ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

21.01.2019 - "ಹಳೆಯ ಅಂಗಿಗೆ ಹೊಸಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ"

ಮೊದಲನೇ ವಾಚನ: ಹಿಬ್ರಿಯರಿಗೆ  5:1-10 

ಪ್ರತಿಯೊಬ್ಬ ಪ್ರಧಾನ ಯಾಜಕ ಜನರ ಮಧ್ಯದಿಂದ ಆರಿಸಲಾದವನು; ಜನರ ಪರವಾಗಿ ದೇವರ ಸನ್ನಿಧಿಯಲ್ಲಿ ಸೇವೆ ಸಲ್ಲಿಸಲು ಮತ್ತು ಪಾಪ ಪರಿಹಾರಕ್ಕಾಗಿ ಬಲಿಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಲು ನೇಮಕಗೊಂಡವನು. ತಾನೂ ದುರ್ಬಲ ಮನವನಾದ ಕಾರಣ, ಆತನು ಅಜ್ಞಾನಿಗಳನ್ನೂ ದುರ್ಮಾರ್ಗಿಗಳನ್ನೂ ಸಹಾನುಭೂತಿಯಿಂದ ಕಾಣಬಲ್ಲನು. ಜನರಿಗೋಸ್ಕರ ಹೇಗೋ ಹಾಗೆಯೇ ತನ್ನ ದೌರ್ಬಲ್ಯದ ನಿಮಿತ ತನಗೋಸ್ಕರವೂ  ಆತನು  ಪಾಪ ಪರಿಹಾರಕ ಬಲಿಯನ್ನು ಅರ್ಪಿಸಬೇಕಾಗಿದೆ. ಅಲ್ಲದೆ, ಪ್ರದಾನ ಯಾಜಕನೆಂಬ ಗೌರವ ಪದವಿಯನ್ನು ತನ್ನಷ್ಟಕ್ಕೆ ತಾನೇ ಯಾರೂ ವಹಿಸಿಕೊಳ್ಳರು. ಆರೋನನಂತೆ ಅವರೂ ದೇವರಿಂದ ಕರೆ ಹೊಂದಿದವರಾಗಿರಬೇಕು. ಅದೇ ರೀತಿ ಕ್ರಿಸ್ತ ಯೇಸು, ಪ್ರದಾನ ಯಾಜಕನೆಂಬ ಉನ್ನತ ಪದವಿಗೆ ತನ್ನನ್ನೇ ಏರಿಸಿಕೊಳ್ಳಲಿಲ್ಲ. "ನೀನೇ ನನ್ನ ಪುತ್ರನು; ನಾನೇ ನಿನ್ನನ್ನು ಪಡೆದಿದ್ದೇನೆ," ಎಂದ ದೇವರೇ ಅವರನ್ನು ಆ ಪದವಿಗೆ ಏರಿಸಿದರು. ಅವರೇ ಮತ್ತೊಂದು ಕಡೆಯಲ್ಲಿ: "ನೀನು ಸದಾ ಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕ," ಎಂದಿದ್ದಾರೆ. ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚ ಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸು, ದೇವರ ಪುತ್ರನಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು. ಹೀಗೆ ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು. ಅಲ್ಲದೆ, ದೇವರಿಂದ, "ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನ ಯಾಜಕ," ಎನಿಸಿಕೊಂಡರು.

ಕೀರ್ತನೆ:  110:1, 2, 3, 4
ಶ್ಲೋಕ: ಮೆಲ್ಕಿಸದೇಕ್ ಪರಂಪರೆಯ ಯಾಜಕ ನೀ ನರುತ.

ಶುಭಸಂದೇಶ:  ಮಾರ್ಕ 2:18-22


ಯೊವಾನ್ನನ ಶಿಷ್ಯರು ಮತ್ತು ಫರಿಸಾಯರು ಉಪವಾಸವ್ರತವನ್ನು ಕೈಗೊಂಡಿದ್ದ ಒಂದು ಸಂದರ್ಭದಲ್ಲಿ, ಕೆಲವು ಜನರು ಯೇಸುಸ್ವಾಮಿಯ ಬಳಿಗೆ ಬಂದರು. ಅವರು, "ಯೊವಾನ್ನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸವ್ರತವನ್ನು ಕೈಗೊಳ್ಳುತ್ತಾರೆ, ಆದರೆ ನಿನ್ನ ಶಿಷ್ಯರೇಕೆ ಹಾಗೆ ಮಾಡುವುದಿಲ್ಲ?" ಎಂದು ಕೇಳಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಾಗ ಅವನ ಆಪ್ತರು ಉಪವಾಸ ಮಾಡುವುದುಂಟೆ? ಖಂಡಿತವಾಗಿಯೂ ಇಲ್ಲ. ಅವನು ತಮ್ಮ ಜೊತೆಯಲ್ಲಿರುವಷ್ಟು ಕಾಲ ಅವರು ಉಪವಾಸ ಮಾಡಲಾಗದು. ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲ ಬರುವುದು. ಆಗ ಅವರು ಉಪವಾಸ ಮಾಡುವರು. "ಹಳೆಯ ಅಂಗಿಗೆ ಹೊಸಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಹಾಕಿದಲ್ಲಿ, ಹೋಸ ತೇಪೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರೂ ತುಂಬಿಡುವುದಿಲ್ಲ. ತುಂಬಿಟ್ಟರೆ ಅದರಿಂದ ಬುದ್ದಲಿಗಳು ಬಿರಿಯುತ್ತವೆ ಮದ್ಯವು ಮತ್ತು ಬುದ್ದಲಿಗಳು ಎರಡೂ ನಷ್ಟವಾಗುತ್ತವೆ. ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು," ಎಂದರು.

No comments:

Post a Comment