Wednesday, January 14, 2026

15.01.2026 - ಇದು ಜನರಿಗೆ ಸಾಕ್ಷಿಯಾಗಿರಲಿ

 ಮೊದಲನೇ ವಾಚನ: 1 ಸಮುವೇಲ 4: 1-11



ಇಸ್ರಯೇಲರು ಫಿಲಿಷ್ಟಿಯರಿಗೆ ವಿರುದ್ಧ ಯುದ್ಧಕ್ಕೆ ಹೊರಟು ಎಬೆನೆಜೆರಿನ ಸವಿೂಪದಲ್ಲಿ ಪಾಳೆಯ ಮಾಡಿಕೊಂಡರು. ಫಿಲಿಷ್ಟಿಯರು ಬಂದು ಅಫೇಕಿನಲ್ಲಿ ಇಳಿದುಕೊಂಡರು. ಇವರು ಇಸ್ರಯೇಲರಿಗೆ ಎದುರಾಗಿ ವ್ಯೂಹಕಟ್ಟಿ ಯುದ್ಧ ಮಾಡಿದರು. ಇಸ್ರಯೇಲರು ಸೋತರು. ರಣರಂಗದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಇಸ್ರಯೇಲರನ್ನು ಫಿಲಿಷ್ಟಿಯರು ಸಂಹರಿಸಿದರು. ಇಸ್ರಯೇಲರು ತಮ್ಮ ಪಾಳೆಯಕ್ಕೆ ಹಿಂದಿರುಗಿದ ಮೇಲೆ ಅವರೊಡನೆ ಅವರ ಹಿರಿಯರು, “ಸರ್ವೇಶ್ವರ ಈ ದಿನ ನಮ್ಮನ್ನು ಫಿಲಿಷ್ಟಿಯರಿಂದ ಅಪಜಯಪಡಿಸಿದ್ದೇಕೆ? ಶಿಲೋವಿನಿಂದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ತರೋಣ; ಅವರು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಯಿಂದ ನಮ್ಮನ್ನು ರಕ್ಷಿಸಲಿ,” ಎಂದು ಸಮಾಲೋಚಿಸಿದರು. ಅಂತೆಯೇ ಜನರನ್ನು ಕಳುಹಿಸಿ ಕೆರೂಬಿಗಳ ಮಧ್ಯದಲ್ಲಿ ಆಸೀನರಾಗಿರುವ ಸೇನಾಧೀಶ್ವರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ತರಿಸಿದರು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿ, ಫೀನೆಹಾಸ್ ಎಂಬವರು ದೇವರ ಒಡಂಬಡಿಕೆಯ ಮಂಜೂಷದ ಸಂಗಡ ಇದ್ದರು. ಸರ್ವೇಶ್ವರನ ಒಡಂಬಡಿಕೆಯ ಮಂಜೂಷ ಪಾಳೆಯಕ್ಕೆ ಬಂದಾಗ ಇಸ್ರಯೇಲರೆಲ್ಲರೂ ಭೂಮಿ ಬಿರಿಯುವಷ್ಟು ಗಟ್ಟಿಯಾಗಿ ಜಯಕಾರ ಮಾಡಿದರು. ಫಿಲಿಷ್ಟಿಯರು ಇದನ್ನು ಕೇಳಿ, “ಹಿಬ್ರಿಯರ ಪಾಳೆಯದಲ್ಲಿ ಇಂಥ ಆರ್ಭಟಕ್ಕೆ ಏನು ಕಾರಣ?” ಎಂದು ವಿಚಾರಿಸಿದರು. ಸರ್ವೇಶ್ವರನ ಮಂಜೂಷವು ಪಾಳೆಯಕ್ಕೆ ಬಂದದ್ದೇ ಕಾರಣವೆಂದು ಗೊತ್ತಾಯಿತು. “ದೇವರು ಇವರ ಪಾಳೆಯಕ್ಕೆ ಬಂದಿದ್ದಾರಂತೆ!” ಎಂದುಕೊಂಡು ಫಿಲಿಷ್ಟಿಯರು ಬಹಳವಾಗಿ ಭಯಪಟ್ಟರು. “ಅಯ್ಯೋ, ಹಿಂದೆ ಹೀಗಿರಲಿಲ್ಲ. ಅಕಟಾ, ಪ್ರತಾಪವುಳ್ಳ ಈ ದೇವರುಗಳ ಕೈಯಿಂದ ನಮ್ಮನ್ನು ಬಿಡಿಸುವವರಾರು? ಈಜಿಪ್ಟರನ್ನು ಅರಣ್ಯದಲ್ಲಿ ಸಂಪೂರ್ಣವಾಗಿ ನಾಶಮಾಡಿಬಿಟ್ಟ ದೇವರುಗಳು ಇವರೇ ಅಲ್ಲವೆ? ಫಿಲಿಷ್ಟಿಯರೇ, ಧೈರ್ಯಗೊಳ್ಳಿ; ಶೂರರಾಗಿರಿ! ಇಲ್ಲವಾದರೆ ನಿಮಗೆ ಗುಲಾಮರಾಗಿದ್ದ ಹಿಬ್ರಿಯರಿಗೆ ನೀವೇ ಗುಲಾಮರಾದೀರಿ; ಆದಕಾರಣ ಶೌರ್ಯದಿಂದ ಯುದ್ಧಮಾಡಿ!” ಎಂದು ಹೇಳಿಕೊಂಡು ಯುದ್ಧಮಾಡಿದರು. ಇಸ್ರಯೇಲರು ಸೋತು ತಮ್ಮ ತಮ್ಮ ಮನೆಗಳಿಗೆ ಓಡಿಹೋದರು. ಮಹಾ ಸಂಹಾರವಾಯಿತು; ಇಸ್ರಯೇಲರಲ್ಲಿ ಮೂವತ್ತು ಸಾವಿರ ಕಾಲಾಳುಗಳು ಮಡಿದರು. ದೇವರ ಮಂಜೂಷ ಶತ್ರುವಶವಾಯಿತು. ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ ಹತರಾದರು.


