ಮೊದಲನೇ ವಾಚನ : ಧರ್ಮೋಪದೇಶಕಾಂಡ : 10:12-22
ಮೋಶೆ ಹೋಗಿ ಇಸ್ರಯೇಲರೆಲ್ಲರಿಗೆ ಈ ಮಾತುಗಳನ್ನು ತಿಳಿಸಿದನು: "ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ; ವಿಶೇಷವಾದ ಕಾರ್ಯಗಳನ್ನು ನಿರ್ವಹಿಸುವುದು ಇನ್ನು ನನ್ನಿಂದಾಗದು; ಸರ್ವೇಶ್ವರ ನನಗೆ, "ನೀನು ಈ ಜೋರ್ಡಾನ್ ನದಿಯನ್ನು ದಾಟ ಕೂಡದು" ಎಂದು ಆಜ್ಞಾಪಿಸಿದ್ದಾರೆ. ನಿಮ್ಮ ದೇವರಾದ ಸರ್ವೇಶ್ವರ ತಾವೇ ನಿಮ್ಮ ಸೇನಾನಾಯಕರಾಗಿ ನದಿಯನ್ನು ದಾಟಿ ಹೋಗುವರು; ಅವರು ಆ ಜನಾಂಗಗಳನ್ನು ನಿಮ್ಮ ಎದುರಿನಲ್ಲಿ ನಿಲ್ಲದಂತೆ ನಾಶಮಾಡುವರು. ಆಗ ನೀವು ಅವರ ನಾಡನ್ನು ಸ್ವಾಧೀನ ಮಾಡಿಕೊಳ್ಳುವಿರಿ. ಸರ್ವೇಶ್ವರ ಆಜ್ಞಾಪಿಸಿದಂತೆ ಯೆಹೋಶುವನು ಕೂಡ ನಿಮ್ಮ ನಾಯಕನಾಗಿ ನದಿಯನ್ನು ದಾಟಿ ಹೋಗುವನು. ಸರ್ವೇಶ್ವರ, ಅಮೋರಿಯರ ಅರಸನಾದ ಸೀಹೋನ್ ಹಾಗೂ ಓಗರನ್ನು ನಾಶಮಾಡಿ ಅವರ ದೇಶವನ್ನು ನಿಮಗೆ ಸ್ವಾಧೀನಪಡಿಸಿದಂತೆ ಆ ಜನಾಂಗಗಳನ್ನೂ ನಾಶಮಾಡಿ ಅವರ ದೇಶವನ್ನು ನಿಮಗೆ ವಶಪಡಿಸುವರು. ಸರ್ವೇಶ್ವರ ಅವರನ್ನು ನಿಮ್ಮಿಂದ ಪರಾಜಯಪಡಿಸಿದಾಗ ನೀವು ಅವರ ವಿಷಯದಲ್ಲಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದುಕೊಳ್ಳಬೇಕು. ನೀವು ಶೂರರಾಗಿ ಧೈರ್ಯದಿಂದಿರಿ; ಅವರಿಗೆ ಅಂಜಬೇಡಿ, ಕಳವಳಪಡಬೇಡಿ. ನಿಮ್ಮ ದೇವರಾದ ಸರ್ವೇಶ್ವರನೇ ನಿಮ್ಮ ಸಂಗಡ ಇರುತ್ತಿರೆ; ಅವರು ನಿಮ್ಮನ್ನು ಕೈ ಬಿಡುವುದಿಲ್ಲ, ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ," ಎಂದು ಹೇಳಿದನು. ಆನಂತರ ಮೋಶೆ ಯೆಹೋಶುವನನ್ನು ಕರೆದು ಇಸ್ರಯೇಲರೆಲ್ಲರ ಮುಂದೆ, "ಸರ್ವೇಶ್ವರ ಇವರ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ನಾಡಿಗೆ ನೀನೇ ಇವರೊಡನೆ ಹೋಗಿ ಅದನ್ನು ಅವರಿಗೆ ಸ್ವಾಧೀನಪಡಿಸಬೇಕು. ಆದುದರಿಂದ ಶೂರನಾಗಿರು, ಧೈರ್ಯದಿಂದಿರು; ಸರ್ವೇಶ್ವರ ತಾವೇ ನಿನ್ನ ಮುಂದುಗಡೆ ಹೋಗುವರು; ಅವರೇ ನಿನ್ನ ಸಂಗಡ ಇರುವರು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ, ಕೈಬಿಡುವುದಿಲ್ಲ, ಅಂಜಬೇಡ; ಧೈರ್ಯದಿಂದಿರು," ಎಂದು ಹೇಳಿದನು.
