ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

07.03.2019 - ನಾನು ಶುಭವನ್ನೂ ಅಶುಭವನ್ನೂ, ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ

ಮೊದಲನೇ ವಾಚನ: ಧರ್ಮೋಪದೇಶಕಾಂಡ 30:15-20 

ಮೋಶೆಯು ಜನರಿಗೆ ಹೀಗೆಂದು ಹೇಳಿದನು: "ಇಗೋ ನೋಡಿ: ನಾನು ಶುಭವನ್ನೂ ಅಶುಭವನ್ನೂ, ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ. ನಾನು ಈಗ ನಿಮಗೆ ಬೋಧಿಸುವಂತೆ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ, ಅವರು ಹೇಳಿದ ಮಾರ್ಗದಲ್ಲಿ ನಡೆದು, ಅವರ ಆಜ್ಞಾವಿಧಿ ನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿ ಬಾಳುವಿರಿ, ಅಭಿವೃದ್ಧಿಯಾಗುವಿರಿ, ಮತ್ತು ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸುವರು. ಆದರೆ ನೀವು ಅವರನ್ನು ಬಿಟ್ಟು, ಅವರ ಮಾತನ್ನು ಕೇಳಲೊಲ್ಲದೆ, ಮೋಸಹೋಗಿ, ಇತರ ದೇವರುಗಳನ್ನು ಪೂಜಿಸಿ ಅವಲಂಬಿಸಿದರೆ ನೀವು ಸ್ವಾಧೀನ ಮಾಡಿಕೊಳ್ಳಲು ಜೋರ್ಡಾನ್ ನದಿಯನ್ನು ದಾಟಿ ಹೋಗುವ ನಾಡಿನಲ್ಲಿ ಬಹುಕಾಲ ಇರದೆ ನಾಶ ಆಗಿ ಹೋಗುವಿರಿ. ಇದನ್ನು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ. ನಾನು ಸಾವು ಜೀವಿಗಳನ್ನೂ ಶಾಪಾಶೀರ್ವಾದಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಆಕಾಶಗಳೇ ಸಾಕ್ಷಿಯಾಗಿರಲಿ; ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿ ಬಾಳುವಂತೆ ಜೀವವನ್ನೇ ಆರಿಸಿಕೊಳ್ಳಿ; ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರ ಮಾತಿಗೆ ವಿಧೇಯರಾಗಿ; ಅವರನ್ನು ಹೊಂದಿಕೊಂಡೇ ಇರಿ. ಸರ್ವೇಶ್ವರ ನಿಮ್ಮ ಪಿತೃಗಳಾದ ಅಬ್ರಹಾಮ್, ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಕೊಟ್ಟ ನಾಡಿನಲ್ಲಿ ನೀವು ಬದುಕಿ ಬಾಳುವುದಕ್ಕೂ ಬಹುಕಾಲ ಇರುವುದಕ್ಕೂ ಅವರೇ ಆಧಾರ."

ಕೀರ್ತನೆ:  1:1-2, 3, 4, 6

ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತ ನು ಧನ್ಯನು

ಶುಭಸಂದೇಶ: ಲೂಕ : 9:22-25

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ದಾನ ಹೊಂದುವನು," ಎಂದು ಅವರಿಗೆ ತಿಳಿಸಿದರು. ಯೇಸುಸ್ವಾಮಿ ಎಲ್ಲರನ್ನು ನೋಡಿ ಹೇಳಿದ್ದೇನೆಂದರೆ: "ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ  ಕಳೆದುಕೊಂಡರೆ ಅಥವಾ ತೆತ್ತರೆ ಅವನಿಗೆ ಅದರಿಂದ ಬರುವ ಲಾಭವಾದರೂ ಏನು?

ಮನಸಿಗೊಂದಿಷ್ಟು :  ಯೇಸುವಿನ ಮೌಲ್ಯಗಳ ಮೂಲಕ ಅವರನ್ನು ಹಿಂಬಾಲಿಸುವುದು ಕಷ್ಟವೇ ಸರಿ. ಆದರೆ ಅದು ಅಸಾಧ್ಯವೇನಲ್ಲ ಎಂಬುದನ್ನು ಅನೇಕ ಸಂತರು , ನಿಜ ಹಿಂಬಾಲಕರು ಬದುಕಿ ತೋರಿದ್ದಾರೆ. ಅದು ನಮಗೆ ಸ್ವಲ್ಪವಾದರೂ ಸ್ಪೂರ್ತಿಯಾಗಲಿ.

ಪ್ರಶ್ನೆ : ಶಿಲುಬೆ ಹೊತ್ತು ಹಿಂಬಾಲಿಸಲು ಸಿದ್ಧವಿದ್ದೇವೆಯೇ? 

1 comment: