ಮೊದಲನೇ ವಾಚನ: ತೊಬೀತ 6:10; 7:1, 9-14; 8:4-8
ದೇವದೂತ ರಫಯೇಲನು ತೊಬಿಯಾಸನಿಗೆ “ಸಹೋದರ ತೊಬಿಯಾಸನೇ,” ಎನ್ನಲು ತೊಬಿಯಾಸನು, “ಏನಯ್ಯಾ?”, ಎಂದು ವಿಚಾರಿಸಿದನು. ರಫಯೇಲನು, “ಈ ರಾತ್ರಿ ನಿನ್ನ ಬಂಧುವಾದ ರಾಗುಯೇಲನ ಮನೆಯಲ್ಲಿ ನಾವು ತಂಗಬೇಕು. ಆತನಿಗೆ ಸಾರಾ ಎಂಬ ಮಗಳಿದ್ದಾಳೆ. ಎಕ್ಬತಾನವನ್ನು ಪ್ರವೇಶಿಸುತ್ತಿದ್ದಂತೆಯೇ ತೊಬಿಯಾಸನು, “ಗೆಳೆಯಾ, ಅಜರ್ಯನೇ, ನನ್ನ ಬಂಧು ರಾಗುಯೇಲನ ಮನೆಗೆ ನನ್ನನ್ನು ಕೂಡಲೆ ಕರೆದುಕೊಂಡು ಹೋಗು,” ಎಂದನು. ಅಂತೆಯೇ ರಫಯೇಲನು ಅವನನ್ನು ರಾಗುಯೇಲನ ಮನೆಗೆ ಕರೆದೊಯ್ದನು. ರಾಗುಯೇಲನು ತನ್ನ ಮನೆಯ ಅಂಗಳದ ಬಾಗಿಲ ಬಳಿ ಕುಳಿತಿರುವುದನ್ನು ಕಂಡನು. ಅವನನ್ನು ಇವರಿಬ್ಬರೂ ವಂದಿಸಿದರು. ಅದಕ್ಕೆ ಅವನು, “ಗೆಳೆಯರೇ, ಬನ್ನಿ, ನಮಸ್ಕಾರ, ಆರೋಗ್ಯವೇ,” ಎಂದು ಸ್ವಾಗತಿಸಿ ಮನೆಯೊಳಕ್ಕೆ ಕರೆದುಕೊಂಡು ಹೋದನು. ಇದನ್ನು ಕೇಳಿಸಿಕೊಂಡು ರಾಗುಯೇಲನು ಯುವಕನಿಗೆ, “ಮೊತ್ತಮೊದಲು ಈ ರಾತ್ರಿ ಊಟಮಾಡಿ ವಿಶ್ರಮಿಸು. ನನ್ನ ಮಗಳು ಸಾರಳ ಕೈ ಹಿಡಿಯಲು ನಿನಗಲ್ಲದೆ ಬೇರಾರಿಗೂ ಹಕ್ಕಿಲ್ಲ. ನೀನು ನಮ್ಮ ಹತ್ತಿರದ ನೆಂಟನಾದುದರಿಂದ ಆಕೆಯನ್ನು ಬೇರೆ ಯಾರಿಗೂ ಕೊಡುವ ಸ್ವಾತಂತ್ರ್ಯ ನನಗಿಲ್ಲ. ಆದರೂ ಮಗೂ, ನಾನು ನಿನಗೆ ನಿಜಸ್ಥಿತಿಯನ್ನು ಹೇಳಬೇಕು. ಬಿಚ್ಚುಮನಸ್ಸಿನಿಂದ ಹೇಳುತ್ತೇನೆ ಕೇಳು. ನಾನು ಈಗಾಗಲೇ ಆಕೆಯನ್ನು ನನ್ನ ಬಳಗದವರಲ್ಲಿ ಏಳು ವ್ಯಕ್ತಿಗಳಿಗೆ ಮದುವೆಮಾಡಿಕೊಟ್ಟೆ. ಆದರೆ ಅವರೆಲ್ಲರು ಅವಳ ಕೊಠಡಿಗೆ ಹೋದ ಮೊದಲ ರಾತ್ರಿಯೇ ಸತ್ತುಹೋದರು. ಆದರೆ ಮಗೂ, ಸದ್ಯಕ್ಕೆ ಊಟ ಮುಗಿಸು. ಸರ್ವೇಶ್ವರ ನಿನಗೆ ಒಳಿತನ್ನೇ ಮಾಡುತ್ತಾರೆ,” ಎಂದನು. ಅದಕ್ಕೆ ತೊಬಿಯಾಸನು, “ನೀವು ನಿಮ್ಮ ನಿರ್ಧಾರವನ್ನು ತಿಳಿಸುವ ತನಕ ನಾನು ಅನ್ನ ಪಾನವೇನನ್ನೂ ಮುಟ್ಟುವುದಿಲ್ಲ,” ಎಂದನು. ಆದುದರಿಂದ ರಾಗುಯೇಲನು, “ಆಗಲಿ, ಮೋಶೆಯ ಗ್ರಂಥದಲ್ಲಿರುವ ನಿಯಮದ ಪ್ರಕಾರ ಆಕೆ ನಿನಗೇ ಮೀಸಲು. ಇದು ಪರಲೋಕದಲ್ಲೇ ನಿಶ್ಚಯವಾಗಿದೆ. ಇವಳು