ಮೊದಲನೇ ವಾಚನ: ತೊಬೀತ 3:1-11, 16-17
ಆಗ ನಾನು ವ್ಯಸನಾಕ್ರಾಂತನಾದೆ. ನಿಟ್ಟುಸಿರಿಟ್ಟೆ. ಅತ್ತು ಪ್ರಲಾಪಿಸುತ್ತಾ ಹೀಗೆಂದು ಪ್ರಾರ್ಥನೆ ಮಾಡಿದೆ: ಹೇ ಸರ್ವೇಶ್ವರಾ, ನೀನು ನ್ಯಾಯಸ್ವರೂಪಿ: ಜಗತ್ತಿಗೆಲ್ಲ ನ್ಯಾಯಾಧಿಪತಿ: ನಿನ್ನ ಕಾರ್ಯಗಳೆಲ್ಲ ನ್ಯಾಯಸಮ್ಮತ ನಿನ್ನ ಮಾರ್ಗಗಳೆಲ್ಲ ಸತ್ಯ ಹಾಗೂ ದಯಾಪೂರಿತ. ಸರ್ವೇಶ್ವರಾ, ತಂದುಕೊ ನನ್ನನ್ನೀಗ ನೆನಪಿಗೆ ಕರುಣೆ ತೋರೆನಗೆ. ದಂಡಿಸಬೇಡ ನನ್ನ ಪಾಪಗಳಿಗಾಗಿ ಅರಿಯದೆ ಮಾಡಿದ ತಪ್ಪು ನೆಪ್ಪುಗಳಿಗಾಗಿ ನನ್ನ ಪೂರ್ವಜರ ಪಾಪದೋಷಗಳಿಗಾಗಿ. ನಿನ್ನ ಕಟ್ಟಳೆಗಳನ್ನು ಮೀರಿದೆವು ನಿನಗೆ ದ್ರೋಹವೆಸಗಿ ಪಾಪಮಾಡಿದೆವು; ಎಂದೇ ನಮ್ಮನ್ನೊಪ್ಪಿಸಿದೆ ಸೂರೆಗೆ, ಸೆರೆಗೆ, ಸಾವಿಗೆ ಚದರಿಸಿದೆ ಅನ್ಯಜನಾಂಗಗಳ ಈ ನಾಡಿಗೆ ಗುರಿಪಡಿಸಿದೆ ಇಲ್ಲಿನವರ ನಿಂದೆಪರಿಹಾಸ್ಯಕೆ. ನಿನ್ನ ನಿರ್ಣಯಗಳೆಲ್ಲ ನ್ಯಾಯಯುತ ನನಗೂ ಪೂರ್ವಜರಿಗೂ ನೀನಿತ್ತ ಶಿಕ್ಷೆ ಸೂಕ್ತ ಪಾಲಿಸಲಿಲ್ಲ ನಾವು ನಿನ್ನ ಆಜ್ಞೆಗಳನು ಕೈಗೊಳ್ಳಲಿಲ್ಲ ನಿನ್ನ ಸನ್ಮಾರ್ಗಗಳನು. ನಡೆಸೆನ್ನನೀಗ ನಿನ್ನ ಚಿತ್ತದ ಪ್ರಕಾರ ಬೇಕಾದರೆ ತೆಗೆದುಬಿಡು ಎನ್ನ ಪ್ರಾಣ. ಆಗ ತೆರಳುವೆ ನಾ ಜಗದಿಂದ ಮರೆಯಾಗಿ ಮರಳುವೆ ಧರೆಗೆ ಮಣ್ಣಾಗಿ. ಆಪಾದನೆಗಳನ್ನು ಕೇಳಿ ಸಾಕಾಗಿದೆ ದುಃಖಸಾಗರದಲ್ಲಿ ನಾ ಮುಳುಗಿರುವೆ. ನನಗೆ ಜೀವಕ್ಕಿಂತ ಸಾವೇ ಮೇಲಾಗಿದೆ. ಹೇ ಸರ್ವೇಶ್ವರಾ, ನೀಡೆನಗೆ ವಿಮೋಚನೆ ನಾನು ಸೇರಮಾಡು ಅಮರ ನಿವಾಸಕೆ. ಓ ಸರ್ವೇಶ್ವರಾ, ವಿಮುಖನಾಗಬೇಡ ನನಗೆ. ಈ ಜೀವನದ ಕಷ್ಟಸಂಕಟಗಳ ಸಹಿಸುವುದಕ್ಕಿಂತ ಕ್ರೂರನಿಂದೆ ದೂಷಣೆಗಳ ಕೇಳುವುದಕ್ಕಿಂತ ಸಾವೇ ಲೇಸು ನನಗೆ ಈ ಎಲ್ಲಕ್ಕಿಂತ. ಮೇದ್ಯ ನಾಡಿನ ಎಕ್‍ಬತಾನ ಎಂಬ ನಗರದಲ್ಲಿ ರಾಗುಯೇಲನ ಮಗಳು ಸಾರಾ ಎಂಬಾಕೆ ಇದ್ದಳು. ಅದೇ ದಿನದಂದು ಸಾರಳಿಗೆ ತನ್ನ ತಂದೆಯ ಸೇವಕಿಯೊಬ್ಬಳಿಂದ ಅಕಸ್ಮಾತ್ತಾಗಿ ನಿಂದೆ ದೂಷಣೆಗಳನ್ನು ಕೇಳಿಸಿಕೊಂಡಳು. ಸಾರಳಿಗೆ ಏಳುಸಾರಿ ವಿವಾಹವಾಗಿತ್ತು. ದೆವ್ವಗಳಲ್ಲೆಲ್ಲ ಅತೀ ದುಷ್ಟನಾದ ಆಸ್ಮೋದೇಯುಸ್ ಆಕೆಯ ಏಳು ಗಂಡಂದಿರನ್ನು ಒಬ್ಬರಾದ ಮೇಲೆ ಒಬ್ಬರನ್ನು ಆಕೆಯೊಂದಿಗೆ ಕೂಡಿ ಬಾಳುವುದಕ್ಕೆ ಮುಂಚೆಯೆ, ಕೊಂದುಹಾಕಿದ್ದನು. ಒಂದು ಬಾರಿ ಆ ಸೇವಕಿ ಸಾರಾಳಿಗೆ, “ಗಂಡಂದಿರ ಕೊಲೆಗಡುಕಿ ನೀನು; ಈಗಾಗಲೇ ಏಳು ಮಂದಿಯನ್ನು ಮದುವೆ ಆದೆ; ಒಬ್ಬನಿಂದಲೂ ಮಕ್ಕಳನ್ನು ಪಡೆಯದಷ್ಟು ನತದೃಷ್ಟಳು; ಗಂಡಂದಿರನ್ನು ಕಳೆದುಕೊಂಡ ಕೋಪವನ್ನು ನಮ್ಮ ಮೇಲೆ ಏಕೆ ಕಾರುತ್ತೀಯೆ? ಬೇಕಾದರೆ ಹೋಗಿ ಸತ್ತ ಗಂಡಂದಿರೊಂದಿಗೆ ಸೇರಿಕೊ. ನನ್ನ ಕಣ್ಣಿಗೆ ಎಂದೂ ನಿನ್ನ ಮಗ ಬೀಳದಿರಲಿ,” ಎಂದು ಶಪಿಸಿದಳು. ಇದನ್ನು ಕೇಳಿ, ಸಾರಳಿಗೆ ತೀವ್ರ ದುಃಖ ಉಂಟಾಯಿತು. ಆಕೆ ಅತ್ತು ಪ್ರಲಾಪಿಸಿದಳು. ಕುತ್ತಿಗೆಗೆ ನೇಣುಹಾಕಿಕೊಳ್ಳಲು ತಂದೆಯ ಕೊಠಡಿಗೆ ಹೋದಳು. ಆದರೆ ಆಕೆಗೆ ಒಂದು ಯೋಚನೆ ಹೊಳೆಯಿತು. ಬಹುಶಃ ಅವರು ನನ್ನ ತಂದೆಯನ್ನು ದೂಷಿಸಬಹುದು: “ನಿನ್ನ ಅಚ್ಚು ಮೆಚ್ಚಿನ ಮಗಳೊಬ್ಬಳೇ ದುಃಖದಿಂದ ನೇಣು