Saturday, March 1, 2025

04.03.25 - ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು

ಮೊದಲನೇ ವಾಚನ: ಸಿರಾಖನು 35:1-12 

ಧರ್ಮಶಾಸ್ತ್ರವನ್ನು ಅನುಸರಿಸುವವನು ಕಾಣಿಕೆಗಳನು ಹೆಚ್ಚಾಗಿ ಅರ್ಪಿಸಿದವನಂತೆ ಆಜ್ಞೆಗಳನ್ನು ಕೈಗೊಳ್ಳುವವನು  ಶಾಂತಿ ಸಮಾಧಾನದ ಬಲಿಯರ್ಪಿಸಿದವನಂತೆ. ಪ್ರತ್ಯುಪಕಾರ ಮಾಡುವವನು ಗೋದಿ ಹಿಟ್ಟನ್ನು ನೈವೇದ್ಯ ಮಾಡಿದವನಂತೆ ದಾನಧರ್ಮ ಮಾಡುವವನು ಸ್ತುತಿ ಬಲಿಯನ್ನು ಅರ್ಪಿಸಿದವನಂತೆ. ದುಷ್ಟತನವನು ಬಿಟ್ಟುಬಿಡುವುದು ಪಾಪಕ್ಕೆ ಪ್ರಾಯಶ್ಚಿತ್ತ. ಸರ್ವೇಶ್ವರನ ಸನ್ನಿಧಿಯನು ಸೇರಬಾರದು ಬರಿಗೈಯಿಂದ. ಇವುಗಳನ್ನೆಲ್ಲ ಮಾಡಬೇಕಾಗಿದೆ ಆತನ ಆಜ್ಞೆಯ ನಿಮಿತ್ತ. ನೀತಿವಂತನ ಅರ್ಪಣೆ ಒಂದು ಅಲಂಕಾರ ಯಜ್ಞವೇದಿಕೆ ಅದರ ಸುವಾಸನೆ ಏರುವುದು ಮಹೋನ್ನತನ ಸನ್ನಿಧಿಗೆ. ಸಮರ್ಪಕವಾಗಿರುವುದು ನೀತಿವಂತ ನೀಡುವ ಬಲಿಕಾಣಿಕೆ ಮರೆತುಹೋಗುವುದಿಲ್ಲ ಅದರ ಸ್ಮರಣೆ. ಉದಾರದೃಷ್ಟಿಯಿಂದ ಸರ್ವೇಶ್ವರನನು ಮಹಿಮೆಪಡಿಸು ಕಡಿಮೆಮಾಡಬೇಡ ನಿನ್ನ ಕೈಯ ಪ್ರಥಮ ಫಲಗಳನು, ಕಾಣಿಕೆ ಕೊಡುವಾಗಲೆಲ್ಲ ಹಸನ್ಮುಖಿಯಾಗಿರು ಸಂತೋಷದಿಂದ ದಶಮಾಂಶವನು ಸಲ್ಲಿಸು. ಮಹೋನ್ನತನು ನಿನಗೆ ಕೊಟ್ಟ ಪ್ರಮಾಣಕ್ಕೆ ಕೊಡು ನಿನ್ನ ಕೈ ಗಳಿಸಿದ ಪ್ರಮಾಣಕ್ಕೆ ಸರಿಯಾಗಿ ಒಳ್ಳೇ ದೃಷ್ಟಿಯಿಂದ ಕೊಡು. ಏಕೆಂದರೆ ಸರ್ವೇಶ್ವರ ಪ್ರತಿಫಲ ನೀಡುವನು ಏಳ್ಮಡಿಯಾಗಿ ನಿನಗೆ ಕೊಡುವನು. ಲಂಚದೋಪಾದಿ ಕಾಣಿಕೆ ತರಬೇಡ, ಆತನು ಅವುಗಳನ್ನು ಅಂಗೀಕರಿಸುವುದಿಲ್ಲ ಅಕ್ರಮವಾದ ಬಲಿಯ ಮೇಲೆ ಮನಸ್ಸಿಡಬೇಡ, ಅತ ನ್ಯಾಯಧೀಶ, ಆತನಲ್ಲಿ ಮುಖದಾಕ್ಷಿಣ್ಯವಿಲ್ಲ.

