03.11.2026 - ದೇವರ ಸಾಮ್ರಾಜ್ಯದ ಔತಣದಲ್ಲಿ ಭಾಗಿಯಾಗುವವನು ಎಷ್ಟೋ ಧನ್ಯನು

ಮೊದಲನೇ ವಾಚನ: ಫಿಲಿಪ್ಪಿಯರಿಗೆ 2:5-11


ಸಹೋದರರೇ, ಕ್ರಿಸ್ತಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲಸಿರಲಿ: ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನ್ನೇ ಬರಿದುಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನ್ನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು. ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು. ‘ಕ್ರಿಸ್ತಯೇಸುವೇ ಪ್ರಭು' ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಕೀರ್ತನೆ: 22:26-27, 28-30, 31-32

ಶ್ಲೋಕ: ಪ್ರಭೂ, ನೀನೇ ಸ್ಫೂರ್ತಿ ತುಂಬು ಸಭೆಯಲಿ ನಾ ಮಾಳ್ಪ ಸ್ತುತಿಗೆ

1.  ಪ್ರಭೂ, ತುಂಬು ಸಭೆಯಲಿ ನಾ ಮಾಳ್ವ ಸ್ತುತಿಗೆ  ನೀನೇ ಸ್ಪೂರ್ತಿ|
ಭಕ್ತ ಜನರ ಮುಂದೆ ನಾ ಸಲ್ಲಿಸುವೆ, ನಿನಗೆ ಹೊತ್ತ ಹರಕೆ||
ಹರಿವುದು ಸ್ತುತಿ ಭಕ್ತರ ಬಾಯಿಂದ; ತುಂಬುವುದು ದಲಿತರುದರ|
ಇರಲಿ ಚೈತನ್ಯಭರಿತ ನಿಮ್ಮಂತರಂಗವು ನಿರಂತರ||
ಶ್ಲೋಕ

2.  ಎಚ್ಚೆತ್ತು ಅಭಿಮುಖವಾಗುವುದು ಜಗದಾದ್ಯಂತ ಪ್ರಭುವಿಗೆ|
ಸಾಷ್ಟಾಂಗವೆರಗುವುವು ಧರೆಯ ಸರ್ವ ಜನಾಂಗಗಳು ಆತನಿಗೆ||
ಪ್ರಭುವಿಗೆ ಸೇರಿದುದು ರಾಜ್ಯಭಾರವೆಲ್ಲವೂ|
ಆತನದೇ ರಾಷ್ಟ್ರಗಳ ಒಡೆತನವೆಲ್ಲವು|
ತಲೆಬಾಗುವರಾತನಿಗೆ ಧರೆಯ ಗರ್ವಿಗಳೆಲ್ಲರು|
ಅಡ್ಡಬೀಳುವರವನಿಗೆ ಮರ್ತ್ಯ ಮಾನವರೆಲ್ಲರು||
ಶ್ಲೋಕ

3.  ವಂದಿಪುದು ಪ್ರಭುವನು ಮುಂದಿನ ಪೀಳಿಗೆ|
ಸಾರುವುದಾತನ ವದಂತಿಯನ್ನು ಜನರಿಗೆ||
ಸಾರುವರು ಮುಂದಿನ ಜನತೆಗುದ್ಧಾರವನು|
ಅರುಹುವರು ಆತನೆಸಗಿದ ಮಹತ್ಕಾರ್ಯವನು||
ಶ್ಲೋಕ

ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ.
ದೇವರ  ಸಂದೇಶವನ್ನು  ಮನುಷ್ಯರ  ಮಾತುಗಳೆಂದು  ಪರಿಗಣಿಸದೆ | ದೇವರ  ವಾಕ್ಯವೆಂದೇ  ಅರಿತು  ಅಂಗೀಕರಿಸಿರಿ ||
ಅಲ್ಲೆಲೂಯ.