ಹಾಕಿಕೊಂಡಳು” ಎಂದು ಜರೆಯಬಹುದು. ಇಂಥ ಚುಚ್ಚುಮಾತನ್ನು ಕೇಳಿದೊಡನೆ ನನ್ನ ವಯೋವೃದ್ಧ ತಂದೆ ಮೃತ್ಯುಲೋಕವನ್ನು ಸೇರಬಹುದು. ಆದುದರಿಂದ ನಾನೀಗ ನೇಣುಹಾಕಿಕೊಳ್ಳದಿರುವುದು ಲೇಸು. ಬದಲಿಗೆ ಸರ್ವೇಶ್ವರನೇ ಮರಣವನ್ನು ಕೊಡಲೆಂದು ಪ್ರಾರ್ಥಿಸುವೆ. ಆಗ ಇಂಥ ದೂಷಣೆಗಳನ್ನು ಕೇಳಲು ಅವಕಾಶ ಇರದು ಎಂದುಕೊಂಡಳು. ಅಂತೆಯೇ ಸಾರಳು ಕಿಟಕಿಯ ಬಳಿ ನಿಂತು ಕೈಗಳನ್ನು ಮೇಲಕ್ಕೆತ್ತಿ ಹೀಗೆಂದು ಪ್ರಾರ್ಥಿಸಿದಳು: ಕರುಣಾಳು ದೇವಾ, ನಿನಗೆ ಸ್ತುತಿಸ್ತೋತ್ರ ನಿನ್ನ ನಾಮ ಎಂದೆಂದಿಗೂ ಪೂಜಿತ ಸೃಷ್ಟಿಸಮಸ್ತವು ನಿನ್ನನು ಸ್ತುತಿಸಲಿ ಸತತ. ತೊಬೀತನ ಮತ್ತು ಸಾರಳ ಪ್ರಾರ್ಥನೆ ಮಹಿಮಾನ್ವಿತ ದೇವರ ಸನ್ನಿಧಿಗೆ ಮುಟ್ಟಿತು. ಅವರಿಬ್ಬರನ್ನೂ ಗುಣಪಡಿಸಲು ದೇವರು ರಫಯೇಲ್ ಎಂಬವನನ್ನು ಕಳುಹಿಸಿದರು. ತೊಬೀತನು ತನ್ನ ಕಣ್ಣುಗಳಿಂದ ದೇವರ ಜ್ಯೋತಿಯನ್ನು ನೋಡಲು ಸಾಧ್ಯವಾಗುವಂತೆ ಅವನ ಕಣ್ಣುಗಳ ಮಚ್ಚೆಗಳನ್ನು ತೆಗೆಯಬೇಕಾಗಿತ್ತು. ರಾಗುಯೇಲನ ಮಗಳು ಸಾರಳನ್ನು ತೊಬೀತನ ಮಗ ತೊಬಿಯಾಸನಿಗೆ ವಿವಾಹ ಮಾಡಿಕೊಡಬೇಕಾಗಿತ್ತು. ಮಾತ್ರವಲ್ಲ, ದೆವ್ವಗಳಲ್ಲೆಲ್ಲ ಅತೀ ದುಷ್ಟನಾದ ಆಸ್ಮೋದೇಯುಸ್ ದೆವ್ವವನ್ನು ಆಕೆಯಿಂದ ತೊಲಗಿಸಬೇಕಾಗಿತ್ತು. ಸಾರಳನ್ನು ಮದುವೆಯಾಗಲು ಬೇರೆಯವರಿಗಿಂತಲೂ ತೊಬಿಯಾಸನಿಗೆ ಹಕ್ಕುಬಾಧ್ಯತೆ ಇತ್ತು. ತೊಬೀತನು ಹೊರಾಂಗಣದಿಂದ ಮನೆಯೊಳಕ್ಕೆ ಹೋದನು. ಅದೇ ಸಮಯದಲ್ಲಿ ರಾಗುಯೇಲನ ಮಗಳಾದ ಸಾರಳು ಮಹಡಿಯ ಕೊಠಡಿಯಿಂದ ಇಳಿದು ಬಂದಳು.
