ಮೊದಲನೇ ವಾಚನ: ಯಾಜಕಕಾಂಡ 25:1, 8-17
ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ಸಿನಾಯಿ ಬೆಟ್ಟದಲ್ಲಿ ಹೇಳಿದರು: ಏಳುವರ್ಷಕ್ಕೆ ಒಂದರಂತೆ ಏಳು ಸಬ್ಬತ್ ವರ್ಷಗಳನ್ನು ಎಣಿಸಬೇಕು. ಆ ಏಳು ಸಬ್ಬತ್ ಸಂವತ್ಸರಗಳ ಕಾಲ , ಅಂದರೆ ನಾಲ್ವತ್ತೊಂಬತ್ತು ವರ್ಷಗಳು ಕಳೆದಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿವಸ ನಿಮ್ಮ ನಾಡಿನಲ್ಲೆಲ್ಲಾ ಕೊಂಬೂದಿಸಬೇಕು. ನೀವು ಆ ಐವತ್ತನೆಯ ವರ್ಷವನ್ನು ದೇವರಿಗೆ ಮೀಸಲಾದ ವರ್ಷವೆಂದು ಭಾವಿಸಬೇಕು. ಆ ವರ್ಷನಾಡಿನ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತೆಂದು ಸಾರಬೇಕು. ಅದು "ಜೂಬಿಲಿ" ಸಂವತ್ಸರವಾದುದರಿಂದ ನೀವೆಲ್ಲರು ನಿಮ್ಮನಿಮ್ಮ ಸ್ವಂತ ಭೂಮಿಗಳಿಗೂ ಹಾಗು ಸ್ವಜನರ ಬಳಿಗೂ ಹೋಗಿ ಇರಬಹುದು. ಆ ಐವತ್ತನೆಯ ವರ್ಷದಲ್ಲಿ, ಅಂದರೆ "ಜೂಬಿಲಿ" ಸಂವತ್ಸರದಲ್ಲಿ ನೀವು ಬಿತ್ತನೆ ಮಾಡಬಾರದು; ತಾನಾಗಿ ಬೆಳೆದ ಫಸಲನ್ನು ಕೂಡಿಸಿಟ್ಟುಕೊಳ್ಳಬಾರದು; ನೀವು ಕೃಷಿಮಾಡದೆ ಬಿಟ್ಟ ದ್ರಾಕ್ಷಿತೋಟದ ಹಣ್ಣನು ಸಂಗ್ರಹಿಸಬಾರದು. ಅದು ಜೂಬಿಲಿ ವರ್ಷವಾದುದರಿಂದ ನೀವು ಅದನ್ನು ಮೀಸಲಾದುದೆಂದು ಭಾವಿಸಬೇಕು. ಹೊಲದಲ್ಲಿ ತಾನಾಗಿ ಬೆಳದದ್ದನ್ನು ಊಟಮಾಡಬಹುದು. ಜೂಬಿಲಿ ವರ್ಷದಲ್ಲಿ ನಿಮ್ಮನಿಮ್ಮ ಸ್ವಂತ ಭೂಮಿಗಳು ಮರಳಿ ನಿಮ್ಮ ವಶಕ್ಕೆ ಬರುವುವು. ನೀವು ಸ್ಥಿರಸೊತ್ತನ್ನು ಸ್ವದೇಶದವರೊಡನೆ ಕ್ರಯ - ವಿಕ್ರಯ ಮಾಡುವಾಗ ಇದರ ವಿಷಯದಲ್ಲಿ ಅನ್ಯಾಯ ಮಾಡಬಾರದು. ಕಳೆದ ಜೂಬಿಲಿ ವರ್ಷದಿಂದ ಇಷ್ಟು ವರ್ಷ ಆಯಿತೆಂದು ಲೆಕ್ಕಿಸಿ ಸ್ವದೇಶದವನಿಂದ ಕ್ರಯಕ್ಕೆ ತೆಗೆದುಕೊಳ್ಳಬಹುದು; ಅಂತೆಯೇ ಮಾರುವವನು ಇಷ್ಟುಗಳ ಬಳೆಯಾಯಿತೆಂದು ಲೆಕ್ಕಿಸಿ ಕ್ರಯಕ್ಕೆ ಕೊಡಬೇಕು. ಮುಂದಣ ಜೂಬಿಲಿ ಸಂವತ್ಸರದ ತನಕ ಹೆಚ್ಚು ವರ್ಷಗಳಾದರೆ ಭೂಮಿಯ ಕ್ರಯವನ್ನು ಹೆಚ್ಚಿಸಬೇಕು. ಕಡಿಮೆಯಾದರೆ ತಗ್ಗಿಸಬೇಕು, ಏಕೆಂದರೆ ಮಾರುವವನು ಭೂಮಿಯನ್ನಲ್ಲ. ಬೆಳೆಗಳನ್ನು ಲೆಕ್ಕಿಸಿ ಮಾರುತ್ತಾನಷ್ಟೆ. ಆದುದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡಬಾರದು. ನಿಮ್ಮ ದೇವರಲ್ಲಿ ಭಯ ಭಕ್ತಿಯುಳ್ಳವರಾಗಿರಬೇಕು. ನಾನು ನಿಮ್ಮ ದೇವರಾದ ಸರ್ವೇಶ್ವರ.
