ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.08.19 - "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು"

ಮೊದಲನೇ ವಾಚನ: ಸಂಖ್ಯಾಕಾಂಡ  20:1-13


ಇಸ್ರಯೇಲ್ ಸಮಾಜದವರು ಮೊದಲನೆಯ ತಿಂಗಳಿನಲ್ಲಿ  "ಚಿನ್"  ಎಂಬ ಮರುಭೂಮಿಗೆ ಬಂದು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು  ಮೃತಳಾದಳು; ಆಕೆಯನ್ನು ಅಲ್ಲೇ ಸಮಾಧಿ ಮಾಡಿದರು. ಜನರಿಗೆ ನೀರು ಇಲ್ಲದೆ ಹೋಯಿತು. ಅವರು ಮೋಶೆ ಮತ್ತು ಆರೋನರ ವಿರುದ್ಧ ಸಭೆ ಸೇರಿ ಮೋಶೆಯ ಸಂಗಡ ವಾದಿಸತೊಡಗಿದರು: "ಸರ್ವೇಶ್ವರನ ಸನ್ನಿಧಿಯಲ್ಲಿ ನಮ್ಮ ಬಂಧು ಬಳಗದವರು ಸತ್ತಂತೆ ನಾವೂ ಸತ್ತು ಹೋಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು! ನೀವು ಸರ್ವೇಶ್ವರನ ಪ್ರಜೆಯಾದ ನಮ್ಮನ್ನು ಈ ಮರಳುಗಾಡಿಗೆ ಕರೆದುಕೊಂಡು ಬಂದುದೇಕೆ? ನಾವೂ ನಮ್ಮ ಜಾನುವಾರಗಳೂ ಇಲ್ಲಿ ಸಾಯಬೇಕೆಂದೋ? ಈಜಿಪ್ಟ್ ದೇಶದಿಂದ ನಮ್ಮನ್ನು ಬರ ಮಾಡಿದ್ದು ಈ  ಕೀಳು ಸ್ಥಳಕ್ಕೆ ಸೇರಿಸಲಿಕ್ಕೋ? ಈ ನೆಲದಲ್ಲಿ ದವಸ ಧಾನ್ಯ ಬೆಳೆಯುವಂತಿಲ್ಲ; ಅಂಜೂರವಿಲ್ಲ, ದ್ರಾಕ್ಷಿಯಿಲ್ಲ, ದಾಳಿಂಬೆಯಿಲ್ಲ, ಕುಡಿಯುವುದಕ್ಕೆ ನೀರು ಕೂಡ ಇಲ್ಲ," ಎಂದು ದೂರಿದರು. ಮೋಶೆ ಮತ್ತು ಆರೋನರು ಆ ಜನಸಂದಣಿಯನ್ನು ಬಿಟ್ಟು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಬಂದು ಸಾಷ್ಟಾಂಗವೆರಗಿದರು. ಆಗ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು. ಆಗ ಸರ್ವೇಶ್ವರ ಮೋಶೆಗೆ, "ನೀನು ಆ ಕೋಲನ್ನು ಕೈಗೆ ತೆಗೆದುಕೋ. ನೀನು ಮತ್ತು ನಿನ್ನ ಸಹೋದರ ಆರೋನನು ಜನ ಸಮೂಹದವರನ್ನು ಸಭೆ ಸೇರಿಸಿ. ಜನರೆಲ್ಲರ ಎದುರಿನಲ್ಲೇ ನೀರು ಕೊಡಬೇಕೆಂದು ಆ ಕಡಿದಾದ ಬಂಡೆಗೆ ಆಜ್ಞೆ ಮಾಡು. ಅದರಿಂದ ನೀರು ಹೊರಟು ಬರುವುದು ಅದನ್ನು ಜನ ಸಮೂಹದವರಿಗೂ ಅವರ ಜಾನುವಾರಗಳಿಗೂ ಕುಡಿಯಲು ಕೊಡಬಹುದು," ಎಂದರು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಆ ಕೋಲನ್ನು ಅವರ ಸನ್ನಿಧಿಯಿಂದ ತೆಗೆದುಕೊಂಡನು. ಆರೋನನ ಜೊತೆಯಲ್ಲಿ ಜನ ಸಮೂಹದವರ ಬಳಿಗೆ ಹೋಗಿ ಕಡಿದಾದ ಆ ಬಂಡೆಗೆದುರಾಗಿ ಅವರನ್ನು ಸಭೆ ಸೇರಿಸಿದನು. ಅವರನ್ನು ಸಂಬೋಧಿಸುತ್ತಾ, "ದಂಗೆಕಾರರೇ ಕೇಳಿ; ಈ ಬಂಡೆಯಿಂದ ನಿಮಗೆ ನಾವು ನೀರನ್ನು ಬರಮಾಡಬೇಕೋ," ಎಂದು ಹೇಳಿ ಕೈಯೆತ್ತಿ ತನ್ನ ಕೈಯಲ್ಲಿದ್ದ ಕೋಲಿನಿಂದ ಆ ಬಂಡೆಯನ್ನು ಎರಡು ಸಾರಿ ಹೊಡೆದನು. ನೀರು ಪ್ರವಾಹವಾಗಿ ಹೊರಟಿತು. ಜನ ಸಮೂಹದವರೂ ಅವರ ಜಾನುವಾರಗಳೂ ಕುಡಿದರು. ಬಳಿಕ ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ, "ನೀವು ನನ್ನನ್ನು ನಂಬದೇ ಹೋದಿರಿ. ಇಸ್ರಯೇಲರ ಮುಂದೆ ನನ್ನ ಗೌರವವನ್ನು ಕಾಪಾಡದೆ ಹೋದಿರಿ. ಆದುದರಿಂದ ಈ ಸಮಾಜದವರನ್ನು ನಾನು ವಾಗ್ದಾನ ಮಾಡಿದ ನಾಡಿಗೆ ನೀವು ಕರೆದುಕೊಂಡು ಹೋಗ ಕೂಡದು," ಎಂದು ಹೇಳಿದರು. ಇಸ್ರಯೇಲರು ಅಲ್ಲಿ ಸರ್ವೇಶ್ವರನ ಸಂಗಡ ವಾದ ಮಾಡಿದ್ದರಿಂದ ಆ ನೀರಿನ ಪ್ರವಾಹಕ್ಕೆ "ಮೆರಿಬಾ" ಎಂದು ಹೆಸರಾಯಿತು. ಅಲ್ಲಿ ಸರ್ವೇಶ್ವರ ತಮ್ಮ ಪರಮ ಪಾವನತೆಯನ್ನು ವ್ಯಕ್ತಪಡಿಸಿದರು.

