ಮೊದಲನೇ ವಾಚನ: ತೊಬೀತ 11: 5-15
ಇತ್ತ ಅನ್ನಳು, ಮಗನು ಬರುವ ದಾರಿಯನ್ನೇ ಕಾಯುತ್ತ ಕುಳಿತಿದ್ದಳು. ತೊಬಿಯಾಸನು ಬರುತ್ತಿರುವುದನ್ನು ಕಂಡಕೂಡಲೇ ತೊಬೀತನಿಗೆ, “ಇಗೋ, ನಮ್ಮ ಮಗ ಬರುತ್ತಿದ್ದಾನೆ. ಅವನೊಡನೆ ಹೋಗಿದ್ದ ವ್ಯಕ್ತಿ ಸಹ ಬರುತ್ತಿದ್ದಾನೆ,” ಎಂದಳು. ಮನೆಯನ್ನು ಸೇರುವ ಮುಂಚೆ ರಫಯೇಲನು ತೊಬಿಯಾಸನಿಗೆ, “ನಿನ್ನ ತಂದೆಯ ಕಣ್ಣುಗಳು ತೆರೆಯುವುವು. ಮೀನಿನ ಪಿತ್ತರಸವನ್ನು ಅವನ ಕಣ್ಣುಗಳಿಗೆ ಹಚ್ಚು. ಈ ಔಷಧ ಅವನ ಕಣ್ಣುಗಳ ಬಿಳಿ ಮಚ್ಚೆಯನ್ನು ಒಣಗಿಸಿ, ಸುಲಿದುಬಿಡುತ್ತದೆ. ನಿನ್ನ ತಂದೆ ದೃಷ್ಟಿಪಡೆದು ಬೆಳಕನ್ನು ನೋಡುವನು,” ಎಂದನು. ತೊಬೀತನಿಗೆ ಮರುಕಳಿಸಿದ ದೃಷ್ಟಿ ತೊಬೀತನು ತಡವರಿಸುತ್ತಾ ಅಂಗಳದ ಬಾಗಿಲಿನ ಹೊರಗೆ ಬಂದನು. ತೊಬಿಯಾಸನು ಅವನ ಬಳಿಗೆ ಧಾವಿಸಿದನು. (ಮೀನಿನ ಪಿತ್ತರಸ ಅವನ ಕೈಯಲ್ಲಿತ್ತು). ತಂದೆಯನ್ನು ಬಿಗಿಯಾಗಿ ಹಿಡಿದು ಅವನ ಕಣ್ಣುಗಳನ್ನು ಊದಿ, “ಅಪ್ಪಾ, ಧೈರ್ಯವಾಗಿರು” ಎಂದು ಹೇಳಿ, ಕಣ್ಣುಗಳಿಗೆ ಆ ಔಷಧವನ್ನು ಹಚ್ಚಿದನು. ಅವನ ಕಣ್ಣುಗಳು ಉರಿಯತೊಡಗಿದವು. ಅನಂತರ ತನ್ನ ಎರಡು ಕೈಗಳಿಂದ ಆ ಬಿಳಿಮಚ್ಚೆಯನ್ನು ಅವನ ಕಣ್ಣುಗಳ ಕೊನೆಯಿಂದ ಸುಲಿದುಬಿಟ್ಟನು. ಆಗ ತೊಬೀತನಿಗೆ ಕಣ್ಣು ಕಾಣಿಸಿತು. ಅವನು ಮಗನನ್ನು ಎರಡು ಕೈಗಳಿಂದ ತಬ್ಬಿಕೊಂಡು ಅಳುತ್ತಾ, “ಮಗನೇ, ನನ್ನ ಕಣ್ಣುಗಳಿಗೆ ನೀನು ಕಾಣಿಸುತ್ತಿದ್ದಿಯೇ; ನೀನೇ ನನ್ನ ಕಣ್ಣುಗಳಿಗೆ ಬೆಳಕು!” ಎಂದನು. ಅನಂತರ ಹೀಗೆ ನುಡಿದನು: “ದೇವರಿಗೆ ಸ್ತುತಿಸ್ತೋತ್ರ! ಅವರ ಮಹಿಮಾ ನಾಮ ಪೂಜಿತ ಅವರ ಪೂಜ್ಯ ದೂತರೆಲ್ಲರಿಗೆ ಸ್ತೋತ್ರ! ಯುಗಯುಗಾಂತರಕ್ಕೂ ಅವರ ಶ್ರೀನಾಮ ಪೂಜಿತ. “ಅವರೆನಗೆ ನೀಡಿದ್ದರು ಯಾತನೆ ಈಗಲಾದರೂ ತೋರಿದರು ಕರುಣೆ ಕಾಣುತ್ತಿರುವನು ನನ್ನ ಮಗ ತೊಬಿಯನೆ!” ಹೀಗೆ ತೊಬೀತನು ಸಂತೋಷದಿಂದ ಘಂಟಾಘೋಷವಾಗಿ ದೇವರನ್ನು ಸ್ತುತಿಸುತ್ತಾ ಮನೆಯೊಳಕ್ಕೆ ಹೋದನು. ತೊಬಿಯಾಸನು ತನ್ನ ಪ್ರಯಾಣ ಯಶಸ್ವಿಯಾದುದನ್ನು ಕುರಿತು ವರದಿ ಮಾಡಿದನು. ತಾನು ಹಣವನ್ನು ಮರಳಿ ತಂದುದು ಮಾತ್ರವಲ್ಲ, ಸಾರಳೊಡನೆ ಮದುವೆಯಾದುದು ಹಾಗೂ ಆಕೆ ನಿನೆವೆ ನಗರದ ಬಾಗಿಲ ಬಳಿ ಬರುತ್ತಿರುವುದು, ಇದೆಲ್ಲದರ ಬಗ್ಗೆ ವಿವರಿಸಿದನು.
