25.03.2019 - ಇಗೋ, ನಾನು ದೇವರ ದಾಸಿ

ಮೊದಲನೇ ವಾಚನ: ಯೆಶಾಯ 7:10-14; 8:10

ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ: "ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು" ಎಂದರು. ಅದಕ್ಕೆ ಆಹಾಜನು "ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ," ಎಂದನು. ಆಗ ಯೆಶಾಯನು: "ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೆ ಕೆಣಕುತ್ತಿರುವಿರಾ? ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ಇಮ್ಯಾನುವೇಲ್ ಎಂದು ಆತನಿಗೆ ಹೆಸರಿಡುವಳು." ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ: ಕೈಗೂಡದು ನೀವು ಮಾಡಿದ ಪ್ರತಿಜ್ಞೆ; ಕಾರಣ ದೇವನಿರುವನು ನಮ್ಮೊಡನೆ.

ಕೀರ್ತನೆ: 40:7, 8-9, 10, 11

ಶ್ಲೋಕ: ನಾನೋಗೊಡುತ ಇಂತೆಂದೆ: ’ಇಗೋ ನಾನೇ ಬರುತ್ತಿರುವೆ’

ಎರಡನೇ ವಾಚನ: ಹಿಬ್ರಿಯರಿಗೆ 10:4-10

ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ. ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತ ಯೇಸು ದೇವರಿಗೆ ಇಂತೆಂದರು: "ಬಲಿಯರ್ಪಣೆಗಳೂ ಕಾಣೆಕೆಗಳೂ ನಿಮಗೆ ಬೇಡವಾದವು, ಎಂದೇ ಆಣೆಮಾಡಿ ಕೊಟ್ಟಿರಿ ನನಗೆ ದೇಹವೊಂದನು: ಸರ್ವಾಂಗ ಹೋಮಗಳೂ ಪಾಪಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು. ಆಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆಯುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ." ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ "ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುವು ನಿಮಗೆ ತರಲಿಲ್ಲ ತೃಪ್ತಿಯನ್ನು," ಎಂದು ಮೊದಲು ಹೇಳುತ್ತಾರೆ ಅನಂತರ, "ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ," ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದು ಮಾಡಿದ್ದಾರೆ. ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ.

ಶುಭಸಂದೇಶ: ಲೂಕ 1:26-38


ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು " ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!" ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. "ಇದೆಂಥ ಶುಭಾಶಯ" ಎಂದು ಅವಳು ಯೋಚಿಸತೊಡಗಿದಳು ದೂತನು ಆಕೆಗೆ, "ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ 'ಯೇಸು' ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು, ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು," ಎಂದನು. ಅದಕ್ಕೆ ಮರಿಯಳು, "ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?" ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, "ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು  ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು 'ದೇವರ ಪುತ್ರ' ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ," ಎಂದನು. ಆಗ ಮರಿಯಳು, "ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ," ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

ಮನಸಿಗೊಂದಿಷ್ಟು ಇಂದಿನ ಶುಭ ದೈವ ರಕ್ಷಣಾ ಯೋಜನೆಯ ಅತ್ಯಂತ ಮಹತ್ವದ ಘಟ್ಟ. ಇಲ್ಲಿ ದೈವ ಯೋಜನೆಯ ಅಗಾಧತೆ, ಅದರಲ್ಲಿನ ಮಹಿಳೆಯ ಮಹತ್ವದ ಪಾತ್ರ, ಸಾಮಾನ್ಯರಿಗೂ ಸಿಗುವ ಅನುಗ್ರಹ ಜೊತೆಗೆ ಮರಿಯಳ  ಪ್ರಾರ್ಥನಾ ಮತ್ತು ಸಮರ್ಪಣಾ ವ್ಯಕ್ತಿತ್ವ ಎಲ್ಲವೂ ತೆರೆದುಕೊಳ್ಳುತ್ತದೆ. ’ನೀವು ಹೇಳಿದಂತೆ’ ಆಗಲಿ ಎಂಬ ಮರಿಯಳ ಆ ಕ್ಷಣದ ಮಾತು ಇಷ್ಟು ಸಾವಿರ ವರ್ಷಗಳ ನಂತರವೂ ಅತ್ಯಂತ ಸುಮಧರ ಮಾತಾಗಿ ಉಳಿದಿದೆ.
  
ಪ್ರಶ್ನೆ : ’ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ’ ’ದೇವರ ಚಿತ್ತದಂತೆ ನನಗಾಗಲಿ’ ಎಂಬ ಮಾತುಗಳಿಗೆ ನಾವೆಷ್ಟು ಬದ್ಧ?  

No comments:

Post a Comment

29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...