ಮೊದಲನೇ ವಾಚನ: 2 ಕೊರಿಂಥಿಯರಿಗೆ 8: 1-9
ಸಹೋದರರೇ, ಮಕೆದೋನಿಯ ಸಭೆಗಳಿಗೆ ದೇವರು ದಯಪಾಲಿಸಿದ ಕೃಪಾತಿಶಯಗಳನ್ನು ನಾನು ನಿಮಗೆ ತಿಳಿಸಬಯಸುತ್ತೇನೆ. ಈ ಸಭೆಗಳವರು ಕಷ್ಟಸಂಕಟಗಳ ಕುಲುಮೆಯಲ್ಲಿ ಬೆಂದಿದ್ದರೂ ಹರ್ಷಭರಿತರಾಗಿದ್ದಾರೆ. ಕಡುಬಡತನದಲ್ಲಿ ನರಳುತ್ತಿದ್ದರೂ ಅಪಾರ ಔದಾರ್ಯದಿಂದ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಶಕ್ತಿಗನುಸಾರವಾಗಿ ಮಾತ್ರವಲ್ಲ, ಕೆಲವೊಮ್ಮೆ ಶಕ್ತಿವಿೂರಿಯೂ ನೀಡಿದ್ದಾರೆಂದು ನಾನು ಖಂಡಿತವಾಗಿ ಹೇಳುತ್ತೇನೆ. ದೇವಜನರಿಗೆ ನೆರವಾಗುವ ಸೌಭಾಗ್ಯದಲ್ಲಿ ತಾವೂ ಭಾಗಿಗಳಾಗಬೇಕೆಂದು, ಸ್ವಂತ ಇಷ್ಟದಿಂದ ನಮ್ಮನ್ನು ಅವರು ಬಹುವಾಗಿ ಬೇಡಿಕೊಂಡರು. ಇದನ್ನು, ನಾವು ನಿರೀಕ್ಷಿಸಲೇ ಇಲ್ಲ! ಮೊಟ್ಟಮೊದಲು ಅವರು ತಮ್ಮನ್ನೇ ಪ್ರಭುವಿಗೆ ಸಮರ್ಪಿಸಿದರು. ಅನಂತರ ದೈವಚಿತ್ತಕ್ಕೆ ಅನುಗುಣವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು. ಇಂಥ ಪ್ರೀತಿಮಯ ಸೇವಾಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ತೀತನು ಅದನ್ನು ಮುಂದುವರಿಸಿ, ಪೂರ್ಣಗೊಳಿಸಬೇಕೆಂದು ನಾವು ಆತನನ್ನು ಕೇಳಿಕೊಂಡಿದ್ದೇವೆ. ವಿಶ್ವಾಸ, ವಾಕ್ಚಾತುರ್ಯ, ಜ್ಞಾನ, ಶ್ರದ್ಧೆ, ನಮ್ಮ ಬಗ್ಗೆ ನಿಮಗಿರುವ ಪ್ರೀತಿ - ಈ ಎಲ್ಲಾ ವಿಷಯಗಳಲ್ಲೂ ನೀವು ಸಮೃದ್ಧರಾಗಿದ್ದೀರಿ. ಹಾಗೆಯೇ ಈ ಸೇವಾಕಾರ್ಯದಲ್ಲೂ ಸಮೃದ್ಧರಾಗಿರಿ. ಇದನ್ನು ನಾನು ಆಜ್ಞಾರೂಪವಾಗಿ ಹೇಳುತ್ತಿಲ್ಲ. ಬೇರೆಯವರಿಗೆ ಈ ಸೇವಾಕಾರ್ಯದಲ್ಲಿ ಇರುವ ಶ್ರದ್ಧೆಯನ್ನು ಆದರ್ಶವಾಗಿ ಹಿಡಿದು ನಿಮ್ಮ ಪ್ರೀತಿ ಎಷ್ಟು ಯಥಾರ್ಥವಾದುದೆಂದು ಕಂಡುಕೊಳ್ಳುವುದಕ್ಕಾಗಿ ಇದನ್ನು ಹೇಳುತ್ತಿದ್ದೇನೆ. ಪ್ರಭು ಯೇಸುಕ್ರಿಸ್ತರ ಕೃಪಾಶಕ್ತಿಯನ್ನು ನೀವು ಬಲ್ಲಿರಿ. ಅವರು ತಮ್ಮ ಬಡತನದಿಂದ ನಿಮ್ಮನ್ನು ಶ್ರೀಮಂತವಾಗಿಸಲೆಂದು, ತಾವು ಶ್ರೀಮಂತರಾಗಿದ್ದರೂ ನಿಮಗೋಸ್ಕರ ಬಡವರಾದರು.
ಕೀರ್ತನೆ: 146: 2, 5-9
ಶ್ಲೋಕ: ನನ್ನ ಮನವೇ, ವಂದಿಸು ಪ್ರಭುವನು.
ಪ್ರಾಣವಿರುವವರೆಗೆ ಸ್ತುತಿಸುವೆನು ಪ್ರಭುವನು
ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು. ಶ್ಲೋಕ
ಇಸ್ರಯೇಲ ಕುಲದೇವರು ಯಾರಿಗೆ ಉದ್ಧಾರಕನೋ,
ಅವನೇ ಧನ್ಯನು ಪ್ರಭುವನು ತನ್ನ ದೇವರೆಂದು
ಯಾರು ನಂಬಿಹನೋ, ಅವನೇ ಧನ್ಯನು. ಶ್ಲೋಕ
ಭೂಮ್ಯಾಕಾಶ, ಸಾಗರ,
ಚರಾಚರಗಳನು ನಿರ್ಮಿಸಿದವ ಆತನೆ
ಕೊಟ್ಟ ವಾಗ್ದಾನಗಳನು ತಪ್ಪದೆ
ನೆರವೇರಿಸುವವ ಆತನೆ. ಶ್ಲೋಕ
ದೊರಕಿಸುವನು ನ್ಯಾಯ ದಲಿತರಿಗೆ
ಒದಗಿಸುವನು ಆಹಾರ ಹಸಿದವರಿಗೆ
ನೀಡುವನು ಬಿಡುಗಡೆ ಬಂಧಿತರಿಗೆ ಶ್ಲೋಕ
ಕಣ್ಣನ್ನೀಯುವನು ಪ್ರಭು ಕುರುಡರಿಗೆ
ಉದ್ಧಾರಕನಾ ಪ್ರಭು ಕುಗ್ಗಿದವರಿಗೆ
ಆತನ ಒಲವಿರುವುದು ಸಾಧು ಸಜ್ಜನರಿಗೆ
ರಕ್ಷಿಸುವನು ಪ್ರಭು ಪರದೇಶಿಗಳನು
ಆದರಿಸುವನು ಅನಾಥರನು, ವಿಧವೆಯರನು ಶ್ಲೋಕ
ಶುಭಸಂದೇಶ: ಮತ್ತಾಯ 5:43-48
No comments:
Post a Comment