ಕೀರ್ತನೆ: 146: 1-2, 6-7, 8-10
ಶ್ಲೋಕ: ನನ್ನ ಮನವೇ, ಪ್ರಭುವನು ವಂದಿಸು.
ಪ್ರಭುವಿಗೆ ಸ್ತುತಿಸ್ತೋತ್ರ
ಮನವೇ, ವಂದಿಸು ಆತನನು
ಪ್ರಾಣವಿರುವವರೆಗೆ ಸ್ತುತಿಸುವೆನು ಪ್ರಭುವನು
ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು. ಶ್ಲೋಕ
ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ
ದೊರಕಿಸುವನು ನ್ಯಾಯ ದಲಿತರಿಗೆ
ಒದಗಿಸುವನು ಆಹಾರ ಹಸಿದವರಿಗೆ
ನೀಡುವನು ಬಿಡುಗಡೆ ಬಂಧಿತರಿಗೆ. ಶ್ಲೋಕ
ಕಣ್ಣನ್ನೀಯುವನು ಪ್ರಭು ಕುರುಡರಿಗೆ
ಉದ್ಧಾರಕನಾ ಪ್ರಭು ಕುಗ್ಗಿದವರಿಗೆ
ರಕ್ಷಿಸುವನು ಪ್ರಭು ಪರದೇಶಿಗಳನು
ಆದರಿಸುವನು ಅನಾಥರನು, ವಿಧವೆಯರನು. ಶ್ಲೋಕ
ಆತನ ಒಲವಿರುವುದು ಸಾಧು ಸಜ್ಜನರಿಗೆ
ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು
ಪ್ರಭುವೇ ಅರಸನು ಸದಾಕಾಲಕು
ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು. ಶ್ಲೋಕ
ಶುಭಸಂದೇಶ: ಮಾರ್ಕ 12: 35-37
ಬಳಿಕ ಯೇಸುಸ್ವಾಮಿ ಮಹಾದೇವಾಲಯದಲ್ಲಿ ಉಪದೇಶಮಾಡುತ್ತಾ ಈ ಪ್ರಶ್ನೆ ಎತ್ತಿದರು: “ಅಭಿಷಿಕ್ತನಾದ ಲೋಕೋದ್ಧಾರಕನನ್ನು ಧರ್ಮಶಾಸ್ತ್ರಿಗಳು ‘ದಾವೀದನ ಪುತ್ರ’ ಎಂದು ಕರೆಯುತ್ತಾರಲ್ಲ! ಅದು ಹೇಗಾದೀತು? ‘ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿ ಹಾಕುವ ತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು ಎಂದು ನನ್ನ ಪ್ರಭುವಿಗೆ ಸರ್ವೇಶ್ವರ ಹೇಳಿದ್ದಾರೆ,’ ಎಂದು ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದ್ದಾನಲ್ಲಾ! ದಾವೀದನೇ, ಕ್ರಿಸ್ತನನ್ನು ‘ನನ್ನ ಪ್ರಭು’ ಎಂದು ಕರೆದಿರುವಲ್ಲಿ ಆತನು ದಾವೀದನ ಪುತ್ರನಾಗಿರುವುದು ಹೇಗೆ?” ಎಂದು ಪ್ರಶ್ನಿಸಿದರು.
No comments:
Post a Comment