Thursday, November 19, 2026

20.11.2026 - ಪ್ರಾರ್ಥನಾಲಯವೀ ನನ್ನ ಆಲಯ

 ಮೊದಲನೇ ವಾಚನ: ಪ್ರಕಟಣಾ ಗ್ರಂಥ 10:8-11

ಸ್ವರ್ಗದಿಂದ ನನಗೆ ಕೇಳಿಸಿದ ಧ್ವನಿ ಮತ್ತೊಮ್ಮೆ ನನ್ನೊಡನೆ ಮಾತನಾಡಿ, “ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ಕಾಲಿಟ್ಟು ನಿಂತಿರುವ ದೇವದೂತನ ಬಳಿಗೆ ಹೋಗು. ಆತನ ಕೈಯಲ್ಲಿರುವ ತೆರೆದ ಸುರುಳಿಯನ್ನು ತೆಗೆದುಕೋ,” ಎಂದು ತಿಳಿಸಿತು. ನಾನು ಆ ದೇವದೂತನ ಬಳಿಗೆ ಹೋಗಿ, “ಆ ಚಿಕ್ಕ ಸುರುಳಿಯನ್ನು ನನಗೆ ಕೊಡು,” ಎಂದು ಕೇಳಿದೆ. ಅವನು “ತೆಗೆದುಕೋ, ಇದನ್ನು ತಿನ್ನು. ಇದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿಯೂ ನಿನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿಯೂ ಇರುತ್ತದೆ,” ಎಂದನು. ಅಂತೆಯೇ, ನಾನು ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ತೆಗೆದುಕೊಂಡು ತಿಂದೆ. ಅದು ನನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿತ್ತು. ಆದರೆ ಅದನ್ನು ತಿಂದಮೇಲೆ ನನ್ನ ಹೊಟ್ಟೆಯೆಲ್ಲಾ ಕಹಿಯಾಯಿತು. ಅನಂತರ, ದೇವದೂತನು ನನಗೆ, “ನೀನು ಇನ್ನೂ ಅನೇಕ ಜನರ, ಜನಾಂಗಗಳ, ಭಾಷೆಗಳನ್ನಾಡುವವರ ಹಾಗು ಅರಸರಾದವರ ವಿರುದ್ಧ ಪ್ರವಾದನೆಯನ್ನು ಸಾರಬೇಕು,” ಎಂದು ಆಜ್ಞಾಪಿಸಿದನು.

ಕೀರ್ತನೆ: 119:14, 24, 72, 103, 111, 131

ಶ್ಲೋಕ: ನಿನ್ನ ನುಡಿ ಎನಿತೋ ರುಚಿ ನನ್ನ ನಾಲಿಗೆಗೆ 

1.  ಸಿರಿಸಂಪತ್ತಿಗಿಂತ ಮಿಗಿಲಾಗಿ|

ಆನಂದಿಪೆ ನಿನ್ನ ಮಾರ್ಗಿಯಾಗಿ||
ನಿನ್ನಾಜ್ಞೆಯು ಆನಂದದಾಯಕ|
ಅದೇ ನನಗೆ ಮಂತ್ರಾಲೋಚಕ||
ಶ್ಲೋಕ

2.  ಸಾವಿರಾರು ಚಿನ್ನಬೆಳ್ಳಿ ನಾನ್ಯಗಳಿಗಿಂತ|
ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ||
ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ|
ಜೇನುತುಪ್ಪಕ್ಕಿಂತ ಸಿಹಿ ನನ್ನ ಬಾಯಿಗೆ||
ಶ್ಲೋಕ

3.  ಹೃದಯಾನಂದಕರ ನಿನ್ನ ಕಟ್ಟಳೆಗಳು|
ನನಗಮರ ಸ್ವಾಸ್ಥ್ಯವಾದುವುವು ಅವುಗಳು||
ಬಾಯ್ದೆರೆದು ಹಾತೊರೆಯುತಿರುವೆ|
ನಿನ್ನ ಆಜ್ಞೆಗಳನ್ನು ಅರಸುತಿರುವೆ||
ಶ್ಲೋಕ

ಘೋಷಣೆ
(ಕೀರ್ತನೆ 119: 88)
ಅಲ್ಲೆಲೂಯ, ಅಲ್ಲೆಲೂಯ.
ನಿನ್ನಚಲ  ಪ್ರೀತಿಗನುಸಾರ  ಚೈತನ್ಯಗೊಳಿಸೆನ್ನನು | ಕೈಗೊಳ್ಳುವೆನಾಗ  ನಿನ್ನ ಬಾಯುಸುರಿದ  ಕಟ್ಟಳೆಗಳನು ||
ಅಲ್ಲೆಲೂಯ.

ಶುಭಸಂದೇಶ: ಲೂಕ 19:45-48



ಯೇಸುಸ್ವಾಮಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಮಾರಾಟ ಮಾಡುತ್ತಿದ್ದವರನ್ನು ಹೊರಗಟ್ಟುತ್ತಾ, “ ‘ಪ್ರಾರ್ಥನಾಲಯವೀ ನನ್ನ ಆಲಯ!’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ; ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾರ್ಪಡಿಸಿದ್ದೀರಿ,” ಎಂದರು. ಪ್ರತಿನಿತ್ಯ ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದರು. ಇತ್ತ ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಜಾಪ್ರಮುಖರೂ ಅವರನ್ನು ಕೊಲೆಮಾಡಲು ಹವಣಿಸುತ್ತಿದ್ದರು. ಆದರೆ ಅವರಿಂದ ಏನೂ ಮಾಡಲಾಗಲಿಲ್ಲ. ಏಕೆಂದರೆ, ಜನರೆಲ್ಲರೂ ಯೇಸುವಿನ ಬೋಧನೆಗೆ ಮಾರುಹೋಗಿದ್ದರು. ಅವರ ಬಾಯಿಂದ ಬಂದ ಒಂದೊಂದು ಮಾತನ್ನೂ ಕೇಳಲು ಆತುರರಾಗಿದ್ದರು.