ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

22.02.2019 - "ಯೋನ್ನನ ಮಗ ಸಿಮೋನನೇ, ನೀನು ಧನ್ಯ"

ಮೊದಲನೇ ವಾಚನ: 1 ಪೇತ್ರ 5:1-4

ಯೇಸುವಿನ ಮರಣ - ಯಾತನೆಯನ್ನು ಕಣ್ಣಾರೆ ಕಂಡವನೂ ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಭಾಗಿಯಾಗಲಿರುವವನೂ ಸಭಾಪ್ರಮುಖನೂ ಆದ ನಾನು, ನಿಮ್ಮಲ್ಲಿ ಪ್ರಮುಖರಾದ ಇತರರನ್ನು ಪ್ರೋತ್ಸಾಹಿಸಿ ವಿನಂತಿಸುವುದೇನೆಂದರೆ ನನ್ನ ಜೊತೆಹಿರಿಯರೇ, ದೇವರು ನಿಮಗೆ ವಹಿಸಿಕೊಟ್ಟಿರುವ ಮಂದೆಯನ್ನು ಕಾಯಿರಿ. ಕಡ್ಡಾಯದಿಂದಲ್ಲ. ದೇವರ ಚಿತ್ತಾನುಸಾರ ಅಕ್ಕರೆಯಿಂದ ಕಾಯಿರಿ. ದ್ರವ್ಯದ ದುರಾಶೆಯಿಂದಲ್ಲ, ಸೇವಾಸಕ್ತಿಯಿಂದ ಕಾಯಿರಿ. ನಿಮ್ಮ ಪಾಲನೆಗೆ ಒಳಗಾಗಿರುವವರ ಮೇಲೆ ದರ್ಪದಿಂದ ದೊರೆತನಮಾಡದೆ ದೇವರ ಮುಂದೆ ಆದರ್ಶ ಮಾದರಿಗಳಾಗಿರಿ. ಆಗಮಾತ್ರ, ಪ್ರಧಾನ ಕುರಿಗಾಹಿ ಪ್ರತ್ಯಕ್ಷನಾಗುವಾಗ ಮಲಿನವಾಗದ ಮಹಿಮಾನ್ವಿತ ಜಯಮಾಲೆಯನ್ನು ಪಡೆಯುವಿರಿ.

ಕೀರ್ತನೆ: 23:1-3, 4, 5, 6

ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?

ಶುಭಸಂದೇಶ: ಮತ್ತಾಯ  16:13-19

ಯೇಸುಸ್ವಾಮಿ 'ಫಿಲಿಪ್ಪನ ಸೆಜರೇಯ' ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪ್ರೇತ್ರನು "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ,  ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳ ಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು.

ಮನಸಿಗೊಂದಿಷ್ಟು : ಯೇಸುವಿನಿಂದ ಅದೆಷ್ಟೋ ಬಾರಿ ಛೀಮಾರಿ ಹಾಕಿಸಿಕೊಂಡರೂ, ಪೇತ್ರ ಯೇಸುವಿನ ಮೇಲೆ ತನ್ನ ಗಾಢ ವಿಶ್ವಾಸ ಹಾಗೂ ಪ್ರೀತಿ ಬಿಡಲಿಲ್ಲ. ಯೇಸುವಿಗೂ ಪೇತ್ರನೇ ಮಚ್ಚಿನ ಶಿಷ್ಯನಾಗಿದ್ದ. ಇದರ ಪ್ರತೀಕವೆಂಬಂತೆ ಮುಂದೆ ಮೂರು ಸಲ ತಮ್ಮನ್ನು ನಿರಾಕರಿಸುತ್ತನೆಂದು ತಿಳಿದಿದ್ದರೂ  ಯೇಸು ತಮ್ಮ ಧರ್ಮಸಭೆಗೆ ಆತನನ್ನೇ ಅಡಿಪಾಯ ಮಾಡಿಕೊಳ್ಳುತ್ತಾರೆ. ನಮ್ಮ ಕೊರತೆಗಳ ನಡುವೆಯೂ ಯೇಸು ನಮ್ಮನ್ನು ಅಪ್ಪಿಕೊಳ್ಳಬಲ್ಲರು.

ಪ್ರಶ್ನೆ : ಧರ್ಮಸಭೆಯೆಂಬ ಕಟ್ಟಡದ ಸಣ್ಣ ಕಲ್ಲುಗಳಾಗುವಷ್ಟಾದರೂ ಅದರೆಡೆಗೆ  ಪ್ರೀತಿ, ವಿಶ್ವಾಸ ನಮ್ಮಲ್ಲಿದೆಯೇ?

No comments:

Post a Comment