ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.01.19 - "ಗೌಣವೆಂದೆಣಿಸಲಾಗುವ ಅಂಗಗಳಿಗೂ ವಿಶೇಷ ಘನತೆಯನ್ನು ಇತ್ತಿದ್ದಾರೆ"

ಮೊದಲನೇ ವಾಚನ: ನೆಹೆಮೀಯ 8:2-4, 5-6, 8-10

ಯಾಜಕ ಎಜ್ರನು, ಗ್ರಹಿಸಿಕೊಳ್ಳಲು ಶಕ್ತರಾದ ಸ್ತ್ರೀ ಪುರುಷರು ನೆರೆದಿದ್ದಸಮೂಹದವರ ಮುಂದೆ, ಏಳನೆಯ ತಿಂಗಳಿನ ಪ್ರಥಮ ದಿನದಲ್ಲಿ, ಆ ಧರ್ಮಶಾಸ್ತ್ರವನ್ನು ತಂದು ಬೆಳಗಿನಿಂದ ಮಧ್ಯಾಹ್ನದವರೆಗೂ ಓದಿದನು. ಆ ನೀರುಬಾಗಿಲಿನ ಮಂದಣ ಬಯಲಿನಲ್ಲಿ ಕೂಡಿಬಂದಿದ್ದ ಸ್ತ್ರೀಷುರುಷರಲ್ಲಿ ಗ್ರಹಿಸಲು  ಶಕ್ತರಾದವರೆಲ್ಲರೂ ಧರ್ಮಶಾಸ್ತ್ರ ಪಾರಾಯಣವನ್ನು ಆಲಿಸುತ್ತಿದ್ದರು. ಧರ್ಮೋಪದೇಶಕ ಎಜ್ರನು ಪಾರಾಯಣಕ್ಕಾಗಿ ಮಾಡಲಾಗಿದ್ದ ಮರದ ಪೀಠದ ಮೇಲೆ ನಿಂತನು. ಅವನ ಬಲಗಡೆಯಲ್ಲಿ ಮತ್ತಿತ್ಯ, ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ, ಎಂಬುವರು ಇದ್ದರು. ಎಡಗಡೆಯಲ್ಲಿ ಪೆದಾಯ, ಮೀಷಾಯೇಲ್, ಮಲ್ಕೀಯ, ಹಾಷುಮ್,  ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್ ಎಂಬುವರು ನಿಂತಿದ್ದರು. ಜನ ಸಮುಮೂಹಕಿಂತಲೂ ಎತ್ತರವಾದ ಸ್ಥಳದಲ್ಲಿ ನಿಂತಿದ್ದ ಎಜ್ರನು ಜನರ ಸಮಕ್ಷಮದಲ್ಲಿ ಗ್ರಂಥವನ್ನು ತೆರೆದ ಕೂಡಲೆ, ಎಲ್ಲರು ಎದ್ದುನಿಂತರು. ಎಜ್ರನು  ಪರಾತ್ಪರ ದೇವರಾದ ಸರ್ವೇಶ್ವರನನ್ನು ಸ್ತುತಿಸಿದಾಗ ಸರ್ವಜನರೂ ತಮ್ಮ ಕೈಗಳನ್ನೆತ್ತಿ "ಆಮೆನ್, ಆಮೆನ್" ಎಂದು ಹೇಳಿ ನೆಲದ ಮಟ್ಟಿಗೂ ತಲೆಬಾಗಿ ಸರ್ವೇಶ್ವರನನ್ನು ಆರಾಧಿಸಿದರು. ಜನರು ಎದ್ದುನಿಂತನಂತರ ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು. ಜನರೆಲ್ಲರು ಧರ್ಮೋಪದೇಶ ವಾಕ್ಯಗಳನ್ನು ಕೇಳುತ್ತಾ ಕಣ್ಣೀರಿಡುತ್ತಿದ್ದರು. ರಾಜ್ಯಪಾಲ ನೆಹೆಮೀಯನು, ಧರ್ಮೋಪದೇಶ ಮಾಡುವ ಮೂಲಕ ಯಾಜಕ ಎಜ್ರನು ಹಾಗು ಜನರನ್ನು ಸಂಭೋಧಿಸುತ್ತಿದ್ದ ಲೇವಿಯರು ಜನರಿಗೆ, "ಈ ದಿನ ನಿಮ್ಮ ದೇವರಾದ ಸರ್ವೇಶ್ವರನಿಗೆ ಪರಿಶುದ್ಧ ದಿನ! ಆದುದರಿಂದ ನೀವು ದುಃಖಿಸುತ್ತಾ ಅಳುತ್ತಾ ಇರಬೇಡಿ. " ಎಂದು ಹೇಳಿದರು.ಇದಲ್ಲದೆ, ಎಜ್ರನು ಅವರಿಗೆ , "ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿ ತಮಗಾಗಿ ಏನೂ ಸಿದ್ದಮಾಡದವರಿಗೆ ಒಂದು ಪಾಲನ್ನು ಕಳುಹಿಸಿರಿ. ಈ ದಿನ ನಮ್ಮ  ಸರ್ವೇಶ್ವರನಿಗೆ ಪ್ರತಿಷ್ಠಿತದಿನ! ವ್ಯಸನಪಡಬೇಡಿ; ಸರ್ವೇಶ್ವರನ ಆನಂದವೇ ನಿಮ್ಮ ಅಶ್ರಯವಾಗಿದೆ," ಎಂದನು.