ನಿನ್ನ ಸಂಬಂಧಿಕಳು. ಇಂದಿನಿಂದ ಈಕೆ ನಿನ್ನವಳೇ, ನೀನು ಆಕೆಗೆ ಸೇರಿದವನೇ. ಇಂದಿಗೂ ಎಂದೆಂದಿಗೂ ಆಕೆ ನಿನ್ನ ಪತ್ನಿ. ಮಗೂ, ಪರಲೋಕದ ಸರ್ವೇಶ್ವರ ಈ ರಾತ್ರಿ ನಿಮ್ಮಿಬ್ಬರನ್ನೂ ಕಾಪಾಡಿ, ಮುನ್ನಡೆಸಲಿ; ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ!” ಎಂದನು. ಬಳಿಕ ರಾಗುಯೇಲನು ತನ್ನ ಮಗಳನ್ನು ಕರೆಸಿದನು. ಅವಳು ಬಂದಾಗ, ಅವಳ ಕೈಹಿಡಿದು ತೊಬಿಯಾಸನಿಗೆ ಕೊಟ್ಟನು. “ಮೋಶೆಯ ಗ್ರಂಥದ ವಿಧಿನಿಯಮದ ಪ್ರಕಾರ ಈಕೆಯನ್ನು ನಿನ್ನ ಹೆಂಡತಿಯನ್ನಾಗಿ ಸ್ವೀಕರಿಸು. ನಿನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗು. ಪರಲೋಕದ ದೇವರು ಸುಖಕರ ಪ್ರಯಾಣವನ್ನೂ ಶಾಂತಿಯನ್ನೂ ಅನುಗ್ರಹಿಸಲಿ!” ಎಂದು ಹಾರೈಸಿದನು. ತದನಂತರ ಸಾರಳ ತಾಯಿಯನ್ನು ಕರೆದು, ಸುರುಳಿಯನ್ನು ತರುವಂತೆ ಆಜ್ಞಾಪಿಸಿದನು. ಅದರಲ್ಲಿ ಮೋಶೆಯ ಧರ್ಮಶಾಸ್ತ್ರದ ನಿಯಮಕ್ಕೆ ಅನುಸಾರ ಸಾರಳನ್ನು ತೊಬಿಯಾಸನಿಗೆ ಮದುವೆ ಮಾಡಿಕೊಡಲಾಗಿದೆ ಎಂಬ ವಿವಾಹ ಒಪ್ಪಂದವನ್ನು ಬರೆದುಕೊಟ್ಟನು. ಸಾರಳ ತಂದೆತಾಯಿಗಳು ಶಯನ ಕೊಠಡಿಯ ಬಾಗಿಲನ್ನು ಮುಚ್ಚಿ ಹೊರಟು ಹೋದ ಮೇಲೆ, ತೊಬಿಯಾಸನು ಹಾಸಿಗೆಯಿಂದೆದ್ದು ಸಾರಳನ್ನು ಉದ್ದೇಶಿಸಿ, “ಪ್ರಿಯಳೇ, ಎದ್ದೇಳು, ಪ್ರಾರ್ಥಿಸೋಣ; ನಮಗೆ ಕರುಣೆಯನ್ನೂ ರಕ್ಷಣೆಯನ್ನೂ ದಯಪಾಲಿಸಲೆಂದು ಸರ್ವೇಶ್ವರನನ್ನು ಬೇಡಿಕೊಳ್ಳೋಣ,” ಎಂದನು. ಸಾರಳು ಎದ್ದು ನಿಂತಳು. ಅವರಿಬ್ಬರೂ ಪ್ರಾರ್ಥನೆಮಾಡಿ, ಸರ್ವೇಶ್ವರ ತಮ್ಮನ್ನು ಸುರಕ್ಷಿತವಾಗಿಡುವಂತೆ ಬಿನ್ನಯಿಸಿಕೊಂಡರು. ತೊಬಿಯಾಸನು ಹೀಗೆಂದು ಪ್ರಾರ್ಥಿಸಿದನು: “ನಮ್ಮ ಪೂರ್ವಜರ ದೇವರೇ, ನಿಮಗೆ ಸ್ತುತಿಸ್ತೋತ್ರ! ನಿಮ್ಮ ನಾಮವು ಯುಗಯುಗಾಂತರಕ್ಕೂ ಪೂಜಿತ ಸ್ವರ್ಗಲೋಕವು, ಸೃಷ್ಟಿಸಮಸ್ತವು ಸ್ತುತಿಸಲಿ ನಿಮ್ಮನು ಸತತ. “ಆದಾಮನನ್ನು ಸೃಷ್ಟಿಸಿದಾತ ನೀವೇ ಆತನಿಗೆ ಹವ್ವಳನ್ನು ಸತಿಯಾಗಿ ಕೊಟ್ಟಿರಿ ನೀವೇ. ಕೊಟ್ಟಿರಿ ಆಕೆಯನ್ನು ಸಹಾಯಕಳನ್ನಾಗಿ, ಬೆಂಬಲವಾಗಿ. ಉಗಮವಾಯಿತು