ಧರ್ಮೋಪದೇಶಕಾಂಡ: 32:3-4, 7, 8-9, 12
ಪ್ರಕಟಿಸುವೆನು ನಾನು ಸರ್ವೇಶ್ವರನ ನಾಮಮಹತ್ವವನು. "ನಿಮಗೆ ಪೊರೆಬಂಡೆ ಆತ, ಆತನ ಕಾರ್ಯ ದೋಷರಹಿತ ಆತನ ಮಾರ್ಗ ನ್ಯಾಯಯುತ, ಆ ದೇವ ನಂಬಿಕಸ್ತ. ನೆನಪಿಗೆ ತಂದುಕೊಳ್ಳಿ ಆ ಪೂರ್ವಕಾಲವನು ಆಲೋಚಿಸಿ ನೋಡಿ ಪೂರ್ವಿಕರ ಚರಿತೆಯನು. ವಿಚಾರಿಸಿದರೆ ತಿಳಿಸುವರು ನಿಮ್ಮ ನಿಮ್ಮ ತಂದೆಗಳು. ಕೇಳಿದರೆ ವಿವರಿಸುವರು ನಿಮ್ಮ ನಿಮ್ಮ ಹಿರಿಯರು. ಪರಾತ್ಪರ ದೇವರು ಜನಾಂಗಗಳನ್ನು ಬೇರೆಬೇರೆ ಮಾಡಿದಾಗ, ಅವರವರಿಗೆ ಸ್ವದೇಶಗಳನು ವಿಂಗಡಿಸಿಕೊಟ್ಟಾಗ, ದೇವಕುವರ ಸಂಖ್ಯಾನುಸಾರ ಪ್ರದೇಶಗಳನ್ನು ಗೊತ್ತುಮಾಡಿದಾಗ, ಇಸ್ರಯೇಲರು ಮಾತ್ರ ಸ್ವಜನರಾದರು ಸರ್ವೇಶ್ವರನಿಗೆ, ಸ್ವಕೀಯ ಪ್ರಜೆಯಾದರು. ಆ ಯಕೋಬ ವಂಶಜರು ಆತನಿಗೆ. ಅವರನು ನಡೆಸಿದವನು ಸರ್ವೇಶ್ವರನೇ, ಅನ್ಯದೇವರಾರೂ ಇಲ್ಲ, ಆತನೊರ್ವನೇ.
ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು
ಶುಭಸಂದೇಶ: ಮತ್ತಾಯ 18:1-5, 10, 12-14
ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ಸ್ವರ್ಗ ಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು? ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ನಡುವೆ ನಿಲ್ಲಿಸಿ ಹೀಗೆಂದರು: "ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗ ಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗ ಸಾಮ್ರಾಜ್ಯದಲ್ಲಿ ಎಲ್ಲರಿಗಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ. ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣಿಕರಿಸಬೇಡಿ. ಸ್ವರ್ಗದಲ್ಲಿನ ಇವರ ದೂತರು ಸದಾಕಾಲ ನನ್ನ ಸ್ವರ್ಗೀಯ ಪಿತನ ಸಮ್ಮುಖದಲ್ಲಿ ಇದ್ದಾರೆ; ಇದು ನಿಮಗೆ ತಿಳಿದಿರಲಿ. ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ, ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ. ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದು ಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ."
No comments:
Post a Comment