ಕೀರ್ತನೆ: 67:2-3, 5, 7-8
ಶ್ಲೋಕ: ನಿನ್ನ ಕೀರ್ತಿಸಲಿ ದೇವಾ, ಜನರೆಲ್ಲರೂ
ಶುಭಸಂದೇಶ: ಮತ್ತಾಯ 14:1-12
ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತ ರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು. ಅವನು ತನ್ನ ಪರಿಚಾರಕರಿಗೆ, "ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಅವನಿಗಿದೆ," ಎಂದನು. ಹೆರೋದನು ತನ್ನ ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಅವಳ ಪ್ರಯುಕ್ತ ಯೊವಾನ್ನನನ್ನು ಹಿಡಿದು ಬಂಧಿಸಿ ಸೆರೆಯಲ್ಲಿ ಹಾಕಿದ್ದನು. ಏಕೆಂದರೆ ಆತನು, "ನಿನ್ನ ಸಹೋದರನ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ಅಕ್ರಮ," ಎಂದು ಹೆರೋದನಿಗೆ ಹೇಳುತ್ತಿದ್ದನು. ಯೊವಾನ್ನನನ್ನು ಕೊಲ್ಲಿಸಬೇಕೆಂದಿದ್ದರೂ ಹೆರೋದನು ಜನರಿಗೆ ಹೆದರಿದ್ದನು. ಅವರು ಆತನನ್ನು ಪ್ರವಾದಿಯೆಂದು ಭಾವಿಸಿದ್ದರು. ಹೀಗಿರುವಲ್ಲಿ ಹೆರೋದನ ಹುಟ್ಟುಹಬ್ಬ ಬಂದಿತು. ಹೆರೋದಿಯಳ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ ಹೆರೋದನನ್ನು ಮೆಚ್ಚೀಸಿದಳು. ಆಗ ಅವಳು ಏನು ಕೇಳಿದರು ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದನು. ಅವಳು ತನ್ನ ತಾಯಿಯ ಸಲಹೆ ಪಡೆದು, "ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ," ಎಂದಳು. ಇದನ್ನು ಕೇಳಿ ರಾಜನಿಗೆ ವ್ಯಥೆಯಾಯಿತು. ಆದರೆ ಅತಿಥಿಗಳ ಮುಂದೆ ಮಾಡಿದ ಪ್ರಮಾಣವನ್ನು ಮುರಿಯಲಾಗದೆ ಅವಳ ಇಚ್ಛೆಯನ್ನು ಪೂರೈಸುವಂತೆ ಆಜ್ಞೆಮಾಡಿದನು. ಅದರಂತೆಯೇ ಆಳುಗಳನ್ನು ಕಳುಹಿಸಿ, ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿಸಿದನು; ಅದನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಡಲಾಯಿತು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು. ಯೊವಾನ್ನನ ಶಿಷ್ಯರು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. ಆನಂತರ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.
No comments:
Post a Comment