Saturday, November 11, 2023

12.11.2023 - "ಜಾಗೃತರಾಗಿರಿ ! ಏಕೆಂದರೆ ಆ ದಿನವಾಗಲಿ, ಆ ಗಳಿಗೆಯಾಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು."

 ಮೊದಲನೆಯ  ವಾಚನ : ಸುಜ್ಞಾನ  ಗ್ರಂಥ 6:12-16


ಸುಜ್ಞಾನವೆಂಬಾಕೆ  ತೇಜೋಪುಂಜಳಾಗಿ  ಇರುವಳು,  ಅವಳ  ಕಾಂತಿ  ಕುಂದದು.  ಪ್ರೀತಿಸುವವರಿಗೆ  ಸಹಜವಾಗಿ  ಗೋಚರ  ಆಗುವಳು,  ಅರಸುವವರಿಗೆ  ಸಿಕ್ಕುವಳು.  ತನ್ನನ್ನು  ತಿಳಿಯಲಪೇಕ್ಷಿಸುವವರ  ಹತ್ತಿರಕ್ಕೆ,  ತಾನೇ  ಬಂದು  ತಿಳಿಯಪಡಿಸಿಕೊಳ್ಳುತ್ತಾಳೆ.  ಅವಳನ್ನು  ಹುಡುಕಲು  ನಸುಕಿನಲೇ  ಏಳುವ  ಪರಿಶ್ರಮ  ಬೇಡ,  ಕಾರಣ  ತನ್ನ  ಬಾಗಿಲಲೇ  ಅವಳು  ಕುಳಿತಿರುವುದನ್ನೆ  ಕಾಣುವನಾತ.  ಅವಳ  ಮೇಲೆ  ನಿಗವಿಟ್ಟಿರುವವನು  ಬುದ್ದಿ  ಸಂಪನ್ನನಾಗುವನು,  ಅವಳನ್ನೆ  ಕಾಯುತ್ತಿರುವನು   ಚಿಂತೆಯಿಂದ  ಬೇಗ  ಮುಕ್ತನಾಗುವನು.  ಸುಜ್ಞಾನ  ತನಗೆ  ಯೋಗ್ಯರಾದವರನು  ಅರಸುತ್ತ  ಸಂಚರಿಸುತ್ತಾಳೆ,  ಹಾದಿಯಲ್ಲಿ  ಅವರಿಗೆ  ಪ್ರಸನ್ನಳಾಗಿ  ಕಾಣಿಸಿಕೊಳ್ಳುತ್ತಾಳೆ,  ಅವರ  ಪ್ರತಿಯೊಂದು  ಆಲೋಚನೆಯಲ್ಲೂ  ಅವರೊಂದಿಗಿರುತ್ತಾಳೆ.

ಕೀರ್ತನೆ:                        63:1-7

ಶ್ಲೋಕ:  ದೇವಾ,  ನೀ  ಎನ್ನ  ದೇವಾ  ನಿನಗಾಗಿ  ನಾ  ಕಾದಿರುವೆ |

1.  ದೇವಾ,  ನೀಯೆನ್ನ  ದೇವಾ,  ನಿನಗಾಗಿ  ನಾ  ಕಾದಿರುವೆ|

ನಿರ್ಜಲ  ಮರುಭೂಮಿಯಲಿ  ನೀರಿಗಾಗಿ  ಹಾತೊರೆವಂತೆ|

ನಿನಗೋಸ್ಕರ  ಎನ್ನ  ತನು  ಸೊರಗಿದೆ,   ಮನ   ಬಾಯಾರಿದೆ||

 

2.  ನಿನ್ನ  ಮಂದಿರದಲಿ  ನನಗಾದ  ದರ್ಶನದಲಿ|

ನಿನ್ನ  ಶಕ್ತಿ  ಪ್ರತಿಭೆಯನು  ಕಂಡಿರುವೆನಲ್ಲಿ||

ಪ್ರಾಣಕ್ಕಿಂತ  ಮಿಗಿಲಾದುದು  ನಿನ್ನಚಲ  ಪ್ರೀತಿ|

ಎಡೆಬಡದೆ  ಮಾಳ್ಪುದು  ನನ್ನೀ  ತುಟಿ  ನಿನ್ನ  ಸ್ತುತಿ||

 

3.  ನಿನ್ನ  ಸ್ತುತಿಸುವೆ  ಜೀವಮಾನ  ಪರಿಯಂತ|

ಕೈ  ಮುಗಿವೆ  ನಿನ್ನ  ನಾಮದ  ಸ್ಮರಣಾರ್ಥ||

ಮೃಷ್ಟಾನ್ನ  ತಿಂದಂತೆ  ಎನ್ನ  ಮನ  ಸಂತೃಪ್ತ| 

ಸಂಭ್ರಮದಿಂದ  ನಿನ್ನ  ಹೊಗಳುವುದು  ಬಾಯ್ತುಂಬ||

ಎರಡನೆಯ  ವಾಚನ : ಪೌಲನು  ಥೆಸಲೋನಿಯರಿಗೆ  ಬರೆದ  ಮೊದಲನೆಯ  ಪತ್ರ  :4:13-18

Uploading: 318570 of 318570 bytes uploaded.