ಕೀರ್ತನೆ 25: 2-3. 4-5 6-7, 8-9
ಶ್ಲೋಕ: ಇಟ್ಟಿರುವೆ ಭರವಸೆ ನಿನ್ನಲೆ ದೇವಾ ಸನ್ನುತ
ಎತ್ತಿರುವೆ ಪ್ರಭೂ, ಹೃನ್ಮನಗಳನು ನಿನ್ನತ್ತ
ಇಟ್ಟಿರುವೆ ಭರವಸೆ ನಿನ್ನಲೆ ದೇವಾ ಸನ್ನುತ
ಆಗಲಿ ಆಶಾಭಂಗ ನಿನ್ನೆದುರಾಳಿಗಳಿಗೆ
ಹಾಗಾಗದಿರಲಿ ನಿನ್ನ ನಿರೀಕ್ಷಿಸುವವರಿಗೆ. ಶ್ಲೋಕ
ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು
ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ. ಶ್ಲೋಕ
ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು
ಆದಿಯಿಂದ ನೀ ತೋರಿದಚಲ ಪ್ರೀತಿಯನು
ಯೌವನದೆನ್ನ ಪಾಪ ಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ
ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ. ಶ್ಲೋಕ
ಸತ್ಯಸ್ವರೂಪನು, ದಯಾವಂತನು ಪ್ರಭು
ದಾರಿತಪ್ಪಿದವರಿಗೆ ಬೋಧಕನು ವಿಭು
ದೀನರನು ನಡೆಸುವನು ತನ್ನ ವಿಧಿಗನುಸಾರ
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ. ಶ್ಲೋಕ
ಶುಭಸಂದೇಶ: ಮಾರ್ಕ 12: 18-27
ಅನಂತರ ಸದ್ದುಕಾಯರು ಯೇಸುಸ್ವಾಮಿಯ ಬಳಿಗೆ ಬಂದರು. ಸತ್ತಮೇಲೆ ಪುನರುತ್ಥಾನ ಇಲ್ಲವೆಂಬುದು ಇವರ ಅಭಿಮತ. ಇವರು ಯೇಸುವನ್ನು, “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೇ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ವಿವಾಹವಾಯಿತು. ಅವನು ಮಕ್ಕಳಿಲ್ಲದೆ ಮೃತನಾದುದರಿಂದ ಎರಡನೆಯವನು ಅವನ ಹೆಂಡತಿಯನ್ನು ಮದುವೆಮಾಡಿಕೊಂಡು, ಸಂತಾನವಿಲ್ಲದೆ ಸಾವನ್ನಪ್ಪಿದ. ಮೂರನೆಯವನಿಗೂ ಇದೇ ಗತಿಯಾಯಿತು. ಅನಂತರ, ಉಳಿದವರೂ ಒಬ್ಬರ ಬಳಿಕ ಇನ್ನೊಬ್ಬರು ಆಕೆಯನ್ನು ಮದುವೆ ಮಾಡಿಕೊಂಡು, ಸಂತಾನವಿಲ್ಲದೆ ಸತ್ತುಹೋದರು. ಕಡೆಗೆ ಆ ಸ್ತ್ರೀಯೂ ಮರಣ ಹೊಂದಿದಳು. ಆಗ ಹೇಳಿ, ಪುನರುತ್ಥಾನದ ದಿನದಲ್ಲಿ, ಆಕೆ ಯಾರ ಹೆಂಡತಿ ಎನಿಸಿಕೊಳ್ಳುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹವಾಗಿದ್ದರಲ್ಲವೇ?” ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು, “ನಿಮ್ಮದು ಎಂಥಾ ತಪ್ಪು ಅಭಿಪ್ರಾಯ! ಪವಿತ್ರಗ್ರಂಥವನ್ನು ಆಗಲಿ, ದೇವರ ಶಕ್ತಿಯನ್ನಾಗಲೀ ನೀವು ಅರ್ಥಮಾಡಿಕೊಂಡಿಲ್ಲ. ಸತ್ತವರು ಪುನರುತ್ಥಾನವಾದ ಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಸ್ವರ್ಗದ ದೇವದೂತರಂತೆ ಇರುತ್ತಾರೆ. ಇದಲ್ಲದೆ ಸತ್ತವರು ಪುನರುತ್ಥಾನವಾಗುವ ವಿಷಯದಲ್ಲಿ ಹೇಳುವುದಾದರೆ: ‘ನಾನು ಅಬ್ರಹಾಮನಿಗೆ ದೇವರು, ಇಸಾಕನಿಗೆ ದೇವರು, ಯಕೋಬನಿಗೆ ದೇವರು’ ಎಂದು ದೇವರು ಮೋಶೆಗೆ ಹೇಳಿದ್ದನ್ನು ಮೋಶೆಯ ಗ್ರಂಥದಲ್ಲಿ ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ, ನೀವು ಓದಿರಬೇಕಲ್ಲವೆ? ದೇವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ, ನಿಮ್ಮ ಅಭಿಪ್ರಾಯ ತೀರಾ ತಪ್ಪಾಗಿದೆ,” ಎಂದರು.
No comments:
Post a Comment