ನಲ್ಲಿ ವಿಶ್ವಾಸ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಪಾಪಕ್ಕೆ ಕಾರಣವಾದರೆ, ಅಂಥವನ ಕೊರಳಿಗೆ ದೊಡ್ಡ ಬೀಸುಕಲ್ಲನ್ನು ಕಟ್ಟಿ, ಅವನನ್ನು ಸಮುದ್ರದಲ್ಲಿ ದಬ್ಬುವುದೇ ಅವನಿಗೆ ಲೇಸು. ನಿನ್ನ ಕೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಹಾಕು; ಎರಡು ಕೈಗಳಿದ್ದು ನರಕದ ಆರದ ಬೆಂಕಿಗೆ ಗುರಿಯಾಗುವುದಕ್ಕಿಂತ ಅಂಗಹೀನನಾಗಿ ಅಮರಜೀವವನ್ನು ಪಡೆಯುವುದೇ ಲೇಸು, ನಿನ್ನ ಕಾಲು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು; ಎರಡು ಕಾಲುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಕುಂಟನಾಗಿ ಅಮರಜೀವವನ್ನು ಪಡೆಯುವುದೇ ಲೇಸು. ನಿನ್ನ ಕಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಹಾಕು; ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಒಕ್ಕಣ್ಣನಾಗಿ ದೇವರ ಸಾಮ್ರಾಜ್ಯ ಸೇರುವುದೇ ಲೇಸು. ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯದು, ಸುಡುವ ಬೆಂಕಿ ಆರದು. ಊಟಕ್ಕೆ ಉಪ್ಪಿನಂತೆ ಪ್ರತಿಯೊಬ್ಬನಿಗೆ ಅಗ್ನಿ ಪರೀಕ್ಷೆ ಅವಶ್ಯಕ. ಉಪ್ಪೇನೊ ಪ್ರಯೋಜನಕರ; ಆದರೆ ಉಪ್ಪೇ ಸಪ್ಪೆಯಾದರೆ, ಇನ್ನು ಯಾವುದರಿಂದ ಅದನ್ನು ಪುನಃ ರುಚಿಗೊಳಿಸಲಾದೀತು? ನೀವು ಉಪ್ಪಿನಂತೆ ಒಬ್ಬರಿಗೊಬ್ಬರು ಒಪ್ಪಿಗೆಯಾಗಿ ಸಮಾಧಾನದಿಂದಿರಿ," ಎಂದರು.
ಮನಸಿಗೊಂದಿಷ್ಟು : ಉಪ್ಪು ರುಚಿಗೆ ಮಾತ್ರವಲ್ಲದೆ ಪದಾರ್ಥಗಳು ಕೆಡದಂತೆ ತಡೆಯಲೂ ಬಳಕೆಯಾಗುತಿತ್ತು. ಅಂತೆಯೇ ಈ ಭ್ರಷ್ಟಗೊಂಡ ಲೋಕಕ್ಕೆ ಕ್ರಿಸ್ತನ ಅನುಯಾಯಿಗಳು ರುಚಿ ಮಾತ್ರವಲ್ಲದೆ ಮತ್ತಷ್ಟು ಹಾಳಾಗದಂತೆ ಮಾದರಿಯಾಗಬೇಕೆಂಬುದು ಈ ಹೋಲಿಕೆಯ ಆಶಯ. ತನ್ನ ಸುತ್ತಮುತ್ತಲಿನ ಜನರಿಗೆ ಮಾದರಿಯಾಗಬೇಕಾದವರೇ ಪಾಪದ ಮಾರ್ಗದಲ್ಲಿ ನಡೆಯಬಾರದಲ್ಲವೇ?
ಪ್ರಶ್ನೆ: ನನ್ನ ಪಾಪಕ್ಕೆ ಕಾರಣವಾಗಿ ನನ್ನನ್ನು ಅಮರ ಜೀವನದಿಂದ ತಪ್ಪಿಸುತ್ತಿರುವುದು ಯಾವುದು?
No comments:
Post a Comment