ಕೀರ್ತನೆ: 44:10-11, 14-15, 24-25
ಶ್ಲೋಕ: ಪ್ರಭೂ, ನಿನ್ನಚಲ ಪ್ರೇಮದಿಂದ ನಮ್ಮನು ಉದ್ಧರಿಸು 

ಶುಭಸಂದೇಶ: ಮಾರ್ಕ 1:40-45



ಒಮ್ಮೆ ಕುಷ್ಠರೋಗಿಯೊಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, ಮೊಣಕಾಲೂರಿ, “ತಾವು ಮನಸ್ಸು ಮಾಡಿದ್ದಲ್ಲಿ ನನ್ನನ್ನು ಗುಣ ಮಾಡಬಲ್ಲಿರಿ,” ಎಂದು ದೈನ್ಯದಿಂದ ಬೇಡಿಕೊಂಡನು. ಯೇಸುವಿನ ಮನ ಕರಗಿತು. ಅವರು ಕೈಚಾಚಿ, ಕುಷ್ಠರೋಗಿಯನ್ನು ಮುಟ್ಟಿ, “ಖಂಡಿತವಾಗಿ ನನಗೆ ಮನಸ್ಸಿದೆ, ನಿನಗೆ ಗುಣವಾಗಲಿ,” ಎಂದರು. ತಕ್ಷಣ ಅವನ ಕುಷ್ಠವು ಮಾಯವಾಯಿತು. ಅವನು ಗುಣಹೊಂದಿದನು. ಯೇಸು ಅವನಿಗೆ, “ಎಚ್ಚರಿಕೆ! ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು. ಯೇಸು ಅವನಿಗೆ, “ಎಚ್ಚರಿಕೆ! ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು. ಆದರೆ ಅವನು ಹೋಗಿ ಈ ಸಮಾಚಾರವನ್ನು ಎಲ್ಲೆಲ್ಲೂ ಸಾರಿದನು. ಈ ಕಾರಣ ಯೇಸು ಬಹಿರಂಗವಾಗಿ ಯಾವ ಪಟ್ಟಣದೊಳಕ್ಕೂ ಹೋಗಲು ಆಗಲಿಲ್ಲ. ಆದುದರಿಂದ ನಿರ್ಜನ ಪ್ರದೇಶಗಳಲ್ಲೇ ಇರತೊಡಗಿದರು. ಆದರೂ ಜನರು ನಾಲ್ದೆಸೆಗಳಿಂದ ಅವರು ಇದ್ದೆಡೆಗೆ ಬರುತ್ತಲೇ ಇದ್ದರು.

