ಮೊದಲನೇ ವಾಚನ: ಆದಿಕಾಂಡ 17: 1, 9-10, 15-22
ಅಬ್ರಾಮನಿಗೆ ತೊಂಬತ್ತೊಂಬತ್ತು ವರ್ಷಗಳಾಗಿದ್ದಾಗ, ಸರ್ವೇಶ್ವರ ದರ್ಶನವಿತ್ತು ಇಂತೆಂದರು: “ನಾನು ಸರ್ವಶಕ್ತ ಸರ್ವೇಶ್ವರ. ನೀನು ನನ್ನ ಸಮ್ಮುಖದಲ್ಲಿದ್ದು ನಿರ್ದೋಷಿಯಾಗಿ ನಡೆದುಕೊಳ್ಳಬೇಕು. ಇದಲ್ಲದೆ ದೇವರು ಅಬ್ರಹಾಮನಿಗೆ ಹೀಗೆಂದು ಹೇಳಿದರು: “ನೀನು ಕೂಡ ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು. ನೀನು ಮಾತ್ರವಲ್ಲ, ನಿನ್ನ ಸಂತತಿಯವರು ತಲತಲಾಂತರಕ್ಕೂ ಅದನ್ನು ಕೈಗೊಂಡು ನಡೆಯಬೇಕು. ನೀನೂ ನಿನ್ನ ಸಂತತಿಯವರೂ ಕೈಗೊಳ್ಳಬೇಕಾದ ನನ್ನ ಒಡಂಬಡಿಕೆ ಇದು: ನಿಮ್ಮಲ್ಲಿ ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗಬೇಕು. ದೇವರು ಅಬ್ರಹಾಮನಿಗೆ ಇನ್ನೂ ಹೇಳಿದ್ದು ಏನೆಂದರೆ: “ನೀನು ಇನ್ನು ಮುಂದೆ ನಿನ್ನ ಹೆಂಡತಿಯನ್ನು ಸಾರಯಳು ಎಂದು ಕರೆಯದೆ ಸಾರಳು ಎಂದು ಕರೆಯಬೇಕು. ನಾನು ಆಕೆಯನ್ನು ಆಶೀರ್ವದಿಸಿದ್ದೇನೆ. ಆಕೆ ನಿನಗೊಬ್ಬ ಮಗನನ್ನು ಹೆರುವಳು. ನನ್ನ ಆಶೀರ್ವಾದ ಪಡೆದ ಆಕೆ ರಾಷ್ಟ್ರಗಳಿಗೆ ಮಾತೆಯಾಗುವಳು; ಆಕೆಯಿಂದ ರಾಷ್ಟ್ರಗಳೂ, ರಾಜರುಗಳೂ ಉತ್ಪತ್ತಿಯಾಗುವರು.” ಅಬ್ರಹಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು. ಆದರೆ, “ನೂರು ವರ್ಷದವನಿಗೆ ಮಗ ಹುಟ್ಟುವುದುಂಟೆ? ತೊಂಬತ್ತು ವರ್ಷದವಳಾದ ಸಾರಳು ಹೆತ್ತಾಳೆ?” ಎಂದು ಅಬ್ರಹಾಮನು ಮನಸ್ಸಿನಲ್ಲೇ ನೆನೆದು ನಕ್ಕು ದೇವರಿಗೆ, ಅದಕ್ಕೆ ದೇವರು, “ಇಲ್ಲ, ನಿನ್ನ ಹೆಂಡತಿ ಸಾರಳೇ ನಿನಗೊಂದು ಮಗನನ್ನು ಹೆರುವಳು. ಅವನಿಗೆ ಇಸಾಕನೆಂದು ಹೆಸರಿಡಬೇಕು. ನನ್ನ ಒಡಂಬಡಿಕೆಯನ್ನು ಅವನೊಂದಿಗೂ ಅವನ ಸಂತತಿಯೊಂದಿಗೂ ಚಿರವಾದ ಒಡಂಬಡಿಕೆಯಾಗಿ ಸ್ಥಿರಗೊಳಿಸುತ್ತೇನೆ ಇಷ್ಮಾಯೇಲನ ವಿಷಯದಲ್ಲಿ ನೀನು ಮಾಡಿದ ಬಿನ್ನಹವನ್ನು ಕೇಳಿದ್ದೇನೆ. ಅವನನ್ನೂ ಆಶೀರ್ವದಿಸಿದ್ದೇನೆ. ಅವನನ್ನು ಅಭಿವೃದ್ಧಿಮಾಡಿ ಅವನಿಗೆ ಅತ್ಯಧಿಕವಾದ ಸಂತತಿಯನ್ನು ಕೊಡುತ್ತೇನೆ. ಅವನು ಹನ್ನೆರಡು ಮಂದಿ ಅಧಿಪತಿಗಳಿಗೆ ಮೂಲ ಪಿತನಾಗುವನು. ಅವನ ಸಂತತಿಯನ್ನು ದೊಡ್ಡ ರಾಷ್ಟ್ರವನ್ನಾಗಿ ಮಾಡುತ್ತೇನೆ. ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನಲ್ಲಿಯೇ ಊರ್ಜಿತಗೊಳಿಸುತ್ತೇನೆ. ಬರುವ ವರ್ಷ ಇದೇ ಕಾಲದಲ್ಲಿ ಸಾರಳು ಅವನನ್ನು ಹೆರುವಳು,” ಎಂದರು. ಇಷ್ಟನ್ನು ಮಾತಾಡಿ ಮುಗಿಸಿದ ಮೇಲೆ ದೇವರು ಅಬ್ರಹಾಮನಿಂದ ಅದೃಶ್ಯರಾದರು.
ಕೀರ್ತನೆ: 128:1, 3, 4-5
ಶ್ಲೋಕ: ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು I
ಧನ್ಯನು, ಆತನ ಮಾರ್ಗಗಳಲೇ ನಡೆಯುವವನು II
ನಿನ್ನ ಕೈ ಕೆಸರಾದರೆ ಬಾಯಿ ಮೊಸರಾಗುವುದು I
ಧನ್ಯನಾಗುವೆ ನೀನು; ನಿನಗೆ ಶುಭವಾಗುವುದು II ಶ್ಲೋಕ
ಇರುವಳು ನಿನ್ನ ಪತ್ನಿ ಮನೆಯಲ್ಲಿ ಫಲಭರಿತ ದ್ರಾಕ್ಷಾಲತೆಯಂತೆ I
ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ ಓಲಿವ್ ಸಸಿಗಳಂತೆ II ಶ್ಲೋಕ
ಹೊಂದುವನು ಅಂತಹ ಆಶೀರ್ವಾದವನು I
ಪ್ರಭುವಿನಲಿ ಭಯಭಕ್ತಿಯುಳ್ಳವನು II ಶ್ಲೋಕ
ಸಿಯೋನಿನಲ್ಲಿರುವ ಪ್ರಭು ನಿನ್ನನು ಆಶೀರ್ವದಿಸಲಿ I
ಜೆರುಸಲೇಮಿನ ಏಳ್ಗೆಯನು ಕಾಣು ಇಡೀ ಜೀವಮಾನದಲಿ II ಶ್ಲೋಕ
ಶುಭಸಂದೇಶ: ಮತ್ತಾಯ 8:1-4
ಯೇಸುಸ್ವಾಮಿ ಬೆಟ್ಟದಿಂದ ಇಳಿದು ಬಂದಾಗ ಜನರು ಗುಂಪುಗುಂಪಾಗಿ ಅವರನ್ನು ಹಿಂಬಾಲಿಸಿದರು. ಆಗ ಒಬ್ಬ ಕುಷ್ಠರೋಗಿ ಯೇಸುವಿನ ಮುಂದೆ ಬಂದು, ತಲೆಬಾಗಿ, "ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣ ಮಾಡಬಲ್ಲಿರಿ," ಎಂದು ಬೇಡಿದನು. ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣ ಹೊಂದು,” ಎಂದರು. ತಕ್ಷಣವೇ ಅವನ ಕುಷ್ಠವು ಮಾಯವಾಯಿತು. ಯೇಸು ಅವನಿಗೆ, “ಎಚ್ಚರಿಕೆ, ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಪ್ರಕಾರ ಶುದ್ಧೀಕರಣವಿಧಿಯನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದರು. ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು. “ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾಶ್ರ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ,” ಎಂದು ವಿನಂತಿಸಿದನು. ಯೇಸು, “ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ,” ಎಂದರು ಅದಕ್ಕೆ ಆ ಶತಾಧಿಪತಿ, “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು.
No comments:
Post a Comment