ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.02.2019 - ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?

ಮೊದಲನೇ ವಾಚನ: ಆದಿಕಾಂಡ 3:9-24

ಸರ್ವೇಶ್ವರನಾದ ದೇವರು, "ಎಲ್ಲಿರುತ್ತೀಯಾ?" ಎಂದು ಆದಾಮನನ್ನು ಕೂಗಿ ಕೇಳಿದರು. ಅದಕ್ಕೆ ಅವನು, "ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ," ಎಂದನು. "ನೀನು ಬೆತ್ತಲೆಯಾಗಿರುತ್ತಿಯೆಂದು ನಿನಗೆ ತಿಳಿಸಿದವರು ಯಾರು?" ಎಂದು ಕೇಳಿದರು. ಅದಕ್ಕೆ ಆದಾಮನು, "ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆ," ಎಂದನು. ಸರ್ವೇಶ್ವರನಾದ ದೇವರು ಈ ಮಹಿಳೆಯನ್ನು, "ಇದೇನು ನೀನು ಮಾಡಿದ್ದು?" ಎಂದು ಕೇಳಲು ಆಕೆ, "ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು. ಎಂದು ಉತ್ತರ ಕೊಟ್ಟಳು. ಆಗ ಸರ್ವೇಶ್ವರನಾದ ದೇವರು ಇಂತೆಂದರು ಸರ್ಪಕ್ಕೆ: "ಈ ಪರಿಯ ಕೃತ್ಯವನ್ನು ನೀನೆಸಗಿದುದರಿಂದ ಶಾಪಗ್ರಸ್ತನಾದೆ ಎಲ್ಲ ಪಶು ಪ್ರಾಣಿಗಳಿಗಿಂತ; ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ ತಿನ್ನುವೆ ಮಣ್ಣನ್ನೆ ಜೀವಮಾನ ಪರಿಯಂತ. ಹಗೆತನವಿರಿಸುವೆನು ನಿನಗೂ ಈ ಮಹಿಳೆಗೂ ನಿನ್ನ ಸಂತಾನಕ್ಕೂ ಇವಳ ಸಂತಾನಕ್ಕೂ. ಜಜ್ಜುವುದಿವಳ ಸಂತಾನ ನಿನ್ನ ತಲೆಯನ್ನು ಕಚ್ಚುವೆ ನೀನಾ ಸಂತಾನದ ಹಿಮ್ಮಡಿಯನ್ನು." ಬಳಿಕ ಆ ಮಹಿಳೆಗೆ: "ಹೆಚ್ಚಿಸುವೆನು ಪ್ರಸವ ಕಾಲದ ನಿನ್ನ ವೇದನೆಯನ್ನು. ಹೆರುವೆ ನೀನು ಸಂಕಷ್ಟದಿಂದಲೇ ಮಕ್ಕಳನ್ನು. ಆದರೂ ನಿನಗಿರುವುದು ಗಂಡನ ಬಯಕೆ ಒಳಗಾಗುವೆ ನೀನು ಆತನ ಒಡೆತನಕ್ಕೆ" ಆನಂತರ ಆದಾಮನಿಗೆ: "ತಿನ್ನಬಾರದೆಂದು ನಾ ವಿಧಿಸಿದ ಮರದ ಹಣ್ಣನ್ನು ತಂದೆ ನೀನು, ಕೇಳಿ ನಿನ್ನಾ ಮಡದಿಯ ಮಾತನ್ನು. ಇದಕಾರಣ ಹಾಕಿರವೆನು ಶಾಪ ಹೊಲ ನೆಲಕ್ಕೆ ದುಡಿವೆ ನೀನು ಜೀವಮಾನವಿಡೀ ಅದರ ಕೃಷಿಗೆ. ಬೆಳಸುವುದದು ಅತುಳ ಕಳೆಯನ್ನು, ಮುಳ್ಳು ಗಿಡಗಳನ್ನು ತಿನ್ನಬೇಕಾಗುವುದು ನೀನು ಬೈಲಿಗೆ ಬೆಳೆಯನ್ನು ನೀನುತ್ಪತ್ತಿಯಾದ ಮಣ್ಣಿಗೆ ಮರಳಿ ಸೇರುವ ತನಕ ಗಳಿಸಬೇಕು ಕಳವಳವನ್ನು ನೆತ್ತಿ ಬೆವರಿಡುತ. ಮಣ್ಣಿನಿಂದಲೇ ಬಂದವನು ನೀನು ಮರಳಿ ಮಣ್ಣಿಗೆ ಸೇರತಕ್ಕವನು." ಆದಾಮನು ತನ್ನ ಹೆಂಡತಿಗೆ "ಹವ್ವ" ಎಂದು ಹೆಸರಿಟ್ಟನು. ಏಕೆಂದರೆ ಮಾನವ ಕುಲಕ್ಕೆ ಮೂಲ ಮಾತೆ ಆಕೆ. ಸರ್ವೇಶ್ವರನಾದ ದೇವರು, "ಮನುಷ್ಯನು ಈಗ ನಮ್ಮಲ್ಲಿ ಒಬ್ಬರಂತೆ ಒಳಿತು - ಕೆಡುಕುಗಳ ಜ್ಞಾನವನ್ನು ಪಡೆದುಬಿಟ್ಟಿದ್ದಾನೆ. ಇನ್ನು ಅಮರ ಜೀವಿಯಾಗಲು ಜೀವ ವೃಕ್ಷದ ಹಣ್ಣಿಗೆ ಕೈ ಚಾಚಿ ಬಿಡಬಾರದು," ಎಂದುಕೊಂಡರು. ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡಲೆಂದು ಏದೆನ್ ತೋಟದಿಂದ ಹೊರಡಿಸಿ ಬಿಟ್ಟರು. ಅದಲ್ಲದೆ, ಜೀವ ವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವುದಕ್ಕಾಗಿ ಆ ವನದ ಪೂರ್ವದಿಕ್ಕಿನಲ್ಲೆ 'ಕೆರೂಬಿ'ಯರನ್ನೂ ಪ್ರಜ್ವಲಿಸುತ್ತಾ ಎಲ್ಲ ಕಡೆ ಸುತ್ತುವ ಕತ್ತಿಯನ್ನೂ ಇರಿಸಿದರು.