14.01.2026 - ನಾನಾ ರೋಗಗಳಿಂದ ನರಳುತ್ತಿದ್ದವರನ್ನು ಯೇಸು ಗುಣಪಡಿಸಿದರು

 


 
ಮೊದಲನೆಯ ವಾಚನ - ಸಮುವೇಲನ  ಮೊದಲನೆಯ  ಗ್ರಂಥ - 3:1-10, 19-20


ಬಾಲಕ ಸಮುವೇಲನು ಏಲಿಯ ನೇತೃತ್ವದಲ್ಲಿ ಸರ್ವೇಶ್ವರನ ಸೇವೆ ಮಾಡುತ್ತಾ ಬಂದನು. ಆ ಕಾಲದಲ್ಲಿ ದೈವೋಕ್ತಿಗಳು ವಿರಳ ಆಗಿದ್ದವು;  ದೇವದರ್ಶನಗಳು ಅಪರೂಪವಾಗಿ  ಬಿಟ್ಟಿದ್ದವು. ಏಲಿಯ ಕಣ್ಣುಗಳು ದಿನದಿನಕ್ಕೂ ಮೊಬ್ಬಾಗುತ್ತಾ ಬಂದು  ಕುರುಡನಂಥಾಗಿ ಬಿಟ್ಟಿದ್ದನು.  ಒಂದು ರಾತ್ರಿ ಅವನು ತನ್ನ ಕೋಣೆಯಲ್ಲಿ ಮಲಗಿದ್ದನು.  ಸಮುವೇಲನು ಸರ್ವೇಶ್ವರನ ಮಂದಿರದಲ್ಲಿ, ದೇವರ ಮಂಜೂಷವಿದ್ದ ಸ್ಥಳದಲ್ಲಿ ಮಲಗಿದ್ದನು. ದೇವರ ದೀಪ ಇನ್ನೂ ಉರಿಯುತ್ತಿತ್ತು. ಆಗ ಸರ್ವೇಶ್ವರಸ್ವಾಮಿ ಸಮುವೇಲನನ್ನು ಕರೆದರು. ಸಮುವೇಲನು ಇಗೋ ಬಂದೆ ಎಂದು ಉತ್ತರಕೊಟ್ಟು, ಒಡನೆ ಏಲಿಯ ಬಳಿಗೆ ಹೋಗಿ, ಇಗೋ ಬಂದಿದ್ದೇನೆ;  ನೀವು ನನ್ನನ್ನು ಕರೆದಿರಲ್ಲವೇ? ಎಂದನು. ಏಲಿ, ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ ಎಂದನು. ಸಮುವೇಲನು ಹೋಗಿ ಮಲಗಿದನು. ಸರ್ವೇಶ್ವರ ಪುನಃ ಸಮುವೇಲನೇ ಎಂದು ಕರೆದರು.  ಸಮುವೇಲನು ಕೂಡಲೆ ಎದ್ದು ಏಲಿಯ ಬಳಿಗೆ ಹೋಗಿ, ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ? ಎಂದನು.  ಅವನು, ಮಗನೇ, ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ, ಎಂದನು. ಈವರೆಗೂ ಸಮುವೇಲನಿಗೆ ಸರ್ವೇಶ್ವರನ ನೇರ ಅನುಭವ ಆಗಿರಲಿಲ್ಲ.  ದೇವರ ವಾಣಿ ಅವನಿಗೆ ಕೇಳಿಸಿರಲಿಲ್ಲ. ಸರ್ವೇಶ್ವರ ಸಮುವೇಲನನ್ನು ಮೂರನೆಯ ಸಾರಿ ಕರೆದರು. ಅವನು ತಟ್ಟನೆ ಏಲಿಯ ಹತ್ತಿರ ಓಡಿ, ಇಗೋ, ಬಂದಿದ್ದೇನೆ, ನನ್ನನ್ನು ಕರೆದಿರಲ್ಲಾ, ಎಂದನು. ಹುಡುಗನನ್ನು ಕರೆದವರು ಸರ್ವೇಶ್ವರನೇ ಎಂದು ಏಲಿಗೆ ತಿಳಿಯಿತು.  ಅವನು ಸಮುವೇಲನಿಗೆ, ಹೋಗಿ ಮಲಗಿಕೋ;  ಮತ್ತೆ ಅವರು ನಿನ್ನನ್ನು ಕರೆದರೆ, 'ಸರ್ವೇಶ್ವರಾ ಅಪ್ಪಣೆಯಾಗಲಿ;  ತಮ್ಮ ದಾಸ ಕಾದಿದ್ದಾನೆ,' ಎಂದು ಹೇಳು, ಎಂದನು. ಸಮುವೇಲನು ಹಿಂದಿರುಗಿ ಹೋಗಿ ತನ್ನ ಸ್ಥಳದಲ್ಲೇ ಮಲಗಿಕೊಂಡನು. ಸರ್ವೇಶ್ವರ ಪ್ರತ್ಯಕ್ಷರಾಗಿ ಹಿಂದಿನಂತೆಯೇ, ಸಮುವೆಲನೇ, ಸಮುವೇಲನೇ, ಎಂದರು.  ಸಮುವೇಲನು, ಅಪ್ಪಣೆಯಾಗಲಿ, ತಮ್ಮ ದಾಸನಾದ ನಾನು ಕಾದಿದ್ದೇನೆ, ಎಂದನು.  ಸಮುವೇಲನು ದೊಡ್ಡವನಾಗುತ್ತಾ ಬಂದನು. ಸರ್ವೇಶ್ವರ ಅವನೊಡನೆ ಇದ್ದರು. ಆದುದರಿಂದಲೇ ಅವನು ಪ್ರವಾದನೆ ಮಾಡಿದವುಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಸರ್ವೇಶ್ವರ ಅವನನ್ನು ತಮ್ಮ ಪ್ರವಾದಿಯನ್ನಾಗಿ ನೇಮಿಸಿಕೊಂಡರು. ಈ ಸಂಗತಿ ದಾನ್ ಊರಿನಿಂದ ಬೇರ್ಷೆಬದವರೆಗಿದ್ದ ಎಲ್ಲಾ ಇಸ್ರಯೇಲರಿಗೆ ತಿಳಿಯಿತು.

