ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

11.02.2019 - ಬೈಗೂ ಬೆಳಗೂ ಆಗಿ ಎರಡನೆಯ ದಿನ ಆಯಿತು

 ಮೊದಲನೇ ವಾಚನ: ಆದಿಕಾಂಡ 1:1-19


ದಿಯಲ್ಲಿ ದೇವರು ಪರಲೋಕ - ಭೂಲೋಕವನ್ನು ಸೃಷ್ಟಿಮಾಡಿದರು. ಭೂಮಿ ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕಗ್ಗತ್ತಲು ಕವಿದಿತ್ತು ದೇವರಾತ್ಮ ಜಲರಾಶಿಯ ಮೇಲೆ ಚಲಿಸುತ್ತಿತ್ತು. ಆಗ ದೇವರು "ಬೆಳಕಾಗಲಿ" ಎನ್ನಲು ಬೆಳಕಾಯಿತು. ದೇವರ ಕಣ್ಣಿಗೆ ಅದು ಚೆನ್ನಾಗಿ ಕಂಡಿತು. ಅವರು ಬೆಳಕನ್ನೂ ಕತ್ತಲೆಯನ್ನೂ ಬೇರೆಬೇರೆ ಮಾಡಿ ಬೆಳಕಿಗೆ ಹಗಲೆಂದು ಕತ್ತಲೆಗೆ ಇರುಳೆಂದೂ ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಮೊದಲನೆಯ ದಿನವಾಯಿತು. ಬಳಿಕ ದೇವರು, "ಜಲರಾಶಿಯ ನಡುವೆ ವಿಸ್ತಾರವಾದ ಒಂದು ಗುಮ್ಮಟವು ಉಂಟಾಗಲಿ, ಅದು ಕೆಳಗಿನ ನೀರನ್ನೂ ಮೇಲಿನ ನೀರನ್ನೂ ಬೇರೆಬೇರೆ ಮಾಡಲಿ," ಎಂದರು. ಹಾಗೆಯೇ ಆಯಿತು, ಹೀಗೆ ದೇವರು ವಿಸ್ತಾರವಾದ ಗುಮ್ಮಟವೊಂದನ್ನು ಮಾಡಿ ಕೆಳಗಿದ್ದ ನೀರನ್ನು ಮೇಲಿದ್ದ ನೀರಿನಿಂದ ವಿಂಗಡಿಸಿದರು. ದೇವರು ಆ ಗುಮ್ಮಟಕ್ಕೆ "ಆಕಾಶ" ಎಂದು ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಎರಡನೆಯ ದಿನ ಆಯಿತು. ಆನಂತರ ದೇವರು, "ಆಕಾಶದ ಕೆಳಗಿರುವ ನೀರೆಲ್ಲ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ; ಒಣ ನೆಲವು ಕಾಣಿಸಿಕೊಳ್ಳಲಿ," ಎಂದರು. ಹಾಗೆಯೇ ಆಯಿತು. ದೇವರು ಒಣನೆಲಕ್ಕೆ "ಭೂಮಿ" ಎಂದೂ ಜಲರಾಶಿಗೆ "ಸಮುದ್ರ" ಎಂದೂ ಹೆಸರಿಟ್ಟರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು. ತರುವಾಯ ದೇವರು, "ಭೂಮಿಯಲ್ಲಿ ಸಸ್ಯಗಳನ್ನೂಎಲ್ಲ ತರದ ದವಸಧಾನ್ಯ, ಹಣ್ಣು ಹಂಪಲು ಇವುಗಳನ್ನು ಬಿಡುವ ಗಿಡಮರ ಬಳ್ಳಿಗಳನ್ನೂ ಬೆಳೆಯಿಸಲಿ," ಎಂದರು. ಅದು ಹಾಗೆಯೇ ಆಯಿತು. ಭೂಮಿಯಲ್ಲಿ ಸಸ್ಯಗಳು ಬೆಳೆದವು; ಎಲ್ಲ ತರದ ದವಸಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ಬಿಡುವ ಗಿಡಮರ ಬಳ್ಳಿಗಳು ಕಾಣಿಸಿಕೊಂಡವು. ದೇವರ ಕಣ್ಣಿಗೆ ಅವು ಚೆನ್ನಾಗಿ ಕಂಡವು. ಹೀಗೆ ಬೈಗೂ ಬೆಳಗೂ ಆಗಿ ಮೂರನೆಯ ದಿನವಾಯಿತು. ಅದಾದನಂತರ ದೇವರು, "ಹಗಲು ಇರುಳುಗಳನ್ನು ಬೇರೆಬೇರೆ ಮಾಡಲು, ಋತು ಕಾಲಗಳನ್ನೂ ದಿನಸಂವತ್ಸರಗಳನ್ನೂ ಸೂಚಿಸಲು, ಹಾಗು ಭೂಮಿಗೆ ಬೆಳಕನ್ನೀಯಲು, ಆಕಾಶ ದೀಪಗಳು ಉಂಟಾಗಲಿ," ಎಂದರು. ಹಾಗೆಯೇ ಆಯಿತು. ಹಗಲನ್ನಾಳುವುದಕ್ಕೆ ಸೂರ್ಯನನ್ನೂ ಇರುಳನ್ನಾಳುವುದಕ್ಕೆ ಚಂದ್ರನನ್ನೂ, ಹೀಗೆ ಎರಡು ದೀವಿಗೆಗಳನ್ನು ಸೃಷ್ಟಿಮಾಡಿದರು. ಅದು  ಮಾತ್ರವಲ್ಲ, ನಕ್ಷತ್ರಗಳನ್ನೂ ಅವರು ಸೃಷ್ಟಿ ಮಾಡಿದರು. ಆ ದೀವಿಗೆಗಳನ್ನು ಆಕಾಶದಲ್ಲಿ ಇಟ್ಟು ಭೂಮಿಗೆ ಬೆಳಕನ್ನೀಯುವಂತೆ ಮಾಡಿದರು. ಹಾಗು ಹಗಲಿರುಳುಗಳನ್ನು ಆಳುವುದಕ್ಕೂ, ಬೆಳಕನ್ನೂ ಕತ್ತಲನೂ ಬೇರೆಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು. ಹೀಗೆ ಬೈಗೂ ಬೆಳಗೂ ಆಗಿ ನಾಲ್ಕನೆಯ ದಿನ ಆಯಿತು.