ಶುಭಸಂದೇಶ: ಲೂಕ 14:15-24

ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಯೇಸುಸ್ವಾಮಿ ಹೇಳಿದ್ದನ್ನು ಕೇಳಿ, “ದೇವರ ಸಾಮ್ರಾಜ್ಯದ ಔತಣದಲ್ಲಿ ಭಾಗಿಯಾಗುವವನು ಎಷ್ಟೋ ಧನ್ಯನು!” ಎಂದನು. ಯೇಸು ಅವನಿಗೆ ಈ ಸಾಮತಿ ಹೇಳಿದರು: “ಒಬ್ಬಾತ ಒಂದು ದೊಡ್ಡ ಔತಣವನ್ನೇರ್ಪಡಿಸಿ ಅನೇಕ ಜನರಿಗೆ ಆಹ್ವಾನವಿತ್ತ. ಊಟಕ್ಕೆ ವೇಳೆಯಾದಾಗ, ‘ಈಗ ಎಲ್ಲಾ ಸಿದ್ಧವಾಗಿದೆ ಬನ್ನಿ,’ ಎಂದು ಹೇಳಿ ಆಹ್ವಾನಿತರನ್ನು ಕರೆದುತರಲು ಸೇವಕರನ್ನು ಕಳಿಸಿದ. ಆದರೆ ಆಹ್ವಾನಿತರೆಲ್ಲರೂ ಒಬ್ಬರಾದ ಮೇಲೊಬ್ಬರು ‘ಕ್ಷಮಿಸಬೇಕು,’ ಎಂದು ಹೇಳಲಾರಂಭಿಸಿದರು. ಒಬ್ಬ, ‘ಕ್ಷಮಿಸಬೇಕು, ಒಂದು ಹೊಲ ಕೊಂಡುಕೊಂಡಿದ್ದೇನೆ, ಅಲ್ಲಿಗೆ ಹೋಗಿ ನೋಡಬೇಕಾಗಿದೆ,’ ಎಂದ. ಇನ್ನೊಬ್ಬ, ‘ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಬೇಕು,’ ಎಂದ. ಮತ್ತೊಬ್ಬ, ‘ನನಗೆ ಈಗ ತಾನೆ ಮದುವೆ ಆಗಿದೆ, ಬರುವುದಕ್ಕಾಗುವುದಿಲ್ಲ,’ ಎಂದನು. “ಆ ಸೇವಕನು ಬಂದು ಯಜಮಾನನಿಗೆ ಹಾಗೆಯೇ ವರದಿ ಮಾಡಿದ. ಇದನ್ನು ಕೇಳಿ ಯಜಮಾನನಿಗೆ ರೋಷಬಂದಿತು. ಅವನು ಸೇವಕನಿಗೆ, ‘ಪಟ್ಟಣದ ಹಾದಿಬೀದಿಗಳಿಗೂ ಸಂದುಗೊಂದುಗಳಿಗೂ ಹೋಗಿ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆದುಕೊಂಡು ಬಾ,’ ಎಂದು ಆಜ್ಞೆಮಾಡಿದ. ಸೇವಕನು ಬಂದು, ‘ಸ್ವಾಮೀ, ನಿಮ್ಮ ಆಜ್ಞೆಯಂತೆ ಮಾಡಿದ್ದಾಯಿತು; ಆದರೆ ಇನ್ನೂ ಸ್ಥಳವಿದೆ,’ ಎಂದು ಹೇಳಿದ. ಅದಕ್ಕೆ ಯಜಮಾನ ‘ಹಾಗಾದರೆ ಹಳ್ಳಿಹಾದಿಗಳಿಗೂ ಎಲ್ಲೆ ಬೇಲಿಗಳವರೆಗೂ ಹೋಗಿ ಕಂಡಕಂಡವರನ್ನು ಒತ್ತಾಯ ಮಾಡಿ ಕರೆದುಕೊಂಡು ಬಾ. ನನ್ನ ಮನೆ ತುಂಬಿಹೋಗಲಿ. ಆದರೆ ಮೊದಲು ಆಹ್ವಾನಿತರಾದವರಲ್ಲಿ ಒಬ್ಬನೂ ನಾನು ಮಾಡಿಸಿದ ಅಡುಗೆಯ ರುಚಿ ನೋಡಬಾರದು!' ಎಂದು ಸ್ಪಷ್ಟಪಡಿಸಿದ". 

02.11.2026 - ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು.