ಪ್ರಭುವಿನ  ವಾಕ್ಯ

ಕೀರ್ತನೆ 40:1, 4, 6-9

ಶ್ಲೋಕ:  ಪ್ರಭೂ, ನಿನ್ನ  ಚಿತ್ತಾನುಸಾರ  ನಡೆವುದೇ ನನಗೆ  ಪರಮಾವೇಶ


1. ಕಾದಿದ್ದೆನು, ಪ್ರಭುವಿಗಾಗಿ ಕಾದಿದ್ದೆನು
ಕೊನೆಗಾತ ನನ್ನತ್ತ ಬಾಗಿ ಕಿವಿಗೊಟ್ಟನು
ಪ್ರಭುವಿನಲ್ಲೆ ಭರವಸೆ ಇಟ್ಟು ನಡೆವಾತನು ಧನ್ಯನು
ಗರ್ವಿಗಳನು, ಸುಳ್ಳುದೇವರನು, ಹಿಂಬಾಲಿಸನವನು. ಶ್ಲೋಕ

2.  ಬೇಡವಾದವು ನಿನಗೆ ಯಜ್ಞಾರ್ಪಣೆ, ಬಲಿಕಾಣಿಕೆ
ಬಯಸಿಲ್ಲ ನೀ ಹೋಮವನೆ, ಪರಿಹಾರಕ ಬಲಿಯನೆ
ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ. ಶ್ಲೋಕ
 
3.  ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ
ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ?
ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ
ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ”. ಶ್ಲೋಕ
 
4.  ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ
ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ. ಶ್ಲೋಕ


ಘೋಷಣೆ : ಕೀರ್ತನೆ 111: 07-08

ಅಲ್ಲೆಲೂಯ, ಅಲ್ಲೆಲೂಯ!
ನೀತಿ ಸತ್ಯತೆ ಯುಳ್ಳವು ಆತನ ಸತ್ಕಾರ್ಯಗಳು
ಸುಸ್ಥಿರವಾದವು ಆತನ ನಿಯಮ ನಿಬಂಧನೆಗಳು
ಯುಗಯುಗಾಂತರಕ್ಕು ದೃಢವಾಗಿರುವುವು
ಅಲ್ಲೆಲೂಯ!

