ಮೊದಲನೇ ವಾಚನ: ತೊಬೀತ 12:1, 5-15, 20
ವಿವಾಹ ಮಹೋತ್ಸವ ಮುಗಿದ ಮೇಲೆ ತೊಬೀತನು ತನ್ನ ಮಗ ತೊಬಿಯಾಸನನ್ನು ಕರೆದು, “ಮಗನೇ, ನಿನ್ನ ಸಹಪ್ರಯಾಣಿಕನಿಗೆ ಸಲ್ಲಿಸಬೇಕಾದ ಹಣವನ್ನು ಗಮನಿಸು; ಒಪ್ಪಿಕೊಂಡದ್ದಕ್ಕೂ ಹೆಚ್ಚಾಗಿ ಕೊಡು,” ಎಂದು ಆಜ್ಞಾಪಿಸಿದನು. ಅಂತೆಯೇ ತೊಬಿಯಾಸನು ರಫಯೇಲನನ್ನು ಕರೆದು, “ಇಗೋ, ನೀನು ತಂದಿರುವ ಎಲ್ಲಾ ವಸ್ತುಗಳಲ್ಲಿ ಅರ್ಧಭಾಗವನ್ನು ಸಂಭಾವನೆಯಾಗಿ ತೆಗೆದುಕೊ, ಸಂತೋಷದಿಂದ ಹೋಗಿ ಬಾ,” ಎಂದನು. ದಾನವೇ ಧರ್ಮದ ಮೂಲ ಆಗ ರಫಯೇಲನು ತಂದೆ ಮಗ ಇಬ್ಬರನ್ನೂ ಪಕ್ಕಕ್ಕೆ ಕರೆದು, ಇಂತೆಂದನು: “ಎಲ್ಲಾ ಜೀವಿಗಳ ಮುಂದೆ ದೇವರು ನಿಮಗೆ ಮಾಡಿರುವ ಸಕಲ ಉಪಕಾರಗಳಿಗಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ. ಅವರ ನಾಮವನ್ನು ಭಜಿಸಿ ಹಾಡಿರಿ. ದೇವರ ಮಹತ್ಕಾರ್ಯಗಳನ್ನು ಎಲ್ಲಾ ಜನರಿಗೆ ಪ್ರಕಟಿಸಿರಿ. ಅವರಿಗೆ ವಂದನೆಯನ್ನು ಸಲ್ಲಿಸುವುದರಲ್ಲಿ ಹಿಂದಾಗಬೇಡಿ. “ರಾಜರುಗಳ ಗುಟ್ಟನ್ನು ಬಚ್ಚಿಡುವುದು ಸರಿಯಷ್ಟೆ. ಆದರೆ, ದೇವರ ಮಹತ್ಕಾರ್ಯಗಳನ್ನು ಒಪ್ಪಿಕೊಂಡು ತಕ್ಕ ಮರ್ಯಾದೆಯಿಂದ ಪ್ರಕಟಿಸುವುದು ಉಚಿತ. ಒಳಿತನ್ನು ಮಾಡುವವರ ಮೇಲೆ ಕೆಡುಕು ಜಯಗಳಿಸದು. “ಜಪತಪ, ಉಪವಾಸವ್ರತ ಇದೆಲ್ಲಾ ಒಳ್ಳೆಯದೇ. ಆದರೆ ನ್ಯಾಯನೀತಿ, ದಾನಧರ್ಮ ಅದಕ್ಕಿಂತಲೂ ಮೇಲಾದುದು! ಅನ್ಯಾಯದಿಂದ ಕೂಡಿದ ಅತುಳೈಶ್ವರ್ಯಕ್ಕಿಂತ ನೀತಿಯಿಂದ ಕೂಡಿದ ಕಿಂಚಿತ್ತು ಲೇಸು. ಬೆಳ್ಳಿಬಂಗಾರವನ್ನು ಕೂಡಿಸಿಡುವುದಕ್ಕಿಂತ ದಾನಧರ್ಮ ಮಾಡುವುದು ಲೇಸು. ಏಕೆಂದರೆ ದಾನಧರ್ಮವು ಮರಣದಿಂದ ರಕ್ಷಿಸುತ್ತದೆ, ಪಾಪದಿಂದ ಶುದ್ಧೀಕರಿಸುತ್ತದೆ. ದಾನಮಾಡುವವರ ಜೀವನ ಸೌಭಾಗ್ಯ ತುಂಬಿದ ಜೀವನ. ಪಾಪಮಾಡುವವರು, ಕೇಡುಮಾಡುವವರು ತಮಗೆ ತಾವೇ ಕಟು ವಿರೋಧಿಗಳು. “ನಾನೀಗ ನಿಮಗೆ ಮುಚ್ಚುಮರೆ ಇಲ್ಲದೆ ಸತ್ಯಾಂಶವನ್ನು ಬಯಲು ಮಾಡುತ್ತೇನೆ. ಈಗಾಗಲೇ ನಾನು ನಿಮಗೆ ಸ್ಪಷ್ಟಪಡಿಸಿರುವಂತೆ, ರಾಜನ ಗುಟ್ಟನ್ನು ಬಚ್ಚಿಡುವುದೇನೋ ಸರಿಯಷ್ಟೆ. ಆದರೆ ದೇವರ ಮಹತ್ಕಾರ್ಯಗಳನ್ನು ತಕ್ಕ ಮರ್ಯಾದೆಯಿಂದ ಪ್ರಕಟಿಸಬೇಕು. ಅಂತೆಯೇ, ನೀನೂ ಮತ್ತು ಸಾರಲೂ ಪ್ರಾರ್ಥನೆ ಮಾಡಿದಾಗ, ಸತ್ತವರನ್ನು ನೀನು ಸಮಾಧಿ ಮಾಡಿದಾಗ, ಮಹಿಮಾಭರಿತ ಸರ್ವೇಶ್ವರನ ಸಮ್ಮುಖದಲ್ಲಿ ಅದನ್ನು ವರದಿಮಾಡಿದವನು ನಾನೇ. ಅಂತೆಯೇ ನಿನ್ನ ಊಟವನ್ನು ಬಿಟ್ಟು, ಎದ್ದು ಹೋಗಿ ಸತ್ತವನನ್ನು ಸಮಾಧಿಮಾಡಿದಾಗ ನಿನ್ನನ್ನು ಪರೀಕ್ಷಿಸಲು ಕಳುಹಿಸಲಾದವನು ನಾನೇ. ಅದೇ ಪ್ರಕಾರ, ನಿನ್ನನ್ನೂ ನಿನ್ನ ಸೊಸೆ ಸಾರಳನ್ನೂ ಗುಣಪಡಿಸಲು ದೇವರೇ ನನ್ನನ್ನು ಕಳುಹಿಸಿದರು. ನಾನೇ ರಫಯೇಲ್. ಮಹಿಮಾಭರಿತ ಸರ್ವೇಶ್ವರನ ಸಮ್ಮುಖದಲ್ಲಿ ಸೇವಾರ್ಥಿಗಳಾಗಿ ಸಿದ್ಧರಿರುವ ಏಳು ದೂತರಲ್ಲಿ ನಾನೂ ಒಬ್ಬನು,” ಎಂದನು. ಈಗ ನೀವು ಮೇಲಕ್ಕೆದ್ದು ದೇವರಲ್ಲಿ ನಂಬಿಕೆಯಿಡಿ; ವಿಶ್ವಾಸವಿಡಿ. ನೋಡಿ, ನನ್ನನ್ನು ಇಲ್ಲಿಗೆ ಕಳುಹಿಸಿದವರ ಬಳಿಗೆ ನಾನು ಏರಿ ಹೋಗುತ್ತಿದ್ದೇನೆ. ನಿಮಗೆ ಸಂಭವಿಸಿದ್ದ ಎಲ್ಲವನ್ನು ಬರೆದಿಡಿ.” ಇಷ್ಟನ್ನು ಹೇಳಿ ರಫಯೇಲನು ಮೇಲಕ್ಕೆ ಏರಿಹೋದನು.