ಸಹೋದರರೇ,  ಮೃತರ  ಮುಂದಿನ  ಸ್ಥಿತಿಗತಿಯ  ವಿಷಯವಾಗಿ  ನೀವು  ತಿಳಿದಿರಬೇಕು  ಎಂಬುದೇ  ನಮ್ಮ  ಬಯಕೆ.  ಏಕೆಂದರೆ,  ನಂಬಿಕೆ  ನಿರೀಕ್ಷೆಯಿಲ್ಲದ  ಇತರರಂತೆ  ಮೃತರಿಗಾಗಿ  ನೀವು  ದುಃಖಿಸಬಾರದು.  ಯೇಸು  ಸತ್ತು  ಪುನರುತ್ಥಾನ  ಹೊಂದಿದರೆಂದು  ನಾವು  ವಿಶ್ವಾಸಿಸುತ್ತೇವೆ  ಅಲ್ಲವೇ?  ಹಾಗೆಯೇ,  ಕ್ರಿಸ್ತ  ಯೇಸುವಿನಲ್ಲಿ  ವಿಶ್ವಾಸವಿಟ್ಟು  ಮರಣಹೊಂದಿದವರನ್ನು  ದೇವರು  ಯೇಸುಕ್ರಿಸ್ತರೊಡನೆ  ಮರಳಿ  ಕರೆದುಕೊಳ್ಳುತ್ತಾರೆ.  ಪ್ರಭುವಿನ  ವಾಕ್ಯದ  ಆಧಾರದ  ಮೇಲೆ  ನಾವು  ನಿಮಗೆ  ಹೇಳುತ್ತೇವೆ:   ಪ್ರಭು  ಪುನರಾಗಮಿಸುವಾಗ,  ಇನ್ನೂ  ಬದುಕಿರುವ  ನಾವು  ಮೃತರಾಗಿರುವ  ಇತರರಿಗಿಂತಲೂ  ಮುಂದಿನವರಾಗುವುದಿಲ್ಲ.  ಆಜ್ಞಾಘೋಷವಾದಾಗ,  ಪ್ರಧಾನ  ದೂತನ  ಧ್ವನಿಯು  ಕೇಳಿಬಂದಾಗ,  ದೇವರ  ತುತೂರಿ  ನಾದಗೈದಾಗ,  ಪ್ರಭುವೇ  ಸ್ವರ್ಗದಿಂದ  ಇಳಿದು  ಬರುತ್ತಾರೆ.  ಆಗ,  ಕ್ರಿಸ್ಥಸ್ತರಾಗಿ  ಮೃದರಾದವರು  ಮೊದಲು  ಎದ್ದು  ಬರುತ್ತಾರೆ.  ಆಮೇಲೆ,  ಇನ್ನೂ  ಬದುಕಿರುವ  ನಾವು  ಎದ್ದುಬಂದವರೊಡನೆ  ಆಕಾಶಮಂಡಲದಲ್ಲಿ  ಪ್ರಭುವನ್ನು  ಎದುರುಗೊಳ್ಳಲು  ಮೇಘಾರೂಢರಾಗಿ  ಮೇಲಕ್ಕೆ  ಒಯ್ಯಲ್ಪಡುತ್ತೇವೆ.   ಹೀಗೆ  ಸರ್ವದಾ  ನಾವು  ಪ್ರಭುವಿನೊಂದಿಗೆ  ಇರುತ್ತೇವೆ.  ಆದ್ದರಿಂದ,  ಈ  ಮಾತುಗಳಿಂದ  ಒಬ್ಬರನ್ನೊಬ್ಬರು  ಸಂತೈಸಿಕೊಳ್ಳಿ.

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!

ನೀವು  ಸಹ  ಸಿದ್ದರಾಗಿರಿ;  ಏಕೆಂದರೆ  ನರಪುತ್ರನು  ನೀವು  ನಿರೀಕ್ಷಿಸದ  ಗಳಿಗೆಯಲ್ಲಿ  ಬರುವನು, ಅಲ್ಲೆಲೂಯ!