ಕೀರ್ತನೆ: 50:5-6, 7-8, 14, 23

ಶ್ಲೋಕ: ಪ್ರಭು, ಮೋಡಗಳ ಮಧ್ಯೆ ಬೆಳಗುವ ಬೆಳಗಿನ ಚುಕ್ಕಿಯಂತೆ, ಪೂರ್ಣಚಂದ್ರನಂತೆ

ಶುಭಸಂದೇಶ: ಮಾರ್ಕ 10:28-31


ಆಗ ಪೇತ್ರನು ಮುಂದೆ ಬಂದು, "ನೋಡಿ ನಾವು ಎಲ್ಲವನ್ನೂ ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ," ಎಂದನು ಆಗ ಯೇಸು "ನಾನು ನಿಶ್ಚಯವಾಗಿ ಹೇಳುತ್ತೇನೆ: ಯಾರಾದರೂ ನನ್ನ ನಿಮಿತ್ತ ಹಾಗೂ ಶುಭಸಂದೇಶ ನಿಮಿತ್ತ ಮನೆಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುತ್ತಾನೋ ಅವನು, ಈ ಕಾಲದಲ್ಲೇ ಮನೆ, ಅಣ್ಣತಮ್ಮ, ಅಕ್ಕತಂಗಿ, ತಾಯಿ, ಮಕ್ಕಳು, ಹೊಲಗದ್ದೆ ಇವೆಲ್ಲವನ್ನೂ ನೂರ್ಮಡಿಯಷ್ಟು ಪಡೆಯುವನು. ಇವುಗಳೊಂದಿಗೆ ಹಿಂಸೆಯನ್ನೂ ಅನುಭವಿಸಬೇಕಾಗುವುದು; ಅದಲ್ಲದೆ ಮುಂದಿನ ಲೋಕದಲ್ಲಿ ಅಮರ ಜೀವವನ್ನು ಪಡೆಯುವನು. "ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು," ಎಂದರು.

ಮನಸಿಗೊಂದಿಷ್ಟು :  ಅಂತೆಯೇ ದೇವರನ್ನು ಹಿಂಬಾಲಿಸುವುದು ಸುಲಭದ ಮಾತಲ್ಲ ಎಂಬುದನ್ನೂ ಹೇಳುತ್ತಾರೆ. ಆಮಿಷಗಳನ್ನು ಒಡ್ಡಿ ದೇವರತ್ತ ಸೆಳೆಯುವವರಿಗೆ ಅಥವಾ ಆಮಿಷಗಳಿಂದ ದೇವರತ್ತ ಸಾಗುವುವವರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಅಂತೆಯೇ ದೇವರ ತೀರ್ಪು ಲೋಕ ರೂಢಿಗಿಂತ ಭಿನ್ನವಾದುದು ಎಂಬ ಸಣ್ಣ ಎಚ್ಚರಿಕೆಯನ್ನು ಯೇಸು ನೀಡುತ್ತಾರೆ. ನಾವು ಇತರರಿಗಿಂತ ಮೇಲು ಎಂಬ ನಮ್ಮ ಭಾವ ದೇವರ ಮುಂದೆ ಏನೂ ಇಲ್ಲದ್ದಂತಾಗಬಹುದು.

ಪ್ರಶ್ನೆ : ಯೇಸುವಿನ ನಿಮಿತ್ತ, ಶುಭಸಂದೇಶದ ನಿಮಿತ್ತ ನಾವೇನು ತ್ಯಜಿಸಿದ್ದೇವೆ?

03.03.25 - "ಮನುಷ್ಯನಿಗೆ ಇದು ಅಸಾಧ್ಯ, ದೇವರಿಗೆ ಎಲ್ಲವೂ ಸಾಧ್ಯ,"

