ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

05.08.19 - "ಹೆಂಗಸರು, ಮಕ್ಕಳು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು"

ಮೊದಲನೇ ವಾಚನ: ಸಂಖ್ಯಾಕಾಂಡ 11:4-15

ಇಸ್ರಯೇಲರೊಡನೆ ಪ್ರಯಾಣ ಮಾಡುತ್ತಿದ್ದ ಅನ್ಯ ಜನರು ಮಾಂಸಕ್ಕಾಗಿ ಹಂಬಲಿಸಿದರು. ಇಸ್ರಯೇಲರು ಕೂಡ ಕಣ್ಣೀರಿಡುತ್ತಾ: "ಅಯ್ಯೋ, ನಮಗೆ ಮಾಂಸ ಕೊಡುವವರಾರು? ಈಜಿಪ್ಟ್ ದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜ, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವೆಲ್ಲಾ ನೆನಪಿಗೆ ಬರುತ್ತವೆ. ಇಲ್ಲಿಯಾದರೋ ನಮ್ಮ ಜೀವ ಬತ್ತಿ ಹೋಯಿತು. ಈ "ಮನ್ನ"ವನ್ನು ಬಿಟ್ಟರೆ ನಮಗೆ ಇನ್ನೇನು ಗತಿಯಿಲ್ಲ," ಎಂದು ನಿಷ್ಠುರವಾಗಿ ಮಾತಾನಾಡಿಕೊಳ್ಳುತ್ತಿದ್ದರು. ಆ  "ಮನ್ನ" ಕೊತ್ತಂಬರಿ ಬೀಜದಂತಿತ್ತು, ಗುಗ್ಗುಲದಂತೆ ಕಾಣಿಸುತ್ತಿತ್ತು. ಜನರು ಹೊರಗೆ ಹೋಗಿ ಅದನ್ನು ಕೂಡಿಸಿಕೊಂಡು ಬಂದು ಬೀಸುವ ಕಲ್ಲುಗಳಿಂದ ಬೀಸಿ, ಇಲ್ಲವೆ ಒರಳಲ್ಲಿ ಕುಟ್ಟಿ, ಮಡಕೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಳ್ಳುತ್ತಿದ್ದರು. ಅದರ ರುಚಿ ಎಣ್ಣೆ ಬೆರೆಸಿ ಮಾಡಿದ ತಿಂಡಿಯಂತೆ ಇರುತ್ತಿತ್ತು. ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುತ್ತಿದ್ದಾಗ ಅದರೊಂದಿಗೆ  "ಮನ್ನ"ವೂ ಬೀಳುತ್ತಿತ್ತು. ಎಲ್ಲಾ ಕುಟುಂಬದವರು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತು ನಿಷ್ಠುರವಾಗಿ ಮಾತನಾಡಿಕೊಳ್ಳುತ್ತಿದ್ದುದ್ದು ಮೋಶೆಗೆ ಕೇಳಿಸಿತು. ಆಗ ಸರ್ವೇಶ್ವರನ ಕೋಪ ಉಕ್ಕೇರಿತು; ಮೋಶೆಗೆ ಇದನ್ನು ಸಹಿಸಲಾಗಲಿಲ್ಲ. ಆತ ಸರ್ವೇಶ್ವರನಿಗೆ, "ನಿಮ್ಮ ದಾಸನಾದ ನನಗೇಕೆ ಈ ಜನರನ್ನು ಕರೆದೊಯ್ಯುವ ಭಾರವನ್ನು ಹಾಕಿದಿರಿ. ನಿಮ್ಮ ದಯೆಗೆ ನಾನು ಅಯೋಗ್ಯನಾದೆನೇ? ಮೊಲೆಗೂಸನ್ನು ಎತ್ತಿಕೊಂಡು ಹೋಗುವವಳಂತೆ ಈ ಜನರನ್ನು ತೋಳ ತೆಕ್ಕೆಯಲ್ಲಿರಿಸಿ, ಅವರ ಪೂರ್ವಜರಿಗೆ ನಾನು ಪ್ರಯಾಣ ಮಾಡಿದ ನಾಡಿಗೆ ಒಯ್ಯಿ" ಎಂದು ಹೇಳುತ್ತೀರಲ್ಲವೆ? ನಾನು ಅವರಿಗೆ ಹೆತ್ತ ತಾಯಿಯೋ? ಇವರು ನಿಷ್ಠುರವಾಗಿ ಮಾತನಾಡುತ್ತಾ ನನ್ನ ಬಳಿಗೆ ಬಂದು ತಿನ್ನಲಿಕೆ ನನಗೆ ಮಾಂಸವನ್ನು ಕೊಡು ಎಂದು ಕೇಳುತ್ತಿದ್ದಾರಲ್ಲಾ. ಇಷ್ಟು ಜನಕ್ಕೆ ಬೇಕಾದ ಮಾಂಸ ನನಗೆಲ್ಲಿ ದೊರಕೀತು? ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವುದು ಅಸಾಧ್ಯ. ಅದು ನನ ಶಕ್ತಿಗೆ ಮೀರಿದ ಕೆಲಸ. ನೀವು ಹೀಗೆ ಮಾಡುವುದಕಿಂತಲೂ ನನ್ನನ್ನು ಈ ಕೂಡಲೆ ಕೊಂದು ಹಾಕಿದರೆ ಉಪಕಾರವಾದೀತು; ನನಗೆ ಆಗುತ್ತಿರುವ ಸಂಕಟವನ್ನು ಸಹಿಸಲಾರೆ," ಎಂದನು.

ಕೀರ್ತನೆ: 81:12-13, 14-15, 16-17

ಶ್ಲೋಕ: ಬಲಪ್ರದನಾದ ದೇವನಿಗೆ ಮಾಡಿರಿ ಜಯಕಾರವನು

ಶುಭಸಂದೇಶ: ಮತ್ತಾಯ 14:13-21


ಯೊವಾನ್ನನ ಮರಣದ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ದೋಣಿ ಹತ್ತಿ ನಿರ್ಜನ ಪ್ರದೇಶಕ್ಕೆ  ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪು ಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಕೊಂಡು ಹೋದರು.  ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನ ಸಮೂಹ ಆಗಲೇ ಅಲ್ಲಿ ಸೇರಿತ್ತು. ಆ ಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು. ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು,  "ಇದು ನಿರ್ಜನ ಪ್ರದೇಶ, ಈಗಾಗಲೇ ಹೊತ್ತು ಮೀರಿ ಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿ ತಿನುಸುಗಳನ್ನು ಕೊಂಡುಕೊಳ್ಳಲಿ,"  ಎಂದರು. ಅದಕ್ಕೆ ಯೇಸು, "ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ," ಎಂದರು. ಶಿಷ್ಯರು ಪ್ರತ್ಯುತ್ತರವಾಗಿ, "ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ," ಎಂದರು. ಯೇಸು, "ಅವನ್ನು ಇಲ್ಲಿಗೆ ತನ್ನಿ,"ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆ ಮಾಡಿದರು. ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು. ಎಲ್ಲರೂ ಹೊಟ್ಟೆ ತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದವು. ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು.

No comments:

Post a Comment