22.09.226 - IIಮಂಗಳವಾರII ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣತಮ್ಮಂದಿರು


 ಮೊದಲನೇ ವಾಚನ: ಜ್ಞಾನೋಕ್ತಿಗಳು  21:1-6, 10-13

ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ. ಮಾನವರ ನಡವಳಿಕೆ ಅವರವರ ನೋಟಕ್ಕೆ ನೇರ; ಅವರ ಅಂತರಂಗವನ್ನು ವೀಕ್ಷಿಸಬಲ್ಲವನೋ ಸರ್ವೇಶ್ವರ. ನ್ಯಾಯನೀತಿಗಳು ಬಲಿಯರ್ಪಣೆಗಿಂತ ಶ್ರೇಷ್ಠ; ಸರ್ವೇಶ್ವರನಿಗೆ ಅವು ಬಲು ಇಷ್ಟ. ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು. ಶ್ರಮಜೀವಿಗಳ ಯೋಜನೆಯಿಂದ ಸಮೃದ್ಧಿ; ತಾಳ್ಮೆಯಿಲ್ಲದ ತ್ವರೆಯಿಂದ ಅಧೋಗತಿ. ಹಬೆಯಂತೆ ನಾಪತ್ತೆ ಸುಳ್ಳಿನಿಂದ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು. ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ. ಕುಚೋದ್ಯನಿಗೆ ದಂಡನೆಯಾದರೆ ಮುಗ್ಧನಿಗೆ ಜ್ಞಾನಗಳಿಕೆ; ಜ್ಞಾನಿಗೆ ಶಿಕ್ಷೆಯಾದರೆ ತಾನೆ ಹೊಂದುವನು ತಿಳುವಳಿಕೆ. ಸತ್ಯಸ್ವರೂಪನ ದೃಷ್ಟಿ ದುಷ್ಟರ ಮನೆಯ ಮೇಲೆ; ಆ ದುರುಳರನ್ನು ದಬ್ಬಿಬಿಡುವನು ಕೇಡಿಗೆ. ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ, ನೀನೇ ಮೊರೆಯಿಡುವಾಗ ಉತ್ತರಕೊಡುವವರಾರು ನಿನಗೆ?

ಕೀರ್ತನೆ: 119:1, 27, 30, 34, 35, 44

ಶ್ಲೋಕ: ಎನ್ನ ನಡೆಸು ಪ್ರಭೂ, ನಿನ್ನ ಆಜ್ಞಮಾರ್ಗದಲಿ 

1.  ಪ್ರಭುವಿನ ಶಾಸ್ತ್ರಾನುಸಾರ ನಡೆವವರು ಧನ್ಯರು|
ದೋಷರಹಿತ ಮಾರ್ಗದಲಿ ನಡೆವವರು ಧನ್ಯರು||
ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ|  
ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ||
ಶ್ಲೋಕ

2.  ಆರಿಸಿಕೊಂಡಿರುವೆನು ನಾನು ಸತ್ಯ ಮಾರ್ಗವನು|
ಇರಿಸಿಕೊಂಡಿಹನು ಕಣ್ಮುಂದೆ ನಿನ್ನ ವಿಧಿಗಳನು||
ನೀಡೆನಗೆ ನಿನ್ನ ಶಾಸ್ತ್ರದ ಅರಿವನು|
ಪೂರ್ಣ  ಮನದಿಂದ ಆಚರಿಸುವೆನದನು||
ಶ್ಲೋಕ

3.  ಎನ್ನ ನಡೆಸು ನಿನ್ನ ಆಜ್ಞಾಮಾರ್ಗದಲಿ|
ಪಡೆಯುವೆ ಹರ್ಷಾನಂದವನು ಅದರಲಿ||
ಸತತ ನಿನ್ನ ಧರ್ಮಶಾಸ್ತ್ರವನು ಕೈಗೊಳ್ಳುವೆ|
ಯುಗಯುಗಾಂತರಕು ಅದನು ಪರಿಪಾಲಿಸುವೆ||
ಶ್ಲೋಕ

ಘೋಷಣೆ
(ಯೊವಾನ್ನ 10: 27)
ಅಲ್ಲೆಲೂಯ, ಅಲ್ಲೆಲೂಯ.
ನನ್ನ  ಕುರಿಗಳಾದರೊ  ನನ್ನ  ಸ್ವರವನ್ನು  ಗುರುತಿಸುತ್ತವೆ | ನಾನು  ಅವನ್ನು  ಬಲ್ಲೆನು;  ಅವು  ನನ್ನನ್ನು  ಹಿಂಬಾಲಿಸುತ್ತವೆ ||
ಅಲ್ಲೆಲೂಯ.

ಶುಸಂದೇಶ: ಲೂಕ 8:19-21


ಯೇಸುಸ್ವಾಮಿಯ ತಾಯಿ ಹಾಗೂ ಸಹೋದರರು ಯೇಸು ಇದ್ದೆಡೆಗೆ ಬಂದರು. ಆದರೆ ಜನಸಂದಣಿಯ ನಿಮಿತ್ತ ಹತ್ತಿರಕ್ಕೆ ಬರಲಾಗಲಿಲ್ಲ.  ಯೇಸುವಿಗೆ, “ನಿಮ್ಮ ತಾಯಿಯು ಮತ್ತು ಸಹೋದರರು ನಿಮ್ಮನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ,” ಎಂದು ತಿಳಿಸಲಾಯಿತು.  ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣತಮ್ಮಂದಿರು,” ಎಂದರು.

No comments:

Post a Comment

22.09.226 - IIಮಂಗಳವಾರII ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣತಮ್ಮಂದಿರು

  ಮೊದಲನೇ ವಾಚನ: ಜ್ಞಾನೋಕ್ತಿಗಳು   21:1-6, 10-13 ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ. ಮಾನವರ ನಡವಳಿಕೆ ಅವರವರ ನೋಟಕ...