ಮೊದಲನೇ ವಾಚನ:  ಸಿರಾಖ 17:24-29

ತನ್ನಲ್ಲಿಗೆ ಬರಗೊಡಿಸುವನು ಪಶ್ಚಾತ್ತಾಪ ಪಡುವವರನ್ನು ಸಂತೈಸುವನು ತಾಳ್ಮೆಗೆಡುತ್ತಿರುವವರನ್ನು. ಸರ್ವೇಶ್ವರನ ಕಡೆ ತಿರುಗಿಕೊಂಡು, ಪಾಪವನ್ನು ತೊರೆದುಬಿಡು; ಆತನನ್ನು ಪ್ರಾರ್ಥಿಸಿ, ಅಪರಾಧಗಳ ಅಡ್ಡಿಯನ್ನು ಕಡಿಮೆಮಾಡು. ಮಹೋನ್ನತನ ಕಡೆ ಹಿಂದಿರುಗಿ, ಅಧರ್ಮವನ್ನು ಬಿಡು ಅಸಹ್ಯ ಕೃತ್ಯಗಳನ್ನು ಸಂಪೂರ್ಣವಾಗಿ ಹಗೆಮಾಡು. ಜೀವಿಸುತ್ತಾ ಮಹೋನ್ನತನಿಗೆ  ಉಪಕಾರ ಸ್ತುತಿ ಮಾಡುವವರನ್ನು ಬಿಟ್ಟರೆ ಪಾತಾಳದಲ್ಲಿ ಆತನಿಗೆ ಸ್ತುತಿ ಹಾಡುವವರಿದ್ದಾರೆ? ಕೃತಜ್ಞತಾ ಸ್ತುತಿ ಇರುವುದಿಲ್ಲ ಜೀವಿಸದೆ ಇದ್ದವನಲ್ಲಿ ಅಂತೆಯೇ ಅದು ಲಯವಾಗುತ್ತದೆ  ಮೃತನಾದವನಲ್ಲಿ ಸರ್ವೇಶ್ವರನ ಸ್ತುತಿಗೈವನು ಜೀವಂತನು ಹಾಗು ಆರೋಗ್ಯಶಾಲಿ. ನಮ್ಮ ದೇವರಾದ ಸರ್ವೇಶ್ವರನ ಕೃಪೆ ಎಷ್ಟು ಘನವಾದುದು! ಶುದ್ದರಾಗಿ ಆತನ ಕಡೆ ತಿರುಗುವವರ ಮೇಲೆ ಆತನ ಕನಿಕರ ಎಷ್ಟು ವಿಶೇಷವಾದುದು!

ಕೀರ್ತನೆ: 32:1-2, 5, 6, 7
ಶ್ಲೋಕ: ಪ್ರಭು, ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ.

ಶುಭಸಂದೇಶ: ಮಾರ್ಕ 10:17-27

ಅಲ್ಲಿಂದ ಯೇಸುಸ್ವಾಮಿ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ ಒಬ್ಬನು, "ಒಳ್ಳೆಯ ಗುರುವೇ, ಅಮರಜೀವವು ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು?" ಎಂದು ಕೇಳಿದನು. "ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ. ದೈವಾಜ್ಞೆಗಳು ನಿನಗೆ ತಿಳಿದೇ ಇವೆ: ನರಹತ್ಯೆ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ಮೋಸಮಾಡಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು," ಎಂದು ಯೇಸು ಉತ್ತರವಿತ್ತರು. ಅದಕ್ಕೆ ಅವನು, "ಗುರುದೇವಾ, ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ," ಎಂದು ಹೇಳಿದನು. ಆಗ ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ, "ನೀನು ಮಾಡಬೇಕಾದ ಕಾರ್ಯವೂಂದು ಬಾಕಿಯಿದೆ. ಹೋಗು, ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು," ಎಂದರು. ಯೇಸುವಿನ ಈ ಮಾತನ್ನು ಕೇಳುತ್ತಲೇ ಅವನ ಮುಖ ಪೆಚ್ಚಾಯಿತು. ಅವನು ಖಿನ್ನ ಮನಸ್ಕನಾಗಿ ಅಲ್ಲಿಂದ ಹೊರಟು ಹೋದನು. ಏಕೆಂದರೆ ಅವನಿಗೆ ಅಪಾರ ಆಸ್ತಿಯಿತ್ತು. ಆಗ ಯೇಸುಸ್ವಾಮಿ ಸುತ್ತಲೂ  ನೋಡಿ, ತಮ್ಮ ಶಿಷ್ಯರನ್ನು ಉದ್ದೇಶಿಸಿ, "ಐಶ್ವರ್ಯವುಳ್ಳವರಿಗೆ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದು ಎಷ್ಟೊಂದು ಕಷ್ಟ!" ಎಂದರು. ಅವರ ಈ ಮಾತನ್ನು ಕೇಳಿದ ಶಿಷ್ಯರು ಬೆರಗಾದರು. ಯೇಸು ಪುನಃ ಅವರಿಗೆ, "ಮಕ್ಕಳೇ, ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟು ಕಷ್ಟ! ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಸೇರುವುದಕ್ಕಿಂತಲೂ ಒಂಟೆಯು ಸೂಜಿಗಣ್ಣಲ್ಲಿ ನುಸುಳುವುದು ಸುಲಭ," ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರಿಗೆ ಅಪರಮಿತ ಆಶ್ಚರ್ಯವಾಯಿತು. "ಹಾಗಾದರೆ ಯಾರು ತಾನೇ ಜೀವೂದ್ಧಾರ ಹೊಂದಲು ಸಾಧ್ಯ?" ಎಂದು ತಮ್ಮತಮ್ಮೊಳಗೇ ಮಾತನಾಡಿಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡಿ, "ಮನುಷ್ಯನಿಗೆ ಇದು ಅಸಾಧ್ಯ, ದೇವರಿಗೆ ಎಲ್ಲವೂ ಸಾಧ್ಯ," ಎಂದರು.

ಮನಸಿಗೊಂದಿಷ್ಟು : ಶ್ರೀಮಂತಿಕೆ ತಪ್ಪಲ್ಲ. ಐಶ್ವರ್ಯ ನಮ್ಮ ಹಿಡಿತದಲ್ಲಿ ಇರುವ ಬದಲಾಗಿ ಐಶ್ವರ್ಯದ ಹಿಡಿತದಲ್ಲಿ ನಾವಿರುವುದು ತಪ್ಪಾಗುತ್ತದೆ. ಐಶ್ವರ್ಯದ ಹಾತೊರಿಕೆಯೇ ನಮ್ಮ ಗುರಿಯಾದಾಗ ಸ್ವರ್ಗ ಸಾಮ್ರಾಜ್ಯ ನಿಧಾನವಾಗಿ ನಮ್ಮಿಂದ ದೂರವಾಗುತ್ತಲೇ ಹೋಗುತ್ತದೆ.

ಪ್ರಶ್ನೆ : ಐಶ್ವರ್ಯವೂ ಸೇರಿದಂತೆ ಸ್ವರ್ಗ ಸಾಮ್ರಾಜ್ಯವನ್ನು ನಮ್ಮಿಂದ ದೂರಗೊಳಿಸುತ್ತಿರುವುವು ಯಾವುವು?

02.03.25 - "ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು"

ಮೊದಲನೇ ವಾಚನ: ಸಿರಾಖನು 27:4-7
ಕಾಳನು ಸಾಣಿಸುವಾಗ ಹಿಪ್ಪೆ ಉಳಿಯುವುದು ಜರಡಿಯಲ್ಲಿ ಮನುಷ್ಯನ ಹೊಲೆತನ ಕಂಡು ಬರುವುದು ಅವನ ಆಲೋಚನೆಯಲ್ಲಿ. ಕುಂಬಾರನ ಮಡಿಕೆಯ ಪರೀಕ್ಷೆ ಬೆಂಕಿಯ ಆವಿಗೆಯಿಂದ ಮನುಷ್ಯನ ಪರಿಕ್ಷೆ ಅವನ ಸಂಭಾಷಣೆಯಿಂದ . ಮರದ ಫಲ ತೋರಿಸುವುದು ಅದನ್ನು ಬೆಳೆಯಿಸಿದ ಹದವನ್ನು, ಮಾತು ವ್ಯಕ್ತಪಡಿಸುವುದು ಮನಸ್ಸಿನ ಆಲೋಚನೆಯನ್ನು, ಒಬ್ಬನನ್ನು ಹೊಗಳಬೇಡ ಅವನ ಸಂಭಾಷಣೆಯನ್ನು ಅಳೆಯುವ ಮೊದಲೇ ಏಕೆಂದರೆ ಅವನ ಸತ್ವಪರೀಕ್ಷೆ ಅಡಗಿರುವುದು ಅದರಲ್ಲೇ.

