ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.01.2019 - "ಆತ ಹೇಳಿದಂತೆ ಮಾಡಿ"

ಮೊದಲನೇ ವಾಚನ: ಯೆಶಾಯ 62:1-5 


ಸಿಯೋನಿನ ಸದ್ಧರ್ಮವು ಪ್ರಕಾಶಗೊಳ್ಳುವತನಕ, ಜೆರುಸಲೇಮಿನ ಉದ್ಧಾರ ದೀಪವು ಬೆಳಗುವತನಕ ಸುಮ್ಮನಿರೆನು. ನಾನು ಸಿಯೋನಿನ ಹಿತವನ್ನು ಲಕ್ಷಿಸದೆ, ಮೌನವಿರೆನು ಜೆರುಸಲೇಮಿನ ಸುಕ್ಷೇಮವನು ಚಿಂತಿಸದೆ. ನೋಡುವರು ಜನಾಂಗಗಳು ನಿನ್ನ ಸದ್ಧರ್ಮವನು, ಕಾಣುವರು ಸಕಲ ರಾಜರು ನಿನ್ನ ವೈಭವವನು ಪಡೆಯುವೆ ನೀನು ಸರ್ವೇಶ್ವರನೇ ಕೊಟ್ಟ ಹೊಸ ಹೆಸರನು. ಸರ್ವೇಶ್ವರನ ಕೈಯಲ್ಲಿ ನೀನು ಸಂದರ ಕಿರೀಟವಾಗಿ ಮೆರೆಯುವೆ ನಿನ್ನ ದೇವರ ಹಸ್ತದಲ್ಲಿ ರಾಜ ಮುಕುಟವಾಗಿ; "ಎನ್ನ ಮನದನ್ನೆ" ಎನಿಸಿಕೊಳ್ಳುವೆ ನೀನು "ಸುವಿವಾಹಿತೆ" ಎನಿಸಿಕೊಳ್ಳುವುದು ನಿನ್ನ ನಾಡು. ನಿನ್ನಲ್ಲಿದೆ ಉಲ್ಲಾಸ ಸರ್ವೇಶ್ವರನಿಗೆ ವಿವಾಹವಾಗುವುದಿದೆ ನಿನ್ನ ನಾಡಿಗೆ. ಯುವಕನು ಕನ್ಯೆ ಯುವತಿಯನು ವರಿಸುವಂತೆ ವರಿಸುವನು ಸೃಷ್ಟಿಕರ್ತನು ನಿನ್ನನ್ನು, ವರನು ವಧುವಿನಲ್ಲಿ ಆನಂದಿಸುವಂತೆ ನಿನ್ನಲ್ಲಿ ಆನಂದಿಸುವನು ನಿನ್ನ ದೇವನು.

ಕೀರ್ತನೆ: 96:1-2, 2-3, 7-8, 9-10

ಶ್ಲೋಕ: ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ

ಎರಡನೇ ವಾಚನ: 1 ಕೊರಿಂಥಿಯರಿಗೆ 12:4-11

ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ. ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭು ಒಬ್ಬರೇ. ಶಕ್ತಿ ಸಾಮರ್ಥ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ. ಪ್ರತಿಯೊಬ್ಬನಲ್ಲಿ ಕಂಡು ಬರುವ ಪವಿತ್ರಾತ್ಮ ವರದಾನಗಳನ್ನು ಸರ್ವರ ಒಳಿತಿಗಾಗಿಯೇ ಕೊಡಲಾಗಿದೆ. ಪವಿತ್ರಾತ್ಮರ ಮುಖಾಂತರ ಒಬ್ಬನಿಗೆ ಜ್ಞಾನೋಕ್ತಿಗಳು, ಇನ್ನೊಬ್ಬನಿಗೆ ಅವರ ಮುಖಾಂತರವೇ ವಿದ್ಯೋಕ್ತಿಗಳು ಲಭಿಸುತ್ತವೆ: ಅದೇ ಪವಿತ್ರಾತ್ಮರಿಂದ ಒಬ್ಬನಿಗೆ ಅಗಾಧ ವಿಶ್ವಾಸವೂ ಇನ್ನೊಬ್ಬನಿಗೆ ಸ್ವಸ್ಥತೆಯನೀಯುವ ಶಕ್ತಿಯೂ ದೊರಕುತ್ತದೆ.  ಒಬ್ಬನಿಗೆ ಪವಾಡಗಳನ್ನು ಎಸಗುವ ಪರಾಕ್ರಮವನ್ನು, ಇನ್ನೊಬ್ಬನಿಗೆ  ಪ್ರವಾದನೆಮಾಡುವ ಪ್ರತಿಭೆಯನ್ನು, ಮತ್ತೊಬ್ಬನಿಗೆ ಸತ್ಯಾಸತ್ಯವನ್ನು ವಿವೇಚಿಸುವ ಜಾಣ್ಮೆಯನ್ನು, ಮಗದೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ಸಾಮರ್ಥ್ಯವು, ಮತ್ತೂ ಒಬ್ಬನಿಗೆ ಅವುಗಳನ್ನು ಅರ್ಪಿಸುವ ಅರಿವನ್ನು ಆ ಪವಿತ್ರಾತ್ಮರಿಂದಲೇ ಕೊಡಲಾಗುತ್ತದೆ. ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಇಷ್ಟಾನುಸಾರ ಪ್ರತಿಯೊಬ್ಬನಿಗೂ ಹಂಚುತ್ತಾರೆ.

