ಮೊದಲನೇ ವಾಚನ: ಉಪದೇಶಕ 1:2, 2:21-23
ಉಪದೇಶಕನು ಹೇಳುವುದನ್ನು ಕೇಳಿ: ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥವೇ ವ್ಯರ್ಥ, ಎಲ್ಲವೂ ವ್ಯರ್ಥ, ಒಬ್ಬನು ಜ್ಞಾನದಿಂದಲೂ ತಿಳುವಳಿಕೆಯಿಂದಲೂ ಕೆಲಸಮಾಡಿ ಕಾರ್ಯವನ್ನು ಸಿದ್ಧಿಗೆ ತಂದಮೇಲೆ, ಅದಕ್ಕಾಗಿ ಪ್ರಯಾಸಪಡದವನಿಗೆ ಅದನ್ನು ವಾರಸುದಾರನಾಗಿ ಬಿಡಬೇಕಾಗುತ್ತದೆ. ಇದು ಸಹ ವ್ಯರ್ಥವಲ್ಲವೆ? ಇದು ಅನ್ಯಾಯವಲ್ಲವೆ? ಲೋಕದಲ್ಲಿ ಮಾನವನು ಹೃತ್ಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಸಿಗುವ ಲಾಭವಾದರೂ ಏನು? ಅವನ ಮನಸ್ಸಿಗೆ ನೆಮ್ಮದಿ ಇಲ್ಲ. ಇದು ಸಹ ವ್ಯರ್ಥವೇ ಸರಿ.
ಕೀರ್ತನೆ: 90:3-4, 5-6, 12-13, 14, 17
ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ
ಎರಡನೇ ವಾಚನ: ಕೊಲೊಸ್ಸೆಯರಿಗೆ: 3:1-5, 9-11

ನೀವು ಯೇಸುಕ್ರಿಸ್ತನೊಂದಿಗೆ ಪುನರುತ್ಥಾನ ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನಕೊಡಿ. ಕ್ರಿಸ್ತ ಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ .ನೀವು ಕ್ರಿಸ್ತ ಯೇಸುವಿನೊಂದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರಿಕೃತವಾಗಿರಲಿ. ಕ್ರಿಸ್ತ ಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವು ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಆವರೊಂದಿಗೆ ಪ್ರತ್ಯಕ್ಷರಾಗುವಿರಿ. ನಿಮ್ಮಲ್ಲಿರುವ ಪ್ರಾಪಂಚಿಕ ಆಸೆ ಆಕಾಂಕ್ಷೆಗಳನ್ನು ತ್ಯಜಿಸಿರಿ. ಹಾದರ, ಅನೈತಿಕತೆ, ಕಾಮಾಭಿಲಾಷೆ, ದುರಾಲೋಚನೆ, ವಿರ್ಗಹಾರಾಧನೆಗೆ ಸಮವಾಗಿರುವ ಲೋಭ - ಇವುಗಳನ್ನು ದಮನಮಾಡಿರಿ, ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ಪೂರ್ಣ ಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನ ಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ? ಈ ಸ್ವಭಾವವನ್ನು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ವ ಜ್ಞಾನವನ್ನು ಉಂಟುಮಾಡುತ್ತವೆ. ಇದನ್ನು ಧರಿಸಿಕೊಂಡಿರುವುದರಲ್ಲಿ ಗ್ರೀಕನು - ಯೆಹೂದ್ಯನು ಎಂಬ ಬೇಧವಿಲ್ಲ. ಸುನ್ನತಿ ಮಾಡಿಸಿಕೊಂಡವನು - ಸುನ್ನತಿ ಮಾಡಿಸಿಕೊಳ್ಳದವನು ಎಂಬ ಭೇದವಿಲ್ಲ. ನಾಗರಿಕ - ಅನಾಗರಿಕ, ಆಳು ಒಡೆಯ, ಎಂಬ ಬೇಧವಿಲ್ಲ, ಆದರೆ ಕ್ರಿಸ್ತರೇ ಸಮಸ್ತರಲ್ಲಿಯೂ ಸಮಸ್ತವೂ ಆಗಿರುವರು.
ಶುಭಸಂದೇಶ: ಲೂಕ 12:13-21

ಜನಸಮೂಹದಿಂದ ಒಬ್ಬನು, "ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗ ಮಾಡಿ ಕೊಡುವಂತೆ ನನ್ನ ಸೋದರನಿಗೆ ಹೇಳಿ," ಎಂದು ಯೇಸುಸ್ವಾಮಿಯನ್ನು ಕೇಳಿಕೊಂಡನು. ಅದಕ್ಕೆ ಯೇಸು, "ಏನಯ್ಯಾ, ನಿಮ್ಮಿಬ್ಬರ ನ್ಯಾಯ ತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗ ಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು?" ಎಂದು ಮರುಪ್ರಶ್ನೆ ಹಾಕಿದರು. ಆನಂತರ ಜನರನ್ನುದ್ದೇಶಿಸಿ, "ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಒಬ್ಬನಿಗೆ ಎಷ್ಟೇ ಸಿರಿ ಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ," ಎಂದು ಹೇಳಿದರು. ಆನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು: "ಒಬ್ಬ ಧನಿಕನಿದ್ದ. ಅವನ ಭೂಮಿ ಒಮ್ಮೆ ಸಮೃದ್ಧಿಯಾದ ಬೆಳೆ ಕೊಟ್ಟಿತು. ಆಗ ಅವನು , "ಆಗ ಅವನು, "ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ?" ಎಂದು ತನ್ನಲ್ಲೇ ಆಲೋಚಿಸುತ್ತಾ, "ಹೌದು, ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತು ಹಾಕಿಸಿ ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸ ಧಾನ್ಯಗಳನ್ನೂ ಸರಕು ಸಾಮಗ್ರಿಗಳನ್ನೂ ತುಂಬಿಸಿಡುತ್ತೇನೆ. ಅಲ್ಲದೆ, ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ; ಅರಾಮವಾಗಿರು, ತಿನ್ನು, ಕುಡಿ, ಸುಖಪಡು ಎಂದು ಹೇಳಿಕೊಳ್ಳುತ್ತೇನೆ ಎಂದುಕೊಂಡ. ಆಗ ದೇವರು, "ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧ ಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?" ದೇವರ ದೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು," ಎಂದರು ಯೇಸು.
No comments:
Post a Comment