ಕೀರ್ತನೆ: 104:1-2, 5-6, 10, 12, 24, 35

ಶ್ಲೋಕ: ಪ್ರಭು ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ

ಶುಭಸಂದೇಶ:ಮಾರ್ಕ 6:53-56

ವರೆಲ್ಲರು ಸರೋವರವನ್ನು ದಾಟಿ ಗೆನಸರೀತ್ ಊರಿನ ದಡ ಸೇರಿದರು. ಅವರು ದೋಣಿಯನ್ನು ಕಟ್ಟಿ, ಅದರಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುಸ್ವಾಮಿಯ ಗುರುತು ಹಚ್ಚಿದರು. ಒಡನೆ ಸುತ್ತಮುತ್ತಲೆಲ್ಲಾ  ಓಡಾಡಿ, ರೋಗಿಗಳನ್ನು ಹಾಸಿಗೆಗಳ ಸಹಿತ ಹೊತ್ತುಕೊಂಡು, ಯೇಸು ಎಲ್ಲೆಲ್ಲಿ ಇದ್ದಾರೆಂದು ಕೇಳಿದರೋ ಅಲ್ಲೆಲ್ಲಾ ಹೋಗತೊಡಗಿದರು. ಯೇಸು ಹಳ್ಳಿಗಳಿಗಾಗಲಿ, ಪಟ್ಟಣ ಪಾಳೆಯಗಳಿಗಾಗಲಿ ಹೋದಾಗಲೆಲ್ಲಾ ಜನರು ರೋಗಿಗಳನ್ನು ಅಲ್ಲಿಯ  ಸಂತೆ ಬೀದಿ ಚೌಕಗಳಿಗೆ ಕರೆ ತರುತ್ತಿದ್ದರು. ಅವರ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಯೇಸುವನ್ನು ಬೇಡಿಕೊಳ್ಳುತ್ತಿದ್ದರು. ಹಾಗೆ ಮುಟ್ಟಿದವರೆಲ್ಲರೂ ಗುಣ ಹೊಂದುತ್ತಿದ್ದರು.


ಮನಸಿಗೊಂದಿಷ್ಟು : ಅತ್ತ ಸ್ವಂತ ಊರಿನ ಜನರೇ ಯೇಸುವನ್ನು ’ಬಡಗಿಯ ಮಗ’ ಎಂಬುದಾಗಿ ಮಾತ್ರ ಗುರುತಿಸುತ್ತಾರೆ. ಇತ್ತ ಗೆನಸರೀತ್ ಸೇರಿದಂತೆ ಇತರ ಊರಿನ ಜನರು ಮಾತ್ರ ಯೇಸುವಿನ ನಿಜ ಸ್ವರೂಪವನ್ನು ’ಗುರುತಿಸಿ’ ಅವರನ್ನು ವಿಶ್ವಾಸಿಸಿ , ಗೌರವಿಸುತ್ತಾರೆ. ಅದಕ್ಕೆ ತಕ್ಕಂತೆ ತಮಗೆ ಬೇಕಾದ ವರಗಳನ್ನು ಪಡೆಯುತ್ತಿದ್ದರು.
ಪ್ರಶ್ನೆ : ಯೇಸು ನಮಗೆ ಕೇವಲ ’ಬಡಗಿಯ ಮಗ’, ’ಐತಿಹಾಸಿಕ ಪುರಷ’ ’ನಮ್ಮ ಬೇಡಿಕೆಗಳನ್ನು ಈಡೇರಿಸಿವವರು’ ಮಾತ್ರವೇ ಅಥವಾ ನಮ್ಮ ಅಂತರಂಗದ ಭಾಗವಾಗಿ ನಾವು ಗುರುತಿಸಿಕೊಂಡಿದ್ದೇವೆಯೇ?

No comments:

Post a Comment