ಕೀರ್ತನೆ: 95:1-2, 6-7, 8-9

ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತಿ ನೀವಿಂದೇ

ಶುಭಸಂದೇಶ: ಮತ್ತಾಯ  16:13-23

+
ಯೇಸುಸ್ವಾಮಿ  "ಫಿಲಿಪ್ಪನ ಸಜರೇಯ"  ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. ಅದಕ್ಕೆ ಶಿಷ್ಯರು,  "ಸ್ನಾನಿಕ ಯೊವಾನ್ನ",  ಎಂದು ಕೆಲವರು ಹೇಳುತ್ತಾರೆ?: ಮತ್ತೆ ಕೆಲವರು,  "ಎಲೀಯನು" ಎನ್ನುತ್ತಾರೆ; "ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು, "ಅದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳ ಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗ ಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು." ಆನಂತರ ಯೇಸು ತಮ್ಮ ಶಿಷ್ಯರಿಗೆ ತಾವು "ಅಭಿಷಿಕ್ತರಾದ ಲೋಕೋದ್ಧಾರಕ" ಎಂಬುದನ್ನು ಯಾರಿಗೂ ಹೇಳ ಕೂಡದೆಂದು ಕಟ್ಟಪ್ಪಣೆ ಮಾಡಿದರು. ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, "ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ದಾನ ಹೊಂದಬೇಕಾಗಿದೆ" ಎಂದು ಅಂದಿನಿಂಲೂ ಒತ್ತಿ ಹೇಳಲಾರಂಭಿಸಿದರು. ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, "ಪ್ರಭೂ, ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ," ಎಂದು ಪ್ರತಿಭಟಿಸಿದನು. ಆದರೆ ಯೇಸು ಪೇತ್ರನತ್ತ ತಿರುಗಿ, "ಸೈತಾನನೇ, ತೊಲಗಿಲ್ಲಿಂದ ನೀನು ನನಗೆ ಅಡೆ ತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ,"ಎಂದರು

No comments:

Post a Comment