ಕೀರ್ತನೆ:19:8, 9, 10, 15
ಶ್ಲೋಕ: ಪ್ರಭೂ, ನೀವು ಹೇಳಿರುವ ಮಾತುಗಳೇ ಆತ್ಮ ಮತ್ತು ಜೀವ

ಎರಡನೇ ವಾಚನ: 1 ಕೊರಿಂಥಿಯರಿಗೆ 12:12-30

ದೇಹವು ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು, ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಅತ್ಮದಿಂದ ದೀಕ್ಷಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ. ದೇಹವು ಏಕ ಅಂಗದಿಂದ ಅಲ್ಲ, ಅನೇಕ ಅಂಗಗಳಿಂದ ಕೂಡಿದೆ. ಎಂದಾದರೂ ಕಾಲು, "ನಾನು ಕೈ ಅಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ," ಎಂದು ಹೇಳಿದ್ದಾದರೆ ಅದು ದೇಹದ ಅಂಗವಾಗಿರುವುದು ತಪ್ಪೀತೆ? ಅಥವಾ ಕಿವಿ, "ನಾನು ಕಣ್ಣಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ," ಎಂದು ಹೇಳಿದ್ದಾದರೆಅದು ದೇಹದ ಅಂಗವಾಗಿರುವುದು ತಪ್ಪಿತೆ? ದೇಹವಿಡೀ ಕಣ್ಣೇ ಆದರೆಅದು ಕೇಳುವ ಬಗ್ಗೆ ಹೇಗೆ? ಅಥವಾ ಅದುಇಡೀ ಕಿವಿಯೇ ಆದರೆ, ಮೂಸಲು ಮೂಗು ಎಲ್ಲಿ? ಸದ್ಯ, ದೇವರು ತಮ್ಮ ಚಿತ್ತಾನುಸಾರ, ಪ್ರತಿಯೊಂದು ಅಂಗವನ್ನು ಸರಿಯಾಗಿ ಜೋಡಿಸಿದ್ದಾರೆ. ಅವೆಲ್ಲವೂ ಒಂದೇ ಅಂಗವಾಗಿದ್ದರೆ ಆಗ ದೇಹವೆಲ್ಲಿ? ಹೀಗೆ ಅಂಗಗಳು ಅನೇಕವಾಗಿದ್ದರೂ ದೇಹ ಮಾತ್ರ ಏಕ. ಹೀಗಿರಲಾಗಿ, "ನಿನ್ನ ಅವಶ್ಯಕತೆ ನನಗಿಲ್ಲ," ಎಂದು ಕೈಗೆ, ಕಣ್ಣು ಹೇಳಲಾಗದು; ಅಂತೆಯೇ, "ನಿನ್ನ ಅವಶ್ಯಕತೆ ನನಗಿಲ್ಲ," ಎಂದು ಕಾಲುಗಳಿಗೆ, ತಲೆ ಹೇಳಲಾಗದು. ಅಷ್ಟು ಮಾತ್ರವಲ್ಲ, ಬಲಹೀನವಾಗಿ ತೋರುವ ಅಂಗಗಳೂ ನಮಗೆ ಬೇಕೇಬೇಕು. ಅಲ್ಪವೆಂದೆಣಿಸುವ ಅಂಗಗಳನ್ನು ಅಧಿಕವಾಗಿ ಮಾನ್ಯಮಾಡುತ್ತೇವೆ. ಗೋಪ್ಯವಾಗಿಡತಕ್ಕವುಗಳನ್ನು ಶೀಲದಿಂದ ಸಂರಕ್ಷಿಸುತ್ತೇವೆ. ಬಾಹ್ಯ ಅಂಗಗಳಿಗೆ ಇಂಥ ಸಂರಕ್ಷಣೆ ಅಗತ್ಯವಿರುವುದಿಲ್ಲ. ದೇಹವನ್ನು ನಿರ್ಮಿಸಿದ ದೇವರು ಗೌಣವೆಂದೆಣಿಸಲಾಗುವ ಅಂಗಗಳಿಗೂ ವಿಶೇಷ ಘನತೆಯನ್ನು ಇತ್ತಿದ್ದಾರೆ. ದೇಹದಲ್ಲಿ ಭಿನ್ನಭೇದವಿಲ್ಲದೆ ಅಂಗಗಳು ಒಂದಕ್ಕೊಂದರ ಹಿತವನ್ನು ಗಮನಿಸುವಂತೆ ಮಾಡಿದ್ದಾರೆ. ಒಂದು ಅಂಗಕ್ಕೆ ನೋವಾದರೆ, ಎಲ್ಲಾ ಅಂಗಗಳೂ ಅದರೊಂದಿಗೆ ನೋವನ್ನು ಅನುಭವಿಸುತ್ತವೆ. ಒಂದು ಅಂಗಕ್ಕೆ ನಲಿವಾದರೆ, ಮಿಕ್ಕೆಲ್ಲಾ ಅಂಗಗಳು ಅದರೊಡನೆ ಸೇರಿ ನಲಿದಾಡುತ್ತವೆ. ನೀವೆಲ್ಲರೂ ಕ್ರಿಸ್ತಯೇಸುವಿನ ದೇಹ ಆಗಿದ್ದೀರಿ; ಪ್ರತಿಯೊಬ್ಬನೂ ಈ ದೇಹದ ಅಂಗವಾಗಿದ್ದಾನೆ. ದೇವರು ತಮ್ಮ ಸಭೆಯಲ್ಲಿ, ಮೊದಲನೆಯದಾಗಿ ಪ್ರೇಷಿತರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಭೋಧಕರನ್ನು ನೇಮಿಸಿದ್ದಾರೆ. ಅನಂತರ ಪವಾಡಗಳನ್ನು ಎಸಗುವವರನ್ನು ರೋಗಗಳನ್ನು ಗುಣಪಡಿಸುವವರನ್ನು, ಪರೋಪಕಾರಿಗಳನ್ನು, ಪರಿಪಾಲಕರನ್ನು, ಬಹುಭಾಷಾ ಪಂಡಿತರನ್ನು ನೇಮಿಸಿದ್ದಾರೆ. ಎಲ್ಲರೂ ಪ್ರೇಷಿತರಲ್ಲ, ಎಲ್ಲರೂ ಪ್ರವಾದಿಗಳಲ್ಲ, ಎಲ್ಲರೂ ಭೋಧಕರಲ್ಲ, ಎಲ್ಲರೂ ಪವಾಡಪುರುಷರಲ್ಲ, ಎಲ್ಲರೂ ರೋಗಗಳನ್ನು ಗುಣಪಡಿಸುವವರಲ್ಲ, ಎಲ್ಲರೂ ಪರೋಪಕಾರಿಗಳಲ್ಲ, ಎಲ್ಲರೂ ಪರಪಾಲಕರಲ್ಲ, ಎಲ್ಲರೂ ಬಹುಭಾಷಾಪಂಡಿತರಲ್ಲ, ಅಥಾವಾ ಎಲ್ಲರೂ ಆ ಭಾಷೆಗಳನ್ನು ವಿವರಿಸಿ ಹೇಳುವವರಲ್ಲ.