ಶುಭಸಂದೇಶ ವಾಚನ : ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1:29-39


ಆ ಕಾಲದಲ್ಲಿ ಯೇಸು ಪ್ರಾರ್ಥನಾ ಮಂದಿರದಿಂದ ಹೊರಟು ಯಾಕೋಬ ಮತ್ತು ಯೊವಾನ್ನನ ಸಂಗಡ ಸಿಮೋನ ಮತ್ತು ಅಂದ್ರೇಯನ ಮನೆಗೆ ಹೋದರು. ಸಿಮೋನನ ಅತ್ತೆ ಜ್ವರದಿಂದ ಮಲಗಿದ್ದಳು. ಇದನ್ನು ಯೇಸುವಿಗೆ ತಿಳಿಸಿದರು. ಯೇಸು ಆಕೆಯ ಬಳಿಗೆ ಹೋಗಿ ಕೈಹಿಡಿದು ಎಬ್ಬಿಸಿದರು. ಜ್ವರ ಬಿಟ್ಟುಹೋಯಿತು. ಆಕೆ ಅವರೆಲ್ಲರನ್ನು ಸತ್ಕರಿಸಿದಳು. ಸಂಜೆ ಸೂರ್ಯ ಮುಳುಗಿದ ಮೇಲೆ ಜನರು ರೋಗಿಗಳನ್ನು ದೆವ್ವ ಹಿಡಿದವರನ್ನೂ ಯೇಸುವಿನ ಬಳಿಗೆ ಕರೆತಂದರು. ಊರಿಗೆ ಊರೇ ಆ ಮನೆಯ ಬಾಗಿಲಲ್ಲಿ ನೆರೆಯಿತು. ನಾನಾ ರೋಗಗಳಿಂದ ನರಳುತ್ತಿದ್ದವರನ್ನು ಯೇಸು ಗುಣಪಡಿಸಿದರು. ದೆವ್ವ ಹಿಡಿದವರಿಂದ ದೆವ್ವ ಬಿಡಿಸಿದರು, ತಾವು ಯಾರೆಂಬುದನ್ನು ದೆವ್ವಗಳು ಅರಿತಿದ್ದುದರಿಂದ ಯೇಸು ಅವುಗಳಿಗೆ ಮಾತನಾಡಲು ಅವಕಾಶಕೊಡಲಿಲ್ಲ. ಮುಂಜಾನೆ ಬೆಳಕು ಹರಿಯುವ ಮುನ್ನ ಯೇಸು ಎದ್ದು ಏಕಾಂತ ಪ್ರದೇಶಕ್ಕೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದರು. ಇತ್ತ, ಸಿಮೋನನು ಅವನ ಜೊತೆಗಾರರು ಯೇಸುವನ್ನು ಹುಡುಕಿಕೊಂಡು ಹೋದರು. ಅವರನ್ನು ಕಂಡಕೂಡಲೇ, ಎಲ್ಲರು ತಮ್ಮನ್ನೇ ಹುಡುಕುತ್ತಿದ್ದಾರೆ, ಎಂದು ತಿಳಿಸಿದರು. ಅದಕ್ಕೆ ಯೇಸು, ಅಕ್ಕಪಕ್ಕದ ಊರುಗಳಿಗೆ ಹೋಗೋಣ. ಅಲ್ಲೂ ನಾನು ಶುಭಸಂದೇಶ ಸಾರಬೇಕು. ನಾನು ಬಂದಿರುವುದು ಈ ಉದ್ದೇಶಕ್ಕಾಗಿಯೇ, ಎಂದರು. ಅನಂತರ ಯೇಸು ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾಮಂದಿರಗಳಲ್ಲಿ ಪ್ರಬೋಧಿಸುತ್ತಾ ದೆವ್ವಗಳನ್ನು ಬಿಡಿಸುತ್ತಾ ಬಂದರು.

- ಪ್ರಭುವಿನ  ಶುಭಸಂದೇಶ