ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

23.06.21 - "ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ"

ಮೊದಲನೇ ವಾಚನ: ಆದಿಕಾಂಡ 15:1-12, 17-18

ಈ ಘಟನೆಗಳೆಲ್ಲ ನಡೆದ ಮೇಲೆ ಅಬ್ರಾಮನಿಗೆ ಒಂದು ದಿವ್ಯ ದರ್ಶನ ಆಯಿತು. ಅದರಲ್ಲಿ ಸರ್ವೇಶ್ವರಸ್ವಾಮಿಯ ಈ ವಾಣಿ ಕೇಳಿಸಿತು: “ಅಬ್ರಾಮನೇ, ಭಯಪಡಬೇಡ, ನಿನ್ನನ್ನು ರಕ್ಷಿಸುವ ಕವಚ ನಾನೇ, ಘನವಾದ ಬಹುಮಾನ ಸಿಗುವುದು ನಿನಗೆ.” ಅದಕ್ಕೆ ಪ್ರತ್ಯುತ್ತರವಾಗಿ ಅಬ್ರಾಮನು - "ಸ್ವಾಮಿ ಸರ್ವೇಶ್ವರಾ, ನನಗೆ ಏನು ಕೊಟ್ಟರೇನು? ನಾನು ಪುತ್ರಸಂತಾನವಿಲ್ಲದವನು. ನನ್ನ ಮನೆ ಮಾರುಗಳಿಗೆ ಉತ್ತರಾಧಿಕಾರಿ ದಮಸ್ಕದ ಎಲೀಯೆಜರನೇ ಹೊರತು ಮತ್ತಾರೂ ಇಲ್ಲ. ನೀವು ನನಗೆ ಮಕ್ಕಳನ್ನು ಕೊಟ್ಟಿಲ್ಲ. ನನ್ನ ಮನೆದಾಸನೇ ನನಗೆ ಉತ್ತರಾಧಿಕಾರಿ,” ಎಂದನು. ಮತ್ತೆ ಸ್ವಾಮಿಯ ವಾಣಿ - “ಇಲ್ಲ, ಅವನು ಉತ್ತರಾಧಿಕಾರಿಯಾಗುವುದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಉತ್ತರಾಧಿಕಾರಿ ಆಗುತ್ತಾನೆ,” ಎಂದಿತು. ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, “ಆಕಾಶದ ಕಡೆಗೆ ನೋಡು. ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!” ಎಂದರು. ಅಬ್ರಾಮನು ಸರ್ವೇಶ್ವರಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು. ಸರ್ವೇಶ್ವರ ಬಳಿಕ ಅಬ್ರಾಮನಿಗೆ ಇಂತೆಂದರು: “ಈ ನಾಡನ್ನು ನಿನಗೆ ಸೊತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ,” ಎಂದರು. ಅದಕ್ಕೆ ಅಬ್ರಾಮನು, “ಸರ್ವೇಶ್ವರಾ, ಇದು ನನ್ನ ಸೊತ್ತು ಎಂದು ತಿಳಿದುಕೊಳ್ಳುವುದು ಹೇಗೆ?” ಎಂದನು. ಸರ್ವೇಶ್ವರ ಪ್ರತ್ಯುತ್ತರವಾಗಿ, “ನೀನು ಮೂರು ವರ್ಷದ ಒಂದು ಕಡಸನ್ನು, ಒಂದು ಆಡನ್ನು, ಒಂದು ಟಗರನ್ನು, ಒಂದು ಬೆಳವಕ್ಕಿಯನ್ನು ಹಾಗು ಒಂದು ಮರಿಪಾರಿವಾಳವನ್ನು ತೆಗೆದುಕೊಂಡು ಬಾ,” ಎಂದರು. ಅಬ್ರಾಮನು ಅವುಗಳನ್ನೆಲ್ಲಾ ತೆಗೆದುಕೊಂಡು ಬಂದು ಆ ಪ್ರಾಣಿಗಳನ್ನು ಕಡಿದು, ಎರಡೆರಡು ಹೋಳು ಮಾಡಿ, ತುಂಡಿಗೆ ತುಂಡನ್ನು ಎದುರಾಗಿಟ್ಟನು. ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ. ಆ ಪ್ರಾಣಿಗಳ ತುಂಡುಗಳ ಮೇಲೆ ರಣಹದ್ದುಗಳು ಎರಗಿದಾಗ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು. ಹೊತ್ತು ಮುಳುಗುತ್ತಿದ್ದಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಭೀಕರವಾದ ಕಾರ್ಗತ್ತಲು ಅವನನ್ನು ಕವಿಯಿತು. ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಟಿಗೆಯೊಂದು ಕಾಣಿಸಿಕೊಂಡು ಆ ತುಂಡುಗಳ ನಡುವೆ ಹಾದುಹೋದವು. ಸರ್ವೇಶ್ವರ ಅಂದೇ ಅಬ್ರಾಮನ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು: “ಈಜಿಪ್ಟಿನ ನದಿಯಿಂದ ಯೂಫ್ರೆಟಿಸ್ ಮಹಾನದಿಯವರೆಗೆ, ಕೊಡುವೆನು ಈ ನಾಡೆಲ್ಲವನ್ನು ನಿನ್ನ ಸಂತತಿಯವರಿಗೆ,”

ಕೀರ್ತನೆ: 105: 1-2. 3-4. 6-7. 8-9
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು

ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು I
ಮಾಡಿರಿ ಆತನ ನಾಮಸ್ಮರಣೆಯನು I
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II ಶ್ಲೋಕ

ಹಾಡಿ ಪಾಡಿ ಹೊಗಳಿರಿ ಪ್ರಭುವನು I
ಧ್ಯಾನಿಸಿ ನೀವು ಆತನ ಪವಾಡಗಳನು II
ಹೆಮ್ಮೆಪಡಿ, ನೆನೆದಾತನ ಶ್ರೀನಾಮ I ಶ್ಲೋಕ

ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II
ಅರಸಿರಿ ಪ್ರಭುವನೂ ಆತನ ಶಕ್ತಿಯನೂ I
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II ಶ್ಲೋಕ

ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು I
ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು II
ಪ್ರಭು ನಮ್ಮ ದೇವನೆಂಬುದು ಶ್ರುತ I
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ II ಶ್ಲೋಕ

ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I
ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II
ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I
ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು I ಶ್ಲೋಕ

ಶುಭಸಂದೇಶ: ಮತ್ತಾಯ 7:15-20


ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತುತಿನ್ನುವ ತೋಳಗಳು. ಅವರ ವರ್ತನೆಯಿಂದ ನೀವು ಅವರನ್ನು ಗುರುತು ಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ? ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ. ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು. ಆದ್ದರಿಂದ ಸುಳ್ಳು ಪ್ರವಾದಿಗಳನ್ನು ಅವರ ನಡತೆಯಿಂದ ಗುರುತುಹಚ್ಚುವಿರಿ."

No comments:

Post a Comment