ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.06.21 - “ಏಕೆ ಇಷ್ಟು ಭಯ? ಇನ್ನೂ ನಿಮಗೆ ವಿಶ್ವಾಸವಿಲ್ಲವೇ?”

ಮೊದಲನೇ ವಾಚನ: ಯೋಬ 38:1, 8-11

ಬಿರುಗಾಳಿಯೊಳಗಿಂದ ಸರ್ವೇಶ್ವರ ಯೋಬನಿಗೆ ಕೊಟ್ಟ ಪ್ರತ್ಯುತ್ತರ ಇದು: “ಭೂಗರ್ಭವನ್ನು ಭೇದಿಸಿಕೊಂಡು ಬಂದ ಸಮುದ್ರವನು ದ್ವಾರಗಳಿಂದ ಬಂಧಿಸಿ ಮುಚ್ಚಿದವನಾರು? ಅದಕ್ಕೆ ಮೋಡಗಳನು ತೊಡಿಸಿ, ಕಾರ್ಗತ್ತಲನು ಉಡಿಸಿದವನು ಯಾರು? ಅದಕ್ಕೆ ಸರಹದ್ದನು ನಿಯಮಿಸಿ ಕದಗಳನೂ ಅಗುಳಿಗಳನೂ ಇಟ್ಟವನಾರು? ‘ಇಲ್ಲಿಯತನಕ ಬರಬಹುದು, ಇದನು ಮೀರಿ ಬರಕೂಡದು’ ‘ಮೊರೆವ ನಿನ್ನ ತೆರೆಗೆ ಇಲ್ಲಿಗೇ ತಡೆ’ ಎಂದು ವಿಧಿಸಿದವನು ನಾನು.

ಕೀರ್ತನೆ: 107: 23-24, 25-26, 28-29, 30-31
ಶ್ಲೋಕ: ಕೃತಜ್ಞತೆಯಿಂದ ಸಲ್ಲಿಸಿರಿ ಪ್ರಭುವಿಗೆ ಸ್ತುತಿಯನು. 

ಹಡಗನು ಹತ್ತಿ ಕಡಲನು ದಾಟಿದರು I
ಸಾಗರ ಹಾಯ್ದು‍ವ್ಯಾಪಾರ ಗೈದರು II
ಕಂಡರು ಪ್ರಭುವಿನ ಪವಾಡಗಳನು I
ಸಮುದ್ರದೊಳಾತನ ಅದ್ಭುತಗಳನು II ಶ್ಲೋಕ

ಬಿರುಗಾಳಿಯೆದ್ದಿತು ಆತನಾಜ್ಞೆಯೊಂದಕ್ಕೆ I
ತರಂಗಗಳು ಭೊರ್ಗರೆದವು ಅದರೊಂದಿಗೆ II
ಗಗನಕ್ಕೇರಿದರು, ಅಗಾಧಕ್ಕಿಳಿದರು I
ಗಂಡಾಂತರಕೆ ಸಿಲುಕಿ ಕರಗಿಹೋದರು II ಶ್ಲೋಕ

ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I
ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ II
ಆ ಬಿರುಗಾಳಿಯನಾತ ಶಾಂತಪಡಿಸಿದ I
ನಿಂತುಹೋಯಿತಾ ಸಮುದ್ರದಲೆಗಳ ಮೊರೆತ II ಶ್ಲೋಕ

ತಂದಿತು ಪ್ರಶಾಂತತೆ ಸಂತಸವನವರಿಗೆ I
ಮುಟ್ಟಿಸಿದನಾತ ಅವರಾಶಿಸಿದ ರೇವಿಗೆ II
ಹೊಗಳಲಿ ಪ್ರಭುವಿನಚಲ ಪ್ರೀತಿಯನು I
ಜನರಿಗಾತ ಎಸಗಿದ ಅತಿಶಯಗಳನು II ಶ್ಲೋಕ