ಮಾನವಕುಲ ಇವರಿರ್ವರಿಂದಾಗಿ. ‘ಮನುಷ್ಯ ಒಂಟಿಯಾಗಿರುವುದು ಒಳಿತಲ್ಲ’ ಎಂದಿರಿ ಅವನಿಗೆ ಸರಿಬೀಳುವ ಸಹಕಾರಿಯನ್ನು ಸೃಷ್ಟಿಸಿಕೊಟ್ಟಿರಿ. “ನಾನೀಗ ನನ್ನೀ ಸೋದರಿಯನ್ನು ಸ್ವೀಕರಿಸುವುದು ಕಾಮತೃಪ್ತಿಗಾಗಿ ಅಲ್ಲ ಧರ್ಮಾನುಸಾರಕ್ಕಾಗಿಯೇ ಹೌದು. ದಯಮಾಡಿ ಕೃಪೆತೋರಿ ನಮಗೆ ನಾವಿಬ್ಬರು ವೃದ್ಧಾಪ್ಯ ಹೊಂದುವವರೆಗೆ.” ಈ ಪ್ರಾರ್ಥನೆಯ ಅಂತ್ಯದಲ್ಲಿ ಅವರಿಬ್ಬರೂ ‘ಆಮೆನ್, ಆಮೆನ್,’ ಎಂದು ಹೇಳಿ ಮಲಗಿಕೊಂಡರು.
ಕೀರ್ತನೆ 128: 1, 2-3, 4-5
ಶ್ಲೋಕ: ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು I
ಧನ್ಯನು, ಆತನ ಮಾರ್ಗಗಳಲೇ ನಡೆಯುವವನು II
ನಿನ್ನ ಕೈ ಕೆಸರಾದರೆ ಬಾಯಿ ಮೊಸರಾಗುವುದು I
ಧನ್ಯನಾಗುವೆ ನೀನು; ನಿನಗೆ ಶುಭವಾಗುವುದು II ಶ್ಲೋಕ
ಇರುವಳು ನಿನ್ನ ಪತ್ನಿ ಮನೆಯಲ್ಲಿ ಫಲಭರಿತ ದ್ರಾಕ್ಷಾಲತೆಯಂತೆ I
ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ ಓಲಿವ್ ಸಸಿಗಳಂತೆ II
ಹೊಂದುವನು ಅಂತಹ ಆಶೀರ್ವಾದವನು I ಶ್ಲೋಕ
ಪ್ರಭುವಿನಲಿ ಭಯಭಕ್ತಿಯುಳ್ಳವನು II
ಸಿಯೋನಿನಲ್ಲಿರುವ ಪ್ರಭು ನಿನ್ನನು ಆಶೀರ್ವದಿಸಲಿ I
ಜೆರುಸಲೇಮಿನ ಏಳ್ಗೆಯನು ಕಾಣು ಇಡೀ ಜೀವಮಾನದಲಿ II ಶ್ಲೋಕ
ಶುಭಸಂದೇಶ: ಮಾರ್ಕ 12: 28-34
ಆ ಕಾಲದಲ್ಲಿ ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?” ಎಂದು ಕೇಳಿದನು. ಯೇಸು ಅವನಿಗೆ, “ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. “ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,” ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು,” ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, “ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ,” ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.
No comments:
Post a Comment