ಶುಭಸಂದೇಶ: ಯೊವಾನ್ನ  2:1-11

ಮಾರನೆಯ ದಿನ ಗಲಿಲೇಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುಸ್ವಾಮಿಯ ತಾಯಿ ಅಲ್ಲಿಗೆ ಬಂದಿದ್ದರು. ಯೇಸುವಿಗೂ ಅವರ ಶಿಷ್ಯರಿಗೂ ಆ ಮದುವೆಗೆ ಆಮಂತ್ರಣವಿತ್ತು. ಆ ಸಂದರ್ಭದಲ್ಲಿ ದ್ರಾಕ್ಷಾರಸ ಸಾಲದೆ ಹೋಯಿತು. ಆಗ ಯೇಸುವಿನ ತಾಯಿ, "ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ," ಎಂದು ಯೇಸುವಿಗೆ ಹೇಳಿದರು. ಅದಕ್ಕೆ ಯೇಸು, "ಅಮ್ಮಾ, ಇದನ್ನು ನನಗೇಕೆ ಹೇಳುತ್ತೀ? ನನ್ನ ಗಳಿಗೆ ಇನ್ನೂ ಬಂದಿಲ್ಲ," ಎಂದು ಉತ್ತರಕೊಟ್ಟರು. ತಾಯಿ ಸೇವಕರಿಗೆ, "ಆತ ಹೇಳಿದಂತೆ ಮಾಡಿ," ಎಂದು ತಿಳಿಸಿದರು. ಯೆಹೂದ್ಯರ ಶುದ್ಧಾಚಾರ ಪದ್ಧತಿಯಂತೆ ಆರು ಕಲ್ಲುಬಾನೆಗಳನ್ನು ಅಲ್ಲಿ ಇಟ್ಟಿದ್ದರು. ಅವು ಒಂದೊಂದೂ ಎರಡು ಮೂರು ಕೊಡ ನೀರು ಹಿಡಿಯುವಷ್ಟು ದೊಡ್ಡದಾಗಿದ್ದವು. 

ಯೇಸುಸ್ವಾಮಿ ಸೇವಕರಿಗೆ, "ಆ ಬಾನೆಗಳಲ್ಲಿ ನೀರು ತುಂಬಿರಿ," ಎಂದು ಹೇಳಿದರು. ಅವರು ಕಂಠದವರೆಗೆ ತುಂಬಿದರು. ಯೇಸು, "ಈಗ ತೋಡಿಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿ," ಎಂದು ಹೇಳಲು ಅವರು ಹಾಗೆಯೇ  ಮಾಡಿದರು. ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರಿನ ರುಚಿ ನೋಡಿದನು. ಅದು ಎಲ್ಲಿಂದ ಬಂದಿತೆಂಬುದು  ಅವನಿಗೆ ತಿಳಿದಿರಲಿಲ್ಲ. ನೀರನ್ನು ತೋಡಿಕೊಂಡು ಬಂದ ಸೇವಕನಿಗೆ ಮಾತ್ರ ತಿಳಿದಿತ್ತು. ಆದುದರಿಂದ ಅವನು ಮದುಮಗನನ್ನು ಕರೆದು, "ಜನರೆಲ್ಲರೂ ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಹಂಚುತ್ತಾರೆ; ಅತಿಥಿಗಳು ಯಥೇಚ್ಛವಾಗಿ ಕುಡಿದಾದ ಮೇಲೆ ಸಾಧಾರಣ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀವಾದರೋ ಉತ್ತಮವಾದುದನ್ನು ಈವರೆಗೂ ಇಟ್ಟಿದ್ದೀಯಲ್ಲಾ!" ಎಂದು ಹೇಳಿದನು. ಯೇಸು ಮಾಡಿದ ಮೊದಲನೆಯ ಸೂಚಕ ಕಾರ್ಯ ಇದು. ಇದನ್ನು ಗಲಿಲೇಯ ನಾಡಿನ ಕಾನಾ ಊರಿನಲ್ಲಿ ಮಾಡಿ ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಅವರ ಶಿಷ್ಯರಿಗೂ ಅವರಲ್ಲಿ ವಿಶ್ವಾಸ ಮೂಡಿತು.

No comments:

Post a Comment