ಶುಭಸಂದೇಶ: ಲೂಕ 1:1-4; 4:14-21

ನ್ಮಾನ್ಯ ಥೆಯೊಫಿಲನೇ, ನಮ್ಮ ಮದ್ಯೆ ನೆರವೇರಿರುವ ಘಟನೆಗಳ ವರದಿಯನ್ನು ಬರೆದಿಡಲು ಹಲವರು ಪ್ರಯತ್ನಿಸಿದ್ದಾರೆ. ಪ್ರಾರಂಭದಿಂದ ಕಣ್ಣಾರೆ ಕಂಡು ಶುಭಸಂದೇಶವನ್ನು ಸಾರಿದವರಿಂದಲೇ ನಾವು ಕೇಳಿದ ಘಟನೆಗಳವು. ನಾನು ಅಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ದವಾಗಿ ಬರೆಯುವುದು ಉಚಿತವೆಂದು ನನಗೂ ತೋರಿತು. ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಮನದಟ್ಟಾಗುವುದು. ಯೇಸುಸ್ವಾಮಿ ಪವಿತ್ರಾತ್ಮ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿಬಂದರು. ಅವರ ವಿಷಯ ಸುತ್ತಮುತ್ತೆಲ್ಲಾ ಹರಡಿತು. ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಅವರು ಭೋಧಿಸುತ್ತಾ ಬಂದರು. ಎಲ್ಲರೂ ಅವರನ್ನು ಹೊಗಳುವವರೇ! ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು; "ದೇವರಾತ್ಮ ನನ್ನ ಮೇಲಿದೆ, ದೀನದಲಿತರಿಗೆ ಶುಭಸಂದೇಶವನ್ನು ಭೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ." ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, "ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು," ಎಂದು ವಿವರಿಸಲಾರಂಭಿಸಿದರು.

No comments:

Post a Comment