ಎರಡನೆಯ ವಾಚನ: 2 ಕೊರಿಂಥಿಯರಿಗೆ  5:14-17

ಯೇಸುಕ್ರಿಸ್ತರ ಪ್ರೀತಿಯ ಪಾಲನೆಗೆ ನಾವು ಒಳಗಾಗಿದ್ದೇವೆ. ಎಲ್ಲಾ ಮಾನವರಿಗೋಸ್ಕರ ಒಬ್ಬನು ಮರಣಹೊಂದಿದನು. ಆದ್ದರಿಂದ ನಾವೆಲ್ಲರೂ ಆ ಮರಣದಲ್ಲಿ ಪಾಲುಗಾರರು. ಸರ್ವರಿಗೂ ಯೇಸು ಪ್ರಾಣತ್ಯಾಗಮಾಡಿದರು. ಪರಿಣಾಮವಾಗಿ, ಇನ್ನು ಮುಂದೆ ಜೀವಿಸುವವರು ತಮಗಾಗಿ ಜೀವಿಸದೆ, ಸತ್ತು ಪುನರುತ್ಥಾನರಾದ ಯೇಸುವಿಗಾಗಿ ಜೀವಿಸಬೇಕು. ಇನ್ನು ಮುಂದೆ ನಾವು ಯಾರನ್ನೂ ಕೇವಲ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಂದು ಕಾಲದಲ್ಲಿ, ಕ್ರಿಸ್ತಯೇಸುವನ್ನು ನಾವು ಹಾಗೆ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ. ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ. ಹಳೆಯದೆಲ್ಲಾ ಅಳಿದು ಹೋಗುತ್ತದೆ. ಹೊಸದಿದೋ, ಜನ್ಮ ತಳೆದಿದೆ.

ಶುಭಸಂದೇಶ: ಮಾರ್ಕ 4: 35-41


ಆ ದಿನ ಸಾಯಂಕಾಲ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ಸರೋವರದ ಆಚೆದಡಕ್ಕೆ ಹೋಗೋಣ,” ಎಂದರು. ಆಗ ಶಿಷ್ಯರು ಜನರ ಗುಂಪನ್ನು ಬಿಟ್ಟು ದೋಣಿಯಲ್ಲಿ ಕುಳಿತಿದ್ದ ಯೇಸುವನ್ನು ಹಾಗೆಯೇ ತಮ್ಮ ಜೊತೆಯಲ್ಲಿ ಕರೆದುಕೊಂಡು ಹೊರಟರು. ಆ ದೋಣಿಯ ಸಂಗಡ ಬೇರೆ ದೋಣಿಗಳೂ ಇದ್ದವು. ಸ್ವಲ್ಪ ಮುಂದೆ ಹೋಗುವಷ್ಟರಲ್ಲೇ ದೊಡ್ಡ ಬಿರುಗಾಳಿ ಎದ್ದಿತು. ಅಲೆಗಳು ದೋಣಿಗೆ ಅಪ್ಪಳಿಸತೊಡಗಿದವು. ದೋಣಿಯೊಳಗೆ ನೀರು ನುಗ್ಗಿ ಅದು ತುಂಬಿ ಹೋಗುವುದರಲ್ಲಿತ್ತು. ಯೇಸುವಾದರೋ ದೋಣಿಯ ಹಿಂಭಾಗದಲ್ಲಿ ದಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದರು. ಶಿಷ್ಯರು ಅವರನ್ನು ಎಬ್ಬಿಸಿ, “ಗುರುವೇ, ನಾವು ಸಾಯುತ್ತಿದ್ದೇವೆ, ತಮಗೆ ಚಿಂತೆಯೇ ಇಲ್ಲವೆ?” ಎಂದರು. ಆಗ ಯೇಸು ಎಚ್ಚೆತ್ತು,, ಬಿರುಗಾಳಿಯನ್ನು ಗದರಿಸಿದರು. ಸರೋವರಕ್ಕೆ, “ಶಾಂತವಾಗಿರು! ಮೊರೆಯಬೇಡ,” ಎಂದು ಆಜ್ಞಾಪಿಸಿದರು. ತಕ್ಷಣ ಬಿರುಗಾಳಿ ನಿಂತಿತು. ವಾತಾವರಣ ಪ್ರಶಾಂತವಾಯಿತು. ಅನಂತರ ತಮ್ಮ ಶಿಷ್ಯರಿಗೆ, “ಏಕೆ ಇಷ್ಟು ಭಯ? ಇನ್ನೂ ನಿಮಗೆ ವಿಶ್ವಾಸವಿಲ್ಲವೇ?” ಎಂದರು. ಶಿಷ್ಯರಾದರೋ ಭಯಭ್ರಾಂತರಾಗಿ “ಗಾಳಿಯೂ ಸರೋವರವೂ ಇವರು ಹೇಳುವಂತೆ ಕೇಳಬೇಕಾದರೆ ಇವರು ಯಾರಿರಬಹುದು?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

No comments:

Post a Comment