ಕೀರ್ತನೆ: 90:2, 3-4, 5-6, 12-13

ಶ್ಲೋಕ: ಪ್ರಭೂ, ತಲತಲಾಂತರಕೆ ಶ್ರೀನಿವಾಸ ನೀನೆಮಗೆ

ಶುಭಸಂದೇಶ: ಮಾರ್ಕ 8:1-10


ಜನರು ಪುನಃ ದೊಡ್ಡ ಸಂಖ್ಯೆಯಲ್ಲಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಅಹಾರವಿರಲಿಲ್ಲ. ಆಗ ಯೇಸುಸ್ವಾಮಿ ಶಿಷ್ಯರನ್ನು ಕರೆದು, "ಈ ಜನರು ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದ್ಧರೆ: ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡಾಗ ನನ್ನ ಹೃದಯ ಕರಗುತ್ತದೆ. ಬರೀ ಹೊಟ್ಟೆಯಲ್ಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಕೆಲವರಂತೂ ಬಹು ದೂರದಿಂದ ಬಂದಿದ್ದಾರೆ," ಎಂದರು. ಅದಕ್ಕೆ ಶಿಷ್ಯರು, "ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?" ಎಂದು ಮರುನುಡಿದರು. ಯೇಸು, "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?" ಎಂದು ಕೇಳಲು ಅವರು, "ಏಳು ಇವೆ," ಎಂದರು. ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಆಜ್ಞಾಪಿಸಿದರು. ಆನಂತರ ಆ ಏಳು ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರ ಸಲ್ಲಿಸಿ, ಅವುಗಳನ್ನು ಮುರಿದು, ಜನರ ಗುಂಪಿಗೆ ಬಡಿಸಲು ಶಿಷ್ಯರಿಗೆ ಕೊಟ್ಟರು. ಅವರು ಬಡಿಸಿದರು. ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು. ಯೇಸು ಅವುಗಳಿಗಾಗಿಯೂ ದೇವ ಸ್ತುತಿಮಾಡಿ ಅವುಗಳನ್ನು ಹಂಚಬೇಕೆಂದು ಆಜ್ಞಾಪಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಏಳು ಕುಕ್ಕೆಗಳ ತುಂಬ ಆದವು. ಊಟ ಮಾಡಿದವರ ಸಂಖ್ಯೆ ನಾಲ್ಕು ಸಾವಿರ. ಊಟವಾದ ಬಳಿಕ ಯೇಸು ಜನರನ್ನು ಕಳುಹಿಸಿಕೊಟ್ಟು, ವಿಳಂಬ ಮಾಡದೆ ದೋಣಿಯನ್ನು ಹತ್ತಿ , ಶಿಷ್ಯರೊಡನೆ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.

 ಮನಸ್ಸಿಗೊಂದಿಷ್ಟು :  ಇಡೀ ಲೋಕವನ್ನೇ ಪಡೆದಿದ್ದರೂ  ದೇವರ ಮಾತಿಗೆ ವಿರುದ್ಧವಾಗಿ ನಡೆದು ಆದಾಂ ಏವರು ದೈವ ಕೃಪೆಯ  ಅಗಾಧತೆಯಿಂದ ಪತನದತ್ತ ಹೆಜ್ಜೆ ಹಾಕುತ್ತಾರೆ.  ಇನ್ನೂ, ಊಟ ಒದಗಿಸಲು ಶಿಷ್ಯರಿಗೆ ಕೊರತೆ ಕಂಡರೆ, ಯೇಸು "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಎಂಬ  ಪ್ರಶ್ನೆಯಿಂದ ಆ ಕೊರತೆಯನ್ನು ನೀಗಿಸುತ್ತಾರೆ. ಅಲ್ಪತೆಯಿಂದ ಆಗಾಧತೆಯತ್ತ, ಕೊರತೆಯಿಂದ ಕೃಪೆಯೆಡೆಗಿನ ನಮ್ಮ ಪಯಣಕ್ಕೆ ಇದು ಸ್ಫೂರ್ತಿಯಾಗಲಿ. 

ಪ್ರಶ್ನೆ: ನಮ್ಮ ಪ್ರಸ್ತುತ ಜೀವನ ಆಗಾಧತೆಯಿಂದ ಪತನದತ್ತವೇ? ಅಲ್ಪತೆಯಿಂದ  ಅಗಾಧತೆಯೆಡೆಗೆಯೇ?

No comments:

Post a Comment