ಮೊದಲನೇ ವಾಚನ: 2 ಕೊರಿಂಥಿಯರಿಗೆ 1: 18-22
ಎಂದಿಗೂ ಇಲ್ಲ. ನಾನು ನಿಮಗೆ ಕೊಟ್ಟ ಮಾತು ದ್ವಂದ್ವಾರ್ಥವುಳ್ಳದ್ದಾಗಿರಲಿಲ್ಲ. ಇದಕ್ಕೆ ದೇವರೇ ಸಾಕ್ಷಿ. ನಾವು, ಅಂದರೆ ಸಿಲ್ವಾನ, ತಿಮೊಥೆಯ ಮತ್ತು ನಾನು, ಪ್ರಚಾರಮಾಡಿದ ದೇವರ ಪುತ್ರರಾದ ಯೇಸುಕ್ರಿಸ್ತರು, ಈ ಕ್ಷಣ ಹೌದು, ಮರುಕ್ಷಣ ಇಲ್ಲ ಎಂದು ಹೇಳುವವರಲ್ಲ, ಅವರು ದೇವರ ತಥಾಸ್ತು ಆಗಿದ್ದಾರೆ. ಏಕೆಂದರೆ, ದೇವರು ಮಾಡಿದ ಸಮಸ್ತ ವಾಗ್ದಾನಗಳಿಗೂ ‘ಹೌದು’ ಎಂಬ ಉತ್ತರ ಸಾಕ್ಷಾತ್ ಅವರೇ. ಈ ಕಾರಣದಿಂದಲೇ ನಾವು ದೇವರ ಮಹಿಮೆಯನ್ನು ಸಾರುವಾಗ ಯೇಸುಕ್ರಿಸ್ತರ ಮುಖಾಂತರವೇ ‘ಆಮೆನ್’ ಎನ್ನುತ್ತೇವೆ. ನಿಮ್ಮನ್ನೂ ನಮ್ಮನ್ನೂ ಕ್ರಿಸ್ತಯೇಸುವಿನಲ್ಲಿ ಒಂದಾಗಿಸಿ ಸ್ಥಿರಪಡಿಸಿದವರು ದೇವರೇ. ನಮ್ಮನ್ನು ಅಭಿಷೇಕಿಸಿದವರೂ ವಿೂಸಲಾಗಿಟ್ಟವರೂ ದೇವರೇ. ಅವರೇ ನಮ್ಮ ಮೇಲೆ ತಮ್ಮ ಮುದ್ರೆಯನ್ನೊತ್ತಿ ನಮ್ಮ ಅಂತರಂಗದಲ್ಲಿ ಪವಿತ್ರಾತ್ಮ ಅವರನ್ನು ಖಾತರಿಯಾಗಿ ಇರಿಸಿದ್ದಾರೆ.
ಕೀರ್ತನೆ: 119: 129-130, 131-132, 133, 135
ಶ್ಲೋಕ: ತೋರು ನಿನ್ನ ಮುಖದರ್ಶನ ಈ ದಾಸನಿಗೆ
ಅಪೂರ್ವವಾದ ನಿನ್ನ ಕಟ್ಟಳೆಗಳನು
ಹೃತ್ಪೂರ್ವಕವಾಗಿ ನಾ ಪಾಲಿಪೆನು
ತರುವುದು ನಿನ್ನ ವಾಕ್ಯೋಪದೇಶ
ಸರಳ ಜನರಿಗೆ ಜ್ಞಾನ ಪ್ರಕಾಶ. ಶ್ಲೋಕ
ಬಾಯ್ದೆರೆದು ಹಾತೊರೆಯುತಿರುವೆ
ನಿನ್ನ ಆಜ್ಞೆಗಳನು ಅರಸುತಿರುವೆ
ನಿನ್ನ ನಾಮಪ್ರಿಯರಿಗೆ ಮಾಡುವಂತೆ
ನನಗಭಿಮುಖವಾಗಿ ತೋರು ನೀ ಮಮತೆ. ಶ್ಲೋಕ
ನಿನ್ನ ನುಡಿಗನುಸಾರ ದೃಢಪಡಿಸು ನನ್ನ ನಡತೆಯನು
ಕೆಡುಕೊಂದೂ ಅಧೀನಪಡಿಸದಿರಲಿ ನನ್ನನು
ತೋರು ನಿನ್ನ ಮುಖದರ್ಶನ ಈ ದಾಸನಿಗೆ
ನೀ ಕಲಿಸು ನಿನ್ನ ನಿಬಂಧನೆಗಳನು ಎನಗೆ. ಶ್ಲೋಕ
ಶುಭಸಂದೇಶ: ಮತ್ತಾಯ 5: 13-16
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಈ ಧರೆಗೆ ನೀವೇ ಉಪ್ಪು; ಉಪ್ಪೇ ಸಪ್ಪೆಯಾಗಿಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ. ದಾರಿಗರು ಅದನ್ನು ತುಳಿದುಬಿಡುತ್ತಾರಷ್ಟೆ." "ಜಗತ್ತಿಗೆ ನೀವೇ ಜ್ಯೋತಿ. ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿಡಲಾಗದು. ಅಂತೆಯೇ ಯಾರೂ ದೀಪವನ್ನು ಹಚ್ಚಿ ಬಟ್ಟಲ ಕೆಳಗೆ ಬಚ್ಚಿಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೆ ಬೆಳಕನ್ನು ಕೊಡುತ್ತದೆ. ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ."
No comments:
Post a Comment