 ಮೊದಲನೇ ವಾಚನ: ಜ್ಞಾನಗ್ರಂಥ 3:1-9 


ಸಜ್ಜನರ ಆತ್ಮಗಳಿರುವುವು ದೇವರ ಕೈಯೊಳು ಅವರನ್ನು ಮುಟ್ಟದು ಮಹಾಯಾತನೆ ಯಾವುದೂ. ಮಂದಮತಿಯ ಕಣ್ಣಿಗೆ ಸತ್ತವರಂತೆ ಅವರು ಕಾಣಿಸಿಕೊಂಡರು ಅವರು ಗತಿಸಿಹೋದುದು ಅವನಿಂದ ತೊಲಗಿದ ಕೇಡಂತಿತ್ತು. ಸಜ್ಜನರಿಗಾದ ಸಾವು ಮಹಾ ವಿಪತ್ತು ಎಂದವನಿಗೆ ತೋರಿತು. ಅವರಾದರೋ ಶಾಂತಿ ಸಮಾಧಾನದಿಂದ ನೆಮ್ಮದಿಯಾಗಿರುವರು. ಮಾನವನ ದೃಷ್ಟಿಯಲ್ಲಿ ಅವರು ಕಂಡು ಬಂದರು ಶಿಕ್ಷಿಸಲ್ಪಟ್ಟವರಂತೆ ಅವರಲ್ಲಾದರೋ ತುಂಬಿತ್ತು ಅಮರತ್ವದ ನಂಬಿಕೆ ನಿರೀಕ್ಷೆ, ಅವರು ಅನುಭವಿಸಿದ ಶಿಕ್ಷೆ ಅಲ್ಪ, ಹೊಂದುವ ಸೌಭಾಗ್ಯ ಅಪಾರ. ಶೋಧಿಸಿದ ತರುವಾಯ ದೇವರಿಗೆ ಅವರು ಕಂಡು ಬಂದರು ಯೋಗ್ಯಾರ್ಹ. ಶೋಧಿಸಿದರವರನು ಪುಟಕ್ಕಿಟ್ಟ ಚಿನ್ನದಂತೆ, ಅಂಗೀಕೃತರಾದರು ಪೂರ್ಣ ದಹನ ಬಲಿಯಂತೆ. ಪ್ರಕಾಶಿಸುವರು ದೇವರನು ಸಂದರ್ಶಿಸುವ ಕಾಲದಲ್ಲಿ ಹೊಳೆಯುವರು ಒಣ ಹುಲ್ಲಿನೊಳಗಿನ ಕಿಡಿಗಳೋಪಾದಿ. ನ್ಯಾಯ ತೀರಿಸುರವರು ಜನಾಂಗಗಳಿಗೆ ದೊರೆತನ ಮಾಡುವರವರು ಜನಗಳ ಮೇಲೆ ದೇವರ ಪ್ರಜೆಗಳಾಗಿರುವರು ಸದಾಕಾಲಕ್ಕೆ. ಸತ್ಯವನ್ನು ಅರಿವರು ದೇವರಲ್ಲಿ ಭರವಸಯಿಡುವವರು ಅವರೊಂದಿಗೆ ಪ್ರೀತಿಯಿಂದ ಬಾಳುವರು ನಂಬಿಗಸ್ತರು. ದೇವರಿಂದ ಆಯ್ಕೆಯಾದವರಿಗಿರುವುದು ಕೃಪಾನುಗ್ರಹವು ದೇವರೇ ಕಾಪಾಡುವರು ಸಜ್ಜನರನು .

ಕೀರ್ತನೆ: 23:1-3, 3-4, 5, 6 

ಶ್ಲೋಕ:, ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ? 

1.  ಪ್ರಭು ಕುರಿಗಾಹಿಯಾಗಿರಲು ನನಗೆ| ಕುಂದುಕೊರತೆಗಳೆಲ್ಲಿಯವು ಎನಗೆ ?||
ಹಸಿರುಗಾವಲುಗಳಲೆನ್ನ ತಂಗಿಸುವನು|
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು|
ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ||
ಶ್ಲೋಕ

2.  ಸನ್ಮಾರ್ಗದಲ್ಲಿ ನಡೆಸುವನು ತನ್ನ ನಾಮನಿಮಿತ್ತ|
ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು ಅಂಜೆನು ಕೇಡಿಗೆ||
ಶ್ಲೋಕ

3.  ನಿನ್ನ ಕುರಿಗೋಲು, ಊರುಗೋಲು|
ದೈರ್ಯವನು ತರುವುದೆನಗೆ||
ಕಾಣೆನೆಂದಿಗೂ ನಾ ದಿಗಿಲನು|
ನೀನಿರಲು ನನ್ನೊಂದಿಗೆ||
ಶ್ಲೋಕ