ಕೀರ್ತನೆ: 13:2, 6, 8
ಶ್ಲೋಕ: ಚಿರಂಜೀವಿಯಾದ ಸರ್ವೇಶವರನಿಗೆ ಸ್ತುತಿಸ್ತೋತ್ರ
ಶಿಕ್ಷಿಸುವವನೂ ಕ್ಷಮಿಸುವವನೂ ಆತನೇ
ಪಾತಾಳಕ್ಕಿಳಿಸುವವನೂ ಮೇಲಕ್ಕೆತ್ತುವವನೂ ಆತನೇ
ಆತನ ಕೈಯಿಂದ ತಪ್ಪಿಸಿಕೊಳ್ಳುವವನು ಯಾವನಿದ್ದಾನೆ? ಶ್ಲೋಕ
ಅಭಿಮುಖರಾದರೆ ನೀವು ಪೂರ್ಣ ಹೃದಯದಿಂದ ಪೂರ್ಣಪ್ರಾಣದಿಂದ
ನಡೆದರೆ ಆತನ ಸಮ್ಮುಖದಲ್ಲಿ ಸತ್ಯತೆಯಿಂದ,
ಮರೆಮಾಚಿಕೊಳ್ಳನಾತ ಮುಖವನ್ನು ನಿಮ್ಮಿಂದ. ಶ್ಲೋಕ
ಸ್ತುತಿಸಿರಿ ಸತ್ಯಸ್ವರೂಪಿಯಾದ ಸರ್ವೇಶ್ವರನನು
ಯುಗಯುಗಾಂತರಕ್ಕೂ ಆಳುವ ಅರಸನನು.
ದೇವರ ಮಹಿಮಾಸ್ತುತಿ ಇರಲಿ ಸರ್ವರ ಬಾಯಲಿ,
ನಾನಾತನ ಭಕ್ತನು ಗಡಿಪಾರಾದ ಈ ನಾಡಿನಲಿ. ಶ್ಲೋಕ
ಶುಭಸಂದೇಶ: ಮಾರ್ಕ 12:38-44
ಜನಸಮೂಹವು ಸಂತಸಚಿತ್ತದಿಂದ ಯೇಸುಸ್ವಾಮಿಯ ಮಾತುಗಳನ್ನು ಆಲಿಸುತ್ತಿತ್ತು. ಯೇಸು ತಮ್ಮ ಉಪದೇಶವನ್ನು ಮುಂದುವರಿಸುತ್ತಾ, “ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ; ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಪ್ರಾರ್ಥನಾ ಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಔತಣ ಸಮಾರಂಭಗಳಲ್ಲಿ ಶ್ರೇಷ್ಠಸ್ಥಾನಗಳನ್ನೂ ಅಪೇಕ್ಷಿಸುತ್ತಾರೆ. ವಿಧವೆಯರ ಮನೆಮಾರುಗಳನ್ನು ದೋಚಿಕೊಳ್ಳುವ ಈ ಜನ ನಟನೆಗಾಗಿ ದೀರ್ಘವಾಗಿ ಜಪತಪಗಳನ್ನು ಮಾಡುತ್ತಾರೆ. ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು,” ಎಂದರು. ಯೇಸುಸ್ವಾಮಿ ದೇವಾಲಯದಲ್ಲಿ ಕಾಣಿಕೆ ಪೆಟ್ಟಿಗೆಗಳಿಗೆ ಎದುರಾಗಿ ಕುಳಿತಿದ್ದರು. ಜನರು ಅದರಲ್ಲಿ ಹಣಹಾಕುವ ರೀತಿ ಅವರ ಕಣ್ಣಿಗೆ ಬಿತ್ತು. ಧನವಂತರನೇಕರು ಹೆಚ್ಚು ಹೆಚ್ಚು ಹಣವನ್ನು ಹಾಕುತ್ತಿದ್ದರು. ಅಷ್ಟರಲ್ಲಿ ಬಡ ವಿಧವೆ ಒಬ್ಬಳು ಅಲ್ಲಿಗೆ ಬಂದಳು. ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಆಗ ಯೇಸು ತಮ್ಮ ಶಿಷ್ಯರನ್ನು ಕರೆದು, “ಕಾಣಿಕೆ ಪೆಟ್ಟಿಗೆಯಲ್ಲಿ ಹಣ ಹಾಕಿದ ಎಲ್ಲರಿಗಿಂತಲೂ ಈ ವಿಧವೆ ಹೆಚ್ಚಾಗಿ ಅರ್ಪಿಸಿದಳು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ; ಇವರೆಲ್ಲರೂ ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು. ಈಕೆಯಾದರೋ ತನ್ನ ಕಡುಬಡತನದಲ್ಲೂ ತನ್ನಲ್ಲಿ ಇದ್ದುದೆಲ್ಲವನ್ನು ಅರ್ಪಿಸಿದಳು; ತನ್ನ ಜೀವನಾಧಾರವನ್ನೇ ಕೊಟ್ಟುಬಿಟ್ಟಳು,” ಎಂದರು.
No comments:
Post a Comment