ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

13.02.2019 - ಅಂತರಂಗದಿಂದ ಹೊರ ಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ.

ಮೊದಲನೇ ವಾಚನ: ಆದಿಕಾಂಡ 2:4-9, 15-17


ಇತಿ, ಪರಲೋಕ  - ಭೋಲೋಕಗಳ ನಿರ್ಮಾಣ ಚರಿತ್ರೆ ದೇವರಾದ ಸರ್ವೇಶ್ವರ ಸ್ವಾಮಿ ಪರಲೋಕ - ಭೂಲೋಕಗಳನ್ನು ಸೃಷ್ಟಿ ಮಾಡಿದಾಗ ಯಾವ ಗಿಡಗಳೂ ಭೂಮಿಯಲ್ಲಿ ಇರಲಿಲ್ಲ ಯಾವ ಬೀಜವೂ ಮೊಳೆತಿರಲಿಲ್ಲ. ಏಕೆಂದರೆ ದೇವರಾದ ಸರ್ವೇಶ್ವರ ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ ಭೂಮಿಯನ್ನು ವ್ಯವಸಾಯ ಮಾಡಲು ಮನುಷ್ಯನೂ ಇರಲಿಲ್ಲ. ಆದರೂ ಭೂಮಿಯಿಂದ ನೀರು ಉಕ್ಕಿಬಂದು ನೆಲಕ್ಕೆ ನೀರೆರೆಯುತ್ತಿತ್ತು. ಹೀಗಿರಲು, ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು. ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವ ದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ  ಇರಿಸಿದರು. ನೋಟಕ್ಕೆ ರಮ್ಯವೂ ಊಟಕ್ಕೆ ರುಚಿಕರವೂ ಆದ ನಾನಾ ತರದ ಮರಗಳನ್ನು ದೇವರಾದ ಸರ್ವೇಶ್ವರ ಅಲ್ಲಿ ಬೆಳೆಯ ಮಾಡಿದರು. ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಹಾಗೂ ಒಳಿತು - ಕೆಡಕುಗಳ ಅರಿವನ್ನು ಮೂಡಿಸುವ ವೃಕ್ಷವನ್ನು ಬೆಳೆಯಿಸಿದರು. ದೇವರಾದ ಸರ್ವೇಶ್ವರ ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ವನವನ್ನು ಕೃಷಿ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಬಿಟ್ಟರು.ಇದಲ್ಲದೆ ದೇವರಾದ ಸರ್ವೇಶ್ವರ ಆ ಮನು‌ಷ್ಯನಿಗೆ "ನೀನು ಈ ತೋಟದಲ್ಲಿರುವ ಎಲ್ಲ ಮರದ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು ಆದರೆ ಒಳಿತು - ಕೆಡುಕುಗಳ ಅರಿವನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದೆಯಾದರೆ, ಅದೇ ದಿನ ನೀನು ಸತ್ತು ಹೋಗುವೆ," ಎಂದು ವಿಧಿಸಿದರು.

ಕೀರ್ತನೆ: 104:1-2, 27-28, 29-30

ಶ್ಲೋಕ: ಭಜಿಸು ನನ್ನ ಮನವೇ, ಭಜಿಸು, ಪ್ರಭುವನ್ನು

ಶುಭಸಂದೇಶ: ಮಾರ್ಕ 7:14-23

ಆನಂತರ ಯೇಸುಸ್ವಾಮಿ ಜನರ ಗುಂಪನ್ನು ತಮ್ಮ ಬಳಿಗೆ ಕರೆದು, "ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ; ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. (ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ)" ಎಂದರು. ಯೇಸು ಜನರ ಗುಂಪನ್ನು ಬಿಟ್ಟು ಮನೆ ಸೇರಿದ ಬಳಿಕ ಶಿಷ್ಯರು, ಅವರ ಬಳಿಗೆ ಬಂದು ಆ ಸಾಮತಿಯ ಅರ್ಥವೇನೆಂದು ಕೇಳಿದರು. ಅದಕ್ಕೆ ಅವರು "ನೀವು ಕೂಡ ಮಂದಮತಿಗಳೋ? ನಿಮಗೂ ಇದು ಅರ್ಥವಾಗದೋ? ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. ಆದರೆ ಮನುಷ್ಯನ ಅಂತರಂಗದಿಂದ ಹೊರ ಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ. ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ, ಕೆಡಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತದೆ. ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಬವಿಸಿ ಅವನನ್ನು ಅಶುದ್ಧ ಮಾಡುತ್ತವೆ," ಎಂದರು.

ಮನಸಿಗೊಂದಿಷ್ಟು : ನಮ್ಮನ್ನು ಅಶುದ್ಧಗೊಳಿಸುವ ಕಲುಷಿತಗೊಳಿಸುವಂತ  ದೊಡ್ಡ ಪಟ್ಟಿಯನ್ನೇ ಯೇಸು ಇಲ್ಲಿ ನೀಡುತ್ತಾರೆ. ನಾವು ಕಳ್ಳರೇನ್ನಲ್ಲ, ಕೊಲೆಗಾರರಲ್ಲ, ವ್ಯಭಿಚಾರಿಗಳಂತೂ ಅಲ್ಲವೇ ಅಲ್ಲ, ಎಂದು ಸಮಾಧಾನ ಪಡುವಂತಿಲ್ಲ. ಭಂಡತನ, ಅಸೂಯೆ, ಅಹಂಕಾರಗಳೆಂಬ ಬಹಳ ಸಾಮಾನ್ಯವೆನಿಸುವಂತ ತಪ್ಪುಗಳನ್ನೂ ಸಹ ಗಂಭೀರ ಪಾಪಗಳೊಂದಿಗೇ ಸಮೀಕರಿಸುತ್ತಾರೆ. ಈ ಕಾರಣಗಳಿಂದಲೇ ಕ್ರೈಸ್ತ ಮೌಲ್ಯಗಳು ನಿಜಕ್ಕೂ ಬಹು ದೊಡ್ಡ, ಕಷ್ಟವಾದ ಮೌಲ್ಯಗಳೇ ಸರಿ.

ಪ್ರಶ್ನೆ: ನಮ್ಮ ಅಂತರಂಗದಿಂದಮೇಲಿನ ಕೆಡುಕಗಳ ಪಟ್ಟಿಯಲ್ಲಿ ಅದೆಷ್ಟು ಪ್ರತಿಕ್ಷಣ ಯಾವುದೇ ಅಳುಕಿಲ್ಲದೆ ಹೊರ ಬರುತ್ತಿವೆ?

No comments:

Post a Comment