ಮೊದಲನೇ ವಾಚನ: ಯೆಶಾಯ 66:18-21
ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: "ಸಮಸ್ತ ರಾಷ್ಟ್ರಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರ ಮಾಡುವೆನು. ಅವರು ಬಂದು ನನ್ನ ಮಹಿಮೆಯ ಪ್ರಕಾಶವನ್ನು ಕಾಣುವರು. ಅವರ ಮಧ್ಯೆ ಒಂದು ಸೂಚಕ ಕಾರ್ಯವನ್ನು ಮಾಡುವೆನು. ಅವರಲ್ಲಿ ಅಳಿದುಳಿದವರನ್ನು ನನ್ನ ಸುದ್ಧಿಯನ್ನು ಕೇಳದೆಯೂ ನನ್ನ ಮಹಿಮೆಯನ್ನು ಕಾಣದೆಯೂ ಇರುವವರ ಬಳಿಗೆ ಕಳಿಸುವೆನು. ತಾರ್ಷೀರ್ಷ್, ಲಿಬಿಯಾ, ಧನುರ್ಧಾರಿಗಳಾದ ಲೂದಿಯಾ, ತೂಬಲ್, ಗ್ರೀಸ್ ಎಂಬ ನಾಡುಗಳಿಗೂ ದೂರದ ದ್ವೀಪ ನಿವಾಸಿಗಳ ಬಳಿಗೂ ಕಳಿಸುವೆನು. ಈ ಅನ್ಯ ಜನಾಂಗಗಳಿಗೆ ನಿಮ್ಮ ಸಹೋದರರನ್ನು ಕರೆದು ತರುವರು. ಇಸ್ರಯೇಲರು ನನ್ನ ಆಲಯಕ್ಕೆ ಶುದ್ಧ ಪಾತ್ರೆಗಳಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವಂತೆ, ಅವರನ್ನು ಕುದುರೆ, ತೇರು, ಪಲ್ಲಕ್ಕಿ, ಹೇಸರಗತ್ತೆ, ಒಂಟೆ, ಇವುಗಳ ಮೇಲೆ ಏರಿಸಿಕೊಂಡು ಜೆರುಸಲೇಮೆಂಬನನ್ನ ಪವಿತ್ರ ಪರ್ವತಕ್ಕೆ ಕರೆದು ತರುವರು. ನಾನು ಅವರಲ್ಲಿ ಕೆಲವರನ್ನು ಯಾಜಕರನ್ನಾಗಿಯೂ ಲೇವಿಯರನ್ನಾಗಿಯೂ ಆರಿಸಿಕೊಳ್ಳುವೆನು" ಇದು ಸರ್ವೇಶ್ವರಸ್ವಾಮಿರ ನುಡಿ.
ಕೀರ್ತನೆ: 117:1,2
ಶ್ಲೋಕ: ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ
ಎರಡನೇ ವಾಚನ: ಹಿಬ್ರಿಯರಿಗೆ 12:5-7, 11-13
ಸಹೋದರರೇ, ಮಕ್ಕಳಿಗೆ ಹೇಳುವಂತೆ ದೇವರು ನಿಮಗೆ ಹೇಳಿರುವ ಎಚ್ಚರಿಕೆಯ ಮಾತನ್ನು ನೀವು ಮರೆತುಬಿಟ್ಟಿರೋ? "ಸುಕುಮಾರ, ಸರ್ವೇಶ್ವರ ಕೊಡುವ ಶಿಕ್ಷೆಯನ್ನು ತಾತ್ಸಾರ ಮಾಡದಿರು ಅವರು ನಿನ್ನನ್ನು ದಂಡಿಸುವಾಗ ಧೈರ್ಯಗೆಡದಿರು ಸರ್ವೇಶ್ವರ ತಾವು ಪ್ರೀತಿಸುವವನನ್ನು ಶಿಕ್ಷಿಸುವರು; ತಮಗೆ ಮಗನೆಂದು ಬರಮಾಡಿಕೊಳ್ಳುವವನನ್ನು ದಂಡಿಸುವರು. ಶಿಸ್ತಿಗಾಗಿ ಶಿಕ್ಷೆಯನ್ನು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತಂದೆಯಿಂದ ಶಿಕ್ಷೆಯನ್ನು ಪಡೆಯದ ಮಗನಿದ್ದಾನೆಯೇ? ಯಾವ ಶಿಕ್ಷೆಯಾದರೂ ತಕ್ಷಣಕ್ಕೆ ಸಿಹಿಯಾಗಿರದೆ ಕಹಿಯಾಗಿಯೇ ಇರುತ್ತದೆ. ಹೀಗೆ ಶಿಸ್ತಿನ ಕ್ರಮಕ್ಕೆ ಒಳಗಾದವರು ಮುಂದಕ್ಕೆ ನ್ಯಾಯನೀತಿಯನ್ನೂ ಶಾಂತಿಸಮಾಧಾನವನ್ನು ಪ್ರತಿಫಲವಾಗಿ ಪಡೆಯುತ್ತಾರೆ. ಆದ್ದರಿಂದ, ಜೋತುಬೀಳುವ ನಿಮ್ಮ ಕೈಗಳನ್ನ ಮೇಲೆತ್ತಿ, ಕುಸಿದುಬೀಳುವ ನಿಮ್ಮ ಮೊಣಕಾಲುಗಳನ್ನು ಚೇತರಿಸಿಕೊಳ್ಳಿ ನೀವು ಹಿಡಿದಿರುವ ಹಾದಿಯನ್ನು ಸರಿಪಡಿಸಿಕೊಳ್ಳಿ, ಆಗ ಕುಂಟುವ ಕಾಲು ಉಳುಕದೆ ವಾಸಿಯಾಗುತ್ತದೆ.
ಶುಭಸಂದೇಶ: ಲೂಕ 13:22-30
ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿ ಹಳ್ಳಿಗಳಲ್ಲೂ ಉಪದೇಶ ಮಾಡಿಕೊಂಡು ಜೆರುಸಲೇಮಿನತ್ತ ಪ್ರಯಾಣ ಮಾಡುತ್ತಿದ್ದರು. ಆಗ ಒಬ್ಬನು, ಸ್ವಾಮೀ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೋ?" ಎಂದು ವಿಚಾರಿಸಿದನು. ಆಗ ಯೇಸು ಜನರಿಗೆ, "ಇಕ್ಕಟ್ಟಾದ ಬಾಗಿಲಿನಿಂದಲೇ ಒಳ ಹೋಗಲು ಸರ್ವ ಪ್ರಯತ್ನ ಮಾಡಿ. ಏಕೆಂದರೆ, ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಆದು ಅವರಿಂದಾಗದು ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ, "ಸ್ವಾಮೀ ನಮಗೆ ಬಾಗಿಲನ್ನು ತೆರೆಯಿರಿ," ಎಂದು ನೀವು ಕೇಳುವಿರಿ. ಅದಕ್ಕೆ ಅವನು, "ನೀವು ಎಲ್ಲಿಯವರೋ ನಾನು ಅರಿಯೆ" ಎನ್ನುವನು. ಆಗ ನೀವು, "ನಿಮ್ಮೊಂದಿಗೆ ನಾವು ಊಟ ಮಾಡಿದ್ದೇವೆ, ಪಾನ ಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶ ಮಾಡಿದ್ದೀರಿ," ಎಂದು ಹೇಳಲಾರಂಭಿಸುವಿರಿ. ಆದರೆ ಅವನು ಪುನಃ, "ನೀವು ಎಲ್ಲಿಯವರೋ ನಾನರಿಯೆ. ಆಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ," ಎಂದು ಸ್ಪಷ್ಟವಾಗಿ ನುಡಿಯುವೆನು. ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲು ಕಡಿತವೇನು!! ಚತುರ್ದಿಕ್ಕುಗಳಿಂದಲೂ ಜನರು ಬಂದು, ದೇವರ ಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಗರಲ್ಲಿ ಕೆಲವರು ಕಡೆಯವರಾಗುವರು," ಎಂದರು.
No comments:
Post a Comment