ಮೊದಲನೇ ವಾಚನ: ಯೆಶಾಯ 58:9-14
ಸರ್ವೇಶ್ವರ ಇಂತೆನ್ನುತ್ತಾರೆ: ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನು ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿಂದ ತೊಲಗಿಸಿದರೆ ಹಾಗೂ ಹಸಿದವರಿಗೆ ಜೀವನಾಂಶವನ್ನೂ ಬಡವರಿಗೆ ಅಗತ್ಯವಾದುದನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅಂಧಕಾರ ನೀಗಿ ಮಧ್ಯಾಹ್ನವಾಗುವುದು. ಸರ್ವೇಶ್ವರ ಸ್ವಾಮಿ ನಿಮ್ಮನ್ನು ನಿರಂತರವಾಗಿ ಮುನ್ನಡೆಸುವರು; ಮರುಭೂಮಿಯಲ್ಲೂ ನಿಮಗೆ ಮನಃತೃಪ್ತಿಯನ್ನು ನೀಡುವರು; ನಿಮ್ಮ ಎಲುಬುಗಳನ್ನು ಬಲಪಡಿಸುವರು; ನೀರೆರೆದ ತೋಟದಂತೆಯೂ ಬತ್ತಿ ಹೋಗದ ಬುಗ್ಗೆಯಂತೆಯು ನೀವು ಇರುವಿರಿ. ಪುರಾತನ ಕಾಲದ ಪಾಳು ಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾಂತರಗಳಿಂದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. "ಬಿದ್ದ ಗೋಡೆಯನ್ನು ಎಬ್ಬಿಸಿದ ರಾಷ್ಟ್ರ, ಹಳೆಯ ದಾರಿಗಳನ್ನು ಸರಾಗಮಾಡಿದ ರಾಷ್ಟ್ರ" ಎಂಬ ಬಿರುದು ನಿಮಗೆ ಬರುವುದು. ನೀವು ಸಬ್ಬತ್ ದಿನವನ್ನು ತಾತ್ಪಾರ ಮಾಡದೆ, ಆ ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ದೈನಂದಿನ ವ್ಯವಹಾರವನ್ನು ನಡೆಸದೆ, ಸ್ವೇಚ್ಛೆಯಾಗಿ ವರ್ತಿಸದೆ, ಸ್ವಕಾರ್ಯದಲ್ಲೇ ನಿರತರಾಗದೆ, ಹರಟೆ ಮಾತುಗಳಲ್ಲಿ ಕಾಲ ಕಳೆಯದೆ, ಸರ್ವೇಶ್ವರ ಸ್ವಾಮಿಯ ಸಬ್ಬತ್ ದಿನ ಪರಿಶುದ್ಧವಾದುದು, ಸಂತೋಷಕರವಾದುದು, ಮಾನ್ಯತೆಗೆ ಅರ್ಹವಾದುದು ಎಂದು ಸನ್ಮಾನಿಸಿದ್ದೆ ಆದರೆ ನೀವು ಸರ್ವೇಶ್ವರ ಸ್ವಾಮಿಯಾದ ನನ್ನ ಆನಂದದಲ್ಲಿ ಭಾಗಿಗಳಾಗುವಿರಿ; ನಾನು ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುವೆನು. ನಿಮ್ಮ ಪಿತೃ ಯಕೋಬನ ಸೊತ್ತನ್ನು ನೀವು ನಿರಂತಕವಾಗಿ ಅನುಭವಿಸುವಂತೆ ಮಾಡುವೆನು," ಇದು ಸರ್ವೇಶ್ವರ ಸ್ವಾಮಿಯ ನುಡಿ.
ಕೀರ್ತನೆ: 86:1-2, 3-4,5-6
ಶ್ಲೋಕ: ನಿನ್ನ ಸತ್ಯಪಥದಲಿ ನಾ ನಡೆವಂತೆ ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು
ಶುಭಸಂದೇಶ: ಲೂಕ 5:27-32

ಮನಸಿಗೊಂದಿಷ್ಟು : ಸುಂಕ ವಸೂಲಿ ಮಾಡುತ್ತಿದ್ದ, ಸುಖ ಜೀವನ ನಡೆಸುತ್ತಿದ್ದವನು ಯೇಸುವಿನ ’ಹಿಂಬಾಲಿಸು’ ಎಂಬ ಒಂದೇ ಮಾತಿಗೆ ಅವರನ್ನು ಹಿಂಬಾಲಿಸಿದನು. ನಮ್ಮದೇ ಆದ ಜಂಜಾಟದಲ್ಲಿ ಮುಳುಗಿರುವ ನಮಗೆ ಆ "ಹಿಂಬಾಲಿಸು" ಕೇಳುತ್ತಿದ್ದರೂ ಕೇಳದಂತೆ ಬಾಳುತ್ತಿದ್ದೇವೆ. ಆಧ್ಯಾತ್ಮಿಕವಾಗಿ ಬಳಲುತ್ತಿದ್ದರೂ ಲೋಕದ ಮಾನದಂಡದ ಪ್ರಕಾರ ನಮ್ಮನ್ನೇ ಆರೋಗ್ಯವಂತರೆಂದುಕೊಂಡಿದ್ದೇವೆ.
ದೇವರಿಗೆ ಅಭಿಮುಖರಾಗಬೇಕಾಗಿದೆ.
ಪ್ರಶ್ನೆ : ನಮಗೆ ಆ ದೈವೀಕ ವೈದ್ಯನ ಅವಶ್ಯಕತೆಯಿದೆ ಎಂಬ ಅರಿವು ನಮಗಿದೆಯೇ?
No comments:
Post a Comment