ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

06.03.2019 - ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು

 ವಿಭೂತಿ ಬುಧವಾರ 

ಮೊದಲನೇವಾಚನ: ಯೊವೇಲ 2:12-18

ಸರ್ವೇಶ್ವರ ಇಂತೆನ್ನುತ್ತಾರೆ: "ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ, ಉಪವಾಸ ಕೈಗೊಂಡು, ಅತ್ತು ಗೋಳಾಡಿ." ನಿಮ್ಮ ಉಡುಪುಗಳನ್ನು ಅಲ್ಲ, ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ. ವಿಧಿಸಬೇಕಾಗಿದ್ದ ದಂಡನೆಗಾಗಿ ಮನನೊಂದುಕೊಳ್ಳುವಂಥವರು. ಒಂದು ವೇಳೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿ ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಅವರಿಗೆ ಅರ್ಪಿಸಲು ಬೇಕಾದ ನೈವೇದ್ಯಗಳನ್ನು ಧಾರಾಳವಾಗಿ ಅನುಗ್ರಹಿಸಬಹುದು. ಸಿಯೋನ್ ಶಿಖರದ ಮೇಲೆ ನಿಂತು ಕೊಂಬೂದಿರಿ. ಉಪವಾಸ ದಿನವನ್ನು ಘೋಷಿಸಿರಿ. ಮಹಾಸಭೆಯನ್ನು ಕರೆಯಿರಿ. ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ. ಸರ್ವಶ್ವರಸ್ವಾಮಿಯ ಪರಿಚಾರಕರಾದ ಯಾಜಕರು ದೇವಾಲಯದ ದ್ವಾರ ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಶೊಕತಪ್ತರಾಗಿ ಹೀಗೆಂದು ಪ್ರಾರ್ಥಿಸಲಿ: "ಕರುಣೆ ತೋರು, ಹೇ ಸರ್ವೇಶ್ವರಾ, ನಿನ್ನ ಪ್ರಜೆಗೆ ನಿಂದೆಯಾಗದಿರಲಿ ನಿನ್ನ ಸ್ವಂತ ಜನತೆಗೆ ಗುರಿಯಾಗದಿರಲಿ ಅವರು ಅನ್ಯರ ತಾತ್ಸಾರಕ್ಕೆ 'ನಿಮ್ಮ ದೇವನೆಲ್ಲಿ?' ಎಂಬ ಪರಕೀಯರ ಹೀಯಾಳಿಕೆಗೆ". ಆಗ ಸರ್ವೇಶ್ವರ ತಮ್ಮ ದೇಶದ ಮೇಲೆ ಅಭಿಮಾನಗೊಂಡು, ತಮ್ಮ ಜನರಿಗೆ ಕರುಣೆತೋರಿದರು.

ಕೀರ್ತನೆ: 51:3-4, 5-6, 12-13, 14, 17

ಶ್ಲೋಕ: ಕೃಪಾಳು ದೇವಾ ಕರುಣಿಸೆಮ್ಮನು ನಿಮ್ಮ ವಿರುದ್ಧ ನಾವು ಪಾಪಮಾಡಿದ್ದೇವೆ.

ಎರಡನೇ ವಾಚನ: 2 ಕೊರಿಂಥಿಯರಿಗೆ 5:20-6:2

ಸಹೋದರರೇ ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪ ಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು. ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ. "ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾಗುವೆನು," ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ಧಾರದ ಸುದಿನ.

ಶುಭಸಂದೇಶ: ಮತ್ತಾಯ  6:1-6, 16-18

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು. "ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು. ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿ ಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು." ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿ ಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು." ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳಿದುಕೋ, ತಲೆ ಬಾಚಿಕೋ ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವೆ ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು.

ಮನಸಿಗೊಂದಿಷ್ಟು : ಪ್ರಾರ್ಥನೆ, ದಾನ ಧರ್ಮ ಹೇಗೆ ಮಾಡಬೇಕು ಎನ್ನುವ ಬೋಧನೆಗಳು ಸಾಮಾನ್ಯ. ಆದರೆ ಯೇಸುವಿನ ಮೌಲ್ಯಗಳ ವಿಶಿಷ್ಟತೆ ಅವುಗಳನ್ನು ಹೇಗೆ ಮಾಡಬಾರದು ಎಂಬುದರಲ್ಲಿ ಇದೆ. ಇಲ್ಲಿ ಮನುಷ್ಯನ ಅಂತರಂಗವನ್ನು ದೇವರು ನೋಡುತ್ತಾರೆ ಹಾಗೂ ಅದರಲ್ಲೇ ನಿಜವಾದ ಪ್ರತಿ ಫಲವಿದೆ ಎನ್ನುವುದು ಸಂದೇಶ. ತಪ್ಪಸು ಕಾಲದಲ್ಲಿ ನಮ್ಮ ಅಂತರಂಗವು ಪರಿಶೋಧಿತಗೊಳ್ಳಲಿ.

ಪ್ರಶ್ನೆ : ಈ ತಪಸ್ಸು ಕಾಲದಲ್ಲಿ ನಮ್ಮ ಅಧ್ಯಾತ್ಮಿಕ ಗುರಿಗಳೇನು?

No comments:

Post a Comment