ಮೊದಲನೇ ವಾಚನ: 13:1-2, 25 - 14:1, 26-29, 34-35
ಸರ್ವೇಶ್ವರ ಸ್ವಾಮಿ ಮೋಶೆಗೆ, "ನಾನು ಇಸ್ರಯೇಲರಿಗೆ ಕೊಡಲಿರುವ ಕಾನಾನ್ ನಾಡನ್ನು ಸಂಚರಿಸಿ, ನೋಡಿ ಬರಲು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳಿಸು," ಎಂದು ಆಜ್ಞಾಪಿಸಿದರು. ನಾಲ್ವತ್ತು ದಿವಸ ಆ ನಾಡನ್ನು ಸಂಚರಿಸಿ ನೋಡಿ ಆದ ಮೇಲೆ ಅವರು ಹಿಂದಿರುಗಿ ಬಂದರು. ಪಾರಾನ್ ಮರುಭೂಮಿಯ ಕಾದೇಶಿನಲ್ಲಿದ್ದ ಮೋಶೆ, ಆರೋನ್ ಹಾಗೂ ಇಸ್ರಯೇಲ್ ಜನ ಸಮೂಹದ ಬಳಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ನಾಡಿನ ಹಣ್ಣುಗಳನ್ನು ತೋರಿಸಿದರು. ಮೋಶೆಗೆ, "ನೀವು ನಮ್ಮನ್ನು ಕಳಿಸಿದ ನಾಡಿಗೆ ಹೋಗಿದ್ದೆವು. ಅದು ಹಾಲು - ಜೇನು ಹರಿಯುವಂಥ ನಾಡು, ಅಲ್ಲಿನ ಹಣ್ಣು ಹಂಪಲುಗಳು ಇಂಥವು. ಅಂತೆಯೇ ಆ ನಾಡಿನ ನಿವಾಸಿಗಳು ಬಲಿಷ್ಠರು. ಅವರಿರುವ ಪಟ್ಟಣಗಳು ದೊಡ್ಡವು; ಅವು ಕೋಟೆಕೊತ್ತಲುಗಳಿಂದ ಕೂಡಿವೆ. ಅದೂ ಅಲ್ಲದೆ ಅಲ್ಲಿ "ಅನಕಿಮ್" ವಂಶಸ್ಥರನ್ನು ಕಂಡೆವು. ದಕ್ಷಿಣ ಪ್ರಾಂತ್ಯದಲ್ಲಿ ಅಮಾಲೇಕ್ಯರು, ಮಲೆನಾಡಿನಲ್ಲಿ ಹಿತ್ತಿಯರು, ಯೆಬೂಸಿಯರು ಹಾಗು ಅಮೋರಿಯರು ಮತ್ತು ಸಮುದ್ರ ತೀರದಲ್ಲಿ ಹಾಗೂ ಜೋರ್ಡಾನ್ ನದಿಯ ಪರಿಸರದಲ್ಲಿ ಕಾನಾನ್ಯರು ವಾಸವಾಗಿದ್ದಾರೆ," ಎಂದು ವರದಿ ಮಾಡಿದರು. ಮೋಶೆಗೆ ವಿರುದ್ಧ ಗೊಣಗುಟ್ಟುತ್ತಿದ್ದವರನ್ನು ಕಾಲೇಬನು ಸಮಾಧಾನಗೊಳಿಸುತ್ತಾ, "ನಾವು ಧೈರ್ಯದಿಂದ ಆ ಮಲೆನಾಡಿಗೆ ಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಮ್ಮಿಂದ ಸಾಧ್ಯ," ಎಂದನು. ಆದರೆ ಅವನ ಜೊತೆಯಲ್ಲಿ ಹೋಗಿದ್ದವರು, "ಆ ಜನರು ನಮಗಿಂತ ಬಲಿಷ್ಠರು! ಅವರ ಮೇಲೆ ಜಯ ಸಾಧಿಸಲು ನಮಗೆ ಶಕ್ತಿ ಸಾಲದು," ಎಂದರು. ಅದಲ್ಲದೆ ತಾವು ಸಂಚರಿಸಿ ನೋಡಿ ಬಂದ ನಾಡಿನ ವಿಷಯವಾಗಿ ಇಸ್ರಯೇಲರಿಗೆ ಅಶುಭ ಸಮಾಚಾರವನ್ನೇ ಹೇಳುವವರಾದರು. "ನಾವು ಸಂಚಾರ ಮಾಡಿ ನೋಡಿ ಬಂದ ನಾಡು ತನ್ನಲ್ಲಿ ವಾಸಿಸುವವರನ್ನೇ ಕಬಳಿಸುವಂತಿದೆ. ನಾವು ಅಲ್ಲಿ ನೋಡಿದ ಜನರೆಲ್ಲರು ಬಹು ಎತ್ತರವಾದ ವ್ಯಕ್ತಿಗಳು ಅಲ್ಲಿ "ನೆಫೀಲಿಯರನ್ನು" ಅಂದರೆ ನೆಫೀಲಿಯನ ವಂಶದವರಾದ "ಅನಕಿಮ್" ರನ್ನು ನೋಡಿದೆವು. ಅವರ ಮುಂದೆ ನಾವು ಮಿಡತೆಗಳಂತೆ ಇದ್ದೆವು. ಅವರಿಗೂ ನಾವು ಹಾಗೆ ಕಾಣಿಸಿಕೊಂಡೆವು," ಎಂದರು. ಜನರೆಲ್ಲರೂ ಈ ವರದಿಯನ್ನು ಕೇಳಿ ಗಟ್ಟಿಯಾಗಿ ಗೋಳಿಟ್ಟರು. ರಾತ್ರಿಯೆಲ್ಲಾ ಅಳುತ್ತಿದ್ದರು. ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ: "ನನಗೆ ವಿರೋಧವಾಗಿ ಗೊಣಗುಟ್ಟುವ ಈ ದುಷ್ಟ ಸಮೂಹದವರನ್ನು ನಾನು ಎಷ್ಟು ಕಾಲ ಸಹಿಸಲಿ! ಈ ಇಸ್ರಯೇಲರು ನನಗೆ ವಿರುದ್ಧ ಗೊಣಗುಟ್ಟುವ ಮಾತುಗಳು ನನಗೆ ಕೇಳಿಸಿವೆ. ನೀವು ಅವರಿಗೆ ಹೀಗೆ ಹೇಳಬೇಕು: "ಸರ್ವೇಶ್ವರ ಹೇಳುವುದೇನೆಂದರೆ - ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಆಡಿಕೊಂಡ ಪ್ರಕಾರವೇ ನಾನು ಮಾಡುತ್ತೇನೆ. ನಿಮ್ಮ ಶವಗಳು ಈ ಮರಭೂಮಿಯಲ್ಲೇ ಬೀಳುವುವು. ನೀವು ನನಗೆ ವಿರೋಧವಾಗಿ ಗೊಣಗಿದ್ದರಿಂದ ನಿಮ್ಮಲ್ಲಿ ಎಣಿಕೆಯಾದವರೆಲ್ಲರೂ ಮರುಭೂಮಿಯಲ್ಲೇ ಸಾಯುವರು. ನೀವು ಆ ನಾಡನ್ನು ನಾಲ್ವತ್ತು ದಿನಗಳು ಸಂಚರಿಸಿ ನೋಡಿದಿರಿ. ಅಂತೆಯೇ ಒಂದು ದಿನಕ್ಕೆ ಒಂದು ವರ್ಷದ ಮೇರೆಗೆ ನಾಲ್ವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ; ನಾನು ಕೈ ಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳುವಿರಿ. ಇದು ಸರ್ವೇಶ್ವರನೆಂಬ ನಾನೇ ಹೇಳಿದ ಮಾತು. ನನಗೆ ವಿರೋಧವಾಗಿ ಒಟ್ಟು ಕೂಡಿಕೊಂಡಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಮಾಡಿಯೇ ತೀರುವೆನು. ಮರುಭೂಮಿಯಲ್ಲೇ ಅವರೆಲ್ಲರು ಸಾಯಬೇಕು," ಎಂದು ಹೇಳಿದರು.
ಕೀರ್ತನೆ: 106:6-7, 13-14, 21-22, 23
ಶ್ಲೋಕ: ಮರೆಯಬೇಡೆನ್ನನು ಪ್ರಭೂ , ನಿನ್ನ ಪ್ರಜೆಗೆ ದಯೆತೋರುವಾಗ
ಶುಭಸಂದೇಶ: ಮತ್ತಾಯ 15:21-28
ಯೇಸುಸ್ವಾಮಿ ನಸರೇತಿನಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು. ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆಯೊಬ್ಬಳು ಅವರ ಬಳಿಗೆ ಬಂದಳು. "ಸ್ವಾಮೀ ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವ ಹಿಡಿದು ಬಹಳ ಸಂಕಟ ಪಡುತ್ತಿದ್ದಾಳೆ," ಎಂದು ಕೂಗಿಕೊಂಡಳು. ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, "ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ," ಎಂದು ಕೇಳಿಕೊಂಡರು. ಆಗ ಯೇಸು, "ನನ್ನನ್ನು ಕಳಿಸಿರುವುದು ತಪ್ಪಿ ಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ," ಎಂದರು. ಆದರೂ ಆಕೆ ಯೇಸುವಿಗೆ ಅಡ್ಡ ಬಿದ್ದು, "ಸ್ವಾಮೀ ಸಹಾಯ ಮಾಡಿ," ಎಂದು ಯಾಚಿಸಿದಳು. ಅದಕ್ಕೆ ಯೇಸು, ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ ಎಂದರು. ಆಗ ಆಕೆ, "ಅದು ನಿಜ ಸ್ವಾಮೀ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ ಅಲ್ಲವೇ?" ಎಂದು ಮರುತ್ತರ ಕೊಟ್ಟಳು. ಆಗ ಯೇಸು, "ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ," ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣಹೊಂದಿದಳು.
No comments:
Post a Comment