ಕೀರ್ತನೆ: 92:2-3, 13-14, 15-16

ಶ್ಲೋಕ: ಪ್ರಭು, ನಿನ್ನ ಗುಣಗಾನ ಮಂಗಳಕರ

ಎರಡನೇ ವಾಚನ: 1 ಕೊರಿಂಥಿಯರಿಗೆ  15:54-58


ಅಳಿದು ಹೋಗುವಂಥದ್ದು ಅಮರತ್ವವನ್ನೂ ಮರ್ತ್ಯವಾದುದು ಅಮರ್ತ್ಯವನ್ನೂ ಧರಿಸಿಕೊಂಡಾಗ ಪವಿತ್ರಗ್ರಂಥದ ಈ ವಾಕ್ಯ ನೆರವೇರುವುದು: ಸಾವಿಗೆ ಸೋಲಾಯಾತು ಜಯವು ಸಂಪೂರ್ಣವಾಯಿತು. ಎಲೈ ಸಾವೇ, ನಿನ್ನ ಜಯವೆಲ್ಲಿ? ಎಲೈ ಸಾವೇ, ನಿನ್ನ ವಿಷಕೊಂಡಿಯೆಲ್ಲಿ? ಪಾಪವೇ ಸಾವಿನ ವಿಷಕೊಂಡಿ. ಪಾಪಕ್ಕೆ ಶಕ್ತ್ಯಾಧಾರ ಶಾಸ್ತ್ರ ವಿಧಿಗಳೇ. ಆದರೆ ನಮ್ಮ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ನಮಗೆ ಜಯವನ್ನು ದೊರಕಿಸಿಕೊಟ್ಟಿರುವ ದೇವರಿಗೆ ಸ್ತೋತ್ರ ಸಲ್ಲಲಿ! ನನ್ನ ಪ್ರಿಯ ಸಹೋದರರೇ, ಸ್ಥಿರ ಚಿತ್ತರಾಗಿರಿ, ನಿಶ್ಚಲರಾಗಿರಿ, ಪ್ರಭುವಿನ ಸೇವೆಯಲ್ಲಿ ನೀವು ಪಡುವ ಪ್ರಯಾಸ ಎಂದಿಗೂ ನಿಷ್ಪಲವಾಗದು . ಆದ್ದರಿಂದ ಅವರ ಸೇವೆಯಲ್ಲಿ ನಿರಂತರ  ಶ್ರದ್ಧೆಯುಳ್ಳವರಾಗಿರಿ.

 ಶುಭಸಂದೇಶ: ಲೂಕ 6:39-45

ಯೇಸುಸ್ವಾಮಿ ಅವರಿಗೆ ಈ ಸಾಮತಿಯನ್ನೂ ಹೇಳಿದರು: "ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೆ? ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ಆದರೂ ಪೂರ್ಣ ಶೀಕ್ಷಣ ಪಡೆದ ಪ್ರತಿಯೊಬ್ಬನೂ ಗುರುವಿನಂತೆ ಆಗುವನು. "ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು  ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, 'ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಬಿಡುತ್ತೇನೆ," ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು, ಅನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು. "ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳು ಗಿಡದಲ್ಲಿ ಅಂಜೂರ ಕೀಳುವಂತಿಲ್ಲ. ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ. ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರ ತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿ ಮಾತಾಗಿ ತುಳುಕುತ್ತದೆ.

ಮನಸಿಗೊಂದಿಷ್ಟು :  ಧರ್ಮಗಳ ಶ್ರೇಷ್ಠತೆಯ ವಿಷಯ ಬಂದಾಗ ನಾವು ಬಹಳ ಉನ್ಮಾದಕ್ಕೆ ಒಳಗಾಗುತ್ತೇವೆ. ನಮ್ಮದೇ ಮೇಲು ಎಂಬುದನ್ನು ಸಾಧಿಸಲು ವಾದಿಸುತ್ತೇವೆ. ಆದರೆ ’ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ’ ಎಂಬ ಮಾತು ನಮಗೆ ನೆನಪಿಗೆ ಬರಬೇಕು. ಒಳ್ಳೆಯ ಧರ್ಮದ, ಚಿಂತನೆಯ, ಆಶಯದ ಫಲಗಳು ನಾವು ಎಂಬುದಾಗಿ ಪ್ರತಿ ದಿನ ಬಾಳಿದಾಗ ನಾವು ಒಳ್ಳೆಯ ಮರದ ಫಲಗಳು ಎಂಬ ಸಂದೇಶ ಹೊರಡುತ್ತದೆ. ದಾರಿ ತೋರುವಂತರಾಗಲು ನಮ್ಮ ದೃಷ್ಟಿ ಸರಿಯಾಗಿರಲಿ.

ಪ್ರಶ್ನೆ : ಸದ್ಯಕ್ಕೆ ನಮ್ಮ ಕಣ್ಣಲ್ಲಿರುವ ದಿಮ್ಮಿ ಎಷ್ಟು ಗಾತ್ರದ್ದು?