ಶುಭಸಂದೇಶ : ಮತ್ತಾಯ 25:1-13


ಆ  ಕಾಲದಲ್ಲಿ  ಯೇಸು,  ತಮ್ಮ  ಶಿಷ್ಯರಿಗೆ  ಹೀಗೆಂದರು:  "ಆ  ದಿನಗಳಲ್ಲಿ  ಸ್ವರ್ಗಸಾಮ್ರಾಜ್ಯ  ಹೇಗಿರುವುದು  ಎನ್ನುವುದಕ್ಕೆ  ಈ  ಸಾಮತಿಯನ್ನು  ಕೊಡಬಹುದು:   ಹತ್ತು  ಮಂದಿ  ಕನ್ಯೆಯರು  ದೀಪಾರತಿ  ಹಿಡಿದು  ಮದುವಣಿಗನನ್ನು  ಎದುರುಗೊಳ್ಳಲು  ಹೋದರು.  ಅವರಲ್ಲಿ  ಐವರು  ವಿವೇಕಿಗಳು,  ಐವರು  ಅವಿವೇಕಿಗಳು.  ಅವಿವೇಕಿಗಳು  ದೀಪಗಳನ್ನು  ತೆಗೆದುಕೊಂಡರೇ  ಹೊರತು  ಜೊತೆಗೆ  ಎಣ್ಣೆಯನ್ನು  ತೆಗೆದುಕೊಳ್ಳಲಿಲ್ಲ.  ವಿವೇಕಿಗಳಾದರೋ  ದೀಪಗಳ  ಜೊತೆಗೆ  ಬುಡ್ಡಿಗಳಲ್ಲಿ  ಎಣ್ಣೆಯನ್ನೂ   ತೆಗೆದುಕೊಂಡರು.  ಮದುವಣಿಗ  ಬರುವುದು  ತಡವಾಯಿತು.  ಅವರೆಲ್ಲರೂ  ತೂಕಡಿಸುತ್ತಾ  ಹಾಗೇ  ನಿದ್ರೆಹೋದರು.  ನಡುರಾತ್ರಿಯ  ವೇಳೆ.  "ಇಗೋ,  ಮದುವಣಿಗ   ಬರುತ್ತಿದ್ದಾನೆ ;  ಬನ್ನಿ,  ಆತನನ್ನು  ಎದುರುಗೊಳ್ಳಿ, 'ಎಂಬ  ಕೂಗು  ಕೇಳಿಸಿತು.  ಕನ್ಯೆಯರೆಲ್ಲರೂ  ಎದ್ದರು.  ತಮ್ಮತಮ್ಮ  ದೀಪದ  ಬತ್ತಿಯನ್ನು  ಸರಿಮಾಡಿದರು.  ಅವಿವೇಕಿಗಳು,  'ನಮ್ಮ  ದೀಪಗಳು ಆರಿಹೋಗುತ್ತಾ   ಇವೆ;  ನಿಮ್ಮ  ಎಣ್ಣೆಯಲ್ಲಿ  ನಮಗೂ  ಕೊಂಚ  ಕೊಡಿ, 'ಎಂದು  ವಿವೇಕಿಗಳನ್ನು  ಕೇಳಿಕೊಂಡರು.  ಅದಕ್ಕೆ  ಅವರು,  'ನಿಮಗೆ  ಕೊಟ್ಟರೆ  ನಮಗೂ  ನಿಮಗೂ  ಸಾಲದೆ  ಹೋದೀತು.  ನೀವು  ಅಂಗಡಿಗೆ  ಹೋಗಿ  ಕೊಂಡುಕೊಂಡರೆ  ಒಳ್ಳೆಯದು, ' ಎಂದರು.  ಅಂತೆಯೇ  ಅವರು  ಎಣ್ಣೆಯನ್ನು  ಕೊಂಡುಕೊಳ್ಳಲು  ಹೋದಾಗ  ಮದುವಣಿಗನು  ಬಂದೇಬಿಟ್ಟನು.  ಸಿದ್ದರಾಗಿದ್ದವರು  ಅವರ  ಸಂಗಡ  ವಿವಾಹ  ಮಹೋತ್ಸವಕ್ಕೆ  ಹೋದರು.  ಕಲ್ಯಾಣಮಂಟಪದ  ಬಾಗಿಲುಗಳನ್ನು  ಮುಚ್ಚಲಾಯಿತು.  ಉಳಿದ  ಕನ್ಯೆಯರು  ಅನಂತರ  ಬಂದರು.  'ಸ್ವಾಮೀ,  ಸ್ವಾಮೀ,  ನಮಗೆ  ಬಾಗಿಲು  ತೆರೆಯಿರಿ, 'ಎಂದು  ಕೂಗಿಕೊಂಡರು.  ಅದಕ್ಕೆ  ಉತ್ತರವಾಗಿ  ಆ  ಮದುವಣಿಗ,  'ಅದಾಗದು,  ನೀವು  ಯಾರೋ  ನನಗೆ  ಗೊತ್ತಿಲ್ಲ,  'ಎಂದುಬಿಟ್ಟ.  ಆದ್ದರಿಂದ  ಜಾಗೃತರಾಗಿರಿ !  ಏಕೆಂದರೆ  ಆ  ದಿನವಾಗಲಿ,  ಆ  ಗಳಿಗೆಯಾಗಲಿ  ಯಾವಾಗ  ಬರುತ್ತದೆಂದು  ನಿಮಗೆ  ತಿಳಿಯದು."