ಮೊದಲನೇ ವಾಚನ: 2 ಕೊರಿಂಥಿಯರಿಗೆ 11:18, 21-30
ಅನೇಕರು ಕೇವಲ ಪ್ರಾಪಂಚಿಕ ವಿಷಯಗಳನ್ನು ಕುರಿತು ತಮ್ಮನ್ನೇ ಹೊಗಳಿಕೊಳ್ಳುತ್ತಾರೆ. ಹಾಗೆಯೇ ನಾನೂ ಹೊಗಳಿಕೊಳ್ಳುತ್ತೇನೆ. ಇದನ್ನೆಲ್ಲಾ ಮಾಡುವ ಸಾಹಸ ನಮಗಿಲ್ಲವೆಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ. ಯಾರಿಗಾದರೂ ಯಾರ ವಿಷಯದಲ್ಲಾದರೂ ಹೊಗಳಿಕೊಳ್ಳುವ ಧೈರ್ಯವಿದ್ದರೆ ಅದಕ್ಕಿಂತ ಹೆಚ್ಚಿನ ಧೈರ್ಯ ನನಗಿದೆ. ಇದನ್ನು ನಾನು ಹುಚ್ಚನಂತೆಯೇ ಹೇಳುತ್ತಿದ್ದೇನೆ ಎಂದು ಭಾವಿಸಿಕೊಳ್ಳಿ. ಅವರು ಹಿಬ್ರಿಯರೋ? ನಾನೂ ಹಿಬ್ರಿಯನೇ. ಅವರು ಇಸ್ರಯೇಲರೋ? ನಾನೂ ಇಸ್ರಯೇಲನೇ. ಅವರು ಅಬ್ರಹಾಮನ ವಂಶದವರೋ? ನಾನೂ ಅದೆ ವಂಶದವನೇ. ಅವರು ಕ್ರಿಸ್ತಯೇಸುವಿನ ದಾಸರೋ? (ನಾನು ಬುದ್ಧಿಕೆಟ್ಟವನಂತೆಯೇ ಮಾತನಾಡುತ್ತಿದ್ದೇನೆ) ಅವರಿಗಿಂತ ನಾನು ದಾಸಾನುದಾಸನು. ಅವರಿಗಿಂತ ಹೆಚ್ಚಾಗಿ ಸೇವೆಮಾಡಿದ್ದೇನೆ; ಅವರಿಗಿಂತ ಹೆಚ್ಚಾಗಿ ಸೆರೆಮನೆಗಳ ವಾಸವನ್ನು ಅನುಭವಿಸಿದ್ದೇನೆ; ಮಿತಿವಿೂರಿ ಏಟುಪೆಟ್ಟುಗಳನ್ನು ತಿಂದಿದ್ದೇನೆ; ಅನೇಕ ಸಲ ಸಾವಿನ ದವಡೆಗೆ ಸಿಲುಕಿಕೊಂಡಿದ್ದೇನೆ. ಐದು ಸಾರಿ ಯೆಹೂದ್ಯರಿಂದ ನನಗೆ ನಲವತ್ತಕ್ಕೆ ಒಂದು ಕಡಿಮೆ ಚಾಟಿ ಏಟುಗಳು ಬಿದ್ದವು. ಮೂರು ಸಾರಿ ರೋಮನರು ನನ್ನನ್ನು ಛಡಿಗಳಿಂದ ಹೊಡೆಸಿದರು. ಒಮ್ಮೆ ಜನರು ನನ್ನನ್ನು ಕೊಲ್ಲಲೆಂದು ಕಲ್ಲು ತೂರಿದರು. ಮೂರು ಸಲ ನಾನಿದ್ದ ಹಡಗು ಒಡೆದು ನೀರುಪಾಲಾಯಿತು. ಒಂದು ರಾತ್ರಿ, ಒಂದು ಹಗಲು ನಡುಗಡಲಲ್ಲಿ ತೇಲಾಡಿದೆ. ಪ್ರಭುವಿನ ಸೇವೆಯಲ್ಲಿ ನಾನು ಕೈಗೊಂಡ ಪ್ರಯಾಣಗಳು ಅನೇಕ; ನನಗೆ ಬಂದೊದಗಿದ ಅಪಾಯಗಳೂ ಅನೇಕ. ಪ್ರವಾಹಗಳ ಅಪಾಯ, ಕಳ್ಳಕಾಕರ ಅಪಾಯ, ಸ್ವಜನ ಹಾಗೂ ಅನ್ಯಜನರಿಂದ ಅಪಾಯ, ನಗರಗಳ ಹಾಗೂ ನಿರ್ಜನ ಪ್ರದೇಶಗಳ ಅಪಾಯ, ಕಡಲುಗಳ ಅಪಾಯ, ಕಪಟ ಸಹೋದರರಿಂದ ಅಪಾಯ - ಇವೆಲ್ಲಕ್ಕೂ ತುತ್ತಾದೆ. ಶ್ರಮಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೆಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟ ಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ. ಇಂಥ ಇನ್ನಿತರ ಕಷ್ಟ ಸಂಕಟಗಳನ್ನು ಅನುಭವಿಸಿದ್ದೇನೆ. ಅಷ್ಟೇ ಅಲ್ಲದೆ, ಎಲ್ಲ ಸಭೆಗಳ ಹಿತಚಿಂತನೆಯೂ ನನ್ನನ್ನು ಅನುದಿನವೂ ಕಾಡಿಸಿದೆ. ಒಬ್ಬನು ಬಲಹೀನನಾಗಿದ್ದರೆ, ಅವನೊಡನೆ ನಾನೂ ಬಲಹೀನನೇ. ಒಬ್ಬನು ಪಾಪಕ್ಕೆ ಬಲಿಯಾದರೆ ನಾನೂ ತಾಪದಿಂದ ಕುದಿಯುತ್ತೇನೆ. ನಾನು ನನ್ನನ್ನೇ ಹೊಗಳಿಕೊಳ್ಳಬೇಕಾಗಿ ಬಂದರೆ, ನನ್ನ ದೌರ್ಬಲ್ಯವನ್ನು ಬಹಿರಂಗಪಡಿಸುವ ವಿಷಯಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ.ಕೀರ್ತನೆ: 34:1-2, 3-4, 5-6
ಶ್ಲೋಕ: ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ
ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು
ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು
ಪ್ರಭುವಿನಲ್ಲಿದೆ ನನ್ನ ಮನದಭಿಮಾನ
ದೀನರಿದನು ಕೇಳಿ, ಪಡೆಯಲಿ ಸುಮ್ಮಾನ ಶ್ಲೋಕ
ಬನ್ನಿ, ಕೊಂಡಾಡುವ ಪ್ರಭು ದೇವನನು
ಘನಪಡಿಸೋಣ ಅವನ ಶ್ರೀನಾಮವನು
ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು
ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು ಶ್ಲೋಕ
ಆತನತ್ತ ತಿರುಗಿದ ಮುಖ ಅರಳುವುದು
ಲಜ್ಜೆಯಿಂದೆಂದಿಗು ಕುಂದಿಹೋಗದು
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು
ಸರ್ವಾಪತ್ತಿನಿಂದವನು ಮುಕ್ತಗೊಂಡನು. ಶ್ಲೋಕ
ಶುಭಸಂದೇಶ: ಮತ್ತಾಯ 6: 19-23
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಇಹಲೋಕದಲ್ಲಿ ಆಸ್ತಿಪಾಸ್ತಿಯನ್ನು ಶೇಖರಿಸಿಡಬೇಡಿ. ಇಲ್ಲಿ ತುಕ್ಕು ಹಿಡಿದೀತು; ನುಸಿ ಹೊಡೆದೀತು; ಕಳ್ಳರು ಕನ್ನ ಕೊರೆದು ಕದ್ದಾರು. ನಿಮ್ಮ ಆಸ್ತಿಯನ್ನು ಸ್ವರ್ಗದಲ್ಲಿ ಕೂಡಿಸಿಡಿ. ಅಲ್ಲಿ ತುಕ್ಕು ಹಿಡಿಯದು, ನುಸಿ ಹೊಡೆಯದು, ಕಳ್ಳರು ಕನ್ನ ಕೊರೆದು ಕದಿಯರು. ನಿನ್ನ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿನ್ನ ಹೃದಯ."ಕಣ್ಣೇ ದೇಹಕ್ಕೆ ದೀಪ. ನಿನ್ನ ಕಣ್ಣು ಸರಿಯಿದ್ದರೆ ದೇಹವೆಲ್ಲ ಕಾಂತಿಮಯವಾಗುವುದು. ಅದು ಕೆಟ್ಟಿದ್ದರೆ ನಿನ್ನ ದೇಹವೆಲ್ಲ ಕತ್ತಲೆಮಯವಾಗುವುದು. ನಿನ್ನೊಳಗಿರುವ ಬೆಳಕೇ ಕತ್ತಲೆಯಾದಲ್ಲಿ ಅದೆಂತಹ ಕರಾಳ ಕತ್ತಲೆಯಾಗಿರಬಹುದು!"
No comments:
Post a Comment