ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

5.01.2019 - "ಗುರುದೇವ, ದೇವರ ಪುತ್ರ ನೀವೇ"

ಮೊದಲನೇ ವಾಚನ: 1  ಯೊವಾನ್ನ  3:11-21 

ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೆ ಮೊತ್ತಮೊದಲಿನಿಂಲೂ ನೀವು ಕೇಳಿದ ಸಂದೇಶ. ತನ್ನ ಸಹೋದರನನ್ನೇ ಕೊಂದ ಕಾಯಿನನಂತೆ ನಾವು ಇರಬಾರದು. ಅವನು ಕಡುಕೇಡಿಗನ ಕುವರ. ಅವನು ಕೊಂದುದಾದರೂ ಏಕೆ?  ತನ್ನ ಕೃತ್ಯಗಳು ದುಷ್ಟವಾಗಿದ್ದು ತನ್ನ ಸಹೋದರನ ಕೃತ್ಯಗಳು ಧರ್ಮಿಷ್ಠವಾಗಿದ್ದುದರಿಂದ ಅಲ್ಲವೇ? ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿ. ನಾವು ನಮ್ಮ ಸಹೋದರರನ್ನು ಪ್ರೀತಿಸುವುದರಿಂದ ಸಾವಿನಿಂದ ಜೀವಕ್ಕೆ ಸಾಗಿದ್ದೇವೆಂದು ತಿಳಿದಿದ್ದೇವೆ. ಪ್ರೀತಿಸದೆ ಇರುವವನು ಸಾವಿನಲ್ಲೇ ನೆಲಸಿರುತ್ತಾನೆ. ತನ್ನ ಸಹೋದರರನ್ನು ದ್ವೇಷಿಸುವವನು ಕೊಲೆಗಾರನೇ ಹೌದು. ಯಾವ ಕೊಲೆಗಾರನಲ್ಲೂ ನಿತ್ಯ ಜೀವ ಇರದೆಂದು ನೀವು ಬಲ್ಲಿರಿ. ಕ್ರಿಸ್ತಯೇಸು ನಮಗೋಸ್ಕರ ತಮ್ಮ ಪ್ರಾಣವನ್ನೇ ತೆತ್ತರು. ಇದರಿಂದ ಪ್ರೀತಿ ಎಂತಹುದೆಂದು ನಾವು ಅರಿತುಕೊಂಡೆವು. ನಾವೂ ಕೂಡ ಸಹೋದರರಿಗಾಗಿ ಪ್ರಾಣಾರ್ಪಣೆ ಮಾಡಲು ಬದ್ಧರಾಗಿದ್ದೇವೆ. ಲೋಕದ ಸುಖಸಂಪತ್ತುಳ್ಳ ಒಬ್ಬನು, ಕುಂದು ಕೊರತೆಯಲ್ಲಿ ಸಿಲುಕಿರುವ ತನ್ನ ಸಹೋದರನನ್ನು ಕಂಡಾಗಲೂ ಮನಕರಗದಿದ್ದರೆ ಅವನಲ್ಲಿ ದೇವರ ಪ್ರೀತಿ ಹೇಗೆ ತಾನೇ ನೆಲೆಸೀತು? ಪ್ರಿಯಮಕ್ಕಳೇ, ನಾವು ಬರಿಯ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರಬಾರದು. ನಮ್ಮ ಪ್ರೀತಿ ಸತ್ಯದಲ್ಲೂ ಕೃತ್ಯದಲ್ಲೂ ವ್ಯಕ್ತವಾಗಬೇಕು. ಹೀಗೆ ನಾವು ಸತ್ಯಕ್ಕೆ ಸೇರಿದವರು ಎಂಬುದು ಮನದಟ್ಟಾಗುವುದಲ್ಲದೆ ದೇವರ ಮುಂದೆ ನಮ್ಮ ಮನಸ್ಸು ನೆಮ್ಮದಿಯಿಂದಿರುತ್ತದೆ. ಯಾವ ವಿಷಯದಲ್ಲಾದರೂ ನಮ್ಮ ಮನಸಾಕ್ಷಿ ನಮ್ಮನ್ನು ಖಂಡಿಸದಿದ್ದರೆ, ನಾವು ದೇವರ ಮುಂದೆ ಧೈರ್ಯದಿಂದಿರಲು ಸಾಧ್ಯವಾಗುತ್ತದೆ. 

ಕೀರ್ತನೆ:100:1-2, 3, 4, 5 

ಶ್ಲೋಕ: ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ. 

 ಶುಭಸಂದೇಶ: ಯೊವಾನ್ನ 1:43-51 

ಮರುದಿನ ಯೇಸುಸ್ವಾಮಿ ಗಲಿಲೇಯ ನಾಡಿಗೆ ಹೋಗಲು ನಿರ್ಧರಿಸಿದರು. ಅವರು ಫಿಲಿಪ್ಪನನ್ನು ಕಂಡು, "ನನ್ನೊಡನೆ ಬಾ," ಎಂದು ಕರೆದರು.ಅಂದ್ರೆಯ ಮತ್ತು ಪೇತ್ರನಂತೆ ಫಿಲಿಪ್ಪನು ಕೂಡ ಬೆತ್ಸಾಯಿದ ಎಂಬ ಊರಿನವನು. ಫಿಲಿಪ್ಪನು ನತಾನಿಯೇಲನನ್ನು ಕಂಡು, "ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ಧಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು," ಎಂದು ಹೇಳಿದನು. ಅದಕ್ಕೆ ನತಾನಿಯೇಲನು, "ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದು ಉಂಟೆ?" ಎಂದು ಕೇಳಲು, "ಬಂದು ನೀನೇ ನೋಡು," ಎಂದು ಫಿಲಿಪ್ಪನು ಉತ್ತರಕೊಟ್ಟನು. ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, "ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ," ಎಂದು ನುಡಿದರು. ನತಾನಿಯೇಲನು, "ನನ್ನ ಪರಿಚಯ ನಿಮಗೆ ಹೇಗಾಯಿತು?" ಎಂದು ಕೇಳಲು ಯೇಸು, "ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ," ಎಂದು ಉತ್ತರ ಕೊಟ್ಟರು. ಅದಕ್ಕೆ ನತಾನಿಯೇಲನು  "ಗುರುದೇವ, ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ," ಎಂದನು. ಆಗ ಯೇಸು, "ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದುವುಗಳನ್ನು ನೀನು ಕಾಣುವೆ," ಎಂದು ನುಡಿದರು. ತಮ್ಮ ಮಾತನ್ನು ಮುಂದುವರಿಸುತ್ತಾ, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ," ಎಂದು ಹೇಳಿದರು.

No comments:

Post a Comment