ಪೌಲನು ರೋಮನರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 5:5-11




  ಈ ನಂಬಿಕೆ ನಿರೀಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವೋಗುವುದಿಲ್ಲ.  ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ.  ನಾವು ಪಾಪದಿಂದ ದುರ್ಬಲರಾಗಿದ್ದಾಗಲೇ ನಿಯಮಿತ ಕಾಲದಲ್ಲಿ ಕ್ರಿಸ್ತಯೇಸು ಪಾಪಿಗಳಿಗೋಸ್ಕರ ಪ್ರಾಣತ್ಯಾಗ ಮಾಡಿದರು.  ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣ ಕೊಡುವುದು ವಿರಳ.  ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು.  ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು.  ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ.  ಕ್ರಿಸ್ತಯೇಸುವಿನ ರಕ್ತಧಾರೆಯಿಂದ ನಾವೀಗ ದೇವರೊಡನೆ ಸತ್ಸಂಬಂಧದಲ್ಲಿದ್ದೇವೆ.  ಹೀಗಿರಲಾಗಿ, ಬರಲಿರುವ ದೈವ ಕೋಪಾಗ್ನಿಯಿಂದ ಯೇಸುಕ್ರಿಸ್ತರ ಮುಖಾಂತರವೇ ಪಾರಾಗುತ್ತೇವೆ ಎಂಬುದು ಮತ್ತಷ್ಟು ನಿಶ್ಚಯವಲ್ಲವೆ?  ನಾವು ದೇವರಿಗೆ ಶತ್ರುಗಳಾಗಿದ್ದರೂ ಅವರು ತಮ್ಮ ಮಗನ ಮರಣದ ಮೂಲಕ ನಮ್ಮನ್ನು ತಮ್ಮೊಡನೆ ಸಂಧಾನಗೊಳಿಸಿ ಮಿತ್ರರನ್ನಾಗಿ ಮಾಡಿಕೊಂಡರು.  ನಾವೀಗ ದೇವರ ಮಿತ್ರರಾಗಿರುವುದರಿಂದ, ಕ್ರಿಸ್ತ ಯೇಸುವಿನ ಜೀವದ ಮೂಲಕ ಉದ್ಧಾರ ಹೊಂದುತ್ತೇವೆ ಎಂಬುದು ಮತ್ತಷ್ಟು ಖಚಿತವಲ್ಲವೇ?  ಅಷ್ಟೇ ಅಲ್ಲದೆ, ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರು ನಮ್ಮನ್ನು ಮಿತ್ರರನ್ನಾಗಿಸಿರುವುದರಿಂದ ಅವರ ಮೂಲಕವೇ ನಾವು ದೇವರಲ್ಲಿ ಹೆಮ್ಮೆಪಡುತ್ತೇವೆ.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಘೋಷಣೆ
(ಪ್ರಕಟನಾ 1:5,6,)

ಅಲ್ಲೆಲೂಯ, ಅಲ್ಲೆಲೂಯ!
ದುಡಿದು ಭಾರಹೊತ್ತು ಬಳಲಿ ಬೆಂಡಾಗಿರುವ ಸರ್ವಜನರೇ | ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿ ನೀಡುತ್ತೇನೆ||
ಅಲ್ಲೆಲೂಯ!

ಶುಭಸಂದೇಶ : ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 6:37-40

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ, ಪಿತನು ನನಗೆಂದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ.  ನನ್ನಲ್ಲಿಗೆ ಬರುವವನನ್ನು ನಾನೆಂದಿಗೂ ತಳ್ಳಿಬಿಡುವುದಿಲ್ಲ.  ನಾನು ಸ್ವರ್ಗದಿಂದ ಇಳಿದು ಬಂದುದು ನನ್ನ ಇಚ್ಛೆಯಂತೆ ನಡೆಯುವುದಕ್ಕಲ್ಲ.  ನನ್ನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದಕ್ಕೆ. ಅವರ ಚಿತ್ತವೇನೆಂದರೆ:
ಅವರು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ಕಳೆದುಕೊಳ್ಳದೆ ಅಂತಿಮ ದಿನದಂದು ಅವರೆಲ್ಲರನ್ನೂ ನಾನು ಜೀವಕ್ಕೆ ಎಬ್ಬಿಸಬೇಕು.  ಪುತ್ರನನ್ನು ಕಂಡು ಆತನಲ್ಲಿ ವಿಶ್ವಾಸ ಇಡುವ ಪ್ರತಿಯೊಬ್ಬನೂ ನಿತ್ಯಜೀವ ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ.  ಅಂಥವನನ್ನು ಅಂತಿಮ ದಿನದಂದು ನಾನು ಜೀವಕ್ಕೆ ಎಬ್ಬಿಸುತ್ತೇನೆ "ಎಂದು ನುಡಿದರು.

ಪ್ರಭುವಿನ ಶುಭಸಂದೇಶ
ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ

03.11.2026 - ದೇವರ ಸಾಮ್ರಾಜ್ಯದ ಔತಣದಲ್ಲಿ ಭಾಗಿಯಾಗುವವನು ಎಷ್ಟೋ ಧನ್ಯನು

ಮೊದಲನೇ ವಾಚನ: ಫಿಲಿಪ್ಪಿಯರಿಗೆ 2:5-11 ಸಹೋದರರೇ, ಕ್ರಿಸ್ತಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲಸಿರಲಿ: ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರ...